ಚುನಾವಣೆಗಳು ಪ್ರಜಾತಂತ್ರವನ್ನು ಸೋಲಿಸುತ್ತಿವೆಯೇ?

Update: 2022-03-16 06:58 GMT

ಭಾಗ-1

ಮೋದಿ-ಯೋಗಿ ಪ್ರತಿನಿಧಿಸುವ ಭಾರತೀಯ ಫ್ಯಾಶಿಸಂ ಅನ್ನು ಸಂಸದೀಯ ವಿರೋಧ ಪಕ್ಷಗಳ ಮೂಲಕ ಚುನಾವಣೆ ರಂಗದಲ್ಲಿ ಸೋಲಿಸಬಹುದೆಂದುಕೊಂಡಿದ್ದ ಹಲವರ ಬಯಕೆಗಳು 2019ರಲ್ಲೂ ವಾಸ್ತವಿಕವಾಗಿರಲಿಲ್ಲ. ಈಗಲೂ ವಾಸ್ತವಿಕವಾಗಿಲ್ಲ ಎಂಬುದನ್ನೇ ಈ ಫಲಿತಾಂಶಗಳು ಸಾಬೀತು ಪಡಿಸುತ್ತವೆ. ಹೀಗಾಗಿ ನಮ್ಮ ವ್ಯಕ್ತಿನಿಷ್ಠ ಆಲೋಚನೆಗಳನ್ನು ಹಾಗೂ ಬಯಕೆಗಳನ್ನು ಪಕ್ಕಕ್ಕಿಟ್ಟು ಮೋದಿ-ಯೋಗಿ ಫ್ಯಾಶಿಸಂ ಇಷ್ಟೆಲ್ಲ ಅನನುಕೂಲಕರ ಪರಿಸ್ಥಿತಿಗಳಲ್ಲೂ ಪಡೆದ ಚುನಾವಣಾ ಜಯದ ಹಿಂದಿರುವ ವಾಸ್ತವಗಳನ್ನು ಹಾಗೂ ವಿರೋಧ ಪಕ್ಷಗಳ ವೈಫಲ್ಯಗಳ ವಾಸ್ತವಗಳನ್ನು ‘‘ಹೇಗಿದೆಯೋ ಹಾಗೆ’’ ಅರ್ಥಮಾಡಿಕೊಳ್ಳಬೇಕು. ಹಾಗೂ ಆ ವೈಜ್ಞಾನಿಕ ಗ್ರಹಿಕೆಯು ಕೊಡುವ ವಿವೇಕದಿಂದಲೇ ಫ್ಯಾಶಿಸಂ ಅನ್ನು ಹೇಗೆ ಮಣಿಸಬಹುದೆಂಬ ಪ್ರಬಲ ಪ್ರತಿರೋಧವು ಪುನರುಜ್ಜೀವಗೊಳ್ಳಬೇಕು.

ಐದು ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿಯು ನಾಲ್ಕರಲ್ಲಿ ಗೆಲುವನ್ನು ‘ಸಾಧಿಸಿದೆ’. ಅದರಲ್ಲೂ ಉತ್ತರಪ್ರದೇಶದಲ್ಲಿ ಮೊದಲಿಗಿಂತ ಹೆಚ್ಚಿನ ವೋಟುಗಳನ್ನು ಪಡೆದುಕೊಂಡು ಸ್ಪಷ್ಟ ಬಹುಮತದಿಂದಲೇ ಅಧಿಕಾರಕ್ಕೆ ಮರಳಿದೆ. ಈ ಫಲಿತಾಂಶಗಳು ಈ ದೇಶದ ಭವಿಷ್ಯದ ಬಗ್ಗೆ, ಪ್ರಜಾತಂತ್ರ, ಸಮಾನತೆ, ಬಹುತ್ವ, ಮನುಷ್ಯತ್ವ ಇನ್ನಿತ್ಯಾದಿಗಳ ಬಗ್ಗೆ ಕಾಳಜಿಯುಳ್ಳವರಲ್ಲಿ (2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಸೃಷ್ಟಿಸಿದ ಆತಂಕಕ್ಕಿಂತಲೂ) ಹೆಚ್ಚಿನ ಆತಂಕವನ್ನು ಸಕಾರಣವಾಗಿಯೇ ಸೃಷ್ಟಿಸಿದೆ. ಏಕೆಂದರೆ ಈ ಗೆಲುವು ಸಾರಾಂಶದಲ್ಲಿ ಮೋದಿ-ಯೋಗಿ ನೇತೃತ್ವದ ದ್ವೇಷರಾಜಕಾರಣಕ್ಕೆ ಹೆಚ್ಚೆಚ್ಚು ಜನಸಾಮಾನ್ಯರು ಬಲಿಯಾಗುತ್ತಿರುವ ಸಂಕೇತವೂ ಆಗಿದೆ ಹಾಗೂ ಭಾರತ ಇನ್ನಷ್ಟು ಗಟ್ಟಿಯಾಗಿ ಫ್ಯಾಶಿಸಂನ ತೆಕ್ಕೆಗೆ ಸಿಲುಕುತ್ತಿರುವ ಪರಿಣಾಮವೂ ಆಗಿದೆ. ಏಕೆಂದರೆ 2019ರಲ್ಲಿ ಮೋದಿ ಸರಕಾರ 2014ಕ್ಕಿಂತಲೂ ಹೆಚ್ಚು ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ ಇನ್ನಷ್ಟು ವೇಗವಾಗಿ ಹಾಗೂ ಯೋಜಿತವಾಗಿ ಸಾಂವಿಧಾನಿಕ ಪ್ರಜಾಪ್ರಭುತ

