ಪ್ರವಾಸಿ ತಾಣಗಳಲ್ಲಿ ಹೋಟೆಲ್‌, ಕಟ್ಟಡ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸುವ ಬಗ್ಗೆ ಶೀಘ್ರ ಕ್ರಮ: ಸಚಿವ ಆನಂದ್ ಸಿಂಗ್

Update: 2022-02-22 16:51 GMT
ಸಚಿವ ಆನಂದ್ ಸಿಂಗ್

ಬೆಂಗಳೂರು, ಫೆ.22, ರಾಜ್ಯದ ಪ್ರವಾಸಿ ತಾಣಗಳಲ್ಲಿ ಹೋಟೆಲ್‌ಗಳನ್ನು ತೆರೆಯುವ ಸಂಬಂಧ ಕಟ್ಟಡ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸುವ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಭರವಸೆ ನೀಡಿದ್ದಾರೆ.

ಬಿಜೆಪಿ ವೃತ್ತಿಪರರ ಪ್ರಕೋಷ್ಠದ ವತಿಯಿಂದ ‘ಬಿಜೆಪಿ ಫಾರ್ ಬೆಟರ್ ಬೆಂಗಳೂರು’ ಕಾರ್ಯಕ್ರಮದಡಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಹೋಟೆಲ್ ಉದ್ಯಮಿಗಳು ಮಾತ್ರವಲ್ಲದೆ ವ್ಯಾಪಾರಕ್ಕೆ ತೀವ್ರ ಹೊಡೆತ ಬಿದ್ದಿದೆ. ಆ ಕಹಿ ನೆನಪನ್ನು ಹಾಗೂ ಕೆಟ್ಟ ಘಳಿಗೆಯನ್ನು ಮರೆತು ನಾವೆಲ್ಲರೂ ಮುನ್ನಡೆಯಬೇಕಿದೆ. ಹೋಟೆಲ್ ಉದ್ಯಮಿಗಳಿಗೆ ಪೂರಕವಾದ ವಾತಾವರಣವನ್ನು ಪ್ರವಾಸೋದ್ಯಮ ಸ್ಥಳಗಳಲ್ಲಿ ನಿರ್ಮಿಸಲಾಗುವುದು. ಈ ಸಂಬಂಧ ಹೋಟೆಲ್ ಉದ್ಯಮಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಳೆಯುತ್ತಿರುವ ಕ್ಷೇತ್ರ ಪ್ರವಾಸೋದ್ಯಮ. ಸಿಂಗಾಪುರ, ಥೈಲ್ಯಾಂಡ್ ಸೇರಿದಂತೆ ಅನೇಕ ರಾಷ್ಟ್ರಗಳು ಪ್ರವಾಸೋದ್ಯಮದಿಂದ ಆರ್ಥಿಕತೆಯನ್ನು ಹೊಂದುತ್ತಿವೆ. ನಮ್ಮಲ್ಲೂ ಕೂಡ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ವಿಫುಲ ಅವಕಾಶಗಳಿವೆ. ಅದರಲ್ಲೂ  ಗೋವಾ ಮತ್ತು ಕೇರಳಕ್ಕಿಂತ ಹೆಚ್ಚು ಪ್ರವಾಸೋದ್ಯಮ ಪ್ರದೇಶಗಳನ್ನು ನಮ್ಮ ರಾಜ್ಯ ಹೊಂದಿದೆ. ಅವುಗಳ ಅಭಿವೃದ್ಧಿಗೆ ನಮ್ಮ ಸರಕಾರ ಹೆಚ್ಚು ಆದ್ಯತೆ ಕೊಡಲಿದೆ. ಪ್ರವಾಸೋದ್ಯಮಕ್ಕೆ ವಿಶೇಷ ಸ್ಥಾನಮಾನ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ 2400 ಕೋಟಿ ಅನುದಾನವನ್ನು ಘೋಷಣೆ ಮಾಡಲಾಗಿದೆ. ಕಳೆದ ಬಾರಿಯ ಬಜೆಟ್ ಘೋಷಣೆಗಿಂತ ಶೇ.18ರಷ್ಟು ಹೆಚ್ಚಾಗಿದ್ದು, ಈ ಮೂಲಕ ಪ್ರವಾಸೋದ್ಯಮ ಬೆಳವಣಿಗೆಗೆ ಹೆಜ್ಜೆ ಇಡಲಾಗಿದೆ ಎಂದರು.

