ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಯೇ ಕುಮಾರಸ್ವಾಮಿ?: ಮಾಜಿ ಸಿಎಂ ಹೇಳಿದ್ದು ಹೀಗೆ...

Update: 2022-02-13 12:51 GMT

ಬೆಂಗಳೂರು, ಫೆ. 13: ‘ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಸಮಯವಿದೆ. ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದು, ಕನ್ನಡಪರ ಸಂಘಟನೆಗಳ ಮುಖಂಡರ ಸಭೆ ಮಾಡಿದ್ದು, ಅದೇ ರೀತಿ ರೈತರು, ದಲಿತರು, ನೀರಾವರಿ ಹೋರಾಟಗಾರರನ್ನು ಸದ್ಯದಲ್ಲೇ ಭೇಟಿ ಮಾಡಲಿದ್ದೇನೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಸರಕಾರ ತರಬೇಕು. ಕನ್ನಡಿಗರದ್ದೆ ಸರಕಾರ ತರಲು ‘ಕನ್ನಡಿಗರ ಮಹಾಮೈತ್ರಿಕೂಟ'ವನ್ನು ಚುನಾವಣೆಗೆ ಮುನ್ನವೇ ರಚನೆ ಮಾಡಲು ಸಿದ್ಧತೆ ನಡೆಸಿದ್ದೇನೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾತನಾಡಿದ ಅವರು, ‘ಇನ್ನೆರಡು ತಿಂಗಳಲ್ಲಿ ಅದರ ರೂಪುರೇಷೆಯ ಜನತೆಗೆ ತಿಳಿಯಲಿದೆ. ರಾಜ್ಯವನ್ನು ರಾಷ್ಟ್ರೀಯ ಪಕ್ಷಗಳು ಹಾಳು ಮಾಡಿದ್ದು ಸಾಕು. ಕನ್ನಡಿಗರ ಹಿತಾಸಕ್ತಿಗಳನ್ನು ಅವರು ಕಡೆಗಣಿಸಿ ರಾಜ್ಯವನ್ನು ದುಃಸ್ಥಿತಿಗೆ ದೂಡಿದ್ದೂ ಸಾಕು. ಈಗಲಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ' ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ರಾಜಕೀಯವಾಗಿ ನಿಶಕ್ತರಾಗುತ್ತಿದ್ದಾರೆ: ಸಿ.ಎಂ. ಇಬ್ರಾಹಿಂ

ಚಾಮುಂಡೇಶ್ವರಿ ಚುನಾವಣೆ ನಾನೇ ನಡೆಸುವೆ: ‘ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಕಾರ್ಯಕರ್ತರು ಈ ಕ್ಷೇತ್ರಕ್ಕೆ ಮುಂದಿನ ಅಭ್ಯರ್ಥಿ ಯಾರು? ಎಂದು ಕೇಳಿದರು. ಅದಕ್ಕೆ ನಾನೇ ಬರ್ತೀನಿ, ನಡೆಯಿರಿ ಎಂದು ಹೇಳಿದ್ದೆ. ನಾನೇ ಬರುತ್ತೇನೆ ಎಂದರೆ ಚುನಾವಣೆಗೆ ನಾನೇ ನಿಲ್ಲುತ್ತೇನೆ ಎಂದಲ್ಲ. ಹಿಂದೆ ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣೆ ನಡೆಸಿದಂತೆ ಮುಂದಿನ ಬಾರಿ ಚುನಾವಣೆ ನಡೆಸಲು ಬರುತ್ತೇನೆ ಎಂದರ್ಥ. ಈ ಬಗ್ಗೆ ಗೊಂದಲ ಏನೂ ಇಲ್ಲ' ಎಂದರು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

‘ಹಿಂದೆ ಹತ್ತು ದಿನಗಳ ಕಾಲ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಳ್ಳಿ-ಹಳ್ಳಿಗೂ ಭೇಟಿ ನೀಡಿ ಚುನಾವಣೆ ಕೆಲಸ ಮಾಡಿದ್ದೇನೆ. ನಮ್ಮ ಅಭ್ಯರ್ಥಿಗಾಗಿ ಹಗಲಿರುಳೂ ದುಡಿದಿದ್ದೇನೆ. ಅದೇ ರೀತಿ ಮುಂದೆ ನಿಂತು ನಾಯಕತ್ವ ವಹಿಸಿಕೊಂಡು ಕೆಲಸ ಮಾಡುತ್ತೇನೆ ಎಂದಿದ್ದೇನೆ. ಅದರ ಹೊರತಾಗಿ ನಾನೇ ಬಂದು ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳಿದೆನಾ? ಇಲ್ಲ. ಅದನ್ನೇ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ನುಡಿದರು.

