ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಕಾಂಗ್ರೆಸ್ ಅಹೋರಾತ್ರಿ ಧರಣಿ

Update: 2022-02-17 16:02 GMT

ಬೆಂಗಳೂರು, ಫೆ.17: ಕೆಂಪುಕೋಟೆ ಮೇಲೆ ಮುಂದೊಂದು ದಿನ ಕೇಸರಿ ಧ್ವಜವನ್ನು ಹಾರಿಸುತ್ತೇವೆ ಎಂದು ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲದೆ, ಸರಕಾರ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದೆ.

ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಬುಧವಾರದಿಂದ ಧರಣಿ ನಡೆಸುತ್ತಿರುವ ಕಾಂಗ್ರೆಸ್ ಸದಸ್ಯರು, ಗುರುವಾರ ಸದನ ಸೇರುತ್ತಿದ್ದಂತೆ ಪುನಃ ತಮ್ಮ ಧರಣಿಯನ್ನು ಮುಂದುವರೆಸಿದರು. ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕ ಮಳ್ಳೂರ್ ಆನಂದ ರಾವ್ ಅವರ ನಿಧನದ ಸಂತಾಪ ಸೂಚನೆಯನ್ನು ಮಂಡಿಸಿದರು.

ಸಂತಾಪ ಸೂಚನೆಯ ಬಳಿಕ ಸ್ಪೀಕರ್ ಕಾರ್ಯಕಲಾಪ ಪಟ್ಟಿಯಂತೆ ಪ್ರಶ್ನೋತ್ತರವನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಯಲ್ಲೆ ಇದ್ದು ‘ಈಶ್ವರಪ್ಪ ದೇಶದ್ರೋಹಿ’, ‘ಈಶ್ವರಪ್ಪ ರಾಜೀನಾಮೆ ನೀಡಿ’, ‘ನಮ್ಮ ಧ್ವಜ ನಮ್ಮ ಹೆಮ್ಮೆ’, ‘ಸ್ಪೀಕರ್ ಅವರೇ ನ್ಯಾಯ ಕೊಡಿ’, ‘ಬಿಜೆಪಿ ಸರಕಾರಕ್ಕೆ ಧಿಕ್ಕಾರ’ ಎಂದು ಘೋಷಣೆಗಳನ್ನು ಕೂಗಲು ಆರಂಭಿಸಿದರು.

ಸದನದಲ್ಲಿನ ಗದ್ದಲದ ವಾತಾವರಣದ ನಡುವೆಯೇ ಸ್ಪೀಕರ್ ಪ್ರಶ್ನೋತ್ತರ ಕಲಾಪ ಮುಗಿಸಿದರು. ಅಲ್ಲದೆ, ಕರ್ನಾಟಕ ಸ್ಟಾಂಪು(ಎರಡನೆ ತಿದ್ದುಪಡಿ) ವಿಧೇಯಕ-2022 ಮಂಡನೆಗೆ ಅವಕಾಶ ನೀಡಿದರು. ಆನಂತರ ಮಧ್ಯಾಹ್ನ 3 ಗಂಟೆಗೆ ಸೇರುವಂತೆ ಸದನವನ್ನು ಭೋಜನಾ ವಿರಾಮಕ್ಕೆ ಮುಂದೂಡಿದರು.

