ರಾಜ್ಯ ಬಜೆಟ್ 2022: ಗಣ್ಯರ ಪ್ರತಿಕ್ರಿಯೆ ಹೀಗಿದೆ...

Update: 2022-03-04 16:30 GMT

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ 2022-23ನೇ ಸಾಲಿನ ಬಜೆಟ್‌ ಕುರಿತು ರಾಜಕೀಯ ನಾಯಕರು, ಸಚಿವರು, ವಿವಿಧ ಸಂಘಟನೆಗಳ ಮುಖಂಡರು ನೀಡಿರುವ ಪ್ರತಿಕ್ರಿಯೆ ಇಲ್ಲಿದೆ. 

ಸಾಲ ಮತ್ತು ಸಾರಾಯಿಗೆ ಅವಲಂಬಿತವಾದ ಬಜೆಟ್:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್, ಸಾಲ ಮತ್ತು ಸಾರಾಯಿಗೆ ಅವಲಂಬಿತವಾದ ಬಜೆಟ್ ಆಗಿದೆ. ರಾಜ್ಯದ ಅಭಿವೃದ್ಧಿಗೆ ಯಾವುದೆ ದೂರದೃಷ್ಠಿ ರೂಪಿಸದೆ, ನಿಖರತೆ ಹಾಗೂ ಸ್ವಚ್ಛತೆಯಿಲ್ಲದೆ ಬಜೆಟ್ ಮಂಡಿಸಿದಂತಿದೆ.  ಈ ಬಜೆಟ್ ನಿಂದ ರಾಜ್ಯ ಅಭಿವೃದ್ಧಿಯಲ್ಲಿ ಮುನ್ನಡೆಯಾಗುವ ಬದಲು ಹಿನ್ನಡೆಯಾಗಲು ಹೊರಟಂತಿದೆ. ಕರಾವಳಿಗರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಹುತೇಕ ಅವಲಂಬಿಸಿದರೂ ಅವರ ವಿಶ್ವಾಸಕ್ಕೆ ಧಕ್ಕೆ ತಂದಿದೆ ಈ ಬಜೆಟ್. ಮೀನುಗಾರಿಕೆಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ಪೂರಕವಾದ ಯಾವುದೇ ಅಂಶಗಳು ಈ ಬಜೆಟ್ ನಲ್ಲಿಲ್ಲ. 

- ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ 


ಸೂತ್ರವಿಲ್ಲದ ಗಾಳಿಪಟ

‘ಹಣವೇ ಇಲ್ಲದೆ ಖರ್ಚು ಮಾಡಲು ಹೊರಟಿರುವ ರಾಜ್ಯ ಸರಕಾರದ ಈ ಬಜೆಟ್ ಸೂತ್ರವಿಲ್ಲದ ಗಾಳಿಪಟದಂತೆಯೇ ನನಗೆ ಕಾಣುತ್ತಿದ್ದು, ಇದರಿಂದ ಜನ ಸಾಮಾನ್ಯರಿಗೆ ಸಹಾಯವಾಗುವುದೆಂಬ ನಂಬಿಕೆ ನನಗಿಲ್ಲ. ಚುನಾವಣಾ ವರ್ಷದಲ್ಲಿ ಜನರ ದಿಕ್ಕು ತಪ್ಪಿಸುವ ಬಜೆಟ್ ಇದಾಗಿದ್ದು ಇವರ 20 ಲಕ್ಷ ಕೋಟಿ ರೂ. ಕೊರೋನ ಪರಿಹಾರದಂತೆಯೇ ಇದೂ ಒಂದು ಸುಳ್ಳಿನ ಬಜೆಟ್ ಆಗಿದ್ದು ನಂಬಿಕೆಯ ಸನಿಹಕ್ಕೂ ಬಾರದ ಇವರ ಕೆಟ್ಟ ಆರ್ಥಿಕ ನಿರ್ವಹಣೆಯೇ ಈ ಬಜೆಟ್ ನ ಭವಿಷ್ಯದ ಕುರಿತು ನನಗೆ ಸ್ಪಷ್ಟವಾದ ಚಿತ್ರಣ ನೀಡಿದೆ'

