ಮಹಾರಾಷ್ಟ್ರ ಸಿಎಂ, ರಾಜ್ಯಪಾಲರ ನಡುವೆ ಭಿನ್ನಮತ ದುರದೃಷ್ಟಕರ: ಬಾಂಬೆ ಹೈಕೋರ್ಟ್

Update: 2022-03-09 18:45 GMT
photo pti

ಮುಂಬೈ,ಮಾ.9: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ರಾಜ್ಯಪಾಲ ಬಿ.ಎಸ್.ಕೋಶಿಯಾರಿ ನಡುವೆ ವಿವಿಧ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತಿರುವುದನ್ನು ಗಮನಿಸಿರುವ ಬಾಂಬೆ ಹೈಕೋರ್ಟ್, ಉನ್ನತವಾದ ಸಾರ್ವಜನಿಕ ಹುದ್ದೆಗಳನ್ನು ಆಲಂಕರಿಸಿರುವ ಇವರಿಬ್ಬರು ಪರಸ್ಪರರ ಮೇಲೆ ವಿಶ್ವಾಸವಿಡದಿರವುದು ದುರದೃಷ್ಟಕರವೆಂದು ತಿಳಿಸಿದೆ.


ಮುಖ್ಯಮಂತ್ರಿ ಹಾಗೂ ರಾಜ್ಯಪಾಲರು ಒಟ್ಟಿಗೆ ಕುಳಿತುಕೊಂಡು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವುದು ಸೂಕ್ತವೆಂದು ಬಾಂಬೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಹಾಗೂ ನ್ಯಾಯಮೂರ್ತಿ ಎಂ.ಎಸ್. ಕಾರ್ಣಿಕ್ ತಿಳಿಸಿದರು.
 ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಅವರ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ನ್ಯಾಯವಾದಿಗಳಾದ ಮಹೇಶ್ ಜೇಠ್ಮಲಾನಿ ಹಾಗೂ ಸುಭಾಷ್ ಝಾ ಅವರು ಸಲ್ಲಿಸಿದ ಎರಡು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳ ಆಲಿಕೆಯ ಸಂದರ್ಭ ನ್ಯಾಯಪೀಠವು ಈ ಅಭಿಪ್ರಾಯವನ್ನು ಮೌಖಿಕವಾಗಿ ವ್ಯಕ್ತಪಡಿಸಿತು.
ಸ್ಪೀಕರ್ ಅವರ ನೇಮಕಾತಿ ಪ್ರಕ್ರಿಯೆಯು, ಸಂವಿಧಾನದ 14ನೇ ವಿಧಿಯು ಕೊಡಮಾಡಿರುವ ಕಾನೂನಿನ ಮುಂದೆ ಸಮಾನತೆಯ ಕುರಿತಾದ ಪೌರರ ಹಕ್ಕಿನ ಉಲ್ಲಂಘನೆಯಾಗಿಲ್ಲವೆಂದು ನ್ಯಾಯಾಲಯವು ಸುರ್ದೀಘ ಆಲಿಕೆಯ ಬಳಿಕ ಅರ್ಜಿಗಳನ್ನು ವಜಾಗೊಳಿಸಿತು.
ಸಲ್ಲಿಕೆಯಾಗಿರುವ ಎರಡು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳ ಪೈಕಿ ಒಂದನ್ನು ಬಿಜೆಪಿ ಶಾಸಕ ಗಿರೀಶ್ ಮಹಾಜನ್ ಸಲ್ಲಿಸಿದ್ದು, ಅವರ ಪರವಾಗಿ ಮಹೇಶ್ ಜೇಠ್ಮಲಾನಿ ವಾದ ಮಂಡಿಸಿದ್ದರು. ಡಿಸೆಂಬರ್ 2021ರಲ್ಲಿ ಕಾನೂನುತಿದ್ದುಪಡಿಯೊಂದರ ಮೂಲಕ ಜಾರಿಗೊಳಿಸಲಾಗಿರುವ ಪ್ರಕ್ರಿಯೆಯಲ್ಲಿ ಸ್ಪೀಕರ್ ಆಯ್ಕೆಯ ಬಗ್ಗೆ ಮುಖ್ಯಮಂತ್ರಿಗೆ ಮಾತ್ರವೇ ರಾಜ್ಯಪಾಲರಿಗೆ ಸಲಹೆ ನೀಡುವ ಅಧಿಕಾರ ಹೊಂದಿರುವುದು ಅಸಂವಿಧಾನಿಕವೆಂದು ಅವರು ವಾದಿಸಿದ್ದರು. ಸ್ಪೀಕರ್ ಅವರ ಆಯ್ಕೆಯಲ್ಲಿ ರಾಜ್ಯಪಾಲರಿಗೆ ಸಚಿವ ಮಂಡಳಿಯ ಸಲಹೆ ನೀಡಬೇಕೆ ಹೊರತು ಮುಖ್ಯಮಂತ್ರಿಯೊಬ್ಬರೇ ಅಲ್ಲವೆಂದು ಅವರು ಪ್ರತಿಪಾದಿಸಿದ್ದರು.


