ಫೆ.27ರಿಂದ ‘ನಮ್ಮ ನೀರು ನಮ್ಮ ಹಕ್ಕು' ಪಾದಯಾತ್ರೆ ಪುನಾರಾಂಭ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ

Update: 2022-02-25 19:01 GMT

ಬೆಂಗಳೂರು, ಫೆ. 25: ‘ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಧಾನಿ ಮುಂದೆ ನಿಂತು ಮಾತನಾಡುವ ತಾಕತ್ತು ಕರ್ನಾಟಕದಿಂದ ಆಯ್ಕೆಯಾಗಿರುವ ಸಂಸದರಿಗೆ ಇಲ್ಲ. ಅವರೇನಿದ್ದರೂ ತಿರುಪತಿ ತಿಮ್ಮಪ್ಪನಿಗೆ ದೂರದಲ್ಲಿ ನಿಂತು ನಮಸ್ಕಾರ ಹಾಕಿದಂತೆ ಮೋದಿಗೆ ನಮಸ್ಕರಿಸಿ ಹಿಂದಿರುಗುತ್ತಾರೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫೆ.27ಕ್ಕೆ ರಾಮನಗರದಿಂದ ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ‘ನಮ್ಮ ನೀರು ನಮ್ಮ ಹಕ್ಕು' ಪಾದಯಾತ್ರೆ ಆರಂಭವಾಗಲಿದ್ದು, ಫೆ.28ಕ್ಕೆ ಬಿಡದಿಯಿಂದ ಕೆಂಗೇರಿಗೆ ಬರಲಿದೆ. ಮಾ. 1ರಿಂದ 3ರವರೆಗೆ ಬೆಂಗಳೂರು ಭಾಗದಲ್ಲಿ ಪಾದಯಾತ್ರೆ ನಡೆಸಲಾಗುವುದು' ಎಂದು ವಿವರಿಸಿದರು.

‘ಈ ಮೊದಲು ಬೆಂಗಳೂರು ನಗರದಲ್ಲಿ 5 ದಿನ ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಇದೀಗ ಅದನ್ನು ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಮೂರು ದಿನಕ್ಕೆ ಸೀಮಿತಗೊಳಿಸಲಾಗಿದೆ. ಮಾ.1ಕ್ಕೆ ಜ್ಞಾನಭಾರತಿ ಮೆಟ್ರೋ ನಿಲ್ದಾಣ, ನಾಯಂಡಹಳ್ಳಿ, ಕತ್ರಿಗುಪ್ಪೆ, ಕದಿರೇನಹಳ್ಳಿ, ಬನಶಂಕರಿ ದೇಗುಲ, ಜಯದೇವ ಆಸ್ಪತ್ರೆ, ಹೊಸೂರು ರಸ್ತೆ, ಇನ್‍ಫ್ಯಾಂಟ್ರಿ ರಸ್ತೆ, ಹಾಸ್‍ಮ್ಯಾಟ್ ರಸ್ತೆ, ತಿರುವಳ್ಳವರ್ ಪ್ರತಿಮೆ ರಸ್ತೆ, ನಂದಿದುರ್ಗ, ಜೆ.ಸಿ.ನಗರ, ಮೇಖ್ರಿ ಸರ್ಕಲ್, ಅರಮನೆ ಮೈದಾನ, ಕಾವೇರಿ, ಸ್ಯಾಂಕಿರಸ್ತೆ, ಮಾರ್ಗೊಸಾ ರಸ್ತೆ, ಶೇμÁದ್ರಿಪುರಂ, ಕಾಟನ್ ಪೇಟೆ, ರಾಯನ್ ಸರ್ಕಲ್, ಈದ್ಗಾ ಮೈದಾನದ ಮೂಲಕ ಸಾಗಿ ಬಂದು ಮಾ.3ಕ್ಕೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪಾದಯಾತ್ರೆ ಕೊನೆಯಾಗಲಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಲಾಗಿದೆ. ರಾಜ್ಯದಲ್ಲಿ ಯೋಜನೆ ಅನುಷ್ಠಾನಕ್ಕೆ ಯಾರ ಅನುಮತಿ ಬೇಕು. ನಮ್ಮ ರಾಜ್ಯದಲ್ಲಿ ಮಾಡುತ್ತಿರುವ ಯೋಜನೆಯಾಗಿದೆ. ಈ ಯೋಜನೆಯಿಂದ ವಿದ್ಯುತ್ ಸಿಗುತ್ತೆ. ಆದರೆ, ಕೇಂದ್ರದಿಂದ ಪರಿಸರ ಅನುಮೋದನೆ ಸಿಗುವಂತೆ ಮಾಡಲು ಬಿಜೆಪಿ ಸರಕಾರಕ್ಕೆ ಆಗುತ್ತಿಲ್ಲ. ಸಂಸದರಿಗೆ ಮೋದಿ ಮುಂದೆ ನಿಂತು ಕೇಳುವ ಧೈರ್ಯವಿಲ್ಲ' ಎಂದು ಅವರು ದೂರಿದರು.

‘ಸಂಸತ್‍ನಲ್ಲಿಯೂ ರಾಜ್ಯದ ಸಮಸ್ಯೆಗಳ ಬಗ್ಗೆ ನಮ್ಮ ಸಂಸದರು ಧ್ವನಿ ಎತ್ತುವುದಿಲ್ಲ. ಮೋದಿ ಹೋದರೆ ನಮಸ್ಕಾರ ಮಾಡಿ ಕುಳಿತುಕೊಳ್ಳುತ್ತಾರೆ' ಎಂದು ಟೀಕಿಸಿದ ಅವರು, ಪಾದಯಾತ್ರೆಗೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದರೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಬೆಂಗಳೂರು ನಗರದ ಜನರಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಪಾದಯಾತ್ರೆ ನಡೆಸುತ್ತಿರುವುದು. ನಗರದ ನೀರಿನ 
ಬಗ್ಗೆ ಆಸಕ್ತಿ ಇರುವ ಎಲ್ಲರೂ ಪಾದಯಾತ್ರೆಗೆ ಸೇರಿಕೊಳ್ಳಬಹುದು' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News