್ವವನ್ನು ನಾಶಮಾಡುತ್ತಿವೆ ಮತ್ತು ಕಾರ್ಪೊರೇಟ್-ಬ್ರಾಹ್ಮಣ್ಯದ ಆಶಯದ ಹಿಂದುತ್ವ ರಾಷ್ಟ್ರವನ್ನು ಅರ್ಥಾತ್ ಭಾರತೀಯ ಫ್ಯಾಶಿಸಂ ಅನ್ನು ಹಂತಹಂತವಾಗಿ ಕಟ್ಟಲು ಹೊರಟಿದೆ. ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ಸುಳ್ಳುಗಳನ್ನು ಹರಡುತ್ತಾ, ದ್ವೇಷವನ್ನು ಯೋಜಿತವಾಗಿ ಸಂಘಟಿಸುತ್ತಾ, ಜನಸಾಮಾನ್ಯರನ್ನೇ ತನ್ನ ಕಾಲಾಳುಗಳನ್ನಾಗಿ ಮಾಡಿಕೊಳ್ಳುತ್ತಿದೆ. ಈ ತೀವ್ರ ದ್ವೇಷದಾಳಿಗಳ ಪರಿಣಾಮವನ್ನೂ ಈ ದೇಶ ಕಳೆದ ಎಂಟು ವರ್ಷಗಳಿಂದ ಪ್ರತಿನಿತ್ಯ ಅನುಭವಿಸುತ್ತಿದೆ. ನ್ಯಾಯಾಂಗವನ್ನು ಮಣಿಸಿ ಕಟ್ಟುತ್ತಿರುವ ರಾಮಮಂದಿರ, ಕಾಶ್ಮೀರದ ಜನರ ಘನತೆಗೆ ಅವಮಾನ ಮಾಡಲೆಂದೇ ರದ್ದು ಮಾಡಿದ ಆರ್ಟಿಕಲ್-370, ಈ ದೇಶದ ಮುಸ್ಲಿಮರ ನಾಗರಿಕತ್ವವನ್ನೇ ನಿರಾಕರಿಸುವ ಸಿಎಎ-ಎನ್‌ಆರ್‌ಸಿ, ಎಲ್ಲಾ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಕೇಸರೀಕರಣ-ಆರೆಸ್ಸೆಸೀಕರಣ, ನೋಟುನಿಷೇಧ, ಜಿಎಸ್‌ಟಿ ಜಾರಿ ಮತ್ತು ಕೋವಿಡ್ ಸಂದರ್ಭದ ಅವೈಜ್ಞಾನಿಕ ಲಾಕ್‌ಡೌನ್‌ಗಳೆಂಬ ತ್ರಿಶೂಲಗಳ ಮೂಲಕ ದೇಶದ ಆರ್ಥಿಕತೆಯ ಮೇಲೆ ದಾಳಿ ಮಾಡಿ ಈ ದೇಶದ ಬಡಮಧ್ಯಮ ವರ್ಗದ ಬೆನ್ನುಮೂಳೆಯನ್ನು ಮುರಿದದ್ದು, ದೇಶವು ಕಳೆದ 70 ವರ್ಷಗಳಿಂದ ಗಳಿಸಿದ ಆಸ್ತಿ-ಪಾಸ್ತಿಗಳೆಲ್ಲವನ್ನೂ ತಮ್ಮ ಖಾಸಾ ಕಾರ್ಪೊರೇಟ್ ಮಿತ್ರರಿಗೆ ದುಗ್ಗಾಣಿ ಬೆಲೆಗೆ ಖಾಸಗೀಕರಿಸಿದ್ದು, ಇವೆಲ್ಲವನ್ನೂ ಪ್ರಶ್ನಿಸಿದರೆ ದೇಶದ್ರೋಹವೆಂಬ ಪಟ್ಟಿ ಕಟ್ಟಿ ಜೈಲಿಗೆ ತಳ್ಳುವುದು, ಬೀದಿಯಲ್ಲಿ ಕೊಲ್ಲುವುದು..

