ಸಿಎಂ ಹುದ್ದೆಗೆ ಲಾಬಿ: ಉತ್ತರಾಖಂಡ ಬಿಜೆಪಿ ಮುಖಂಡರು ದೆಹಲಿಗೆ ದೌಡು

Update: 2022-03-14 02:09 GMT
ಪುಷ್ಕರ್ ಸಿಂಗ್ ಧಾಮಿ

ಡೆಹ್ರಾಡೂನ್: ಉತ್ತರಾಖಂಡ ರಾಜ್ಯವನ್ನು ಸತತ ಎರಡನೇ ಬಾರಿ ಆಳ್ವಿಕೆ ಮಾಡಲು ಜನಾದೇಶ ಪಡೆದ ಬಿಜೆಪಿಯಲ್ಲಿ ಇದೀಗ ಸಿಎಂ ಹುದ್ದೆಗೆ ಪೈಪೋಟಿ ತೀವ್ರವಾಗಿದೆ.

ಕಳೆದ ಅವಧಿಯಲ್ಲಿ ಸಿಎಂ ಆಗಿದ್ದ ಪುಷ್ಕರ್ ಸಿಂಗ್ ಧಾಮಿ ಪಕ್ಷವನ್ನು ಗೆಲುವಿನ ದಡ ಸೇರಿಸಿದರೂ, ತಮ್ಮ ಕ್ಷೇತ್ರದಲ್ಲಿ ಪರಾಭವಗೊಂಡ ಹಿನ್ನೆಲೆಯಲ್ಲಿ ಮುಂದಿನ ಸಿಎಂ ಯಾರಾಗಬೇಕು ಎಂಬ ಬಗ್ಗೆ ಪಕ್ಷದ ಮುಖಂಡರಲ್ಲಿ ಇನ್ನೂ ಗೊಂದಲ ಇದೆ. ಏತನ್ಮಧ್ಯೆ ಹಲವು ಮಂದಿ ಮುಖಂಡರು ಪಕ್ಷದ ಹಿರಿಯ ಮುಖಂಡರ ಜತೆ ಚರ್ಚೆಗಾಗಿ ದೆಹಲಿಗೆ ಧಾವಿಸಿದ್ದಾರೆ.

ಕಳೆದ ಎರಡು ದಿನಗಳಿಂದಲೂ ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಮುಖಂಡರು ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮದನ್ ಕೌಶಿಕ್, ಸತ್ಯಪಾಲ್ ಮಹಾರಾಜ್ ಹಾಗೂ ಅಜಯ್ ಭಟ್ ಅವರು ರಾಜ್ಯದ ಅತ್ಯುನ್ನತ ಹುದ್ದೆಗೆ ತೀವ್ರ ಲಾಬಿ ನಡೆಸಿದ್ದಾರೆ. ಈ ಮಧ್ಯೆ ಧಾಮಿ ಅವರಿಗೆ ಕೂಡಾ ಬೆಂಬಲ ಹೆಚ್ಚುತ್ತಿದೆ. ಹಲವು ಮಂದಿ ಹೊಸ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರು ರವಿವಾರ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸುತ್ತಿದ್ದುದು ಕಂಡುಬಂತು.

ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧ. ಬಿಜೆಪಿ ರಾಜ್ಯದಲ್ಲಿ ಗೆದ್ದಿರುವುದರಿಂದ ಮೋದಿಯವರ ನಾಯಕತ್ವದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಜನ ಒಪ್ಪಿಕೊಂಡಿದ್ದಾರೆ ಎಂಬ ಅರ್ಥ ಎಂದು ಧಾಮಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸ್ಪಷ್ಟಪಡಿಸಿದರು.

"ನಾನು ಪಕ್ಷದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತ. ಯಾವ ಆಡಳಿತಾತ್ಮಕ ಹುದ್ದೆ ಹೊಂದಿರದಿದ್ದ ಸಂದರ್ಭದಲ್ಲಿ ಕೂಡಾ ಪಕ್ಷದ ಮುಖಂಡರು ನನ್ನನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಿದ್ದರು" ಎಂದು ಹೇಳಿದರು.

ಇಡೀ ರಾಜ್ಯದ ಕಡೆ ಗಮನ ಹರಿಸಬೇಕಾದ ಕಾರಣದಿಂದ ತಮ್ಮ ಸ್ವಂತ ಕ್ಷೇತ್ರ ಖತೀಮಾ ಬಗ್ಗೆ ಗಮನ ಕೊಡುವುದು ಸಾಧ್ಯವಾಗಲಿಲ್ಲ ಎಂದು ಧಾಮಿ ನಾಯಕತ್ವವನ್ನು ಸಮರ್ಥಿಸಲಾಗುತ್ತಿದೆ. "ಖರೀತಾ ಮತದಾರರ ಆದೇಶವನ್ನು ನಾನು ಒಪ್ಪಿಕೊಳ್ಳುತ್ತೇನೆ. ರಾಜ್ಯದ ಜನರ ಅಭಿವೃದ್ಧಿಗೆ ಕಾರ್ಯ ಮುಂದುವರಿಸುತ್ತೇನೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News