ಮಗಳ ವಾಟ್ಸ್ ಆ್ಯಪ್ ಸ್ಟೇಟಸ್ ವಿಚಾರಕ್ಕೆ ಮಹಿಳೆಯ ಥಳಿಸಿ ಹತ್ಯೆ

Update: 2022-02-14 06:51 GMT
ಸಾಂದರ್ಭಿಕ ಚಿತ್ರ

ಪಾಲ್ಘರ್: ಮಹಾರಾಷ್ಟ್ರದಲ್ಲಿ 48 ವರ್ಷದ ಮಹಿಳೆಯೊಬ್ಬರನ್ನು ಅವರ ಮಗಳ ಸ್ನೇಹಿತೆಯ ಕುಟುಂಬಸ್ಥರು ಕ್ಷುಲ್ಲಕ ಕಾರಣಕ್ಕೆ ಥಳಿಸಿ ಸಾಯಿಸಿದ್ದಾರೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

ಮೃತ ಮಹಿಳೆಯ 20 ವರ್ಷದ ಪುತ್ರಿ  ತನ್ನ ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ್ದರು. ಅದು ತಮ್ಮನ್ನು ಉದ್ದೇಶಿಸಿದ್ದು ಎಂದು ಭಾವಿಸಿದ್ದ ಆಕೆಯ ಸ್ನೇಹಿತೆ ತನ್ನ ಕುಟುಂಬದವರೊಂದಿಗೆ ಸೇರಿಕೊಂಡು ಈ ಅಪರಾಧ ಎಸಗಿದ್ದಾಳೆ ಎಂದು ಬೋಯ್ಸರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸುರೇಶ್ ಕದಮ್ ಪೋಸ್ಟ್‌ನ ವಿಷಯಗಳನ್ನು ಬಹಿರಂಗಪಡಿಸದೆ ಹೇಳಿದರು.

ಫೆಬ್ರವರಿ 10 ರಂದ ಶಿವಾಜಿ ನಗರದಲ್ಲಿರುವ ಸಂತ್ರಸ್ತೆ ಲೀಲಾವತಿ ದೇವಿ ಪ್ರಸಾದ್ ಅವರ ಮನೆಗೆ ಹೋಗಿದ್ದ ಆರೋಪಿಗಳು  ಲೀಲಾವತಿ ಹಾಗೂ ಆಕೆಯ ಕುಟುಂಬದ ಇತರ ಸದಸ್ಯರಿಗೆ ಥಳಿಸಿದ್ದಾರೆ ಎಂದು ಅವರು ಹೇಳಿದರು.

ಲೀಲಾವತಿ ಪ್ರಸಾದ್‌ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಅವರು ಮರುದಿನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೀಲಾವತಿಯವರ ಪುತ್ರಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ತನ್ನ ವಾಟ್ಸ್ ಆ್ಯಪ್  ಪೋಸ್ಟ್ ಸಾಮಾನ್ಯವಾಗಿತ್ತು ಹಾಗೂ ಅದು  ತನ್ನ ಸ್ನೇಹಿತೆಯನ್ನು ಗುರಿಯಾಗಿರಿಸಿರಲಿಲ್ಲ ಎಂದರು.

ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರು ಸ್ನೇಹಿತೆಯ ತಾಯಿ ಹಾಗೂ ಇನ್ನಿಬ್ಬರು ಕುಟುಂಬ ಸದಸ್ಯರನ್ನು ಬಂಧಿಸಿದ್ದಾರೆ ಹಾಗೂ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆರೋಪಿಗಳನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಫೆಬ್ರವರಿ 15 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News