-ಡಾ.ಎಚ್.ಸಿ.ಮಹದೇವಪ್ಪ ಮಾಜಿ ಸಚಿವ


ಸಮತೋಲಿತ ಬಜೆಟ್

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಆಯವ್ಯಯ ದೂರದೃಷ್ಟಿಯುಳ್ಳ ಬಜೆಟ್, ಎಲ್ಲ ಕ್ಷೇತ್ರಕ್ಕೂ ಸಮಾನ ಆದ್ಯತೆ ನೀಡಿದ್ದಾರೆ. ಆರ್ಥಿಕತೆಯನ್ನು ಇನ್ನಷ್ಟು ಹೆಚ್ಚಿಸಲು ಬಜೆಟ್‍ನಲ್ಲಿ ಒತ್ತು ನೀಡಲಾಗಿದೆ. ಮುಂಬರುವ ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡಲಾಗಿದೆ. ಆರೋಗ್ಯ, ಶಿಕ್ಷಣ, ನೀರಾವರಿ, ಕೃಷಿ, ತಂತ್ರಜ್ಞಾನ, ಪ್ರವಾಸೋದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಿ ಹೆಚ್ಚಿನ ಒತ್ತು ನೀಡಿದ್ದಾರೆ. ಪ್ರವಾಸೋದ್ಯಮ ಇಲಾಖೆಗೆ ಬಜೆಟ್‍ನಲ್ಲಿ ಹಲವು ಅಭಿವೃದ್ಧಿಗಳ ಬಗ್ಗೆ ಘೋಷಣೆ ಮಾಡಲಾಗಿದೆ'

-ಆನಂದ್ ಸಿಂಗ್ ಪ್ರವಾಸೋದ್ಯಮ ಸಚಿವ


ಸರ್ವಾಂಗೀಣ ಅಭಿವೃದ್ಧಿ

‘ಜನಸಾಮಾನ್ಯರ ಮೇಲೆ ಯಾವುದೆ ಹೊರೆ ಹಾಕದ ಜನಪರ ಮುಂಗಡ ಪತ್ರ ಮಂಡಿಸಿದ್ದು, ಮನೆ ಮನೆಗೆ ಗಂಗೆ ಯೋಜನೆಗೆ ರಾಜ್ಯ ಸರಕಾರದ ಪಾಲಾದ 7ಸಾವಿರ ಕೋಟಿ ರೂ.ನೀಡಲು ಉದ್ದೇಶಿಸಿರುವುದನ್ನು ಸ್ವಾಗತಿಸುತ್ತೇನೆ. 2023-24ರೊಳಗೆ ಗ್ರಾಮೀಣ ಕರ್ನಾಟಕದ 25ಲಕ್ಷ ಮನೆಗಳಿಗೆ ನಳಗಳ ಮೂಲಕ ನೀರು ಸರಬರಾಜು ಮಾಡುವ ಗುರಿಯನ್ನು ತಲುಪಲಾಗುವುದು. ಗ್ರಾಮೀಣ ರಸ್ತೆ ಅಭಿವೃದ್ಧಿಗೆ 1,600 ಕೋಟಿ ರೂ.ಮೀಸಲಿಟ್ಟಿರುವುದು ರಸ್ತೆಗಳ ಅಭಿವೃದ್ಧಿಗೆ ಸಹಾಯಕ. ಪಂಚಾಯ್ತಿ ಕೆರೆಗಳ ಅಭಿವೃದ್ಧಿಗೆ ನೂರು ಕೋಟಿ ರೂ.ಹಣವು ಜಲಸಂವರ್ಧನೆಗೆ ಅನುಕೂಲ. ಕೋವಿಡ್ ಸಂಕಟವನ್ನು ಯಶಸ್ವಿ ಯಾಗಿ ಎದುರಿಸಿ ಆರ್ಥಿಕ ಸ್ಥಿತಿ ಸುಧಾರಿಸಿ, ಸವಾರ್ಂಗೀಣ ಅಭಿವೃದ್ಧಿಗೆ ನೀಲಿ ನಕಾಶೆ ಪ್ರಕಟಿಸಿದ್ದಾರೆ'

-ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ದಿ ಸಚಿವ

ತೆರಿಗೆ ಇಲ್ಲ, ನಿರಾಳ

ಬಜೆಟ್‍ನಲ್ಲಿ ಯಾವುದೇ ಹೆಚ್ಚುವರಿ ತೆರಿಗೆಗಳನ್ನು ವಿಧಿಸಿಲ್ಲದಿರುವುದು ಕೈಗಾರಿಕಾ ವಲಯ ನಿರಾಳವಾಗಿದೆ. ಕೇಂದ್ರ ಸರಕಾರ ಹಾಗೂ ಉದ್ಯಮಿಗಳ ಸಹಭಾಗಿತ್ವದಲ್ಲಿ 50 ಕೋಟಿ ರೂ.ಗಳ ವೆಚ್ಚದಲ್ಲಿ ಕರ್ನಾಟಕ ಅಕೆಡೆಲೆರೆಷನ್ ನೆಟ್‍ವರ್ಕ್‍ಅನ್ನು ಸ್ಥಾಪಿಸಲಾಗುವುದು. ಸರಕಾರದ ವತಿಯಿಂದ 20 ಕೋಟಿ ರೂ.ಗಳ ಅನುದಾನ ಅದಕ್ಕಾಗಿ ಮೀಸಲಿಟ್ಟಿದೆ. ರಾಜ್ಯದಲ್ಲಿ ನೋಂದಣಿಯಾಗಿರುವ ವಾಹನಗಳಿಗೆ ರೂ. 30,000ಕ್ಕೂ ಹೆಚ್ಚಿನ ವಾಹನ ತೆರಿಗೆ ಮೊತ್ತವನ್ನು ತ್ರೈಮಾಸಿಕಕ್ಕೆ ಬದಲಾಗಿ ಮಾಸಿಕ ಆಧಾರದ ಮೇಲೆ ಅಂದರೆ ಕಂತುಗಳಲ್ಲಿ ಪಾವತಿಸುವ ಕ್ರಮ ಸ್ವಾಗತಾರ್ಹ.

