ನೀಟ್ ಹಿಂದೆ ಉತ್ತರ ಭಾರತದ ಟ್ಯೂಷನ್ ಮಾಫಿಯಾ ಇದೆ: ಕುಮಾರಸ್ವಾಮಿ

Update: 2022-03-03 16:00 GMT

ಬೆಂಗಳೂರು, ಮಾ.3: ಲೋಕಸಭೆ ಸ್ಪೀಕರ್ ಅವರ ಕ್ಷೇತ್ರದಲ್ಲಿ ನೀಟ್ ಟ್ಯೂಷನ್ ಅಂಗಡಿಗಳು ನಾಯಿಕೊಡೆಗಳಂತೆ ಮೇಲೆದ್ದಿವೆ. ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿದ್ದಾರೆ. ಉತ್ತರ ಭಾರತದ ಟ್ಯೂಷನ್ ಮಾಫಿಯಾ ನೀಟ್ ಹಿಂದೆ ಇದೆ ಎನ್ನುವ ಅನುಮಾನವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಗುರುವಾರ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೀಟ್ ಬಂದ ಮೇಲೆ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಅನ್ಯಾಯ ಆಗಿದೆ. ಆದರೂ ಸರಕಾರ ವಿದ್ಯಾರ್ಥಿಗಳ ಆರ್ತನಾದ ಕೇಳುತ್ತಿಲ್ಲ ಎಂದರೆ ಸಚಿವರು ಮತ್ತು ಸರಕಾರಕ್ಕೆ ಕಣ್ಣು, ಕಿವಿ ಇಲ್ಲ ಎಂದು ಭಾವಿಸಬೇಕಾಗುತ್ತದೆ. 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ನೀಟ್‍ನಿಂದ ಕರ್ನಾಟಕ ಹೊರಬರಲು ವಿಧಾನಮಂಡಲದಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಕೇಂದ್ರ ಸರಕಾರವು ನೀಟ್ ಅನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ನೀಟ್ ವಿರುದ್ಧ ಮಾತನಾಡಿದವರು ಧನದಾಹಿಗಳು ಹಾಗೂ ದೇಶ ದ್ರೋಹಿಗಳು ಎಂದಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹಾಗೂ ವೈದ್ಯ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋದ ವಿದ್ಯಾರ್ಥಿಗಳೆಲ್ಲರೂ ನೀಟ್ ಅರ್ಹತಾ ಪರೀಕ್ಷೆಯಲ್ಲಿ ಫೇಲಾದವರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಅಕ್ಷಮ್ಯ ಎಂದು ಅವರು ಕಿಡಿಗಾರಿದರು.

ನಾನು ಅಶ್ವತ್ಥ ನಾರಾಯಣ ಅವರಿಗೆ ಕೇಳಲು ಬಯಸುತ್ತೇನೆ. ಮಕ್ಕಳು ಇರಲಿ, ಈಗ ಪಿಯುಸಿ ಪಾಠ ಮಾಡುತ್ತಿರುವ ಉಪನ್ಯಾಸಕರಿಂದ ಈಗಿನ ನೀಟ್ ಪರೀಕ್ಷೆ ಬರೆಸಿ. ಅವರಲ್ಲಿ ಎಷ್ಟು ಜನ ಪಾಸಾಗುತ್ತಾರೋ ನೋಡೋಣ. ಇನ್ನು, ನೀಟ್ ಪ್ರಶ್ನೆ ಪತ್ರಿಕೆಯಲ್ಲಿ ವೈದ್ಯ ಶಿಕ್ಷಣಕ್ಕೆ ಪೂರಕವಾದ ಪ್ರಶ್ನೆಗಳೇ ಇರುವುದಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಕೆಲಸಕ್ಕೆ ಬಾರದ ಬೇರೆ ಬೇರೆ ವಿಷಯದ ಪ್ರಶ್ನೆಗಳಿರುತ್ತವೆ. ಎಂಸಿಕ್ಯೂ ಪ್ರಶ್ನೆಗಳಲ್ಲಿ ನೆಗೆಟೀವ್ ಅಂಕ ಬೇರೆ ಇರುತ್ತದೆ. ಇಂಥ ಕೆಟ್ಟ ವ್ಯವಸ್ಥೆಯಲ್ಲಿ ನಮ್ಮ ಮಕ್ಕಳು ಸಿಲುಕಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನೀಟ್ ಕೋಚಿಂಗ್‍ಗೆ 2 ಲಕ್ಷ: ಏಳೆಂಟು ವಿಧ್ಯಾರ್ಥಿಗಳು ನನ್ನ ಬಳಿಗೆ ಬಂದು, ನೀಟ್ ಕೋಚಿಂಗ್‍ಗೆ ಸೇರಬೇಕು. ನಾವು ಬಡವರು, 2 ಲಕ್ಷ ರೂಪಾಯಿ ಫೀಸ್ ಕಟ್ಟಬೇಕು. ಸಹಾಯ ಮಾಡಿ ಎಂದು ಕೇಳಿದ್ದಾರೆ. ಅವರಿಗೆ ಸಚಿವ ಅಶ್ವತ್ಥ ನಾರಾಯಣ ಅವರನ್ನು ಭೇಟಿ ಮಾಡಲು ಆಗಿಲ್ಲ. ಬರೀ ಕೋಚಿಂಗ್ ತೆಗೆದುಕೊಳ್ಳಲಿಕ್ಕೇ 2 ಲಕ್ಷ ಬೇಕಾದರೆ, ಇನ್ನೂ ಇಡೀ ಮೆಡಿಕಲ್ ಕೋರ್ಸ್ ಮುಗಿಸಲಿಕ್ಕೆ ಎಷ್ಟು ಲಕ್ಷ ರೂಪಾಯಿ ಬೇಕು? ಬಡ ಮಕ್ಕಳು ಇಷ್ಟು ಖರ್ಚು ಮಾಡಲು ಸಾಧ್ಯವೇ? ಸತ್ಯ ಹೀಗಿರುವಾಗ ವಿದೇಶಕ್ಕೆ ಹೋದ ಮಕ್ಕಳ ಬಗ್ಗೆ ಲಘುವಾಗಿ ಮಾತನಾಡುವುದು, ನೀಟ್ ವ್ಯವಸ್ಥೆ ಪ್ರಶ್ನಿಸಿದವರನ್ನು ದ್ರೋಹಿಗಳು ಎನ್ನುವುದು ಸರಿಯಲ್ಲ ಎಂದು ಅವರು ಹೇಳಿದರು.

