ರಾಷ್ಟ್ರಧ್ವಜ ಬದಲಾವಣೆ ಆರೆಸ್ಸೆಸ್ ಗುಪ್ತಕಾರ್ಯಚೂಚಿ: ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್

Update: 2022-02-19 17:09 GMT
ಬಿ.ಕೆ. ಹರಿಪ್ರಸಾದ್

ಬೆಂಗಳೂರು: ‘ಸಂವಿಧಾನವನ್ನು ಬುಡಮೇಲು ಮಾಡುವುದು, ರಾಷ್ಟ್ರಧ್ವಜವನ್ನು ಬದಲಾವಣೆ ಮಾಡುವುದು ಆರೆಸ್ಸೆಸ್ ಮತ್ತು ಸಂಘ ಪರಿವಾರದವರ ಗುಪ್ತ ಕಾರ್ಯಸೂಚಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು, ಇದು ಆರೆಸ್ಸೆಸ್‍ನ ಹೀನ ಸಂಸ್ಕೃತಿ. ದಿಲ್ಲಿ ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವ ಹೇಳಿಕೆ ಮೂಲಕ ರಾಷ್ಟ್ರದ್ರೋಹವೆಸಗಿದ ಸಚಿವ ಈಶ್ವರಪ್ಪ ಅವರ ಬೆನ್ನಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಂತಿರುವುದು ದುರಂತ’ ಎಂದು ಟೀಕಿಸಿದರು. 

‘ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಮನಸೋ ಇಚ್ಛೆ ಮಾತನಾಡುತ್ತಿದ್ದು, ಅವರೊಬ್ಬ ಹರಕು ಬಾಯಿ ದಾಸ. ಇಂತಹವರಿಗೆಲ್ಲ ದೇಶದಲ್ಲಿ ಹಲವು ಮಂದಿ ಇದ್ದು, ಹಾವಿನಪುರದ(ನಾಗಪುರ) ಆರೆಸೆಸ್ಸ್ ಪರಿವಾರದವರು ಇಂತಹವನ್ನು ಸಾಕಿದ್ದಾರೆ. ಇವರ ಬಗ್ಗೆ ಮಾತನಾಡಲು ಆಗುವುದಿಲ್ಲ' ಎಂದು ಹರಿಪ್ರಸಾದ್ ಇದೇ ವೇಳೆ ಕಿರಿಕಾಡಿದರು.

‘ನಾನು ಈ ಭಾರತ ದೇಶದ ಒಬ್ಬ ನಾಗರಿಕ. ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನಮ್ಮ ರಾಷ್ಟ್ರಧ್ವಜದ ಮೇಲೆ ನಂಬಿಕೆ ಇಟ್ಟುಕೊಂಡಿರುವವನು. ಇಂತಹ ಎಷ್ಟೋ ಈಶ್ವರಪ್ಪಗಳು ದೇಶದಲ್ಲಿ ಬಂದು ಹೋಗಿದ್ದಾರೆ. ಇನ್ನೂ ಈಶ್ವರಪ್ಪ ಇನ್ನೂ ಎಷ್ಟು ದಿನ ಇರಲು ಸಾಧ್ಯ ಎಂದು ಟೀಕಿಸಿದ ಹರಿಪ್ರಸಾದ್, ‘ಈಶ್ವರಪ್ಪ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ' ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News