ಈ ಎಲ್ಲಾ ವಿಧ್ವಂಸಕ ರಾಜಕಾರಣ ಹೆಚ್ಚಾಗಿ ಬಲಿ ತೆಗೆದುಕೊಂಡಿದ್ದು ಉತ್ತರ ಪ್ರದೇಶವನ್ನೇ. 2017ರಲ್ಲಿ ಯೋಗಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಅಲ್ಲಿ ಮೋದಿ-ಯೋಗಿಗಳ ಜಂಟಿ ಬುಲ್ಡೋಜರುಗಳು ದಲಿತ-ಮುಸ್ಲಿಮರ ಮೇಲೆ ನಿರಂತರವಾಗಿ ನಡೆಸುತ್ತಿರುವ ಪೊಲೀಸ್ ದೌರ್ಜನ್ಯ, ಅವರ ಕೃಪಾಶ್ರಯದಲ್ಲಿ ಸಂಘೀ ಹಂತಕರ ಲಿಂಚಿಂಗ್‌ಗಳು, ಕೋವಿಡ್ ಸಂದರ್ಭದಲ್ಲಿ ಸರಕಾರಿ ನಿರ್ಲಕ್ಷತೆ, ಗಂಗೆಯಲ್ಲಿ ತೇಲಿದ ಹೆಣಗಳು, ವಲಸೆ ಕಾರ್ಮಿಕರ ಸುಟ್ಟ ಕನಸುಗಳು, ನಿರುದ್ಯೋಗ, ಹಣದುಬ್ಬರ..ಒಂದೇ, ಎರಡೇ.. ಈ ಎಲ್ಲಾ ಕಾರಣದಿಂದ ಈ ದೇಶದ ಭವಿಷ್ಯದ ಬಗ್ಗೆ ನೈಜ ಕಾಳಜಿಯುಳ್ಳ ಎಲ್ಲಾ ಜನರು ಈ ಬಾರಿ ಕನಿಷ್ಠ ಪಕ್ಷ ಉತ್ತರ ಪ್ರದೇಶ ಚುನಾವಣೆಗಳು ಪಾಠಕಲಿಸಬಹುದೆಂದು ನಿರೀಕ್ಷಿಸಿದ್ದರು. ಪಂಜಾಬ್‌ನಲ್ಲಿ ಹೇಗಿದ್ದರೂ ಬಿಜೆಪಿಗೆ ಮೊದಲಿಂದಲೂ ಬಲವಿಲ್ಲ. ಇನ್ನು ಉತ್ತರಾಖಂಡದಲ್ಲಂತೂ ಬಿಜೆಪಿಯೊಳಗಿನ ಒಳಜಗಳಗಳೇ ಅದನ್ನು ಸೋಲಿಸಲು ಸಾಕಿತ್ತು. ಗೋವಾ, ಮಣಿಪುರಗಳಲ್ಲಿ ಕುಖ್ಯಾತ ಪಕ್ಷಾಂತರಗಳಿಂದ ಅಧಿಕಾರಕ್ಕೆ ಬಂದಿದ್ದ ಬಿಜೆಪಿಗೆ ಅಲ್ಪಸ್ವಲ್ಪಪಾಠ ಕಲಿಸಬಹುದೇ ಎಂಬ ಕುತೂಹಲವಿತ್ತು. ಅದರಲ್ಲೂ ಉತ್ತರ ಪ್ರದೇಶದಲ್ಲಿ ಮೋದಿ ಹಾಗೂ ಯೋಗಿ ಚುನಾವಣಾ ಪ್ರಚಾರಗಳಿಗೂ ಜನರು ತೋರುತ್ತಿದ್ದ ನಿರಾಸಕ್ತಿ, ಅಮಿತ್ ಶಾ, ಸ್ಮತಿ ಇರಾನಿಗಳು ರೋಡ್ ಶೋಗಳನ್ನೇ ಅರ್ಧಕ್ಕೆ ನಿಲ್ಲಿಸಿ ಹಿಂದಿರುಗಿದ್ದು, ಸಮಾಜವಾದಿ ಪಕ್ಷದ ರ್ಯಾಲಿಗಳಲ್ಲಿ ಹಾಗೂ ತಡವಾಗಿಯಾದರೂ ಚುನಾವಣಾ ಕಣಕ್ಕೆ ಧುಮುಕಿದ ಬಿಎಸ್‌ಪಿಯ ಮಾಯಾವತಿಯ ರ್ಯಾಲಿಗಳಲ್ಲಿ ಅಭೂತಪೂರ್ವ ಎನ್ನುವ ಮಟ್ಟಿಗೆ ಜನರು ಸೇರುತ್ತಿದ್ದುದು ಎಲ್ಲವೂ ಜನರ ನಿರೀಕ್ಷೆಗಳನ್ನು ಹೆಚ್ಚು ಮಾಡಿತ್ತು. ಆದರೆ ಚುನಾವಣಾ ಫಲಿತಾಂಶಗಳು ಈ ಎಲ್ಲಾ ನಿರೀಕ್ಷೆಗಳನ್ನು ಹುಸಿಮಾಡಿದೆ. ಇದು ಆತಂಕಗೊಂಡಿರುವ ಕೆಲವರಲ್ಲಿ ಭವಿಷ್ಯದ ಬಗ್ಗೆ ಹತಾಶೆಯನ್ನೂ, ಇನ್ನೂ ಕೆಲವರಲ್ಲಿ ಜನರ ಬಗ್ಗೆಯೇ ಜಿಗುಪ್ಸೆಯನ್ನೂ ಮತ್ತು ಕೆಲವರಲ್ಲಿ ಇವಿಎಂ ಇತ್ಯಾದಿಗಳಲ್ಲಿ ಮೋಸಮಾಡಿರಬಹುದೆಂಬ ಸಂಚು ಸಿದ್ಧಾಂತದ ಬಗ್ಗೆ ನಂಬಿಕೆಯನ್ನೂ ಮೂಡಿಸುತ್ತಿದೆ.