-ಶಶಿಧರ್ ಪಿ. ಆಡಳಿತಾಧಿಕಾರಿ, ಕಾಸಿಯಾ


ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ 

ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಮೂಲ ಮಂತ್ರಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಗ್ರ ಕರ್ನಾಟಕ ಕಲ್ಯಾಣದ ದೃಷ್ಟಿಕೋನವನ್ನು ಹೊಂದಿರುವ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ. ಬಜೆಟ್‍ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನಕ್ಕೆ ಯೋಜನೆ ರೂಪಿಸಲಾಗಿದೆ. ಅಭಿವೃದ್ಧಿಯಲ್ಲಿ ಹಿಂದುಳಿದ ತಾಲೂಕುಗಳ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ. ಹಾಗೂ ಶಾಲೆ ಮತ್ತು ಪಿಯು ಕಾಲೇಜುಗಳ ಪೀಠೋಪಕರಣಗಳಿಗೆ 100 ಕೋಟಿ ರೂ. ಅನುದಾನ ನೀಡಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಪ್ರೌಢ ಶಾಲೆಗಳನ್ನು ಪದವಿಪೂರ್ವ ಕಾಲೇಜುಗಳಾಗಿ ಉನ್ನತೀಕರಿಸಲಾಗುತ್ತದೆ. 

-ಬಿ.ಸಿ. ನಾಗೇಶ್, ಸಚಿವ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ


ರೈತರ ತುಟಿಗೆ ತುಪ್ಪ ಸವರುವ ಬಜೆಟ್

ಬಜೆಟ್ ಮೇಲ್ನೋಟಕ್ಕೆ ಜನಪ್ರಿಯವಲ್ಲದ ಸಾಧಾರಣ ಬಜೆಟ್ ರೀತಿ ಕಾಣುತ್ತಿವೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದಂತೆ ಕಾಣುತ್ತಿಲ್ಲ. ರೈತರ ನಿರೀಕ್ಷೆಗಳು ಹುಸಿಯಾಗಿದ್ದು, ರೈತರ ತುಟಿಗೆ ತುಪ್ಪ ಸವರುವ ಕೆಲಸವಾಗಿದೆ. ಕೊರೋನ ಸಂಕಷ್ಟ, ಅತಿವೃಷ್ಟಿ, ಹಾನಿಯಿಂದ ಸಂಕಷ್ಟಕ್ಕೀಡಾಗಿದ್ದ ರೈತರ ಅಭಿವೃದ್ಧಿಗೆ ಪೂರಕವಾದ ನೈಜ ಯೋಜನೆಗಳು ಕಂಡುಬರುತ್ತಿಲ್ಲ, ಇದರಿಂದ ರೈತರಿಗೆ ನಿರಾಸೆಯಾಗಿದೆ. ಹಾಗಾಗಿ ರಾಜ್ಯ ಬಜೆಟ್ ಜನಸಾಮಾನ್ಯರಿಗೆ ಹೆಚ್ಚು ಹೊರೆ ಇಲ್ಲದಿದ್ದರೂ, ರೈತರ ಪಾಲಿಗೆ ನಿರಾಸೆ ಬಜೆಟ್ ಆಗಿದೆ.

-ಕುರುಬೂರು ಶಾಂತಕುಮಾರ್, ರಾಜ್ಯಾಧ್ಯಕ್ಷ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ


