ಭಾರತದ ನಿಲುವನ್ನು ರಷ್ಯಾ ಸ್ವಾಗತಿಸಿದ ಬೆನ್ನಲ್ಲೇ ಪ್ರಧಾನಿ ಮೋದಿಗೆ ಕರೆ ಮಾಡಿದ ಉಕ್ರೇನ್‌ ಅಧ್ಯಕ್ಷ

Update: 2022-02-26 15:05 GMT
photo/twitter

ಹೊಸದಿಲ್ಲಿ: ತನ್ನ ಆಕ್ರಮಣ ಖಂಡಿಸಿ ಮತದಾನ ಮಾಡದ ಭಾರತದ ನಿರ್ಧಾರವನ್ನು ರಷ್ಯಾ ಅಧ್ಯಕ್ಷ ಪುಟಿನ್‌ ಸ್ವಾಗತಿಸಿದ ಬೆನ್ನಲ್ಲೇ, ಉಕ್ರೇನ್‌ ಅಧ್ಯಕ್ಷ ವ್ಲೊಡಿಮೈರ್‌ ಝೆಲೆನ್ಸ್ಕಿ ಪ್ರಧಾನಿ ಮೋದಿಗೆ ಕರೆ ಮಾಡಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಝೆಲೆನ್ಸ್ಕಿ, ಭಾರತದಿಂದ ರಾಜತಾಂತ್ರಿಕ ಬೆಂಬಲಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ರಷ್ಯಾದ 1 ಲಕ್ಷಕ್ಕೂ ಅಧಿಕ ಆಕ್ರಮಣಕಾರರು ನಡೆಸಿದ ದಾಳಿಯ ಬಗ್ಗೆ ಪ್ರಧಾನಿ ಮೋದಿಗೆ ವಿವರವಾಗಿ ತಿಳಿಸಿರುವುದಾಗಿ ಝೆಲೆನ್ಸ್ಕಿ ಹೇಳಿದ್ದಾರೆ.

"ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಸ್ಥಿತಿಯ ಕುರಿತು ಅಧ್ಯಕ್ಷ ಝೆಲೆನ್ಸ್ಕಿ ಅವರು ಪ್ರಧಾನಿಯವರಿಗೆ ವಿವರವಾಗಿ ವಿವರಿಸಿದ್ದಾರೆ. ಸಂಘರ್ಷದಿಂದಾಗಿ ಜೀವ ಮತ್ತು ಆಸ್ತಿ ನಷ್ಟದ ಬಗ್ಗೆ ಪ್ರಧಾನಮಂತ್ರಿ ತಮ್ಮ ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ." ಎಂದು ಪ್ರಧಾನಿ ಮೋದಿ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.

"ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಲು ಮತ್ತು ಮಾತುಕತೆಗೆ ಮರಳಲು ಅವರು ತಮ್ಮ ಕರೆಯನ್ನು ಪುನರುಚ್ಚರಿಸಿದರು. ಶಾಂತಿ ಮಾತುಕತೆಗಳಿಗಾಗಿ ಯಾವುದೇ ರೀತಿಯಲ್ಲಿ ಕೊಡುಗೆ ನೀಡಲು ಭಾರತದ ಇಚ್ಛೆಯನ್ನು ವ್ಯಕ್ತಪಡಿಸಿದರು. ಪ್ರಸ್ತುತ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಲು ಪ್ರಧಾನಿ ಮನವಿ ಮಾಡಿದ್ದಾರೆ. ಉಕ್ರೇನ್‌ನಲ್ಲಿ ಅವರು ಭಾರತೀಯ ನಾಗರಿಕರನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಸ್ಥಳಾಂತರಿಸಲು ಉಕ್ರೇನಿಯನ್ ಅಧಿಕಾರಿಗಳಿಂದ ತಕ್ಕ ಸಹಾಯವನ್ನು ಕೋರಿದ್ದಾರೆ” ಎಂದು ಪ್ರಕಟನೆ ತಿಳಿಸಿದೆ.

ಉಕ್ರೇನ್ ಮೇಲೆ ರಷ್ಯಾದ ಮಿಲಿಟರಿ ಆಕ್ರಮಣವನ್ನು ತಕ್ಷಣ ನಿಲ್ಲಿಸುವಂತೆ ಹಾಗೂ ಎಲ್ಲಾ ಸೇನಾ ಪಡೆಗಳನ್ನು ಹಿಂಪಡೆದುಕೊಳ್ಳುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ಕರಡು ನಿರ್ಣಯವನ್ನು ಅಂಗೀಕರಿಸುವಾಗ ಭಾರತ ಇದರಿಂದ ಹೊರಗುಳಿದಿತ್ತು.

ಶನಿವಾರ ನಡೆದ ಮಹತ್ವದ ಸಭೆಯಲ್ಲಿ 15 ಸದಸ್ಯ ರಾಷ್ಟ್ರಗಳ ಪೈಕಿ ಪ್ರಮುಖವಾದ ಭಾರತ, ಚೀನಾ, ಅರಬ್ ಎಮಿರೆಟ್ಸ್ ಸಂಯುಕ್ತ ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ. ಉಳಿದ ಎಲ್ಲಾ 11 ರಾಷ್ಟ್ರಗಳು ರಷ್ಯ ವಿರುದ್ಧ ಮತ ಹಾಕಿದೆ.

ಉಕ್ರೇನ್‌ ಪರ ಮತ ಹಾಕದೆ ದೂರ ಉಳಿದ ಭಾರತದ ನಿರ್ಧಾರವನ್ನು ರಷ್ಯಾ ಸ್ವಾಗತಿಸಿತ್ತು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News