ಯುದ್ಧವನ್ನು ನಿಲ್ಲಿಸಿ ಎಂದು ಪುಟಿನ್‌ ರನ್ನು ಕೇಳಲು ನನಗೆ ಸಾಧ್ಯವೇ?: ಸುಪ್ರೀಂ ಮುಖ್ಯನ್ಯಾಯಮೂರ್ತಿ ಎನ್‌.ವಿ ರಮಣ

Update: 2022-03-03 07:40 GMT

ಹೊಸದಿಲ್ಲಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವಂತೆ ಕೋರಿ ಸಲ್ಲಿಸಿರುವ  ಅರ್ಜಿಯ ವಿಚಾರಣೆ ನಡೆಸುವಾಗ ಯುದ್ಧ ಪೀಡಿತ ದೇಶದಿಂದ ಭಾರತೀಯರನ್ನು ಮರಳಿ ಕರೆತರಲು ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂದು ತನ್ನನ್ನು ಪ್ರಶ್ನಿಸಿದ್ದ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಉಲ್ಲೇಖಿಸಿ ಆಶ್ಚರ್ಯ ವ್ಯಕ್ತಪಡಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರು ಯುದ್ಧವನ್ನು ನಿಲ್ಲಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಕೇಳಲು ನನಗೆ ಸಾಧ್ಯವೇ ಎಂದು ಕೇಳಿದ್ದಾರೆ.

"ಭಾರತದ ಮುಖ್ಯ ನ್ಯಾಯಾಧೀಶರು( ಸಿಜೆಐ) ಏನು ಮಾಡುತ್ತಿದ್ದಾರೆಂದು ಕೇಳುವ ಕೆಲವು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನಾನು ನೋಡಿದ್ದೇನೆ! ಯುದ್ಧವನ್ನು ನಿಲ್ಲಿಸಲು ನಾನು ರಷ್ಯಾದ ಅಧ್ಯಕ್ಷರಿಗೆ ನಿರ್ದೇಶನಗಳನ್ನು ನೀಡಲು ಸಾಧ್ಯವೇ"? ಎಂದು ಮುಖ್ಯ ನ್ಯಾಯಮೂರ್ತಿ ಕೇಳಿದರು.

ಉಕ್ರೇನ್ ಗಡಿಯಲ್ಲಿ ಸಿಲುಕಿರುವ 200ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವಂತೆ ಕೋರಿ ಸಲ್ಲಿಸಿರುವ ಮನವಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಈ ಮಾತನ್ನು ಹೇಳಿದ್ದಾರೆ.

" ವಿದ್ಯಾರ್ಥಿಗಳ ಬಗ್ಗೆ ನಮಗೆಲ್ಲರಿಗೂ  ಸಹಾನುಭೂತಿ ಇದೆ. ಭಾರತ ಸರಕಾರವು ಅದರ ಕೆಲಸವನ್ನು ಮಾಡುತ್ತಿದೆ. ನಾವು  ಅಟಾರ್ನಿ ಜನರಲ್ ಅವರನ್ನು ಏನು ಮಾಡಬಹುದು ಎಂದು ಕೇಳುತ್ತೇವೆ" ಎಂದು ಸಿಜೆಐ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News