ನಮ್ಮ ರಾಜ್ಯದ ಮಕ್ಕಳಿಗೆ ಎಷ್ಟು ಸೀಟು ಸಿಕ್ಕಿವೆ?: ರಾಜ್ಯದಲ್ಲಿ ಎಷ್ಟು ವೈದ್ಯ ಕಾಲೇಜುಗಳಿವೆ, ಅವುಗಳನ್ನು ನಡೆಸುವವರ ಹಿನ್ನೆಲೆ ಏನು? ಸರಕಾರಿ ಕಾಲೇಜುಗಳು ಎಷ್ಟಿವೆ? ಅವುಗಳಲ್ಲಿ ರಾಜ್ಯದ ಎಷ್ಟು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ? ಎನ್ನುವುದನ್ನು ಸರಕಾರ ಹೇಳಬೇಕು. ನಮ್ಮ ಜನರ ತೆರಿಗೆ ಹಣದಲ್ಲಿ ಕಟ್ಟಿದ ಕಾಲೇಜುಗಳಲ್ಲಿ ನೀಟ್ ಪಾಸಾದವರಿಗೆ ಸೀಟು ಕೊಡುತ್ತಾರೆ. ಪಿಯುಸಿಯಲ್ಲಿ ಶೇ.97ರಷ್ಟು ಅಂಕ ಪಡೆದ ನವೀನ್ ಅಂಥವರಿಗೆ ಸೀಟು ಸಿಗಲ್ಲ. ಈ ಕಾರಣಕ್ಕಾಗಿಯೇ ತಮಿಳುನಾಡಿನ ಸ್ಟಾಲಿನ್ ಅವರ ಸರಕಾರ ನೀಟ್ ವಿರುದ್ಧ ಕೈಗೊಂಡ ಕ್ರಮವನ್ನು ಅಭಿನಂದಿಸುವೆ. ಅಲ್ಲಿನ ವಿಧಾನಸಭೆಯಲ್ಲಿ ನೀಟ್ ವಿರುದ್ಧ ಅವಿರೋಧ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ವರ್ಷಕ್ಕೆ 38 ಲಕ್ಷ ರೂಪಾಯಿ ಬೇಕು: ನಮ್ಮ ರಾಜ್ಯದ ಮಕ್ಕಳು ವೈದ್ಯ ಶಿಕ್ಷಣ ಪಡೆಯಲು ಯುಕ್ರೇನ್‍ಗೋ, ರμÁ್ಯ ಅಥವಾ ಫಿಲಿಪ್ಪೀನ್ಸ್‍ಗೋ ಹೋಗಬೇಕು. ಏಕೆಂದರೆ ರಾಜ್ಯದಲ್ಲಿ ಮೆಡಿಕಲ್ ಮುಗಿಸಲು ಒಂದೂವರೆ ಕೋಟಿ ರೂಪಾಯಿ ಕಟ್ಟಬೇಕು. ನೀಟ್ ಮೂಲಕ ಅರ್ಹತೆ ಪಡೆದವರೂ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕಾದರೆ ಇಷ್ಟು ಹಣ ತೆರಬೇಕು. ವರ್ಷಕ್ಕೆ 38 ಲಕ್ಷ ರೂಪಾಯಿ ಕಟ್ಟಲೇಬೇಕು. ಬರೀ ಐದು ವರ್ಷದ ಶುಲ್ಕಕ್ಕೆ 1.50ಯಿಂದ 1.75 ಕೋಟಿ ರೂಪಾಯಿ ಬೇಕು. ಬಡ, ಮಧ್ಯಮ ವರ್ಗದ ಮಕ್ಕಳಿಗೆ ಇಷ್ಟು ಹಣ ಹೊಂದಿಸಲು ಸಾಧ್ಯವೇ? ಹಾಗಾದರೆ ಆ ಮಕ್ಕಳು ವೈದ್ಯಕೀಯ ವ್ಯಾಸಂಗ ಮಾಡಲೇಬಾರದೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಸಚಿವ ಅಶ್ವತ್ಥ ನಾರಾಯಣಗೆ ಟಾಂಗ್: ಇಂಥ ಕೆಟ್ಟ ವ್ಯವಸ್ಥೆ ಬಗ್ಗೆ ಮಾತನಾಡುವುದು ದೇಶ ದ್ರೋಹವೇ? ಇದನ್ನು ಉನ್ನತ ಶಿಕ್ಷಣ ಸಚಿವರನ್ನು ಕೇಳಲು ಬಯಸುತ್ತೇನೆ. ಹಾಗೆಯೇ ಪ್ರಹ್ಲಾದ್ ಜೋಶಿ ಹೇಳುತ್ತಾರೆ, ನಮ್ಮ ದೇಶÀದಲ್ಲಿ ನೀಟ್ ಫೇಲ್ ಆದವರೆಲ್ಲ ಉಕ್ರೇನ್‍ಗೆ ಮೆಡಿಕಲ್ ಮಾಡಲಿಕ್ಕೆ ಹೋಗಿದಾರೆ ಎಂದು. ಶೇ.97ರಷ್ಟು ಅಂಕ ಪಡೆದ ಆ ವಿದ್ಯಾರ್ಥಿಗೆ ಅಷ್ಟು ಅಂಕ ಬಿಟ್ಟಿ ಬಂದಿದೆಯಾ? ಸಾಲ ಸೋಲ ಮಾಡಿ ಅಲ್ಲಿಗೆ ಕಳಿಸಿ ಇವತ್ತು ಮಗನನ್ನು ಕಳೆದುಕೊಂಡ ಆ ಕುಟುಂಬ ದುಃಖದಲ್ಲಿದೆ. ಇಂಥ ಹೇಳಿಕೆ ನೀಡುವ ಸಚಿವರಿಗೆ ಜವಾಬ್ದಾರಿ ಬೇಡವೇ? ಎಂದು ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದರು.