ಕನ್ನಡದ ಮೇಲಿನ ಕಾಳಜಿ ಕಾಣುತ್ತಿದೆ

ರಾಜ್ಯ ಬಜೆಟ್‍ನಲ್ಲಿ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗಾಗಿ 20 ಕೋಟಿ ರೂಪಾಯಿಗಳ ಅನುದಾನವನ್ನು ಘೋಷಿಸಿರುವುದು ಅತ್ಯಂತ ಹರ್ಷದಾಯಕವಾಗಿದೆ. ಹಾವೇರಿಯಲ್ಲಿ ಐತಿಹಾಸಿಕ ದಾಖಲೆಯಾಗುವಂತೆ ‘ನ ಭೂತೋ, ನ ಭವಿಷ್ಯತಿ’ ರೀತಿಯಲ್ಲಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುವುದು. ಹಾಗೆಯೇ ಈ ಆಯವ್ಯಯದಲ್ಲಿ ಡಾ. ಸಿದ್ದಲಿಂಗಯ್ಯ, ಡಾ. ಎಂ. ಚಿದಾನಂದಮೂರ್ತಿ, ಡಾ. ಚೆನ್ನವೀರ ಕಣವಿ, ಪ್ರೊ. ಚಂದ್ರಶೇಖರ ಪಾಟೀಲ ಸೇರಿದಂತೆ ಹೆಸರಾಂತ ಸಾಹಿತಿಗಳ ಸಾಹಿತ್ಯ ಪ್ರಚಾರಕ್ಕೆ ಯೋಜನೆ, ಕಾಸರಗೋಡು, ಅಕ್ಕಲಕೋಟೆ, ಗೋವಾದಲ್ಲಿ ಕನ್ನಡ ಭವನಗಳ ಸ್ಥಾಪನೆಗೆ ಕ್ರಮ, ರಾಜ್ಯಮಟ್ಟದಲ್ಲಿ ಯಕ್ಷಗಾನ ಸಮ್ಮೇಳನ, ತಳಸಮುದಾಯದ ವಿಶಿಷ್ಟ ಕಲೆಗಳ ಉತ್ತೇಜನಕ್ಕೆ ಸಾಂಸ್ಕೃತಿಕ ಶಿಬಿರ ಸೇರಿದಂತೆ ಕನ್ನಡ ಭಾಷೆ, ಕಲೆ, ಸಂಸ್ಕೃತಿಗಳ ಉತ್ತೇಜನಕ್ಕೆ ವಿಶೇಷವಾಗಿ ಅನುದಾನವನ್ನು ಕಲ್ಪಿಸುವ ಮೂಲಕ ಕನ್ನಡದ ಮೇಲಿನ ತಮ್ಮ ಅಪಾರ ಕಾಳಜಿಯನ್ನು ತೋರಿದ್ದಾರೆ. 

-ಡಾ. ಮಹೇಶ ಜೋಶಿ, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು


‘ಎನ್‍ಇಪಿ ಜಾರಿ ಮಾಡುವ ಭರದಲ್ಲಿ ಅಂಗನವಾಡಿ ನೌಕರರಿಗೆ ಸಮಸ್ಯೆಯಾಗುವಂತಹ ರೀತಿಯಲ್ಲಿ ಬಜೆಟ್ ಭಾಷಣದಲ್ಲಿ ಪ್ರಸ್ತಾಪವಾಗಿದೆ. ಐಸಿಡಿಎಸ್‍ನ ಮಾರ್ಗದರ್ಶಿ ಸೂತ್ರದಂತೆ ನಡೆಯುವ ಅಂಗನವಾಡಿ ಕೇಂದ್ರಗಳಿಗೆ ತೆರಳಬೇಕಾದ 3 ರಿಂದ 6 ವರ್ಷ ವಯೋಮಾನದ ಮಕ್ಕಳನ್ನು ಪ್ರಾಥಮಿಕ ಶಿಕ್ಷಣ ವಿಭಾಗಕ್ಕೆ ಸೇರಿಸಿದ್ದರಿಂದ ಅಂಗನವಾಡಿಗಳ ಮಹತ್ವ ಇಳಿಮುಖವಾಗುತ್ತದೆ. ಹಂತಹಂತವಾಗಿ ಸಮುದಾಯದ ಕೇಂದ್ರಗಳಾದ ಅಂಗನವಾಡಿಗಳು ಮುಚ್ಚಿಹೋಗುತ್ತವೆ. ಮಾತ್ರವಲ್ಲದೆ, ಈಗಾಗಲೇ ಶಾಲಾಪೂರ್ವ ಶಿಕ್ಷಣ ನೀಡುವ ಅಂಗನವಾಡಿ ನೌಕರರು ಕೇವಲ 3 ವರ್ಷ ಒಳಗಿನವರ ಕೆಲಸಕ್ಕೆ ಸೀಮಿತವಾಗುವ ಅಪಾಯ ಈ ಬಜೆಟ್ ಘೋಷಣೆಯಲ್ಲಿ ಸ್ಪಷ್ಟವಾಗುತ್ತದೆ. ಹಾಗಾಗಿ ಈ ಪ್ರಸ್ತಾಪ ಸರಕಾರ ಹಿಂಪಡೆಯಬೇಕು. ಕಾರ್ಯಕರ್ತೆ ಅಥವಾ ಸಹಾಯಕಿ ಕೆಲಸದ ಅವಧಿಯಲ್ಲಿ ತೀರಿಕೊಂಡಾಗ ಅನುಕಂಪದ ಆಧಾರದಲ್ಲಿ ಕೆಲಸ ನೀಡಬೇಕೆಂಬ ಆದೇಶದಲ್ಲಿ ಮೃತರ ಮಗಳು ಅಥವಾ ಸೊಸೆಗೆ ಅದೇ ಹುದ್ದೆಯನ್ನು ನೀಡಬೇಕೆಂದು ಆದೇಶಕ್ಕೆ ತಿದ್ದುಪಡಿ ತರಬೇಕು'

