ಪ್ರಧಾನಿಯಾಗಿ ದೇಶದ ರೈತರಿಗೆ ನಾನು ನೀಡಿದ್ದ ಕೊಡುಗೆ ಯಾವ ಪ್ರಧಾನಿಯೂ ನೀಡಲಾರ: ಎಚ್.ಡಿ.ದೇವೇಗೌಡ

Update: 2022-02-25 18:50 GMT

ಶೃಂಗೇರಿ, ಫೆ.25: ಪ್ರಧಾನಿಯಾಗಿದ್ದ ವೇಳೆ ತಾನು ದೇಶದ ರೈತರಿಗೆ ನೀಡಿರುವ ಕೊಡುಗೆಯನ್ನು ಬೇರೆ ಯಾವ ಪ್ರಧಾನಿಯೂ ನೀಡಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಪ್ರಧಾನಿಯಾಗಿದ್ದಾಗ, ಸಿಎಂ ಆಗಿದ್ದಾಗ ರೈತರಿಗೆ ಅಪಾರ ಕೊಡುಗೆ ನೀಡಿದ್ದೇನೆ. ಮಲೆನಾಡು ಭಾಗದ ಮುಖ್ಯ ಬೆಳೆಯಾದ ಕಾಫಿ ಬೆಳೆಗಾರರ ಸಮಸ್ಯೆಗಳಿಗೂ ಪರಿಹಾರ ನೀಡಿದ್ದೆ. ಕಾಫಿ ಬೆಳೆಗಾರರಿಗೆ ನಾನು ನೀಡಿದ್ದ ಕೊಡುಗೆಗಳೇನು ಎಂಬುದನ್ನು ಹಿರಿಯ ಬೆಳೆಗಾರರನ್ನು ಕೇಳಿ ನೋಡಿ ಎಂದರು.

ಪ್ರಧಾನಿಯಾಗಿದ್ದ ವೇಳೆ ರೈತಾಪಿ ವರ್ಗಕ್ಕೆ ನಾನು ನೀಡಿದ ಕೊಡುಗೆಯನ್ನು ಹಿಂದೂಸ್ಥಾನದ ಯಾವುದೇ ಪ್ರಧಾನಮಂತ್ರಿ ನೀಡಲಾರ., ಅತ್ಯಂತ ಪ್ರಾಮಾಣಿಕವಾಗಿ ನಾನು ಎಲ್ಲಾ ಕೆಲಸಗಳನ್ನು ಮಾಡಿದ್ದೇನೆ. ಜೆಡಿಎಸ್ ಪಕ್ಷವನ್ನು 2023ರ ಚುನಾವಣೆಯಲ್ಲಿ ಗೆಲ್ಲಿಸಿ ಅಧಿಕಾರಕ್ಕೆ ತರುವುದು ನನ್ನ ಮುಂದಿನ ಗುರಿಯಾಗಿದೆ. ಇದಕ್ಕಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.

ಮಾಜಿ ಪ್ರಧಾನಿಯಾಗಿರುವ ನಾನು ಈಗಲೂ ಪಕ್ಷದ ಸಂಘಟನೆ ಮಾಡುತ್ತಿರುವುದು ಅಧಿಕಾರಕ್ಕಾಗಿ ಅಲ್ಲ. ಪವಿತ್ರ ಕ್ಷೇತ್ರವಾದ ಶೃಂಗೇರಿಯ ಭಾಗದಲ್ಲಿ ಪಕ್ಷದ ಉಳಿವಿಗಾಗಿ ಹಾಗೂ ಜನರನ್ನು ಪ್ರಗತಿಯೆಡೆಗೆ ಕೊಂಡೊಯ್ಯುವ ಸಲುವಾಗಿ ಎಂದ ಅವರು, ಓರ್ವ ಸಾಮಾನ್ಯ ರೈತನ ಮಗನಾಗಿ ಮಾಡುವ ಕೆಲಸದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಸಿಕ್ಕ ಸ್ಥಾನಮಾನಗಳನ್ನು ದುರುಪಯೋಗ ಮಾಡದೇ ಅತ್ಯಂತ ಪ್ರಾಮಾಣಿಕವಾಗಿ ಜನಪರವಾಗಿ ಕೆಲಸ ಮಾಡಿದ್ದೇನೆ, ಇದಕ್ಕಾಗಿ ತನಗೆ ಹೆಮ್ಮೆಯಿದೆ, ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಿಯಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದರು.

