'ತಾಲಿಬಾನಿಗಳಿಗೆ ಧನ್ಯವಾದ ಹೇಳಿದ ಮಂಡ್ಯದ ವಿದ್ಯಾರ್ಥಿನಿʼ ಎಂದು ನಕಲಿ ಪೋಸ್ಟ್‌ ಹಂಚಿಕೊಂಡ ಕಿರಿಕ್‌ ಕೀರ್ತಿ

Update: 2022-02-14 18:26 GMT
ಕಿರಿಕ್‌ ಕೀರ್ತಿ

ಬೆಂಗಳೂರು: ಮಂಡ್ಯದ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಗೆ ಅದೇ ಕಾಲೇಜಿನ ನೂರಾರು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಜೈ ಶ್ರೀ ರಾಮ್ ಘೋಷಣೆಯೊಂದಿಗೆ ಬೆನ್ನಟ್ಟಿದ್ದ ವೀಡಿಯೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ವಿದ್ಯಾರ್ಥಿನಿ  ಬೀಬಿ ಮುಸ್ಕಾನ್ ಗೆ ದೇಶ, ವಿದೇಶದಾದ್ಯಂತ ಅಭಿನಂದನೆಗಳ ಮಹಾಪೂರ ಲಭಿಸಿದ್ದು, ಅಫ್ಘಾನ್ ನ ತಾಲಿಬಾನ್ ಆಡಳಿತ ಕೂಡ ಬೆಂಬಲ ವ್ಯಕ್ತಪಡಿಸಿತ್ತು. 

ಇದೀಗ ತಾಲಿಬಾನ್ ನೀಡಿದ ಬೆಂಬಲಕ್ಕೆ ವಿದ್ಯಾರ್ಥಿನಿ  ಮುಸ್ಕಾನ್ ಪ್ರತಿಕ್ರಿಯಿಸಿ ಟ್ವಿಟರ್ ನಲ್ಲಿ 'ಧನ್ಯವಾದ' ತಿಳಿಸಿರುವುದಾಗಿ ಸಾಮಾಜಿಕ ತಾಣದಲ್ಲಿ ಸ್ಕ್ರೀನ್ ಶಾಟ್ ಒಂದನ್ನು ಕೆಲವು ಬಲಪಂಥೀಯರು ವ್ಯಾಪಕವಾಗಿ ಹಂಚುತ್ತಿದ್ದಾರೆ. 

ಇದೇ ಸ್ಕ್ರೀನ್ ಶಾಟ್ ಅನ್ನು  ರಿಯಾಲಿಟಿ ಶೋ ಬಿಗ್ ಬಾಸ್ ನ ಮಾಜಿ ಸ್ಪರ್ಧಿ, ಪೋಸ್ಟ್ ಕಾರ್ಡ್ ವಿಕ್ರಮ ಟಿವಿಯ ನಿರೂಪಕ 'ಕಿರಿಕ್ ಕೀರ್ತಿ' ಅವರು ವಿದ್ಯಾರ್ಥಿನಿಗೆ ಸಲಹೆ ನೀಡುವ ನೆಪದಲ್ಲಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

''ಇದೇ ಬೇಡ ಅನ್ನೋದು... ನಿನ್ನ ಧೈರ್ಯ ಕೊಂಡಾಡಿ ನೂರಾರು ಜನ‌ ನಿನ್ನನ್ನು ಹೀರೋಯಿನ್ ಮಾಡ್ತಿದ್ದಾರೆ... ಸಂತೋಷ... ಆದ್ರೆ ತಾಲಿಬಾನಿಯರಿಗೂ ಧನ್ಯವಾದ ಹೇಳೋ ನಿನ್ನ ಈ ಗುಣ ಸರಿಯಲ್ಲ‌... ನಮ್ಮ ಮುಸಲ್ಮಾನ ಬಂಧುಗಳು ಭಾರತದ ಜೊತೆಗಿರುವಾಗ ನೀನು ತಾಲಿಬಾನಿಯರನ್ನು ಅಹುದಹುದೆನ್ನೋದು ಸರಿಯಲ್ಲ.... ಅಂತಹ ಓವೈಸಿಯೇ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದ್ದಾರೆ... ನೀನ್ಯಾಕೆ ಹೀಗಾದೆ...? ಭಾರತದ ಸರ್ವಧರ್ಮ ಸಮನ್ವಯಕ್ಕೆ ಶಾಪದಂತಿರೋ ತಾಲಿಬಾನಿಗಳು ನಿನ್ನ ಪರವಾಗಿದ್ದರೆ ಅದು ಒಳ್ಳೆಯ ಬೆಳವಣಿಗೆ ಅಲ್ಲ.. ಇದೆಲ್ಲಾ ನಾಲ್ಕು ದಿನದ ಆಟ... Be cool... 'ಜೈ ಶ್ರೀರಾಮ್... ಅಲ್ಲಾ ಹೋ ಅಕ್ಬರ್... '' ಎಂದು ಪೋಸ್ಟ್ ಮಾಡಿದ್ದಾರೆ. 

