ಬ್ರಾಹ್ಮಣ್ಯದ ವಿರುದ್ಧ ಟೀಕೆ: ನಟ ಚೇತನ್‌ ಅಹಿಂಸಾರನ್ನು ಅಮೇರಿಕಾ ದೇಶಕ್ಕೆ ಗಡಿಪಾರು ಮಾಡಲು ಸಿದ್ದತೆ?

Update: 2022-03-01 14:43 GMT
Photo: Twitter

ಬೆಂಗಳೂರು: ನ್ಯಾಯಾಂಗ ನಿಂದನೆ ಪ್ರಕರಣದಡಿಯಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಸಾಮಾಜಿಕ ಹೋರಾಟಗಾರ, ನಟ ಚೇತನ್‌ ರನ್ನು ಅಮೇರಿಕಾ ದೇಶಕ್ಕೆ ಗಡಿಪಾರು ಮಾಡುವ ಸಾಧ್ಯತೆ ಬಗ್ಗೆ The New Indian Express ವರದಿ ಮಾಡಿದೆ. 

ಕಳೆದ ವರ್ಷ ಜೂನ್‌ ತಿಂಗಳ ವೇಳೆ ನಟ ಚೇತನ್ ಬ್ರಾಹ್ಮಣ್ಯದ ವಿರುದ್ಧ ನೀಡಿದ್ದ ಹೇಳಿಕೆಯನ್ನು ವಿವಾದ ಮಾಡಲಾಗಿತ್ತು. ಈ ಕುರಿತು ಬಸವನಗುಡಿ ಠಾಣೆಯಲ್ಲಿ ದೂರನ್ನೂ ನೀಡಲಾಗಿತ್ತು ಮಾತ್ರವಲ್ಲ, ಆ ವೇಳೆ ಬಲಪಂಥೀಯರು ಚೇತನ್‌ರನ್ನು ಅಮೇರಿಕಾಗೆ ಗಡಿಪಾರು ಮಾಡಬೇಕೆಂದು ಸಾಮಾಜಿಕ ಮಾಧ್ಯಮದಲ್ಲಿ ಒತ್ತಾಯ ಕೂಡಾ ಮಾಡಿದ್ದರು. 

ಅಮೆರಿಕದ ಪ್ರಜೆಯಾಗಿರುವ ಚೇತನ್ ಅವರನ್ನು ಗಡಿಪಾರು ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಎಂಬವರು ಬೆಂಗಳೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಕಳೆದ ಜೂನ್‌ ತಿಂಗಳಲ್ಲಿ ದೂರು ಸಲ್ಲಿಸಿದ್ದರು. 

ಬಸವನಗುಡಿ ಪೊಲೀಸ್ ಠಾಣೆಯಿಂದ DGP ಕಚೇರಿಯ ಮೂಲಕ ಮುಖ್ಯ ಕಾರ್ಯದರ್ಶಿಗೆ ಕಳುಹಿಸಲಾದ ಆಗಸ್ಟ್ 2021ರ ಪತ್ರ TNIE ಗೆ  ಲಭ್ಯವಾಗಿದ್ದು. ಅಮೆರಿಕದ ಪೌರತ್ವ ಹೊಂದಿರುವ ನಟ ಚೇತನ್ ಅವರ ಮೇಲೆ ಗಡೀಪಾರು ಮಾಡುವ ಫೈಲ್ ಅನ್ನು ಪೊಲೀಸರು ಸಿದ್ಧಪಡಿಸಿದ್ದಾರೆ ಎಂದು TNIE ವರದಿಯಲ್ಲಿ ಹೇಳಿದೆ.

ನಟ ಚೇತನ್ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಗೃಹ ಕಾರ್ಯದರ್ಶಿಯ ಮುಂದೆ ಅವರ ಪ್ರಕರಣ ಬಾಕಿ ಇದ್ದು, ಪತ್ರಕ್ಕೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರತಾಪ್ ರೆಡ್ಡಿ ಸಹಿ ಹಾಕಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News