ಭರವಸೆಯ ಆಶಾವಾದ ಮತ್ತು ಭ್ರಮೆಗಳಿಲ್ಲದ ವಾಸ್ತವಿಕತೆ

  

ಆದರೆ ಈ ಬಗೆಯ ಯಾವುದೇ ಹತಾಶ ಭಾವಗಳಿಂದ ಎದುರುಗಿರುವ ಬೃಹತ್ ಸವಾಲನ್ನು ಹಿಮ್ಮೆಟ್ಟಿಸಲಾಗುವುದಿಲ್ಲ. ಇತಿಹಾಸದಲ್ಲಿ ಹಿಂದೊಮ್ಮೆ ಇದೇ ರೀತಿ ಇಡೀ ಯೂರೋಪನ್ನು ಹಿಟ್ಲರ್‌ನ ನಾಝಿಸಂ ಮತ್ತು ಮುಸ್ಸೋಲಿನಿಯ ಫ್ಯಾಶಿಸಂ ಆವರಿಸಿಕೊಂಡು ಜಗತ್ತಿನ ಜನತೆ ವಿಮೋಚನೆಯ ಭರವಸೆಯಿಲ್ಲದ ಹತಾಶೆಯ ಸ್ಥಿತಿಯಲ್ಲಿದ್ದರು. ಆಗ ಮುಸ್ಸೋಲಿನಿಯ ಜೈಲಿನಲ್ಲಿದ್ದ ಮಾರ್ಕ್ಸ್ ವಾದಿ ಚಿಂತಕ ಗ್ರಾಮ್ಸ್ಕಿ ಹೇಳಿದ ಅನುಭವ ಮತ್ತು ವಿವೇಕದ ಮಾತು ಇವತ್ತಿನ ಸಂದರ್ಭಕ್ಕೂ ದಾರಿದೀಪವಾಗಬಹುದು. ಸುತ್ತಲೂ ಕಾರ್ಗತ್ತಲು ಆವರಿಸಿರುವಾಗ ಬೆಳಕನ್ನು ಅರಸಲು ಬೇಕಿರುವುದು ‘‘Pessimism of the intellect and Optimism of the hope’’ಎಂದರೆ ‘‘ಬೌದ್ಧಿಕತೆಯ ನಿರ್ದಾಕ್ಷಿಣ್ಯ ಗ್ರಹಿಕೆ ಮತ್ತು ಭರವಸೆಯ ಆಶಾವಾದ’’ ಎರಡೂ ಇರಬೇಕೆಂದು ಆತ ಹೇಳುತ್ತಾನೆ. ಅದರ ಅರ್ಥವಿಷ್ಟೆ. ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವಾಗ ನಮ್ಮ ಬಯಕೆಗಳನ್ನು ಅದರ ಮೇಲೆ ಆರೋಪಿಸಬಾರದು. ವಾಸ್ತವಗಳ ಕಠಿಣತೆ ಮತ್ತು ಕಠೋರತೆಗಳನ್ನು ಅವು ಹೇಗಿವೆಯೋ ಹಾಗೆ ಅರ್ಥಮಾಡಿಕೊಳ್ಳಬೇಕು. ನಮ್ಮ ಬಯಕೆಗೆ ತಕ್ಕಂತೆ ವಾಸ್ತವಿಕತೆಯನ್ನು ಗ್ರಹಿಸಬಾರದು. ಆ ವಾಸ್ತವಿಕತೆ ನಮ್ಮಲ್ಲಿ ನಿರಾಶವಾದವನ್ನು ಹುಟ್ಟಿಸುವಂತಿದ್ದರೂ ಅದರ ಸ್ವರೂಪವನ್ನು ಮಾತ್ರ ಹೇಗಿದೆಯೋ ಹಾಗೆಯೇ ಗ್ರಹಿಸಬೇಕು.

