ಅಬ್ದುಲ್‌ ಕಲಾಂ ಕುರಿತು ʼಜಿಹಾದಿ ನಂಬರ್‌ ಒನ್‌ʼ ಎಂದು ಟ್ವೀಟ್ ಮಾಡಿದ್ದ ನರಸಿಂಗಾನಂದ ವಿರುದ್ಧ ಎಫ್‍ಐಆರ್ ದಾಖಲು

Update: 2022-03-01 10:48 GMT
Photo: Twitter

ಹೊಸದಿಲ್ಲಿ: ಮಾಜಿ ರಾಷ್ಟ್ರಪತಿ ದಿವಂಗತ ಎ ಪಿ ಜೆ ಅಬ್ದುಲ್ ಕಲಾಂ ಅವರ ವಿರುದ್ಧ ಹಾಗೂ ಮುಸ್ಲಿಂ ಸಮುದಾಯದ ವಿರುದ್ಧ ಮಾರ್ಚ್ 2021ರಲ್ಲಿ ನಿಂದನಾತ್ಮಕ ಟ್ವೀಟ್ ಮಾಡಿದ್ದ ಹಿಂದುತ್ವ ನಾಯಕ ಯತಿ ನರಸಿಂಗಾನಂದ್ ವಿರುದ್ಧ ಮಹಾರಾಷ್ಟ್ರದ ಅಹ್ಮದ್‍ನಗರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ನರಸಿಂಗಾನಂದ್ ವಿರುದ್ಧ ಐಪಿಸಿ ಸೆಕ್ಷನ್ 153ಎ, 153ಬಿ, 295ಎ ಹಾಗೂ 505 ಅನ್ವಯ ಪ್ರಕರಣ ದಾಖಲಿಸಲಾಗಿದೆ.  ನರಸಿಂಗಾನಂದ್ ವಿರುದ್ಧ ಕ್ರಿಮಿನಲ್ ದಂಡ ಸಂಹಿತೆ ಸೆಕ್ಷನ್ 156(3) ಇದರ ಅನ್ವಯ  ಪ್ರಕರಣ ದಾಖಲಿಸಬೇಕೆಂದು ಅಹ್ಮದ್‍ನಗರ ಜಿಲ್ಲಾ ನ್ಯಾಯಾಲಯವು ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದ ನಂತರದ ಬೆಳವಣಿಗೆ ಇದಾಗಿದೆ.  ಅರ್ಷಿದ್ ಶೇಖ್, ಬಹೀರ್‍ನಾಥ್ ವಕಾಲೆ ಮತ್ತು ಆನಂದ್ ಲೋಖಂಡೆ ಎಂಬ ಮೂವರು ಜುಲೈ 23, 2021ರಲ್ಲಿ  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ನರಸಿಂಗಾನಂದ್ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಕೋರಿದ್ದರು.

ಕಲಾಂ ಅವರು ಪಾಕಿಸ್ತಾನಕ್ಕೆ ಅಣು ಬಾಂಬ್‍ಗಳ ಸೂತ್ರವನ್ನು ಮಾರಾಟ ಮಾಡಿದ್ದಾರೆ ಎಂದು ನರಸಿಂಗಾನಾಂದ್ ಟ್ವೀಟ್ ಮೂಲಕ ಆರೋಪಿಸಿದ್ದನಲ್ಲದೆ ಕಲಾಂ ಅವರನ್ನು `ಜಿಹಾದಿ ನಂಬರ್ ಒನ್' ಎಂದು ದ್ವೇಷ ಕಾರಿದ್ದ.

2001ರ ಸಂಸತ್ ದಾಳಿ ಪ್ರಕರಣದ ದೋಷಿ ಅಫ್ಝಲ್ ಗುರು ಮತ್ತು ಕಲಾಂ ನಡುವೆ ನಂಟನ್ನೂ ಕಲ್ಪಿಸಿದ್ದ ನರಸಿಂಗಾನಂದ್, ಕಲಾಂ ಅವರು ರಾಷ್ಟ್ರಪತಿ ಭವನದಲ್ಲಿ ಅಫ್ಝಲ್‍ಗೆ ವಿಶೇಷ ಸೆಲ್ ಏರ್ಪಾಟು ಮಾಡಿದ್ದರೆಂದೂ ಆರೋಪಿಸಿದ್ದರು. ಕಲಾಂ ಅವರು ಡಿಆರ್‍ಡಿಒ ಮುಖ್ಯಸ್ಥರಾಗಿದ್ದ ವೇಳೆ ಹಲವಾರು ಹಿಂದು ವಿಜ್ಞಾನಿಗಳ ಹತ್ಯೆಯಾಗಿತ್ತು ಎಂದೂ ಹೇಳಿಕೊಂಡಿದ್ದ ನರಸಿಂಗಾನಂದ್, ಆಲಿಘರ್ ಮುಸ್ಲಿಂ ವಿವಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ದಾರುಲ್ ಉಲೂಂ ದಿಯೋಬಂದ್ ಭಾರತವನ್ನು ಅಫ್ಗಾನಿಸ್ತಾನವಾಗಿ ಪರಿವರ್ತಿಸುತ್ತಿದೆ ಎಂದೂ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News