ಮೂರೇ ವಾರಗಳಲ್ಲಿ ಭಾರತೀಯ ಹೂಡಿಕೆದಾರರು ಕಳೆದುಕೊಂಡ ಸಂಪತ್ತು ಉಕ್ರೇನ್ ಜಿಡಿಪಿಗಿಂತ ಹೆಚ್ಚು

Update: 2022-03-06 04:09 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ದಿನೇದಿನೇ ಹದಗೆಡುತ್ತಿರುವ ಉಕ್ರೇನ್ ಬಿಕ್ಕಟ್ಟು ತೈಲಬೆಲೆಗಳ ಏರಿಕೆ ಮತ್ತು ಹಣದುಬ್ಬರ ಭೀತಿಗೆ ಕಾರಣವಾಗಿದ್ದು,ಭಾರತೀಯ ಶೇರು ಮಾರುಕಟ್ಟೆಗಳು ಸತತ ನಾಲ್ಕನೇ ವಾರವೂ ಕುಸಿತವನ್ನು ದಾಖಲಿಸಿವೆ. ಶುಕ್ರವಾರ ಸತತ ಮೂರನೇ ದಿನವೂ ನಷ್ಟವನ್ನು ಅನುಭವಿಸಿರುವ ನಿಫ್ಟಿ ಶೇ.1.53ರಷ್ಟು ಕುಸಿದು 16,245ರಲ್ಲಿ ಮತ್ತು ಸೆನ್ಸೆಕ್ಸ್ ಶೇ.1.40ರಷ್ಟು ಕುಸಿದು 54,333ರಲ್ಲಿ ಮುಕ್ತಾಯಗೊಂಡಿವೆ. ಅಂದರೆ ಒಂದೇ ದಿನದಲ್ಲಿ ನಿಫ್ಟಿ 252 ಮತ್ತು ಸೆನ್ಸೆಕ್ಸ್ 768 ಅಂಶಗಳನ್ನು ಕಳೆದುಕೊಂಡಿವೆ ಎಂದು livemint ವರದಿ ಮಾಡಿದೆ.

ಉಕ್ರೇನ್ ಮೇಲೆ ರಷ್ಯದ ಆಕ್ರಮಣ ಎರಡನೇ ವಾರವನ್ನು ಪ್ರವೇಶಿಸಿದ್ದು, ಯುರೋಪ್‌ನ ಅತ್ಯಂತ ಬೃಹತ್ ಅಣು ವಿದ್ಯುತ್ ಸ್ಥಾವರನ್ನು ರಷ್ಯಾದ ಪಡೆಗಳು ವಶಪಡಿಸಿಕೊಂಡಿವೆ ಎಂದು ಉಕ್ರೇನ್ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ಫೆ.24ರಂದು ರಷ್ಯಾ ಉಕ್ರೇನ್ ಮೇಲೆ ಆಕ್ರಮಣವನ್ನು ಮಾಡಿದಾಗಿನಿಂದ ಸೆನ್ಸೆಕ್ಸ್ ಸುಮಾರು 3,000 ಅಂಶಗಳನ್ನು ಕಳೆದುಕೊಂಡಿದೆ. ರಷ್ಯಾ ಉಕ್ರೇನ್ ಗಡಿಯುದ್ದಕ್ಕೂ ಭಾರೀ ಸಂಖ್ಯೆಯಲ್ಲಿ ತನ್ನ ಪಡೆಗಳನ್ನು ನಿಯೋಜಿಸಿದ್ದರಿಂದ ಫೆ.24ರ ಮೊದಲೇ ಮಾರುಕಟ್ಟೆಗಳು ತಲ್ಲಣಗೊಂಡಿದ್ದವು. ಫೆ.16ರಂದು ಬಾಂಬೆ ಶೇರು ವಿನಿಮಯ ಕೇಂದ್ರ (ಬಿಎಸ್‌ಇ)ವು ಶೇರುಗಳ ಮಾರುಕಟ್ಟೆ ಬಂಡವಾಳೀಕರಣವನ್ನು ಪಟ್ಟಿ ಮಾಡಿದ್ದಾಗ ಅದು 2,62,18,594 ಕೋ.ರೂ.ಗಳಿತ್ತು. ಆಗಿನಿಂದ ಭಾರತೀಯ ಮಾರುಕಟ್ಟೆಗಳು ಸುಮಾರು 15 ಲ.ಕೋ.ರೂ.ಗಳಷ್ಟು ನಷ್ಟವನ್ನು ಅನುಭವಿಸಿದ್ದು, ಇದು ಉಕ್ರೇನ್‌ನ ಜಿಡಿಪಿಗಿಂತ ಹೆಚ್ಚು.

