ಮಡಿಕೇರಿ: ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು 'ಅರೆಸ್ಟ್ ಮಾಡಿ' ಎಂದ ಪ್ರಾಂಶುಪಾಲ!

Update: 2022-02-18 17:20 GMT

ಮಡಿಕೇರಿ ಫೆ.18: ಕೊಡಗು ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದು, ಪದವಿ ಕಾಲೇಜಿನ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿನಿಯರನ್ನು ಅರೆಸ್ಟ್ ಮಾಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗವೂ ಇಂದು (ಶುಕ್ರವಾರ) ನಡೆಯಿತು.

ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿದೆ. 

ಮಡಿಕೇರಿ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಾಗ ತರಗತಿಯ ಬಾಗಿಲಲ್ಲೇ ತಡೆದ ಪ್ರಾಂಶುಪಾಲರು ಕೋರ್ಟ್ ಆದೇಶ ಪಾಲಿಸಿ, ಹಿಜಾಬ್ ಹಾಕಿ ತರಗತಿಗೆ ಬರಬೇಡಿ ಎಂದಿದ್ದಲ್ಲದೆ,   ಹಿಜಾಬ್ ಧರಿಸಿದರೆ ಪ್ರವೇಶವಿಲ್ಲ, ಬೇರೆ ವಿದ್ಯಾರ್ಥಿಗಳಿಗೆ ತೊಂದರೆ ನೀಡಬೇಡಿ, ಇಲ್ಲಿಂದ ಹೋಗಿ ಎಂದು ಗದರಿಸಿದರು.  

ಈ ಸಂದರ್ಭ ವಿದ್ಯಾರ್ಥಿನಿಯರು ಆಕ್ಷೇಪ ವ್ಯಕ್ತಪಡಿಸಿ, ಹಿಜಾಬ್ ಇಲ್ಲದೆ ತರಗತಿಗೆ ಬರಲು ಸಾಧ್ಯವಿಲ್ಲ, ಹಾಜರಾತಿ ನೀಡುವಿರಾ ಎಂದು ಪ್ರಶ್ನಿಸಿದರು. ಇದರಿಂದ ಅಸಮಾಧಾನಗೊಂಡ ಪ್ರಾಂಶುಪಾಲರು ತರಗತಿಗೆ ಹಾಜರಾಗದಿದ್ದಲ್ಲಿ ಹಾಜರಾತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

''ವಿದ್ಯಾರ್ಥಿನಿಯರು ಕಾಲೇಜು ಆವರಣದಿಂದ ತೆರಳದೆ ಇದ್ದಾಗ “ಬೇರೆ ವಿದ್ಯಾರ್ಥಿಗಳಿಗೆ ಇವರಿಂದ ತೊಂದರೆಯಾಗುತ್ತಿದೆ, ಇವರ ವಿರುದ್ಧ ಎಫ್‍ಐಆರ್ ದಾಖಲಿಸಿ, ಅರೆಸ್ಟ್ ಮಾಡಿ” ಎಂದು ಅಲ್ಲೇ ಇದ್ದ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ನಂತರ ಕಾಲೇಜ್ ನಿಂದ ಹೊರ ನಡೆದ ವಿದ್ಯಾರ್ಥಿನಿಯರು ಗೇಟ್ ಬಳಿ ಕುಳಿತು ಹಿಜಾಬ್ ಪರ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News