ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ: ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್

Update: 2022-03-15 18:41 GMT

ಬೆಂಗಳೂರು, ಮಾ.15: ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ವಸ್ತ್ರಸಂಹಿತೆಯನ್ನು ಪ್ರಶ್ನಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಜತೆಗೆ ಹಿಜಾಬ್ ಪರ ಸಲ್ಲಿಸಿದ್ದ ಎಲ್ಲ ರಿಟ್ ಅರ್ಜಿಗಳನ್ನು ವಜಾಗೊಳಿಸಿದೆ.

ಹಿಜಾಬ್ ನಿರ್ಬಂಧಿಸಿದ್ದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವ ತ್ರಿಸದಸ್ಯ ನ್ಯಾಯಪೀಠ ಮಂಗಳವಾರ ತೀರ್ಪು ಪ್ರಕಟಿಸಿದೆ.

ಸರಕಾರದ ಆದೇಶ ಕಾನೂನುಬದ್ಧವಾಗಿದೆ. ಹಿಜಾಬ್ ಇಸ್ಲಾಮ್ ನ ಅತ್ಯಗತ್ಯ ಭಾಗವಲ್ಲ ಎಂಬ ತೀರ್ಪುನ್ನು ಹೈಕೋರ್ಟ್ ನೀಡಿದೆ.

ಹಿಜಾಬ್‌ ಧರಿಸಲು ಅವಕಾಶ ನೀಡುವುದು, ನೀಡದಿರುವುದು ಆಯಾ ಶಿಕ್ಷಣ ಸಂಸ್ಥೆಗಳಿಗೆ ಬಿಟ್ಟ ವಿಚಾರ ಎಂದು ತೀರ್ಪು ಹೇಳಿದೆ.
ಸರ್ಕಾರಿ ಶಾಲೆಯಲ್ಲಿ ಸರ್ಕಾರ ನಿಗದಿಪಡಿಸಿರುವ ನಿಯಮ ಪಾಲಿಸಬೇಕು, ಖಾಸಗಿ ಸಂಸ್ಥೆಗಳಲ್ಲಿ ಅದರ ಆಡಳಿತ ಮಂಡಳಿ ನಿಗದಿಪಡಿಸಿದ ಹಾಗೂ ಪಿಯು ಕಾಲೇಜುಗಳಲ್ಲಿ ಪಿಯು ಶಿಕ್ಷಣ ಇಲಾಖೆ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ನಿಗದಿ ಪಡಿಸಿದ ಸಮವಸ್ತ್ರ ಧರಿಸಬೇಕು ಎಂದು ಕೋರ್ಟ್‌ ತೀರ್ಪು ಹೇಳಿದೆ.

ವಸ್ತ್ರ ಸಂಹಿತೆ ಇಲ್ಲದ ಸಂಸ್ಥೆಗಳಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಪಡಿಸುವಂತೆ ಹಾಗೂ ಸಮಾನತೆ ಮತ್ತು ಸಮಗ್ರತೆಗೆ ಧಕ್ಕೆ ತರುವಂತಹ ವಸ್ತ್ರ ಧರಿಸಬಾರದು ಎಂದು ಕೋರ್ಟ್‌ ಹೇಳಿದೆ.

-----------------------------------------------

ಪ್ರತಿಕ್ರಿಯೆಗಳು

ಸಂವಿಧಾನದ ಪೀಠಿಕೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ 

ಶಾಲಾ-ಕಾಲೇಜು ತರಗತಿಗಳಲ್ಲಿ ಹಿಜಾಬ್ ಧರಿಸುವಿಕೆ ನಿರ್ಬಂಧ ಎತ್ತಿ ಹಿಡಿದಿರುವ ಹೈಕೋರ್ಟ್ ತೀರ್ಪುನ್ನು ನಾವು ಸ್ವಾಗತಿಸುತ್ತೇವೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದು ಮೂಲಭೂತ ಹಕ್ಕಲ್ಲ ಎಂದು ವಾದ ಮಂಡನೆ ಮಾಡಿದ್ದೆವು. ಸಂವಿಧಾನದ ಪೀಠಿಕೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