ಹೊರಗಡೆಯೂ ಉದ್ಯಮ ಪ್ರಾರಂಭಿಸಿ: ಹೊರಗಿನಿಂದ ಬರುವ ಪ್ರವಾಸಿಗರಿಗೆ ಬೆಂಗಳೂರಿನಲ್ಲಿ ಪ್ರವಾಸಿಗರಿಗೆ ಎಲ್ಲ ರೀತಿಯ ಸೌಲಭ್ಯ ಸಿಗುತ್ತಿದೆ. ಹೋಟೆಲ್ ಸೇರಿದಂತೆ ಇನ್ನಿತರ ಉದ್ಯಮಗಳು ಬೆಂಗಳೂರು ಹೊರತುಪಡಿಸಿ ಎರಡನೇ ಹಂತದ ನಗರಗಳಲ್ಲಿಯೂ ಉದ್ಯಮಗಳನ್ನು ಪ್ರಾರಂಭಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿ ಹೊಂದುವ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಸಚಿವರಿಗೆ ರಾಜ್ಯ ಹೋಟೆಲ್ ಮಾಲಕರ ಸಂಘ, ರಾಜ್ಯ ಟ್ಯಾಕ್ಸಿ ಮಾಲೀಕರ ಸಂಘ ಮನವಿ ನೀಡಿತ್ತು.

ವಿಧಾನಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಎಫ್‌ಕೆಸಿಸಿಐ ಅಧ್ಯಕ್ಷರಾದ ಐ.ಎಸ್.ಪ್ರಸಾದ್, ವೃತ್ತಿಪರರ ಪ್ರಕೋಷ್ಠದ ಸಹ ಸಂಚಾಲಕರಾದ ರವೀಂದ್ರ ಪೈ, ಸಂಚಾಲಕರಾದ ಚೆನ್ನಮಲ್ಲಿಕಾರ್ಜುನ್ ಮತ್ತಿತರರು ಇದ್ದರು.

ಶೇ.50ರಷ್ಟು ರಿಯಾಯಿತಿ: ಕೋವಿಡ್ ಸಂಕಷ್ಟದಲ್ಲಿದ್ದ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ ಗಳಿಗೆ ನೀಡಲಾಗಿದ್ದ ಶೇ.50ರಷ್ಟು ರಿಯಾಯಿತಿಯ ಸದುಪಯೋಗ ಪಡೆದುಕೊಳ್ಳುವ ಸಂಬಂಧ ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯಾದ್ಯಂತ ವಿಶೇಷ ಅಭಿಯಾನ ಕೈಗೊಂಡಿರುವುದಾಗಿ ಪ್ರವಾಸೋದ್ಯಮ ಸಚಿವರು ಸಭೆಯಲ್ಲಿ ತಿಳಿಸಿದ್ದಾರೆ.

ಇಲಾಖೆ ವತಿಯಿಂದ ನೀಡಲಾಗಿರುವ ಶೇ.50ರಷ್ಟು ರಿಯಾಯಿತಿಯನ್ನು ಇಡೀ ರಾಜ್ಯಾದ್ಯಂತ ಕೇವಲ 200 ಹೋಟೆಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್‌ಗಳವರು ಪಡೆದುಕೊಂಡಿದ್ದಾರೆ. ಸಂಕಷ್ಟದಲ್ಲಿದ್ದ ಹೋಟೆಲ್ ಉದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ರಿಯಾಯಿತಿ ನೀಡಲಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹದಿನೈದು ದಿನ ನಡೆಯಲಿರುವ ಅಭಿಯಾನದಲ್ಲಿ ಇಲಾಖೆಯ ತಾಂತ್ರಿಕ ತಂಡ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಲಿದ್ದು, ಅಲ್ಲಿನ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ಅಸೋಸಿಯೇಷನ್‌ನನ್ನು ಸಂಪರ್ಕ ಮಾಡಿ ರಿಯಾಯಿತಿ ಸದುಪಯೋಗ ಪಡೆದುಕೊಳ್ಳುವ ಬಗ್ಗೆ ಅರಿವು ಮೂಡಿಸಲಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News