ಸ್ಟಾಟಿಸ್ಟಾ ವೆಬ್‌ಸೈಟ್‌ನ ಪ್ರಕಾರ 2021ರಲ್ಲಿ ಉಕ್ರೇನ್‌ನ ಜಿಡಿಪಿ ಅಂದಾಜು 181 ಶತಕೋಟಿ ಡಾ.ಗಳಷ್ಟಿತ್ತು (ಸುಮಾರು 13 ಲ.ಕೋ.ರೂ).

ಈ ನಡುವೆ ಭಾರತೀಯ ರೂಪಾಯಿಯ ಮೌಲ್ಯವು ಅಮೆರಿಕದ ಡಾಲರ್‌ನೆದುರು 76ರ ಮಟ್ಟವನ್ನು ಮೀರಿ ಕುಸಿದಿದೆ. ಭಾರತವು ವಿಶ್ವದ ಮೂರನೇ ಅತ್ಯಂತ ದೊಡ್ಡ ಕಚ್ಚಾತೈಲ ಆಮದು ದೇಶವಾಗಿದೆ ಮತ್ತು ಹೆಚ್ಚುತ್ತಿರುವ ಬೆಲೆಗಳು ಅದರ ವ್ಯಾಪಾರ ಮತ್ತು ಚಾಲ್ತಿ ಖಾತೆ ಕೊರತೆಯನ್ನು ಹೆಚ್ಚಿಸಿವೆ, ಜೊತೆಗೆ ರೂಪಾಯಿಯ ಅಪಮೌಲ್ಯವನ್ನು ಹೆಚ್ಚಿಸಿವೆ ಮತ್ತು ಆಮದು ಹಣದುಬ್ಬರವನ್ನು ಹೆಚ್ಚಿಸಿವೆ.
ಯುದ್ಧ ಮತ್ತು ಕಚ್ಚಾತೈಲ ಬೆಲೆಗಳಲ್ಲಿ ಏರಿಕೆ ಆರ್ಥಿಕ ಚಿತ್ರಣ ಮತ್ತು ಮಾರುಕಟ್ಟೆ ನಿರೀಕ್ಷೆಗಳನ್ನು ಸಂಪೂರ್ಣವಾಗಿ ಬದಲಿಸಿವೆ. ಯುದ್ಧವು ಮುಂದುವರಿದರೆ ಜಾಗತಿಕ ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮವುಂಟಾಗಬಹುದು. ಭಾರತದಲ್ಲಿ ಸರಕಾರ ಮತ್ತು ಆರ್‌ಬಿಐ ಪ್ರತಿ ಬ್ಯಾರೆಲ್‌ಗೆ ಸುಮಾರು 75 ಡಾಲರ್‌ಗಳ ಕಚ್ಚಾತೈಲ ಬೆಲೆಯನ್ನು ಊಹಿಸಿದ್ದವು, ಹೀಗಾಗಿ ಮುಂಗಡಪತ್ರ ಮತ್ತು ವಿತ್ತೀಯ ನೀತಿಯಲ್ಲಿನ ಮುನ್ನಂದಾಜುಗಳನ್ನು ಪರಿಷ್ಕರಿಸಬೇಕಾಗುತ್ತದೆ. ಕಚ್ಚಾತೈಲ ಬೆಲೆ ಇಳಿಕೆಯಾದರೂ ಮತ್ತು ಪ್ರತಿ ಬ್ಯಾರೆಲ್‌ಗೆ ಸುಮಾರು 100 ಡಾಲರ್‌ನಲ್ಲಿ ಸ್ಥಿರಗೊಂಡರೂ 2022-23ನೇ ಹಣಕಾಸು ವರ್ಷದಲ್ಲಿ ಹಣದುಬ್ಬರ ಆರ್‌ಬಿಐ ಅಂದಾಜಿಗಿಂತ ತುಂಬ ಹೆಚ್ಚಾಗಲಿದೆ. ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ)ಗೆ ಬಡ್ಡಿದರಗಳನ್ನು ಹೆಚ್ಚಿಸುವುದು ಅನಿವಾರ್ಯವಾಗಲಿದೆ ಮತ್ತು ಇದು ಆರ್ಥಿಕ ಚೇತರಿಕೆಯ ಮೇಲೆ ಪರಿಣಾಮವನ್ನು ಬೀರಲಿದೆ ಎಂದು ಜಿಯೊಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ ವಿಜಯಕುಮಾರ್ ಹೇಳಿದ್ದಾರೆ.