-ಎಸ್.ವರಲಕ್ಷ್ಮಿ ಅಧ್ಯಕ್ಷ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ 


‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಪ್ರಸಕ್ತ ಸಾಲಿನ ಆಯವ್ಯಯ ರಾಜ್ಯ ಸರಕಾರಿ ನೌಕರರು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿರೋಧಿಯಾಗಿದೆ. ಎಸ್ಸಿ-ಎಸ್ಟಿ ವರ್ಗದ ಜನರ ಅಭಿವೃದ್ದಿಗೆ ಯಾವುದೇ ಸೃಜನಶೀಲ ಯೋಜನೆ, ಕಾರ್ಯಕ್ರಮಗಳನ್ನು ಪ್ರಕಟಿಸಿಲ್ಲ. ಹೀಗಾಗಿ ಬಡ, ಶೋಷಿತ ಜನತೆಯ ನಿರೀಕ್ಷೆ ಹುಸಿಯಾಗಿದ್ದು, ಇದು ಅಭಿವೃದ್ಧಿ ವಿರೋಧಿ ಬಜೆಟ್'

-ಡಿ.ಶಿವಶಂಕರ್ ಅಧ್ಯಕ್ಷ ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ 

-----------------------------------------------------------------------------------------------
‘ಪರಿಶಿಷ್ಟ ಕಲ್ಯಾಣಕ್ಕೆ ಹಣ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವ ಎಸ್ಸಿಪಿ-ಟಿಎಸ್ಪಿ ಕಲಂ 7 ‘ಡಿ'ಯನ್ನು ತೆಗೆದುಹಾಕುವ ಬಗ್ಗೆ ಬಜೆಟ್‍ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಹೆಸರಿಗೆ ಮಾತ್ರ ಪರಿಶಿಷ್ಟರ ಅಭಿವೃದ್ದಿ ಎಂದು ಹಣ ಮೀಸಲಿಟ್ಟು ಬಳಿಕ ಅನ್ಯ ಕಾರ್ಯಕ್ಕೆ ಅದನ್ನು ಬಳಕೆ ಮಾಡುವುದು ಬಡವರ ವಿರೋಧಿ. ದಲಿತರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಹಣ ಮೀಸಲಿಟ್ಟಿಲ್ಲ, ಬಡ ಮಕ್ಕಳ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಿಲ್ಲ. ‘ದೀನ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿನಿಲಯ' ಸ್ಥಾಪಿಸಲು 250 ಕೋಟಿ ರೂ.ಒದಗಿಸಿರುವುದು ಸಂಘ ಪರಿವಾರಕ್ಕೆ ಹಣ ಹೊಡೆಯಲು ಪ್ರೋತ್ಸಾಹಿಸುವಂತಿದೆ. ಇದೊಂದು ರೀತಿಯಲ್ಲಿ ದಲಿತ ವಿರೋಧಿü ಕಣ್ಕಟ್ ಬಜೆಟ್ ಎಂದೇ ಹೇಳಬೇಕು'

-ಮಾವಳ್ಳಿ ಶಂಕರ್ ದಸಂಸ ರಾಜ್ಯ ಪ್ರಧಾನ ಸಂಚಾಲಕ

-------------------------------------------------------------
ಎಸ್ಸಿ-ಎಸ್ಟಿ ವರ್ಗದ ಅಭಿವೃದ್ಧಿಗೆ ಸಾವಿರಾರು ಕೋಟಿ ಮೀಸಲಿಟ್ಟರೂ ಇದು ಕೇವಲ ಪ್ರಚಾರಕ್ಕೆ ಸೀಮಿತವಾಗಿದ್ದು, ಯೋಜನೆಗಳು ಶೋಷಿತ ಸಮುದಾಯಗಳಿಗೆ ತಲುಪುತ್ತಿಲ್ಲ. ವಿವಿಧ ವರ್ಗಗಳ ಆದಾಯ ಹೆಚ್ಚಳಕ್ಕೆ ಆಸ್ಥೆ ವಹಿಸುವ ಸರಕಾರ ಎಸ್ಸಿ-ಎಸ್ಟಿ ವರ್ಗದ ಜನರ ಆದಾಯ ಹೆಚ್ಚಳಕ್ಕೆ ಯಾವುದೇ ಯೋಜನೆ ಪ್ರಕಟಿಸುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ದಲಿತ ವಿರೋಧಿ ಆಯವ್ಯಯವಾಗಿದೆ'

