ಉಡುಪು ಅಲ್ಲ, ಏನು ಕಲಿಸುತ್ತೇವೆ, ಏನು ಕಲಿಯುತ್ತೇವೆ ಎಂಬುದಷ್ಟೇ ಮುಖ್ಯ

Update: 2022-02-19 14:24 GMT
ಸಾಂದರ್ಭಿಕ ಚಿತ್ರ

ಸುಮಾರು 20 ವರ್ಷಗಳಿಂದ  ನಾನು ವಿಶ್ವವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ 20 ವರ್ಷಗಳಲ್ಲಿ ಒಂದೇ ಒಂದು ತರಗತಿಗೂ ನಾನು ಸೀರೆಯುನ್ನು ಉಟ್ಟಿಲ್ಲ. ಅಪರೂಪಕ್ಕೆ ಸಲ್ವಾರ್ ಕಮೀಝ್ ( ಚೂಡಿದಾರ್ ) ಧರಿಸುತ್ತೇನೆ. ಹೆಚ್ಚಾಗಿ ನಾನು ಟಾಪ್‌ನೊಂದಿಗೆ ಜೀನ್ಸ್ ಅಥವಾ ಥ್ರೀ ಫೋರ್ಥ್ಸ್ ಧರಿಸುತ್ತೇನೆ. ಈವರೆಗೆ ನನ್ನ ವಿದ್ಯಾರ್ಥಿಗಳು ನನ್ನ ಉಡುಗೆಯನ್ನು ಆಧರಿಸಿ ನನ್ನನ್ನು, ನನ್ನ ಬೋಧನೆಯನ್ನು, ನನ್ನ ಮೇಲ್ವಿಚಾರಣೆಯನ್ನು, ನನ್ನ ಸಂಶೋಧನೆಯನ್ನು ಅಥವಾ ಅವರೊಂದಿಗೆ ನನ್ನ ಸಂವಾದವನ್ನು ಅಳೆದಿಲ್ಲ ಎನ್ನುವುದು ನನಗೆ ಖಚಿತವಿದೆ.

ನಾನು ಕೇಂದ್ರೀಯ ವಿವಿಯಲ್ಲಿ ಶಿಕ್ಷಕಿ. ನಮ್ಮಲ್ಲಿ ಭಾರತದಾದ್ಯಂತದ ಮತ್ತು ಕೆಲವೊಮ್ಮೆ ವಿದೇಶಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಅವರು ಪರಸ್ಪರರಿಂದ ಭಿನ್ನವಾಗಿ ಕಾಣುತ್ತಾರೆ. ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಅವರ ಆಹಾರ, ಉಡುಗೆ ಎಲ್ಲವೂ ಭಿನ್ನವಾಗಿವೆ ಹಾಗೂ ವಿವಿಧ ಧರ್ಮಗಳು ಮತ್ತು ಜಾತಿಗಳಿಗೆ ಸೇರಿದವರಾಗಿದ್ದಾರೆ. ನಾನಾಗಲಿ, ನನ್ನ ಸಹೋದ್ಯೋಗಿಗಳಾಗಲಿ ಎಂದೂ ನಮ್ಮ ವಿದ್ಯಾರ್ಥಿಗಳನ್ನು ಅವರು ಹೊರಗಿಂದ ಹೇಗೆ ಕಾಣುತ್ತಾರೆ ಎಂಬುದರ ಮೇಲೆ ಅಳೆದಿಲ್ಲ. 

ನಾವು ಏನನ್ನು ಮತ್ತು ಹೇಗೆ ಬೋಧಿಸುತ್ತೇವೆ ಹಾಗೂ ನಾವು ಏನನ್ನು ಮತ್ತು ಹೇಗೆ ಕಲಿಯುತ್ತೇವೆ ಎನ್ನುವುದು ತರಗತಿಯಲ್ಲಿ ಮುಖ್ಯವಾಗುತ್ತದೆ. ಭಾರತದ ಇತಿಹಾಸದಲ್ಲಿ ಬಹಳ ಹಿಂದೇನಲ್ಲ, ಜನಿವಾರವನ್ನು ಧರಿಸಿದ್ದ ಪುರುಷರು ಮಾತ್ರ ತಮ್ಮ ಧಾರ್ಮಿಕ ಉಡುಗೆಗಳಲ್ಲಿ ಗುರುಕುಲಗಳಿಗೆ ಕಲಿಯಲು ಹೋಗುತ್ತಿದ್ದರು. ಬ್ರಿಟಿಷರು ಮತ್ತು ಮಿಶನರಿಗಳಿಂದ ವಿಧ್ಯುಕ್ತ ಶಾಲಾ ಕಾಲೇಜುಗಳ ಆರಂಭದ ಹೊರತಾಗಿ ಈ ಸಂಪ್ರದಾಯವನ್ನು ಬದಲಿಸಿದ್ದು ಯಾವುದು?