ಭಾರತೀಯ ಮಾರುಕಟ್ಟೆಗಳು ಅಲ್ಪಾವಧಿಗೆ ತಲ್ಲಣದಲ್ಲಿಯೇ ಮುಂದುವರಿಯುವ ನಿರೀಕ್ಷೆಯಿದೆ, ಹೀಗಾಗಿ ಎಚ್ಚರಿಕೆ ಅಗತ್ಯವಾಗಿದೆ ಎಂದಿರುವ ರೆಲಿಗೇರ್ ಬ್ರೋಕಿಂಗ್ ಲಿ.ನ ಉಪಾಧ್ಯಕ್ಷ (ಸಂಶೋಧನೆ) ಅಜಿತ ಮಿಶ್ರಾ ಅವರು,‘ಬಿಕ್ಕಟ್ಟು ಉಲ್ಬಣಗೊಂಡರೆ ಅದು ಮುಂಬರುವ ವಾರಗಳಲ್ಲಿ ನಿರಂತರ ಒತ್ತಡಕ್ಕೆ ಕಾರಣವಾಗುವುದರಿಂದ ವಾರಾಂತ್ಯದಲ್ಲಿ ರಷ್ಯ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಸುದ್ದಿಗಳು ಹೆಚ್ಚಿನ ಗಮನವನ್ನು ಪಡೆದುಕೊಳ್ಳಲಿವೆ. ಅಲ್ಲದೆ ಹೆಚ್ಚುತ್ತಿರುವ ಕಚ್ಚಾತೈಲ ಬೆಲೆ ನಮ್ಮ ಆರ್ಥಿಕತೆಗೆ ತಲೆನೋವಾಗಿದೆ ಮತ್ತು ಸಂಬಂಧಿತ ಕ್ಷೇತ್ರಗಳು ಈಗಾಗಲೇ ಭಾರೀ ಒತ್ತಡದಲ್ಲಿವೆ. ಇದು ಹೂಡಿಕೆದಾರರು ಮೂಲಭೂತವಾಗಿ ಸುಭದ್ರವಾಗಿರುವ ಮತ್ತು ಮಾರುಕಟ್ಟೆಯಲ್ಲಿ ಸ್ಥಿರತೆಯೊಂದಿಗೆ ತ್ವರಿತವಾಗಿ ಪುಟಿದೇಳಬಲ್ಲ ಆಯ್ದ ಶೇರುಗಳಲ್ಲಿ ಹೂಡಿಕೆ ಮಾಡಬೇಕಾದ ಸಮಯವಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News