-ಲಕ್ಷ್ಮೀ ನಾರಾಯಣ ನಾಗವಾರ ದಸಂಸ ರಾಜ್ಯ ಸಂಚಾಲಕ


ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್

ಕೋವಿಡ್ ಸಾಂಕ್ರಾಮಿಕದ ಬಳಿಕ ಚೇತರಿಸಿಕೊಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದೆ. ಕಳೆದ ಸಾಲಿನ ಬಜೆಟ್‍ಗಿಂತ ಶೇ 7.7ರಷ್ಟು ಹೆಚ್ಚು ಪ್ರಮಾಣದ ಬಜೆಟ್ ಇದಾಗಿದ್ದು, ಶಿಕ್ಷಣ-ಉದ್ಯೋಗ-ಸಬಲೀಕರಣಕ್ಕೆ ಆದ್ಯತೆ ನೀಡಲಿದೆ. ರೈತರ ಆದಾಯ ದ್ವಿಗುಣಗೊಳಿಸಲು ಆದ್ಯತೆ ಮತ್ತು ವಿಶೇಷ ಉಪಕ್ರಮಗಳಿರುವ ಆಯವ್ಯಯ ಪತ್ರ ಇದಾಗಿದ್ದು, ರೈತ ಶಕ್ತಿ ಹೊಸ ಯೋಜನೆ ಪ್ರಕಟಿಸಲಾಗಿದೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ 1 ಸಾವಿರ ಕೋಟಿ ಅನುದಾನ ನೀಡಲಾಗಿದೆ.  

-ನಳಿನ್ ಕುಮಾರ್ ಕಟೀಲ್, ರಾಜ್ಯಾಧ್ಯಕ್ಷ, ಬಿಜೆಪಿ  


ಸರಕಾರಿ ನೌಕರರ ಕಡೆಗಣನೆ

ರಾಜ್ಯದ 2022-23ನೇ ಸಾಲಿನ ಆಯವ್ಯಯದಲ್ಲಿ ರಾಜ್ಯ ಸರಕಾರ ನೌಕರರಿಗೆ ಕೇಂದ್ರದ ಮಾದರಿ ವೇತನವನ್ನು ನೀಡುವ ಕುರಿತಂತೆ ಯಾವುದೇ ಪ್ರಸ್ತಾಪ ಮಾಡದೇ ರಾಜ್ಯ ಸರಕಾರ ನೌಕರರನ್ನು ಕಡೆಗಣಿಸಿರುವುದು ಸಮಸ್ತ ಕರ್ನಾಟಕ ರಾಜ್ಯ ಸರಕಾರ ನೌಕರರಿಗೆ ನಿರಾಸೆಯನ್ನು ಉಂಟು ಮಾಡಿದೆ. ಸರಕಾರದ ಸರಕಾರಿ ನೌಕರರ ವಿರೋಧಿ ನೀತಿ ಹಾಗೂ ಅನ್ಯಾಯವನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಕರ್ನಾಟಕ ಸರಕಾರ ಸಚಿವಾಲಯ ನೌಕರರ ಸಂಘವು ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಎನ್.ಪಿ.ಎಸ್ ಸಂಘ, ಕರ್ನಾಟಕ ವಿಧಾನಸಭೆ ಸಚಿವಾಲಯ ನೌಕರರ ಸಂಘ, ಕರ್ನಾಟಕ ವಿಧಾನ ಪರಿಷತ್ ಸಚಿವಾಲಯ ನೌಕರರ ಸಂಘ ಹಾಗೂ ಇನ್ನಿತರೆ ವೃಂದ ಸಂಘಗಳು ಸೇರಿ ಹೋರಾಟ ನಡೆಸಲು ಕ್ರಿಯಾ ಸಮಿತಿಯನ್ನು ರಚಿಸಿ ಉಗ್ರ ಹೋರಾಟ ನಡೆಸುತ್ತದೆ.
-ಪಿ.ಗುರುಸ್ವಾಮಿ, ಅಧ್ಯಕ್ಷ, ಸಚಿವಾಲಯ ನೌಕರರ ಸಂಘ


ಎನ್‍ಪಿಎಸ್ ನೌಕರರಿಗೆ ನಿರಾಶೆ

ಈ ಬಾರಿಯ ಬಜೆಟ್‍ನಲ್ಲಿ ಎನ್‍ಪಿಎಸ್ ರದ್ದುಗೊಳಿಸಿರುವ ಮಾದರಿಯಲ್ಲಿ μÉೀರು ಮಾರುಕಟ್ಟೆ ಆಧಾರಿತ ನೂತನ ಪಿಂಚಣಿ ಯೋಜನೆ(ಎನ್‍ಪಿಎಸ್)ಯನ್ನು ರಾಜ್ಯ  ಸರಕಾರವು ಈ ಬಾರಿಯ ಬಜೆಟ್‍ನಲ್ಲಿ ರದ್ದುಗೊಳಿಸುವ ಭರವಸೆಯನ್ನು ಸಂಘ ಹೊಂದಿತ್ತು. ಆದರೆ ಈ ಬಾರಿಯ ಬಜೆಟ್ 2,50,000 ಸರಕಾರ ಹಾಗೂ ಬೋರ್ಡ್ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 3 ಲಕ್ಷಕ್ಕೂ ಅಧಿಕ ಎನ್‍ಪಿಎಸ್ ನೌಕರರನ್ನು ನಮ್ಮ ಸರಕಾರವು ನಿರಾಸೆಗೊಳಿಸಿದೆ. 