ಭೋಜನ ವಿರಾಮದ ಬಳಿಕ ಸದನ ಸಮಾವೇಶಗೊಳ್ಳುತ್ತಿದ್ದಂತೆ ಕಂದಾಯ ಸಚಿವ ಆರ್.ಅಶೋಕ್, ‘ಕಾಂಗ್ರೆಸ್ ಪ್ಲೀಸ್ ಕಮ್’ ಎಂದು ಅವರ ಧರಣಿಗೆ ವ್ಯಂಗ್ಯವಾಡಿದರು. ಈ ವೇಳೆ ಸಿದ್ದರಾಮಯ್ಯ ನೇತೃತ್ವದಲ್ಲಿ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು ಧರಣಿ ಆರಂಭಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರ ಮನವೊಲಿಕೆಗೆ ಸ್ಪೀಕರ್ ಪ್ರಯತ್ನಿಸಿದರೂ ಯಾವುದೆ ಪ್ರಯೋಜನವಾಗಲಿಲ್ಲ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಈ ವೇಳೆ ಸದನವನ್ನು 10 ನಿಮಿಷ ಮುಂದೂಡಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ತಮ್ಮ ಕಚೇರಿಗೆ ಕರೆದು ಮಾತನಾಡಿ ಎಂದು ಸ್ಪೀಕರ್‍ಗೆ ಸಲಹೆ ನೀಡಿದರು. ಆದರೆ, ಗದ್ದಲದ ವಾತಾವರಣದಲ್ಲಿ ಸ್ಪೀಕರ್ ಅವರಿಗೆ ಈ ಮಾತು ಕೇಳಿಸಲಿಲ್ಲ. ಆಗ ಸ್ಪೀಕರ್ ಸದನವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಸೇರುವಂತೆ ಮುಂದೂಡಿದರು.

ಬಳಿಕ ವಿರೋಧ ಪಕ್ಷದ ಶಾಸಕರ ಬಳಿ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವೊಲಿಕೆಗೆ ಪ್ರಯತ್ನಿಸಿದರೂ ಯಾವುದೆ ಪ್ರಯೋಜನವಾಗಲಿಲ್ಲ. ಕಾಂಗ್ರೆಸ್ ಸದಸ್ಯರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದರು.

ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ಈ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಳ್ಳುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ ನೀಡಿದರು. ಅಲ್ಲದೆ, ಸದನದ ಹೊರಗೆ ಇರುವ ಶಾಸಕರಿಗೂ ಇಲ್ಲಿ ಬರುವಂತೆ ತಿಳಿಸಿ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯ್ ಸಿಂಗ್ ಅವರಿಗೆ ಸಿದ್ದರಾಮಯ್ಯ ತಿಳಿಸಿದರು.

ಈಶ್ವರಪ್ಪ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಹಾಗೂ ಅವರು ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಇದೊಂದು ಭಂಡ ಸರಕಾರ. ನಮ್ಮ ಆಗ್ರಹಕ್ಕೆ ಮನ್ನಣೆ ನೀಡದಿದ್ದರೆ ನಾವು ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಧರಣಿ ನಿರತ ಶಾಸಕರಿಗೆ ರಾತ್ರಿ ಭೋಜನ ಹಾಗೂ ಬೆಳಗ್ಗೆ ಉಪಾಹಾರ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡುವಂತೆ ವಿಧಾನಸಭೆಯ ಕಾರ್ಯದರ್ಶಿಗೆ ಸಿದ್ದರಾಮಯ್ಯ ಕೋರಿದರು. ಅದರಂತೆ, ಅವರು ಅಗತ್ಯ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ತಿಳಿಸಿದರು.

ಮನವೊಲಿಸಲು ಯತ್ನಿಸಿದ ಸ್ಪೀಕರ್: ಸದನದ ಕಾರ್ಯಕಲಾಪಗಳು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಿ. ಅಲ್ಲದೆ, ಧರಣಿಯನ್ನು ಕೈ ಬಿಟ್ಟು ಕಲಾಪದಲ್ಲಿ ಭಾಗವಹಿಸಿ ಎಂದು ವಿಧಾನಸಭೆಯ ಮೊಗಸಾಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸದಸ್ಯರನ್ನು ಭೇಟಿ ಮಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನವೊಲಿಸಲು ಯತ್ನಿಸಿದರು.

ಬಿಎಸ್‍ವೈ ಮನವಿ: ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ಶಾಸಕರನ್ನು ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್ ಭೇಟಿ ಮಾಡಿ ಧರಣಿ ಕೈ ಬಿಡುವಂತೆ ಮನವಿ ಮಾಡಿದರು.

ವಿಧಾನಪರಿಷತ್ ನಲ್ಲೂ ಕಾಂಗ್ರೆಸ್ ಧರಣಿ

ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ವಿಧಾನಪರಿಷತ್ ‌ನಲ್ಲಿ ಪತ್ರಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ‌ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News