ನಮ್ಮ ಗುರಿ 123 ಕ್ಷೇತ್ರ: ‘ಈಗಿನ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ದೇವೇಗೌಡರು ಹಾಗೆ ಹೇಳಿದ್ದಾರೆ. ನಾನು ಮೊನ್ನೆ ಒಂದು ಕಡೆ ಹೇಳಿದ್ದೆ. ಜೆಡಿಎಸ್ ಬಿಟ್ಟು ಯಾರೂ ಸರಕಾರ ಮಾಡಲಿಕ್ಕೆ ಆಗಲ್ಲ ಎಂದಿದ್ದೆ. ಹಾಗೆಂದ ಮಾತ್ರಕ್ಕೆ 123 ಸ್ಥಾನಕ್ಕಿಂತ ಕೆಳಗೆ ಬರುತ್ತೇವೆ ಎಂದಲ್ಲ. ನಮ್ಮ ಗುರಿ 123 ಸ್ಥಾನ ಗೆಲ್ಲುವುದು. ಮುಂದಿನ ಚುನಾವಣೆಗೆ ಈ ಗುರಿ ಇಟ್ಟುಕೊಂಡೇ ಹೊರಟಿದ್ದೇವೆ' ಎಂದು ಅವರು ಹೇಳಿದರು.

‘123 ಸ್ಥಾನ ಗೆಲ್ಲಲೇಬೇಕೆಂಬ ಛಲ ನಮ್ಮ ಪಕ್ಷದ್ದು. ಅದು ದೊಡ್ಡ ಸವಾಲು ಎನ್ನುವ ಅರಿವೂ ನನಗಿದೆ. ದೇವೇಗೌಡರ ಹೇಳಿಕೆ ಇವತ್ತಿನ ಪರಿಸ್ಥಿತಿಯನ್ನು ಬಿಂಬಿಸುವಂತಿದೆ. ಇಂದಿನ ಸ್ಥಿತಿಯಲ್ಲಿ ಯಾರಿಗೂ ಬಹುಮತ ಬರವುದಿಲ್ಲ. ಇದು ರಾಜಕೀಯ ಪಂಡಿತರ ಲೆಕ್ಕಾಚಾರ, ಈ ಹಿನ್ನೆಲೆಯಲ್ಲಿ ಅವರು ಹೇಳಿದ್ದಾರೆ. ಇನ್ನೂ ಒಂದು ವರ್ಷ ಸಮಯವಿದ್ದು, ಏನು ಬೇಕಾದರೂ ಆಗಬಹುದು. ಈಗ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಬಿಜೆಪಿಗೆ ಭಾರೀ ಪೈಪೋಟಿ ನೀಡುತ್ತಿದೆ. ಅದೇ ರೀತಿ ಕರ್ನಾಟಕದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಬದಿಗಿಟ್ಟು ಪ್ರಾದೇಶಿಕ ಪಕ್ಷವನ್ನು ಜನ ಬೆಂಬಲಿಸಿ, ಪ್ರಾದೇಶಿಕ ಹಿನ್ನೆಲೆಯುಳ್ಳ ಕನ್ನಡಿಗರ ಸರಕಾರ ತರುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಈ ನಿಟ್ಟಿನಲ್ಲಿ ಸಂಘಟನೆಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ' ಎಂದು ತಿಳಿಸಿದರು.

ಕಾಂಗ್ರೆಸ್ ರಾಮನಗರದಲ್ಲಿ ಬೆಳೆಯಲು ಅಸಾಧ್ಯ: ‘ಏನೇ ಸರ್ಕಸ್ ಮಾಡಿದರೂ ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವೂ ಬೆಳೆಯುವುದು ಕಷ್ಟ. ಈ ಜಿಲ್ಲೆಯಲ್ಲಿ  ಕಾಂಗ್ರೆಸ್ ಬೇರೂರಲು ಸಾಧ್ಯವೇ ಇಲ್ಲ. ಇನ್ನು, ಮುಂಬರುವ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂದು ಶೀಘ್ರವೇ ತೀರ್ಮಾನ ಮಾಡುತ್ತೇನೆ. ರಾಮನಗರ ನನ್ನ ಕರ್ಮಭೂಮಿ. ರಾಜಕೀಯವಾಗಿ ನನಗೆ ಜನ್ಮ ನೀಡಿದ ಕ್ಷೇತ್ರವಿದು. ಯಾವುದೇ ಕಾರಣಕ್ಕೂ ಈ ಕ್ಷೇತವನ್ನು ಬಿಟ್ಟು ಕೊಡಲ್ಲ. ಬೇರೆ ಪಕ್ಷಗಳ ಪಾಲಾಗಲು ಬಿಡುವುದಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಅವರು ಸ್ಪರ್ಧೆ ಮಾಡುವ ಬಗ್ಗೆ ಜೆಡಿಎಸ್ ಕಾರ್ಯಕರ್ತರು ತೀರ್ಮಾನ ಮಾಡುತ್ತಾರೆ. ನನ್ನ ಕಾರ್ಯಕರ್ತರು ಬಲಾಢ್ಯರಿದ್ದಾರೆ. ಚುನಾವಣೆಗೆ ಇನ್ನೂ ಸಮಯವಿದ್ದು, ಸಮಯ ಬಂದಾಗ ಕಾರ್ಯಕರ್ತರೇ ನಿರ್ಧಾರ ಮಾಡುತ್ತಾರೆ' ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News