ಆದರೆ ಅದೇ ಸಮಯದಲ್ಲಿ ವಾಸ್ತವಿಕತೆಗಳು ಹೇಗೇ ಇದ್ದರೂ, ಎಷ್ಟೇ ಭೀಕರವಾಗಿದ್ದರೂ ಅದನ್ನು ಬದಲಿಸಬಹುದೆಂಬ ಆಶಾವಾದ ನಮ್ಮಲ್ಲಿ ಅಂತರ್ಗತವಾಗಿರಬೇಕು. ವಾಸ್ತವದ ವೈಜ್ಞಾನಿಕ ಗ್ರಹಿಕೆಗಳೇ ಬಿಡುಗಡೆಯ ಭರವಸೆಯನ್ನೂ ಹುಟ್ಟಿಸಬೇಕು. ಇವತ್ತಿನ ಪರಿಸ್ಥಿತಿಯಲ್ಲಿ ನಮಗೆ ಈ ವಿವೇಕ ಅತ್ಯಗತ್ಯವಾಗಿದೆ. ಮೋದಿ-ಯೋಗಿ ಪ್ರತಿನಿಧಿಸುವ ಭಾರತೀಯ ಫ್ಯಾಶಿಸಂ ಅನ್ನು ಸಂಸದೀಯ ವಿರೋಧ ಪಕ್ಷಗಳ ಮೂಲಕ ಚುನಾವಣೆ ರಂಗದಲ್ಲಿ ಸೋಲಿಸಬಹುದೆಂದುಕೊಂಡಿದ್ದ ಹಲವರ ಬಯಕೆಗಳು 2019ರಲ್ಲೂ ವಾಸ್ತವಿಕವಾಗಿರಲಿಲ್ಲ. ಈಗಲೂ ವಾಸ್ತವಿಕವಾಗಿಲ್ಲ ಎಂಬುದನ್ನೇ ಈ ಫಲಿತಾಂಶಗಳು ಸಾಬೀತು ಪಡಿಸುತ್ತವೆ. ಹೀಗಾಗಿ ನಮ್ಮ ವ್ಯಕ್ತಿನಿಷ್ಠ ಆಲೋಚನೆಗಳನ್ನು ಹಾಗೂ ಬಯಕೆಗಳನ್ನು ಪಕ್ಕಕ್ಕಿಟ್ಟು ಮೋದಿ-ಯೋಗಿ ಫ್ಯಾಶಿಸಂ ಇಷ್ಟೆಲ್ಲ ಅನನುಕೂಲಕರ ಪರಿಸ್ಥಿತಿಗಳಲ್ಲೂ ಪಡೆದ ಚುನಾವಣಾ ಜಯದ ಹಿಂದಿರುವ ವಾಸ್ತವಗಳನ್ನು ಹಾಗೂ ವಿರೋಧ ಪಕ್ಷಗಳ ವೈಫಲ್ಯಗಳ ವಾಸ್ತವಗಳನ್ನು ‘‘ಹೇಗಿದೆಯೋ ಹಾಗೆ’’ ಅರ್ಥಮಾಡಿಕೊಳ್ಳಬೇಕು. ಹಾಗೂ ಆ ವೈಜ್ಞಾನಿಕ ಗ್ರಹಿಕೆಯು ಕೊಡುವ ವಿವೇಕದಿಂದಲೇ ಫ್ಯಾಶಿಸಂ ಅನ್ನು ಹೇಗೆ ಮಣಿಸಬಹುದೆಂಬ ಪ್ರಬಲ ಪ್ರತಿರೋಧವು ಪುನರುಜ್ಜೀವಗೊಳ್ಳಬೇಕು. ಮೋದಿ-ಯೋಗಿ ಪ್ರತಿನಿಧಿಸುವ ಭಾರತದ ಫ್ಯಾಶಿಸ್ಟರ ಚುನಾವಣಾ ವಿಜಯಕ್ಕೆ ಕಾರಣಗಳು ಮತ್ತು ಅದು ಕಲಿಸುವ ಪಾಠಗಳನ್ನು ಅರ್ಥಮಾಡಿಕೊಳ್ಳುವ ಮುನ್ನ ಚುನಾವಣಾ ಫಲಿತಾಂಶದ ಸ್ವರೂಪವನ್ನು ಒಮ್ಮೆ ಅವಲೋಕಿಸೋಣ. (ಈ ಲೇಖನದಲ್ಲಿ ದೇಶವ್ಯಾಪಿ ಪ್ರಭಾವ ಬೀರಬಲ್ಲ ಉತ್ತರ ಪ್ರದೇಶದ ಚುನಾವಣೆ ಫಲಿತಾಂಶವನ್ನು ಮಾತ್ರ ಪ್ರಧಾನವಾಗಿ ಪರಿಗಣಿಸಲಾಗಿದೆ.)