-ಶಾಂತಾರಾಮ, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಸರಕಾರ ಎನ್‍ಪಿಎಸ್ ನೌಕರರ ಸಂಘ 

---------------------------------------------------

ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ 

ಮಂಡ್ಯ ಜಿಲ್ಲೆಯ ಬಹುಪಾಲು ವರ್ಗದ ಜೀವನೋಪಾಯಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅನುಕೂಲ ಮಾಡಿಕೊಡುತ್ತಿದ್ದ ಬಹು ಆಕಾಂಕ್ಷಿತ ಮೈಸೂರು ಸಕ್ಕರೆ ಕಾರ್ಖಾನೆಗೆ 200 ಕೋಟಿ ರೂ. ಅನುದಾನ ಕೇಳಿದ್ದರೆ, ಬಜೆಟ್‍ನಲ್ಲಿ ಘೋಷಿಸಿರುವ 50 ಕೋಟಿ ರೂ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಯಂತ್ರೋಪಕರಣ ದುರಸ್ತಿಗೆ ಈ ಹಣವನ್ನು ಒದಗಿಸುವುದಾಗಿ ಹೇಳಲಾಗಿದೆ. ಆದರೆ, ಕಾರ್ಖಾನೆ ಅಭಿವೃದ್ಧಿಗೆ ಈ ಹಣ ಯಾವುದಕ್ಕೂ ಸಾಲದು ಎಂಬುದು ತಿಳಿಯುತ್ತದೆ. ಮಂಡ್ಯ ಜಿಲ್ಲೆ ಸೇರಿದಂತೆ ಹಳೇ ಮೈಸೂರು ಭಾಗಕ್ಕೆ ವಿಶೇಷವಾದಂತಹ ಯಾವುದೇ ರೀತಿಯ ಕೊಡುಗೆಯನ್ನು ನೀಡಿಲ್ಲ. ಹಾಗಾಗಿ ಇದೊಂದು ನಿರಾಶಾದಾಯಕ ಬಜೆಟ್ ಆಗಿದೆ.

-ದಿನೇಶ್ ಗೂಳಿಗೌಡ, ಶಾಸಕರು, ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರ


ಬಂಡವಾಳಶಾಹಿಗಳ ಓಲೈಕೆ ಬಜೆಟ್

ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಹೊಡೆತಕ್ಕೆ ಸಿಲುಕಿ ಕಂಗಾಲಾಗಿರುವ ಸಾಮಾನ್ಯ ಜನತೆಗೆ ಬೆಲೆ ಏರಿಕೆ, ನಿರುದ್ಯೋಗ, ದುಬಾರಿ ಶಿಕ್ಷಣ, ದುಬಾರಿ ಆರೋಗ್ಯ ಇತ್ಯಾದಿಗಳಿಂದ ಮುಕ್ತಿ ಬೇಕಿತ್ತು. ಆದರೆ ಅಂತಹ ಯಾವ ಪ್ರಯತ್ನಗಳೂ ಈ ಬಜೆಟಿನಲ್ಲಿ ಕಾಣುತ್ತಿಲ್ಲ. ಸಾಲದ ಸುಳಿಯಲ್ಲಿ ಸಿಲುಕಿರುವ ಗ್ರಾಮೀಣ ಜನರಿಂದ ಕುಡಿಯುವ ನೀರಿಗೂ ಹಣ ವಸೂಲಿ ಮಾಡಿ, ನೀರನ್ನು ಸರಕನ್ನಾಗಿಸುವ ಜಲಜೀವನ್ ಮಿಷÀನ್‍ಗೆ ರೂ. 7,000 ಕೋಟಿಯನ್ನು ಈ ಬಜೆಟಿನಲ್ಲಿ ಒದಗಿಸಲಾಗಿದೆ. ವಿದ್ಯುತ್ ಸರಬರಾಜು ನಿಗಮಗಳನ್ನು ಖಾಸಗೀಕರಿಸಲು ತಜ್ಞರ ಸಮಿತಿಯೊಂದನ್ನು ರಚಿಸುವ ಪ್ರಸ್ತಾವನೆ ಇಡಲಾಗಿದೆ. ಯುವಜನರು ಬಳಸುವ ಜಿಲ್ಲಾ ಕ್ರೀಡಾಂಗಣಗಳಿಗೆ ನಿರ್ವಹಣಾ ವೆಚ್ಚದ ನೆಪದಲ್ಲಿ ಬಳಕೆ ಶುಲ್ಕ ನಿಗದಿಪಡಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ವಿದ್ಯುತ್ ಉತ್ಪಾದನೆ, ಮೇಕ್ ಇನ್ ಇಂಡಿಯಾ ಹೆಸರಿನಲ್ಲಿ ಬಂಡವಾಳಶಾಹಿಗಳ ಓಲೈಕೆ ಈ ಬಜೆಟಿನಲ್ಲಿ ಎದ್ದು ಕಾಣುತ್ತದೆ. 