ಹಣದ ಅಡ್ಡೆಗಳಾದ ಖಾಸಗಿ ಕಾಲೇಜುಗಳು: ಖಾಸಗಿ ಕಾಲೇಜುಗಳು ಹಣದ ಅಡ್ಡೆಗಳಾಗಿವೆ. ಆದಾಯ ತೆರಿಗೆ ದಾಳಿ ನಡೆದರೆ ಒಂದೊಂದು ಕಾಲೇಜಿನಲ್ಲಿ 300, 400 ಕೋಟಿ ರೂಪಾಯಿ ದುಡ್ಡನ್ನು ಕೋಣೆಗಳಲ್ಲಿ ತುಂಬಿರುವ ದೃಶ್ಯಗಳನ್ನು ಮಾಧ್ಯಮಗಳೇ ತೋರಿಸಿವೆ. ಇಂಥದ್ದಕ್ಕೆ ಈ ವ್ಯವಸ್ಥೆ ಬೇಕಾ? ಅದಕ್ಕೆ ರಾಜ್ಯದ ಜನತೆಗೆ ನಾನು ಮನವಿ ಮಾಡುತ್ತಿದ್ದೇನೆ. ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಐದು ವರ್ಷಗಳ ಪೂರ್ಣ ಅವಧಿಯ ಪೂರ್ಣ ಬಹುಮತದ ಸರಕಾರ ನನ್ನ ಕೈಗೆ ಕೊಡಿ ಎಂದು ಇದೇ ಕಾರಣಕ್ಕೆ ಕೇಳುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News