1. ಬಿಜೆಪಿಯ ವೋಟುಗಳು ಜಾಸ್ತಿಯಾಗಿವೆ.

2017ರ ಚುನಾವಣೆಯಲ್ಲಿ 403 ಸೀಟುಗಳಿರುವ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಪಕ್ಷವು ಶೇ.39.67ರಷ್ಟು ವೋಟುಗಳು ಅಂದರೆ 3.4 ಕೋಟಿ ವೋಟುಗಳೊಂದಿಗೆ 312 ಸೀಟುಗಳನ್ನು ಪಡೆದುಕೊಂಡಿತ್ತು. 2022ರ ಚುನಾವಣೆಯಲ್ಲಿ ಬಿಜೆಪಿಯು 57 ಸೀಟುಗಳನ್ನು ಕಳೆದುಕೊಂಡು 255 ಸೀಟುಗಳನ್ನು ಪಡೆದುಕೊಂಡಿದ್ದರೂ ವೋಟುಗಳನ್ನು 2017ಕ್ಕಿಂತ ಜಾಸ್ತಿ ಪಡೆದುಕೊಂಡಿದೆ. ಈ ಬಾರಿ ಅದು 2017ಕ್ಕಿಂತ ಶೇ.2ರಷ್ಟು ಹೆಚ್ಚು ವೋಟುಗಳನ್ನು (ಶೇ. 41.29) ಅಂದರೆ 3.8 ಕೋಟಿ ಮತಗಳನ್ನು ಪಡೆದುಕೊಂಡಿದೆ. ಅಂದರೆ 2017ಕ್ಕೆ ಹೋಲಿಸಿದರೆ ಬಿಜೆಪಿ ಈ ಹಿಂದೆ ಪಡೆದ ಮತಗಳನ್ನು ಉಳಿಸಿಕೊಂಡಿರುವುದಲ್ಲದೆ ಹೆಚ್ಚುವರಿಯಾಗಿ 40 ಲಕ್ಷ ವೋಟುಗಳನ್ನು ಪಡೆದುಕೊಂಡಿದೆ. 2. ಮೇಲ್ಜಾತಿಗಳೊಂದಿಗೆ ದಲಿತ ಮತ್ತು ಹಿಂದುಳಿದವರೂ ಬಿಜೆಪಿಗೆ ವೋಟುಹಾಕಿದ್ದಾರೆ.

ಉತ್ತರ ಪ್ರದೇಶದ ಸಮಾಜ ರಚನೆಯನ್ನು ಸಾಮಾನ್ಯವಾಗಿ 20(ಮೇಲ್ಜಾತಿ)+20(ದಲಿತರು)+20(ಮುಸ್ಲಿಮರು)+40(ಹಿಂದುಳಿದ ಜಾತಿಗಳು) ಎಂದು ಹೇಳಲಾಗುತ್ತದೆ. 80ರ ದಶಕದವರೆಗೂ ಕಾಂಗ್ರೆಸ್ ಪಕ್ಷ ಈ ಎಲ್ಲಾ ಸಮುದಾಯಗಳಿಂದಲೂ ವೋಟುಗಳನ್ನು ಪಡೆದು ಅಧಿಕಾರಕ್ಕೆ ಬರುತ್ತಿತ್ತು. ಬಿಜೆಪಿಯ ಅಂದಿನ ರೂಪವಾದ ಭಾರತೀಯ ಜನಸಂಘ ಪ್ರಧಾನವಾಗಿ ಮೇಲ್ಜಾತಿಗಳಲ್ಲಿ ತನ್ನ ನೆಲೆಯನ್ನು ಹೊಂದಿತ್ತು.

