ಬೌದ್ಧ ಧರ್ಮಕ್ಕೆ ಅವಹೇಳನ ಮಾಡಿದ ಆರೋಪ: ಸಚಿವ ಸಂಪುಟದಿಂದ ಡಾ.ಸುಧಾಕರ್ ಕೈಬಿಡುವಂತೆ ಭಂತೆ ಧಮ್ಮನಾಗ ಆಗ್ರಹ

Update: 2022-03-03 14:23 GMT

ಕಲಬುರಗಿ, ಮಾ.3: ಬೌದ್ಧ ಧರ್ಮದ ಅಪಾಯದಿಂದ ನಮ್ಮ ದೇಶವನ್ನು ರಕ್ಷಿಸಿದ್ದು ಬ್ರಾಹ್ಮಣರ ಹೆಗ್ಗಳಿಕೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಹೇಳಿಕೆ ನೀಡಿದ್ದು ಅತ್ಯಂತ ಖಂಡನಾರ್ಹ. ಅವರನ್ನು ಈ ಕೂಡಲೇ ಸಂಪುಟದಿಂದ ಕೈಬಿಡಬೇಕು ಎಂದು ವಿಶ್ವ ಬೌದ್ಧ ಮೈತ್ರಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಭಂತೆ ಧಮ್ಮನಾಗ ಆಗ್ರಹಿಸಿದ್ದಾರೆ. 

ಗುರುವಾರ ಕಲಬುರಗಿ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಧಮ್ಮನಾಗ ಅವರು, ಇತ್ತೀಚೆಗೆ ನಡೆದ ಬ್ರಾಹ್ಮಣ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಸಚಿವ ಡಾ.ಸುಧಾಕರ್ ಅವರು ಇಂತಹ ಹೇಳಿಕೆಯನ್ನು ನೀಡಿದ್ದಾರೆ. ಸಚಿವ ಸ್ಥಾನದಂತಹ ಬಹುದೊಡ್ಡ ಹುದ್ದೆಯಲ್ಲಿದ್ದವರು ಒಂದು ಸಮುದಾಯವನ್ನು ಪುಷ್ಟೀಕರಿಸುವ ಸಂಬಂಧ ಮತ್ತೊಂದು ಧರ್ಮದ ಬಗ್ಗೆ ಕೀಳಾಗಿ ಮಾತನಾಡಿದ್ದು ಅಕ್ಷಮ್ಯ. ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. 

ಶತಮಾನಗಳಿಂದಲೂ ಹಲವು ಧರ್ಮ, ಸಂಸ್ಕೃತಿಯ ಜನ ಒಟ್ಟಾಗಿ ಬರುತ್ತಿರುವ ಈ ದೇಶದಲ್ಲಿ ಬೌದ್ಧರು ಎಂದೂ, ಯಾರಿಗೂ ನೋವು ಮಾಡಿಲ್ಲ. ಹಾಗೆ ನೋಡಿದರೆ ಬ್ರಾಹ್ಮಣರಿಂದಲೇ ದೇಶಕ್ಕೆ ಅಪಾಯವಿದೆ. ಸಮಾನತೆಯೇ ಬೌದ್ಧ ಧರ್ಮದ ತಳಹದಿ, ಮೇಲು–ಕೀಳು ಮಾಡುವುದೇ ಬ್ರಾಹ್ಮಣರ ಧ್ಯೇಯ. ಇದಕ್ಕೆ ಇತಿಹಾಸವೇ ಸಾಕ್ಷಿ ಎಂದು ಆರೋಪಿಸಿದರು.

ಸಂಘ ಪರಿವಾರಕ್ಕೆ ಹತ್ತಿರವಾಗುವ ಉದ್ದೇಶದಿಂದ ಸಚಿವ ಸುಧಾಕರ ಅವರಂಥ ಕೆಲವು ಮುಖಂಡರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಮಣ್ಣಿನ ಮೂಲಧರ್ಮ ಹಾಗೂ ಅಪಾರ ಸಂಖ್ಯೆಯ ಜನರಿಗೆ ನೋವು ನೀಡಿದ್ದಾರೆ ಎಂದರು.