ಮುಸ್ಲಿಂ ಮಹಿಳೆ ಫಾತಿಮಾ ಶೇಖ್ ಮತ್ತು ಹಿಂದುಳಿದ ಜಾತಿಗೆ ಸೇರಿದ್ದ ಸಾವಿತ್ರಿಬಾಯಿ ಫುಲೆಯಂತಹವರು ಮೊದಲ ಬಾರಿಗೆ ಎಲ್ಲ ಜಾತಿಗಳಿಗೆ ಸೇರಿದ ಬಾಲಕಿಯರಿಗಾಗಿ ಶಾಲೆಯನ್ನು ಆರಂಭಿಸಿದ್ದರು. ಓದುವಿಕೆ ಮತ್ತು ಕಲಿಯುವಿಕೆಯ ಹಿಂದು ಜಾತಿ ವ್ಯವಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಾವಿತ್ರಿಬಾಯಿ ಮತ್ತು ಅವರ ಪತಿ ಜ್ಯೋತಿಬಾ ಫುಲೆ ತಮ್ಮ ಮನೆಯಿಂದ ಹೊರದಬ್ಬಲ್ಪಟ್ಟಾಗ ಫಾತಿಮಾ ಶೇಖ್ ಮತ್ತು ಅವರ ಸೋದರ ಉಸ್ಮಾನ್ ಶೇಖ್ ಅವರು ಈ ದಂಪತಿಗೆ ಆಶ್ರಯವನ್ನು ಕಲ್ಪಿಸಿ ತಮ್ಮದೇ ಕಟ್ಟಡದಲ್ಲಿ ಶಾಲೆಯನ್ನು ನಡೆಸಿದ್ದರು.

ಇಂದು ಗ್ರಾಮೀಣ,ಸರಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಬಹುಸಂಖ್ಯಾತರಾಗಿರುವ ದಲಿತ-ಬಹುಜನ ಬಾಲಕರು ಮತ್ತು ಬಾಲಕಿಯರಿಗೆ ಕೇಸರಿ ಉಡುಪನ್ನು ಧರಿಸುವಂತೆ ಹೆಚ್ಚುಕಡಿಮೆ ಬಲವಂತವನ್ನೇ ಮಾಡಲಾಗುತ್ತಿದೆ. ಕೇಸರಿ ಬಣ್ಣಕ್ಕೆ ಧಾರ್ಮಿಕ ನಿಷ್ಠೆಯೇ ಪ್ರಶ್ನಾರ್ಹವಾಗಿದೆ. ಇದು ಒಂದು ಚಿತ್ರಣವಾದರೆ ಇತರ ಚಿತ್ರಣಗಳೂ ಇವೆ. ಅಂಬೇಡ್ಕರ್‌ವಾದಿಗಳ ನೀಲಿ ಬಣ್ಣವೂ ಮುನ್ನೆಲೆಗೆ ಬಂದಿದೆ ಹಾಗೂ ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಖ್ ಅವರ ಕನಸುಗಳನ್ನು ಮುನ್ನಡೆಸುತ್ತಿದೆ.