-ಪ್ರಭುಲಿಂಗ ನಾವದಗಿ, ರಾಜ್ಯ ಸರಕಾರ ಅಡ್ವೋಕೇಟ್ ಜನರಲ್ 

ವಿಚಾರ ಮಾಡಿ ನೋಡುತ್ತೇವೆ

ಹೈಕೋರ್ಟ್ ಸರಕಾರದ ಆದೇಶ ಸರಿ ಇದೆ ಎಂದಿದೆ. ನಮ್ಮ ರಿಟ್ ಜೊತೆ ಬೇರೆ ಎಲ್ಲ ರಿಟ್ ಅರ್ಜಿಗಳು ವಜಾ ಆಗಿವೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಹೋಗಬೇಕಾ, ಬೇಡ್ವಾ ಅಂತ ವಿಚಾರ ಮಾಡಿ ನೋಡುತ್ತೇವೆ. ಈಗಲೇ ಏನೂ ಹೇಳಲು ಆಗುವುದಿಲ್ಲ. ಆದೇಶದಲ್ಲಿರುವ ಅಂಶಗಳನ್ನು ನೋಡಿ ಮುಂದೆ ಯಾವ ರೀತಿ ಕಾನೂನು ಹೋರಾಟ ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ.

-ಶತಬೀಶ್ ಶಿವಣ್ಣ, ಅರ್ಜಿದಾರರ ಪರ ವಕೀಲ 

ಯಾವ ಹೇಳಿಕೆಯನ್ನೂ ನೀಡಬೇಡಿ: ಶಿಕ್ಷಣ ಇಲಾಖೆ ಮೌಖಿಕ ಆದೇಶ

ಹಿಜಾಬ್ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ಕೊಡದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮೌಖಿಕ ಆದೇಶ ಹೊರಡಿಸಿದೆ. ತೀರ್ಪು ಪ್ರಕಟವಾಗುವುದಕ್ಕೂ ಮುನ್ನ, ರಾಜ್ಯದ ಎಲ್ಲ ಶಾಲೆಗಳಿಗೆ ಅನ್ವಯಿಸುವಂತೆ ಶಿಕ್ಷಕರು, ಮಕ್ಕಳು ಹಾಗೂ ಶಾಲಾ ಆಡಳಿತ ಮಂಡಳಿಯವರು ಹೇಳಿಕೆ ನೀಡದಂತೆ ಆಯಾ ವಲಯದ ಡಿಡಿಪಿಐಗಳಿಂದ ಮೊಬೈಲ್ ಸಂದೇಶದ ಮೂಲಕ ಮಾಹಿತಿ ನೀಡಲಾಗಿತ್ತು.

ನಮ್ಮ ಹಕ್ಕು ನಾವು ಪಡೆಯುತ್ತೇವೆ 

ಕಾನೂನಾತ್ಮಕವಾಗಿ ನಾವು ನಮ್ಮ ಹಕ್ಕನ್ನು ಪಡೆದುಕೊಳ್ಳುತ್ತೇವೆ. ಹೈಕೋರ್ಟ್ ತೀರ್ಪು ಬಂದಿದ್ದು, ಮೂರು ಮಂದಿ ನ್ಯಾಯಾಧೀಶರ ಪೈಕಿ ಒಬ್ಬರು ಮುಸ್ಲಿಮ್ ಜಡ್ಜ್ ಕೂಡ ಇದ್ದರು. ಯಾವ ಆಧಾರದ ಮೇಲೆ ತೀರ್ಪು ಕೊಟ್ಟಿದ್ದಾರೆ ಎನ್ನುವುದು ಗೊತ್ತಿಲ್ಲ. ಕುರಾನ್‍ನಲ್ಲಿ ಹಿಜಾಬ್ ಕಡ್ಡಾಯ ಎಂದು ಹೇಳಿದೆ. ಹೀಗಾಗಿ, ಕಾನೂನಾತ್ಮಕವಾಗಿ ನಾವು ನಮ್ಮ ಹಕ್ಕನ್ನು ಪಡೆಯುತ್ತೇವೆ.

- ಮೌಲಾನ ಶಾಫಿ ಸಅದಿ, ವಕ್ಫ್ ಬೋರ್ಡ್ ಅಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News