ಐಪಿಎಲ್‌ನಿಂದ ಹೊರಗುಳಿದ ಜೇಸನ್ ರಾಯ್: ಗುಜರಾತ್ ಟೈಟಾನ್ಸ್‌ಗೆ ತೀವ್ರ ಹಿನ್ನಡೆ

Update: 2022-03-01 13:41 GMT

 ಹೊಸದಿಲ್ಲಿ, ಮಾ.1: ಟೂರ್ನಮೆಂಟ್‌ನಲ್ಲಿ ದೀರ್ಘ ಸಮಯ ಇರುವ ಬಯೋ ಬಬಲ್ ವ್ಯವಸ್ಥೆಯ ಕಾರಣಕ್ಕೆ ಇಂಗ್ಲೆಂಡ್ ಬ್ಯಾಟರ್ ಜೇಸನ್ ರಾಯ್ ಮುಂಬರುವ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಇದು ಹೊಸ ಫ್ರಾಂಚೈಸಿ ಗುಜರಾತ್ ಟೈಟಾನ್ಸ್‌ಗೆ ತೀವ್ರ ಹಿನ್ನಡೆ ವುಂಟು ಮಾಡಿದೆ.

31ರ ಹರೆಯದ ದಕ್ಷಿಣ ಆಫ್ರಿಕಾ ಸಂಜಾತ ಇಂಗ್ಲೆಂಡ್ ಕ್ರಿಕೆಟಿಗ ರಾಯ್ ಮೆಗಾ ಹರಾಜಿನಲ್ಲಿ ತನ್ನ ಮೂಲ ಬೆಲೆ 2 ಕೋ.ರೂ.ಗೆ ಗುಜರಾತ್ ಟೈಟಾನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.

 ‘‘ನಾನು ಅತ್ಯಂತ ಬೇಸರದಿಂದ ಈ ವರ್ಷದ ಐಪಿಎಲ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದೇನೆ. ಆಟಗಾರರ ಹರಾಜಿನ ವೇಳೆ ನನ್ನ ಮೇಲೆ ವಿಶ್ವಾಸವಿರಿಸಿದ್ದ ಆಡಳಿತ ಮಂಡಳಿ ಹಾಗೂ ನಾಯಕ ಹಾರ್ದಿಕ್ ಪಾಂಡ್ಯಗೆ ಕೃತಜ್ಞತೆಗಳು. ಕೊರೋನದಿಂದಾಗಿ ಕಳೆದ 3 ವರ್ಷಗಳಿಂದ ಏನಾಗುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ನನ್ನ ಕುಟುಂಬದೊಂದಿಗೆ ಅಮೂಲ್ಯ ಸಮಯ ಕಳೆಯುವುದು ಉತ್ತಮ ಎಂದು ನಾನು ಭಾವಿಸಿದ್ದೇನೆ’’ ಎಂದು ರಾಯ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಈ ಬೆಳವಣಿಗೆಯು ಗುಜರಾತ್ ಫ್ರಾಂಚೈಸಿಗೆ ತೀವ್ರ ಹಿನ್ನಡೆಯಾಗಿದೆ. ಏಕೆಂದರೆ ಗುಜರಾತ್ ತಂಡವು ಯುವ ಬ್ಯಾಟರ್ ಶುಭಮನ್ ಗಿಲ್ ಹೊರತುಪಡಿಸಿ ರಾಯ್ ಅವರನ್ನು ಏಕೈಕ ಸ್ಪೆಷಲಿಸ್ಟ್ ಓಪನರ್ ಆಗಿ ಆಯ್ಕೆ ಮಾಡಿತ್ತು.

 ರಾಯ್ ಇದೀಗ ಎರಡನೇ ಬಾರಿ ಐಪಿಎಲ್‌ನಿಂದ ಹೊರಗುಳಿಯುತ್ತಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ 2020ರ ಐಪಿಎಲ್‌ನಿಂದ ಹಿಂದೆ ಸರಿದಿದ್ದರು. ಆಗ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯ್ ಅವರನ್ನು 1.5 ಕೋ.ರೂ. ನೀಡಿ ಖರೀದಿಸಿತ್ತು.

15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದ್ದು, ಮೇ ಕೊನೆಯ ವಾರ ಕೊನೆಯಾಗಲಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News