ವಸಾಹತು ಯುಗ ಮತ್ತು ಮಿಶನರಿಗಳ ಶಾಲೆಗಳಲ್ಲಿಯ ಯೂನಿಫಾರ್ಮ್‌ನ ನೇರ ಅನುವಾದವಾಗಿರುವ ಸಮವಸ್ತ್ರವು ಸಾಮಾನ್ಯವಾಗಿ ಬಾಲಕಿಯರಿಗೆ ಸಲ್ವಾರ್ ಕಮೀಝ್‌ನ್ನು ಒಳಗೊಂಡಿದೆ. ಪಂಜಾಬ್ ಮೂಲದ ಸಲ್ವಾರ್ ಕಮೀಝ್‌ನ್ನು ಮುಘಲರು ಭಾರತೀಯ ಉಪಖಂಡದಲ್ಲಿ ಜನಪ್ರಿಯಗೊಳಿಸಿದ್ದರು. 1980ರ ದಶಕದವರೆಗೂ ದಕ್ಷಿಣ ಭಾರತದಲ್ಲಿ ಈ ಉಡುಪಿನ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಅಲ್ಲಿಂದೀಚೆಗೆ ದ. ಭಾರತದಲ್ಲಿಯೂ ಸಲ್ವಾರ್ ಕಮೀಝ್ ಬಾಲಕಿಯರು ಧರಿಸುತ್ತಿದ್ದ ಸ್ಕರ್ಟ್-ಬ್ಲೌಸ್‌ನ ಬದಲಾಗಿ ಹೆಚ್ಚು ಜನಪ್ರಿಯಗೊಂಡಿದೆ. ಸಲ್ವಾರ್‌ನ ಮೂಲ ಪರ್ಷಿಯನ್ ಶಬ್ದ ಶಲ್ವಾರ್ ಆಗಿದ್ದರೆ, ಕಮೀಝ್ ಅರೆಬಿಕ್ ಶಬ್ದ ಕಾಮಿಸ್/ಕಮೀಝ್‌ನಿಂದ ಬಂದಿದೆ.

ಇದೇ ರೀತಿ ಇಂದು ಸಮವಸ್ತ್ರಗಳು ಸೇರಿದಂತೆ ಭಾರತದಲ್ಲಿ ಹೆಚ್ಚುಕಡಿಮೆ ಎಲ್ಲ ಪುರುಷರು ಧರಿಸುವ ಉಡುಗೆ ಪ್ಯಾಂಟ್ ಮತ್ತು ಶರ್ಟ್ ಆಗಿದೆ ಮತ್ತು ಇದು ಭಾರತೀಯ ಉಡುಗೆಯಂತೂ ಅಲ್ಲವೇ ಅಲ್ಲ. ಬಟಾಟೆ ಮತ್ತು ಮೆಣಸಿನಂತಹ ಸಾಮಗ್ರಿಗಳು ಮತ್ತು ಪರ್ಷಿಯನ್ ಮೂಲದ ಶಾ ಅಂತಹ ಹೆಸರುಗಳು ಇಂದು ದೇಶದಲ್ಲಿ ಬಳಕೆಯಾಗುತ್ತಿವೆ ಮತ್ತು ಇವ್ಯಾವುದೂ ಮೂಲತಃ ಭಾರತದ್ದಲ್ಲ.

ನಿಜಕ್ಕೂ ಬಾಲಕಿಯರು ಮತ್ತು ಬಾಲಕಿಯರ ಕಲಿಕೆಯನ್ನು ಯಾವುದು ಸಾಧ್ಯವಾಗಿಸುತ್ತದೆ, ಅವರು ಶಾಲೆ ಕಾಲೇಜುಗಳಿಗೆ ಹೋಗುವಂತೆ ಮತ್ತು ಮುಂದಕ್ಕೆ ಸಾಗುವಂತೆ ಪ್ರೇರೇಪಿಸುತ್ತಿರುವುದು ಯಾವುದು ಎನ್ನುವುದು ಇಲ್ಲಿ ಕಾಳಜಿಯ ವಿಷಯವಾಗಿದೆ. ಸಂಸ್ಥೆಗಳಾಗಿ,ಅದು ಚುನಾಯಿತ ಸರಕಾರವಾಗಿರಲಿ ಅಥವಾ ಶಾಲೆ/ಕಾಲೇಜು ಆಗಿರಲಿ...ನಾವು ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸುವುದು,ಹೊಸದನ್ನು ಅನ್ವೇಷಿಸಲು ಅವರನ್ನು ಸಮರ್ಥರನ್ನಾಗಿಸುವುದು, ಅವರು ಬದುಕನ್ನು ಆನಂದಿಸಿ ತಮ್ಮ ಸ್ವಂತದ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡುವುದು, ಪ್ರೀತಿ,ಸೌಹಾರ್ದ ಮತ್ತು ಸಮಾನತೆಯ ಬದುಕಿನತ್ತ ಅವರನ್ನು ಪ್ರೇರೇಪಿಸುವುದು ಅಗತ್ಯವಾಗಿದೆ. ಇವು ನಾವು ಯಾವ ಉಡುಗೆ ಧರಿಸುತ್ತೇವೆ ಮತ್ತ ಹೇಗೆ ಕಾಣುತ್ತೇವೆ ಎನ್ನುವುದಕ್ಕೆ ಎಳ್ಳಷ್ಟೂ ಸಂಬಂಧಿಸಿಲ್ಲ.