ಕ್ರಿ.ಪೂ 442ರಲ್ಲಿ ಬಿಹಾರದಲ್ಲಿ ಉದಯಿಸಿದ ಮಗದ ಸಾಮ್ರಾಜ್ಯವು ಬೌದ್ಧ ತತ್ವಗಳನ್ನೇ ರಾಜಧರ್ಮ ಪಾಲನೆ ಮಾಡಿಕೊಂಡಿತ್ತು. ನಂತರ ಸಾಮ್ರಾಟರಾದ ಬಿಂಬಸಾರ, ಚಂದ್ರಗುಪ್ತ ಮೌರ್ಯ, ಅಶೋಕನ ಕಾಲದಲ್ಲಿ ಈ ಧರ್ಮವು ಭಾರತ ಹಾಗೂ ಹೊರದೇಶಗಳಲ್ಲೂ ಪ್ರಸಾರವಾಯಿತು. ಅಶೋಕನ ಕಾಲದಲ್ಲಿ ಯಜ್ಞ–ಯಾಗಗಳಲ್ಲಿ ಪ್ರಾಣಿ ಬಲಿ ನಿಲ್ಲಿಸಲಾಯಿತು. ಇದರಿಂದ ಬ್ರಾಹ್ಮಣರ ಮೇಲು–ಕೀಳಿನ ಆಟ, ಹುಂಡಿಗೆ ಬೀಳುತ್ತಿದ್ದ ಹಣ ಬಂದ್ ಆಯಿತು. ಆಗ ಕೋಪಿಸಿಕೊಂಡಿದ್ದ ಬ್ರಾಹ್ಮಣರು ಸಂಘಟಿತರಾಗಿ ಪೌರೋಹಿತ್ಯ ಪದ್ಧತಿಯ ಮೂಲಕ ಮತ್ತೆ ತಮ್ಮ ಒಡೆದಾಳುವ ನೀತಿ ಶುರು ಮಾಡಿದರು. ದೇಶ, ರಾಜ್ಯದ ಮುಖ್ಯ ಸ್ಥಳಗಳಲ್ಲಿ ಪ್ರವೇಶ ಪಡೆದು, ಬೌದ್ಧ ಧರ್ಮವನ್ನು ಮುಗಿಸುವ ಪ್ರಯತ್ನ ನಡೆಸಿದರು. ಅಲ್ಲದೆ, ಪುಷ್ಯಮಿತ್ರ ಶುಂಗ ಎಂಬ ಬ್ರಾಹ್ಮಣ ದೊರೆಯೊಬ್ಬ ಬೌದ್ಧರನ್ನು ಸದೆಬಡಿಯಲು ಮುಂದಾದ. ಬೌದ್ಧ ರಾಜರು, ಬಿಕ್ಕುಗಳನ್ನು ಕೊಂದವರಿಗೆ ಬಹುಮಾನ ಘೋಷಿಸಿದ. ಬೌದ್ಧ ಧರ್ಮವು ದಲಿತರು ಹಾಗೂ ಸ್ತ್ರೀಯರಿಗೆ ಅತ್ಯುನ್ನತ ಪದವಿ ನೀಡಿತ್ತು.

ಅದನ್ನು ನಾಶ ಮಾಡಲು ಪುಷ್ಯಮಿತ್ರ ಶುಂಗನು ‘ಮನುಸ್ಮೃತಿ’ಯನ್ನೇ ಕಾನೂನು ಸಂಹಿತೆಯಾಗಿ ಜಾರಿ ಮಾಡಿದ. ಹೀಗೇ ಹಂತಹಂತವಾಗಿ ಆತ ಬೌದ್ಧ ಧರ್ಮದ ಮೇಲೆ ಪ್ರಹಾರ ಮಾಡಿದ. ಮುಂದೆ 8ನೆ ಶತಮಾನದಲ್ಲಿ ಶಂಕರಾಚಾರ್ಯರು ಕೂಡ ಬೌದ್ಧ ಧರ್ಮದ ಅವನತಿಗೆ ಕಾರಣವಾದರು. ಇದೆಲ್ಲಕ್ಕೂ ಇತಿಹಾಸ ದಾಖಲೆ ನೀಡಿದೆ. ದೇಶಕ್ಕೆ ಅಪಾಯ ತಂದವರು ಯಾರು ಎಂದು ಇದರಿಂದಲೇ ಗೊತ್ತಾಗುತ್ತದೆ ಎಂದೂ ಅವರು ಆರೋಪಿಸಿದರು.

ಈ ಸಂದರ್ಭದಲ್ಲಿ ನಗರದ ಸಿದ್ಧಾರ್ಥ ಬುದ್ಧವಿಹಾರದ ಭಂತೆ ಸಂಘಾನಂದ, ಸೋಮಶೇಖರ ಮೇಲಿನಮನಿ, ಲಕ್ಷ್ಮಿಕಾಂತ, ಹಣಮಂತ ಬೋಧನಕರ, ಅನಿಲ ಟೆಂಗಳಿ, ಸಂತೋಷ ಮೇಲಿನಮನಿ ಉಪಸ್ಥಿತರಿದ್ದರು.

ಡಾ.ಸುಧಾಕರ್ ವಿರುದ್ಧ ಪ್ರಕರಣ ದಾಖಲಿಸಿ

‘ಬ್ರಾಹ್ಮಣ ತತ್ವವು ಪ್ರತಿಷ್ಠಿತ ಸಮುದಾಯಗಳನ್ನು ಮಾತ್ರ ಒಗ್ಗೂಡಿಸುತ್ತದೆ. ಆದರೆ, ಬೌದ್ಧ ಧರ್ಮವು ಸಾಮಾನ್ಯರ ಧರ್ಮವಾಗಿದೆ. ಸಮಾನತೆ, ಕರುಣೆ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಬೌದ್ಧರನ್ನು ಹೀಗೆ ನಿಂದನೆ ಮಾಡುವುದು ಸರಿಯಲ್ಲ. ಸಚಿವ ಸುಧಾಕರ್ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ವಿಶ್ವ ಬೌದ್ಧ ಮೈತ್ರಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಭಂತೆ ಧಮ್ಮನಾಗ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News