ಇನ್ನು ತಾಲಿಬಾನಿಯರಿಗೆ ಧನ್ಯವಾದ ತಿಳಿಸಿರುವ ಟ್ವಿಟರ್ ಖಾತೆ ವಿದ್ಯಾರ್ಥಿನಿಯದ್ದಲ್ಲ. ಬದಲಿಗೆ ಮುಸ್ಕಾನ್ ಹೆಸರಿನಲ್ಲಿ ಹಲವಾರು ಫೇಸ್ ಬುಕ್, ಟ್ವಿಟರ್  ನಕಲಿ ಖಾತೆಗಳ ಬಗ್ಗೆ ಗಮನಕ್ಕೆ ಬಂದಿದೆ ಎಂದು ಪ್ರಜಾವಾಣಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸ್ವತ: ಮುಸ್ಕಾನ್ ಹೇಳಿದ್ದಾರೆ. 

“ನನಗೆ ಕಾಲೇಜು, ಮನೆ ಬಿಟ್ಟರೆ ನನಗೆ ಬೇರೆ ಪ್ರಪಂಚವಿಲ್ಲ. ನಾನು ಚಳವಳಿಗಾರರ ಜೊತೆ ಸಂಪರ್ಕದಲ್ಲಿದ್ದೆ, ತರಬೇತಿ ಪಡೆದಿದ್ದೆ ಎಂದೆಲ್ಲಾ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ನೇಣು ಹಾಕಿದ್ದಾರೆ ಎಂದೆಲ್ಲಾ ಬರೆದಿದ್ದಾರೆ. ಇದರ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇನೆ” ಎಂದು ಅವರು ಪ್ರಜಾವಾಣಿ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

ಪ್ರಜಾವಣಿಯ ಸಂಸದರ್ಶನ ಇಲ್ಲಿ ಓದಬಹುದು: ಸಂದರ್ಶನ | ಹಿಜಾಬ್: ಸಂಘಟನೆ ಜೊತೆ ಗುರುತಿಸಿಕೊಂಡಿಲ್ಲ, ಅವಶ್ಯವೂ ಇಲ್ಲ: ಮುಸ್ಕಾನ್

ಇದೀಗ ಫೇಸ್‌ ಬುಕ್‌ ಈ ಪೋಸ್ಟ್‌ ಒಂದು ಸುಳ್ಳುಸುದ್ದಿಯಾಗಿದೆ ಎಂದು ಸ್ವತಂತ್ರ ಸತ್ಯಶೋಧಕರ ವರದಿ ಆಧರಿಸಿ ಪೋಸ್ಟ್‌ ಅನ್ನು ಮರೆಮಾಚಿದೆ. ಈ ಮೂಲಕ ಕಾಮೆಂಟ್‌ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ ಸುಳ್ಳುಸುದ್ದಿ ಹಬ್ಬಲೆತ್ನಿಸಿದ ʼಕಿರಿಕ್‌ʼ ಕೀರ್ತಿ ಉದ್ದೇಶ ಬಯಲಾಗಿದೆ ಎಂದು ಸಾಮಾಜಿಕ ತಾಣದಾದ್ಯಂತ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News