ಕರ್ನಾಟಕದಲ್ಲಿ ಇತ್ತೀಚಿಗೆ ಮಧ್ಯಾಹ್ನದೂಟದಲ್ಲಿ ಮಕ್ಕಳಿಗೆ ಮೊಟ್ಟೆಯನ್ನು ನೀಡುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಮೊಟ್ಟೆ ಶಿಕ್ಷಣವನ್ನು ಹೇಗೆ ಕೆಡಿಸುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ, ಆದರೂ ಇಂತಹ ವಿರೋಧ ಹುಟ್ಟಿಕೊಂಡಿತ್ತು. ಈಗ ಹಿಜಾಬ್ ನಿಷೇಧದತ್ತ ನಾವು ಹೊರಳಿದ್ದೇವೆ.

ಸೀರೆಯನ್ನು ಧರಿಸದಿರುವುದು ನನ್ನನ್ನು ಕೆಟ್ಟ ಶಿಕ್ಷಕಿಯನ್ನಾಗಿ ಮಾಡಿಲ್ಲ (ಸೀರೆ ಧರಿಸುವುದು ಒಳ್ಳೆಯ ಶಿಕ್ಷಕಿಯನ್ನಾಗಿಸುತ್ತದೆ ಎಂದೇನಿಲ್ಲ), ಪ್ಯಾಂಟ್ ಮತ್ತು ಶರ್ಟ್ ಧರಿಸುವ ಶಿಕ್ಷಕರು ಜನಿವಾರ ಮತ್ತು ಪಂಚೆ ಧರಿಸುವ ಶಿಕ್ಷಕರಿಗಿಂತ ಉತ್ತಮರು/ಕೆಟ್ಟವರು ಆಗಿಲ್ಲ. ತರಗತಿಯಲ್ಲಿ ಏನನ್ನು ಬೋಧಿಸಲಾಗುತ್ತದೆ ಮತ್ತು ಏನನ್ನು ಕಲಿಯಲಾಗುತ್ತದೆ ಎನ್ನುವುದರ ಮೇಲೆ ಗಮನ ಹರಿಸಲು ಇದು ಸಕಾಲವಾಗಿದೆ.

ಶಿಕ್ಷಕರ ಸಂಖ್ಯೆ, ಅವರ ವೇತನಗಳು, ಅವರ ಕೆಲಸದ ಸ್ಥಳದ ಸ್ಥಿತಿ ಮತ್ತು ಕಲಿಕೆಯ ವಾತಾವರಣದ ಬಗ್ಗೆ ನಾವು ಗಮನವನ್ನು ಹರಿಸಬೇಕಿದೆ. ಶಾಲಾಕಾಲೇಜುಗಳಲ್ಲಿ ನಮ್ಮ ಎಲ್ಲ ಮಕ್ಕಳಿಗೆ ಸಮಾನ ಅವಕಾಶಗಳನ್ನು ಒದಗಿಸುವುದು ಮತ್ತು ತಮ್ಮ ಶಾಲಾಕಾಲೇಜುಗಳಲ್ಲಿ ಬಳಸಬಹುದಾದ ಟಾಯ್ಲೆಟ್‌ಗಳನ್ನು ವಿದ್ಯಾರ್ಥಿಗಳು ಹೊಂದಿರುವುದು ಈಗಿನ ಅಗತ್ಯವಾಗಿದೆ.

ಕೃಪೆ : Deccan Herald

(ಲೇಖಕಿ ಹೈದರಾಬಾದ್ ವಿವಿಯಲ್ಲಿ ಪ್ರೊಫೆಸರ್ )

Writer - ಸೌಮ್ಯಾ ದೇಚಮ್ಮ ಸಿಸಿ

contributor

Editor - ಸೌಮ್ಯಾ ದೇಚಮ್ಮ ಸಿಸಿ

contributor

Similar News