ಚತ್ತೀಸ್ಗಡ: ಎನ್ಕೌಂಟರ್ ನಲ್ಲಿ ಶಂಕಿತ ನಕ್ಸಲೀಯ ಹತ್ಯೆ

Update: 2022-02-20 19:00 GMT

ದಂತೇವಾಡ, ಫೆ. 20: ಚತ್ತೀಸ್ಗಡದ ದಂತೇವಾಡ ಜಿಲ್ಲೆಯಲ್ಲಿ ಪೊಲೀಸರು ಎನ್ಕೌಂಟರ್ ನಡೆಸಿ ಶಂಕಿತ ನಕ್ಸಲೀಯನೋರ್ವನನ್ನು ಹತ್ಯೆಗೈದಿದ್ದಾರೆ. ಅರಾನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬುರುಗುಂ ಗ್ರಾಮದ ಸಮೀಪದ ಅರಣ್ಯದಲ್ಲಿ ಶನಿವಾರ ತಡ ರಾತ್ರಿ ಡಿಆರ್‌ಜಿ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಿತು ಎಂದು ದಂತೇವಾಡದ ಪೊಲೀಸ್ ಅಧೀಕ್ಷಕ ಸಿದ್ಧಾರ್ಥ್ ತಿವಾರಿ ಅವರು ಹೇಳಿದ್ದಾರೆ. 

ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಶಂಕಿತ ನಕ್ಸಲೀಯನ ಮೃತದೇಹ ಪತ್ತೆಯಾಯಿತು. ನಕ್ಸಲೀಯನನ್ನು ಅರ್ಜುನ್ ಆಲಿಯಾಸ್ ಲಕ್ಮಾ ಸೋದಿ (34) ಎಂದು ಗುರುತಿಸಲಾಗಿದೆ. ಈತನ ತಲೆಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಈತ ಮಾವೋವಾದಿಗಳ ಮಾಲಂಗೇರ್ ಪ್ರದೇಶ ಸಮಿತಿಯ ಮಿಲಿಟರಿ ಕಮಾಂಡರ್ ಉಸ್ತುವಾರಿಯಾಗಿದ್ದ. ಈತ ಹತ್ಯೆ, ಹತ್ಯೆ ಯತ್ನ ಹಾಗೂ ಅಪಹರಣ ಸೇರಿದಂತೆ 13 ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಎನ್ಕೌಂಟರ್ ನಡೆದ ಸ್ಥಳದಲ್ಲಿ ಪಿಸ್ತೂಲ್, 5 ಕಿ.ಗ್ರಾಂ. ಟಿಫಿನ್ ಬಾಂಬ್, ನಕ್ಸಲ್ ಸಮವಸ್ತ್ರ, ಇಲೆಕ್ಟ್ರಿಕ್ ವಯರ್, ವಯರ್ ಕಟ್ಟರ್, ನಕ್ಸಲ್ ಸಾಹಿತ್ಯ ಹಾಗೂ ಶಿಬಿರ ನಿರ್ಮಾಣ ಮಾಡುವ ಕೆಲವು ಸಾಮಗ್ರಿಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News