ಈ ವಿಷಯದ ಬಗ್ಗೆ ನ್ಯಾಯಾಲಯ ಮಧ್ಯಪ್ರವೇಶಿಸದೆ ಇದ್ದಲ್ಲಿ, ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿಯನ್ನು ರಕ್ಷಿಸಲು ವಿಫಲವಾದಂತಾಗುವುದು ಎಂದು ಜೇಠ್ಮಲಾನಿ ಹೇಳಿದ್ದರು. ವಿಧಾನಸಭೆಯ ಸ್ಪೀಕರ್ ಅವರ ಆಯ್ಕೆಯಿಂದ ಸಾರ್ವಜನಿಕರು ಬಾಧಿತರಾಗಲಿದ್ದಾರೆಂಬ ಭಾವನೆಯನ್ನು ಮೂಡಿಸಲು ಅರ್ಜಿದಾರರು ಶ್ರಮಿಸಿದ್ದಾರೆಂದು ಹೈಕೋರ್ಟ್ ಹೇಳಿದೆ.


ವಿಧಾನಸಭೆಯ ಸ್ಪೀಕರ್ ಯಾರಾಗಲಿದ್ದಾರೆಂಬ ಬಗ್ಗೆ ಸಾರ್ವಜನಿಕರು ಕನಿಷ್ಠ ಆಸಕ್ತಿಯನ್ನು ಹೊಂದಿದ್ದಾರೆ. ಲೋಕಸಭೆಯ ಸ್ಪೀಕರ್ ಯಾರೆಂಬುದನ್ನು ಸಾರ್ವಜನಿಕರಲ್ಲಿ ಕೇಳಿ, ಅದಕ್ಕೆ ಎಷ್ಟು ಜನ ಉತ್ತರಿಸಿಯಾರು?. ಈ ನ್ಯಾಯಾಲಯಲ್ಲಿರುವ ಎಷ್ಟು ಮಂದಿ ಈ ಪ್ರಶ್ನೆಗೆ ಉತ್ತರಿಸಿಯಾರು ಎಂದು ಹೈಕೋರ್ಟ್ ಪ್ರಶ್ನಿಸಿತು.


ಸ್ಪೀಕರ್ ಕೇವಲ ವಿಧಾನಸಭೆಯ ಸದಸ್ಯರಷ್ಟೇ. ಅದರಲ್ಲಿ ಸಾರ್ವಜನಿಕ ಹಿತಾಸಕ್ತಿಯೇನು ಬಂತು ಎಂದು ನ್ಯಾಯಾಲಯ ಪ್ರಶ್ನಿಸಿತು.
ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿದ್ದ ನಾನಾ ಪಟೋಲೆ ಅವರು ಕಳೆದ ವರ್ಷ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡ ಬಳಿಕ, ಆ ಹುದ್ದೆಯು ಖಾಲಿ ಬಿದ್ದಿದೆ.


ರಾಜ್ಯಪಾಲರ ಖೋಟಾದಲ್ಲಿ ರಾಜ್ಯ ವಿಧಾನಪರಿಷತ್ನ 12 ಮಂದಿ ಸದಸ್ಯರ ನಾಮಕರಣದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ನಡುವೆ ಉಂಟಾಗಿದ್ದ ಬಿಕ್ಕಟ್ಟನ್ನು ಕೂಡಾ ಹೈಕೋರ್ಟ್ ಆಲಿಕೆಯ ಸಂದರ್ಭದಲ್ಲಿ ಪ್ರಸ್ತಾವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News