-ಕೆ. ಉಮಾ, ಕಾರ್ಯದರ್ಶಿಗಳು, ಎಸ್‍ಯುಸಿಐ, ಕರ್ನಾಟಕ 


ಅಲ್ಪಸಂಖ್ಯಾತ ವಿರೋಧಿ ಬಜೆಟ್

ಅಲ್ಪಸಂಖ್ಯಾತ ವಿರೋಧಿ ಬಜೆಟ್ ಇದಾಗಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ಬಜೆಟ್‍ನಲ್ಲಿ ಕೊಡುಗೆ ಇಲ್ಲ. ನೀರಾವರಿಗೆ 30,000 ಕೋಟಿ ಎಂದು ಪ್ರಣಾಳಿಕೆಯಲ್ಲಿ ಇತ್ತು. ಆದರೆ ಬಜೆಟ್‍ನಲ್ಲಿ ಅದು ಕಾರ್ಯಗತವಾಗಿಲ್ಲ. ಮೇಕೆದಾಟುಗೆ 1000 ಕೋಟಿ ಇಟ್ಟಿದ್ದಾರೆ. ಮೇಕೆದಾಟು ಹೋರಾಟ ಮಾಡಿದ್ದೆವು. ಅದಕ್ಕೆ 1000 ಕೋಟಿ ನೀಡಲಾಗಿದೆ. ಆದರೆ ಪರಿಸರ ಇಲಾಖೆ ಅನುಮತಿ ಪಡೆಯದಿದ್ದರೆ ಏನು ಪ್ರಯೋಜನ? ಮಹದಾಯಿ ಹೋರಾಟದ ಬಗ್ಗೆ ಕಾಂಗ್ರೆಸ್ ಎಚ್ಚರಿಕೆ ಕೊಟ್ಟ ಹಿನ್ನೆಲೆಯಲ್ಲಿ ಕಣ್ಣೊರೆಸುವ ಪ್ರಯತ್ನವಾಗಿ ಅನುದಾನ ನೀಡಲಾಗಿದೆ. ಕಲ್ಯಾಣ ಕರ್ನಾಟಕಕ್ಕೆ ಅನುದಾನ ಕೊಟ್ಟಿಲ್ಲ. ಹಾಗಾಗಿ ಇದು ಉಪ್ಪು ಹುಳಿ ಖಾರ ಇಲ್ಲದ ಬಜೆಟ್ ಆಗಿದ್ದು, ಯಾರಿಗೂ ಈ ಬಜೆಟ್ ಸಂತೋಷ ತಂದಿಲ್ಲ. 

-ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ 

--------------------------------------
ಶಿಕ್ಷಣಕ್ಕೆ ಒತ್ತು ನೀಡದ ಬಜೆಟ್

ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸರಕಾರ ಸಂಸ್ಥೆಗಳ ಮೇಲೆ ಅವಲಂಬನೆ ಹೆಚ್ಚಾಗಿರುವುದು ವಾಸ್ತವ ಅಂಶವಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೇವಲ ಶೇ.1 ಮಾತ್ರ ಬಜೆಟ್‍ನಲ್ಲಿ ಏರಿಕೆ ಆಗಿದೆ. ಹೆಚ್ಚೆಚ್ಚು ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕಿತ್ತು. ಅದು ಬಜೆಟ್‍ನಲ್ಲಿ ಪ್ರಸ್ತಾಪಿಸಿಲ್ಲ. ಅಲ್ಲದೆ, ರಾಜ್ಯದ ವಿದ್ಯಾರ್ಥಿಗಳು ಸರಕಾರಿ ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಸೀಟನ್ನು ದಕ್ಕಿಸಿಕೊಳ್ಳಲು ಸಾಲಕ್ಕಾಗಿ ನೆರವು ನೀಡುತ್ತೇವೆ ಎಂದು ಸರಕಾರ ಹೇಳಿದೆ. ಇದು ಯಾವ ನೆರವೂ ಅಲ್ಲ. ಬದಲಿಗೆ ಸರಕಾರವು ಸಂಪೂರ್ಣವಾಗಿ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಸರಕಾರವು ಉನ್ನತ ಶಿಕ್ಷಣದ ಶುಲ್ಕವನ್ನು ಕಡಿಮೆ ಮಾಡಬೇಕಿತ್ತು. ಈ ಯೋಜನೆಗಳು ವಿದ್ಯಾರ್ಥಿಗಳಿಗೆ ನೆರವು ಆಗುತ್ತಿತ್ತು. ಆದರೆ, ಸಾಲದ ನೆರವಿನ ನೆಪದಲ್ಲಿ, ಸರಕಾರ ಮತ್ತೊಮ್ಮೆ ವಿದ್ಯಾರ್ಥಿಗಳ ತಲೆಯ ಮೇಲೆ ಶುಲ್ಕದ ಹೊರೆಯನ್ನು ಹೋರಿಸಿದೆ.

-ಅಜಯ್ ಕಾಮತ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಐಡಿಎಸ್‍ಓ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News