ಮಾಜಿ ಸಚಿವರಾದ ಎಚ್.ಡಿ.ರೇವಣ್ಣ ಮಾತನಾಡಿ, ಈ ಭಾಗದಲ್ಲಿ ಯಾರೂ ಕಲ್ಪಿಸಿರದ ರಸ್ತೆ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆ ಸಚಿವನಾಗಿದ್ದ ವೇಳೆ ಕಲ್ಪಿಸಿದ್ದೇನೆ. ಶೃಂಗೇರಿಯ ವಿದ್ಯಾರಣ್ಯಪುರ ಸೇರಿದಂತೆ ಅನೇಕ ರಸ್ತೆಗಳನ್ನು ಹಾಗೂ ವಿದ್ಯುತ್ ಸಂಪರ್ಕವನ್ನು ಈ ಭಾಗದ ಜನರಿಗೆ ತಲುಪಿಸಿದ್ದೇವೆ. ಜನಹಿತಕ್ಕೆ ಬೇಕಾಗುವ ಎಲ್ಲಾ ಕಾರ್ಯಗಳನ್ನು ಮಾಡುವುದು ನಮ್ಮ ನೇತೃತ್ವದ ಸರಕಾರ ಮಾತ್ರ. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಒಗ್ಗೂಡಿ ಪಕ್ಷದ ಮುಖಂಡರ ಜೊತೆಗೂಡಿ ಈ ಬಾರಿ ಶೃಂಗೇರಿ ಕ್ಷೇತ್ರದ ಎಂಎಲ್‍ಎ ಅಭ್ಯರ್ಥಿಯಾಗಿರುವ ಸುಧಾಕರ್ ಶೆಟ್ಟಿ ಅವರನ್ನು ಗೆಲ್ಲಿಸಬೇಕು ಎಂದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಶೃಂಗೇರಿ ಎಂಎಲ್‍ಎ ಟಿಕೆಟ್ ಆಕಾಂಕ್ಷಿ ಸುಧಾಕರ್ ಎಸ್ ಶೆಟ್ಟಿ ಮಾತನಾಡಿ, ಈ ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ತನ್ಮೂಲಕ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿ ಮಾಡಲು ಜನರು ಸಹಕಾರ ನೀಡಬೇಕು. ಇಲ್ಲಿನ ಜನರ ಜೀವನವನ್ನು ಮತ್ತಷ್ಟು ಉತ್ತಮಗೊಳಿಸಲು ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕು. ರಾಷ್ಟ್ರೀಯ ಪಕ್ಷಗಳು ಕೇವಲ ಸುಳ್ಳು, ಪರಸ್ಪರ ಆರೋಪಗಳನ್ನು ಮಾಡುತ್ತಾ ಸಮಯವನ್ನು ಅಧಿಕಾರವನ್ನು ವ್ಯರ್ಥಮಾಡುತ್ತಿದೆ ಎಂದು ಆರೋಪಿಸಿದರು.

ಸಭೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ದಿವಾಕರ್ ಭಟ್, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಮುಖಂಡರಾದ ಎಚ್.ಜಿ.ವೆಂಕಟೇಶ್, ಎಚ್.ಟಿ.ರಾಜೇಂದ್ರ, ಕಳಸಪ್ಪ ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.


ಶುಕ್ರವಾರ ಹೆಲಿಕಾಪ್ಟರ್ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪತ್ನಿ ಚೆನ್ನಮ್ಮ ಹಾಗೂ ಎಚ್.ಡಿ.ರೇವಣ್ಣ ಅವರೊಂದಿಗೆ ಶೃಂಗೇರಿ ಪಟ್ಟಣಕ್ಕೆ ಆಗಮಿಸಿ ನಂತರ ಶೃಂಗೇರಿ ಶಾರದಾಂಬ ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಕೆಲ ಹೊತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ದೇವೇಗೌಡ ಸಂಜೆ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ಹಿಂದಿರುಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News