ಐತಿಹಾಸಿಕ ಸ್ಥಳದ ವಾಸ್ತುಶಿಲ್ಪ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಸಚಿವ ಆನಂದ್ ಸಿಂಗ್

Update: 2022-02-25 18:52 GMT

ವಿಜಯನಗರ, ಫೆ. 25: ‘ವಿಶ್ವ ಪ್ರಸಿದ್ಧ ಹಂಪಿ ಸೇರಿದಂತೆ ರಾಜ್ಯದಲ್ಲಿನ ಐತಿಹಾಸಿಕ ಸ್ಥಳದ ವಾಸ್ತುಶಿಲ್ಪ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ' ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಸಚಿವ ಆನಂದ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಪಟ್ಟಾಭಿರಾಮ ದೇವಾಲಯದಲ್ಲಿ 75ನೆ ಸ್ವಾತಂತ್ರ್ಯೋತ್ಸವದ ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ವತಿಯಿಂದ ಏರ್ಪಡಿಸಿದ್ದ ‘ದೇವಯಾತನಂ-ಭಾರತೀಯ ದೇವಾಲಯ ವಾಸ್ತುಶಿಲ್ಪ ಅದ್ಭುತ ಮಹಾಕಾವ್ಯ’ ಕುರಿತ ಅಂತರ್‍ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೂರದೃಷ್ಟಿಯಿಂದ ವಿದ್ಯಾರಣ್ಯರು ಈ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ಹಂಪಿಯತ್ತ ಇಡೀ ವಿಶ್ವವೇ ತಿರುಗಿ ನೋಡುತ್ತಿದೆ' ಎಂದರು.

‘ಶ್ರೀಕೃಷ್ಣದೇವಾರಾಯ ಸೇರಿದಂತೆ ಮಹಾನ್ ಪುರುಷರು ಓಡಾಡಿರುವ ಈ ಸ್ಥಳದ ಕುರಿತು ಶಿಲ್ಪಗಳಿಂದ ತಿಳಿಯುತ್ತದೆ. ಈ ಸ್ಮಾರಕಗಳಿಂದ ನಮ್ಮ ಸಂಸ್ಕøತಿ, ಶಿಲ್ಪಕಲೆಯನ್ನು ಪ್ರಪಂಚಕ್ಕೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ರಕ್ಷಣೆ ಮಾಡಬೇಕು. ಇದರಿಂದಾಗಿ ಮುಂದಿನ ಪೀಳಿಗೆಗೆ ಇಲ್ಲಿನ ಇತಿಹಾಸ ತೋರಿಸಲು ಸಾಧ್ಯ' ಎಂದು ಹೇಳಿದರು.

‘ಇಂದು ಮನೆ ನಿರ್ಮಾಣ ಮಾಡಬೇಕಾದರೆ ನಾವು ಕಲ್ಲುಕ್ವಾರಿ ನಡೆಸಬೇಕು. ಆದರೆ, ಹಂಪಿ ನಿರ್ಮಾಣಕ್ಕೆ ಯಾವುದೇ ಸ್ಥಳದಲ್ಲಿ ಕಲ್ಲುಕ್ವಾರಿ ನಡೆಸಿರುವ ಕುರುಹು ಸಿಕ್ಕಿಲ್ಲ. ಆದರೆ ಇಂದು ನಾವು ನಮ್ಮ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ಹಾಳು ಮಾಡುತ್ತಿದ್ದೇವೆ. ಪ್ರತಿಯೊಬ್ಬರು ಪ್ರಕೃತಿ ಬಗ್ಗೆ ಜಾಗೃತಿ ಹೊಂದಿರಬೇಕು. ಇಲ್ಲಿನ ವಾಸ್ತುಶಿಲ್ಪ ಕಲೆಯನ್ನು ಸಂರಕ್ಷಿಸಬೇಕು' ಎಂದು ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವ ಜಿ.ಕಿಶನ್‍ರೆಡ್ಡಿ, ಸಾರಿಗೆ ಸಚಿವ ಬಿ.ಶ್ರೀರಾಮುಲು, ಶಾಸಕ ಸೋಮಶೇಖರ್ ರೆಡ್ಡಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಹಾ ನಿರ್ದೇಶಕಿ ವಿದ್ಯಾವತಿ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News