 ಆದರೆ ರಾಮಜನ್ಮಭೂಮಿಯ ಹೆಸರಿನಲ್ಲಿ ಬಿಜೆಪಿಯು 90ರ ದಶಕದಲ್ಲಿ ದೇಶಾದ್ಯಂತ ಕೋಮುವಾದಿ ಧ್ರುವೀಕರಣದ ರಾಜಕೀಯವನ್ನು ಪ್ರಾರಂಭಿಸಿದ ಮೇಲೆ ಕೇವಲ ಮೇಲ್ಜಾತಿಗಳ ಪಕ್ಷವಾಗಿದ್ದ ಬಿಜೆಪಿ ಹಿಂದುಳಿದ ಜಾತಿಗಳ ನಡುವೆಯೂ ತನ್ನ ಪ್ರಭಾವವನ್ನು ವಿಸ್ತರಿಸಿಕೊಳ್ಳುತ್ತಾ ಹೋಯಿತು. ಮಂಡಲ್ ಆಯೋಗದ ಜಾರಿಯು ಸಾಕಾರಮಾಡಿದ ಸಾಮಾಜಿಕ ನ್ಯಾಯ ತತ್ವವು ಹಿಂದುಳಿದ ಜಾತಿಗಳಲ್ಲಿ ಮೂಡಿಸಬಹುದಾಗಿದ್ದ ಬ್ರಾಹ್ಮಣಶಾಹಿಯ ವಿರೋಧಿ ಜಾಗೃತಿಯನ್ನು ಕಮಂಡಲದ ಹಿಂದುತ್ವದ ಮೂಲಕ ಹತ್ತಿಕ್ಕಲು ಕೋಮುವಾದಿ ರಾಜಕಾರಣವನ್ನು ಬಿಜೆಪಿ-ಆರೆಸ್ಸೆಸ್ ಯಶಸ್ವಿಯಾಗಿ ಬಳಸಿತು. ಆದರೆ 90ರ ದಶಕದಲ್ಲಿ ಮಂಡಲ್ ಫಲಾನುಭವಿಗಳಾದ ಹಿಂದುಳಿದ ಜಾತಿಗಳಲ್ಲಿ ಬಲಾಢ್ಯರಾದ ಯಾದವ್ ಮತ್ತಿತರ ಸಮುದಾಯಗಳೇ ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಪ್ರವರ್ಧಮಾನಕ್ಕೆ ಬಂದವು. ಅವುಗಳ ರಾಜಕೀಯ ಪಕ್ಷವಾದ ಸಮಾಜವಾದಿ ಪಕ್ಷವೇ (ಎಸ್‌ಪಿ) ಅಧಿಕಾರ ಹಿಡಿಯಿತು. ಅದೇ ಸಮಯದಲ್ಲಿ ಕಾನ್ಶೀರಾಂ ಅವರು ಅಂಬೇಡ್ಕರ್‌ವಾದದ ನೆರಳಲ್ಲಿ ಕಟ್ಟಿದ ಬಹುಜನ ಚಳವಳಿಯೂ ದಲಿತರಲ್ಲಿ ಹೊಸ ರಾಜಕೀಯ ಜಾಗೃತಿಯನ್ನು ಉಂಟುಮಾಡಿತು. ಅದರ ರಾಜಕೀಯ ಕೂಸಾದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಕೂಡಾ ರಾಜಕೀಯವಾಗಿ ಪ್ರಬಲಗೊಂಡಿತು. ಅದರ ಮುಖವಾಗಿ ಮತ್ತು ನಾಯಕಿಯಾಗಿ ಮಾಯಾವತಿ ಹೊರಹೊಮ್ಮಿದರು. ಈ ಹೊಸ ರಾಜಕೀಯ ಸಮೀಕರಣದಿಂದಾಗಿ ಹಿಂದುಳಿದ ಜಾತಿಗಳ, ಮುಸ್ಲಿಮರ ಹಾಗೂ ದಲಿತರ ಬೆಂಬಲಗಳು ಪ್ರಧಾನವಾಗಿ ಎಸ್‌ಪಿ ಮತ್ತು ಬಿಎಸ್‌ಪಿ ಪಕ್ಷಗಳತ್ತ ಸರಿಯಿತು. ಇದರ ಪರಿಣಾಮವಾಗಿ ಒಂದೆಡೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ತಳಹದಿ ಕುಸಿದು ಬಿದ್ದರೆ ಮತ್ತೊಂದೆಡೆ ದಲಿತರಲ್ಲಿ ಮತ್ತು ಹಿಂದುಳಿದ ಜಾತಿಗಳಲ್ಲಿ ಹಿಂದುತ್ವದ ರಾಜಕೀಯದ ಮೂಲಕ ವಿಸ್ತರಿಸುತ್ತಿದ್ದ ಬಿಜೆಪಿಗೆ ತಾತ್ಕಾಲಿಕ ತಡೆಯುಂಟಾಯಿತು. ಆದರೂ ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಬಾಹುಳ್ಯವೂ ಹೆಚ್ಚಿರುವುದರಿಂದ ಬಾಬರಿ ಮಸೀದಿನ್ನು ಕೆಡವುವಂಥ ಹಾಗೂ ಕೋಮುಗಲಭೆಗಳಲ್ಲಿ ಹಿಂದುಳಿದ ಜಾತಿಗಳ ಯುವಕರನ್ನು ಸಂಘಟಿಸುವ ಮೂಲಕ ನಿಧಾನವಾಗಿಯಾದರೂ, ನಿರಂತರವಾಗಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಾ ಹೋಯಿತು. ಆದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಎಸ್‌ಪಿ-ಬಿಎಸ್‌ಪಿ ಪಕ್ಷಗಳು ಬೇರೆಬೇರೆ ಸಂದರ್ಭಗಳಲ್ಲಿ ಅಧಿಕಾರಕ್ಕೆ ಬಂದಾಗ ಹಿಂದುಳಿದವರಲ್ಲಿ ಯಾದವರು (ಎಸ್‌ಪಿ ಪಕ್ಷದ ಮುಖ್ಯಸ್ಥರಾದ ಅಖಿಲೇಶ್ ಯಾದವ್) ಮತ್ತು ದಲಿತರಲ್ಲಿ ಜಾತವರು (ಉಪ್ರದೇಶದ ದಲಿತರಲ್ಲಿ ಜಾತವರ ಪ್ರಮಾಣ ಶೇ. 50ಕ್ಕಿಂತ ಹೆಚ್ಚು ಮತ್ತು ಮಾಯಾವತಿಯವರು ಆ ಸಮುದಾಯಕ್ಕೆ ಸೇರಿದವರು) ಮಾತ್ರ ಹೆಚ್ಚಿನ ಪ್ರಯೋಜನಗಳನ್ನು ಪಡೆದರೇ ವಿನಾ ಜಾತವೇತರ ದಲಿತರಿಗೆ ಹಾಗೂ ಯಾದವೇತರ ಹಿಂದುಳಿದವರಿಗೆ ಹೆಚ್ಚಿನ ಪ್ರಯೋಜನವಾಗಿಲ್ಲ ಎಂಬ ಅಭಿಪ್ರಾಯ ಹಾಗೂ ಅಸಮಾಧಾನ ದಟ್ಟವಾಗುತ್ತಾ ಹೋಯಿತು. ಈ ಅಸಮಾಧಾನವನ್ನು ಬಿಜೆಪಿ ಮತ್ತು ಆರೆಸ್ಸೆಸ್ ಪ್ರಬಲವಾಗಿ ಬಳಸುತ್ತಾ- ಬೆಳಸುತ್ತಾ ಹೋಯಿತು. ಆರೆಸ್ಸೆಸ್ ಘಟಕಗಳು ತಮ್ಮ ದ್ವೇಷಾಧಾರಿತ ಹಿಂದುತ್ವ ರಾಜಕೀಯವನ್ನು ಮತ್ತು ಸಂಘಟನೆಯನ್ನು ಯಾದವೇತರ ಹಿಂದುಳಿದವರು ಮತ್ತು ದಲಿತರ ನಡುವೆ ಯೋಜಿತವಾಗಿ ಕಟ್ಟುತ್ತಾ ಹೋಯಿತು. ಇದನ್ನು ಪ್ರತಿಘಟಿಸಬಹುದಾದ ಯಾವುದೇ ಸಂಘಟನಾತ್ಮಕ-ರಾಜಕೀಯ-ಸೈದ್ಧಾಂತಿಕ ಯೋಜನೆಗಳೇ ಇತರ ವಿರೋಧಪಕ್ಷಗಳಿಗಿರಲಿಲ್ಲ.

ಇದರ ಜೊತೆಗೆ ಯಾದವ್-ಮುಸ್ಲಿಮರ ಕೂಟ ಎಸ್‌ಪಿಯನ್ನು ಸೋಲಿಸಲು ಬಿಜೆಪಿ ಗಟ್ಟಿಯಾಗಿಲ್ಲದಿದ್ದಾಗ ಬಿಎಸ್‌ಪಿಯನ್ನು ಮತ್ತು ಕಾಂಗ್ರೆಸನ್ನು ಸಮರ್ಥಿಸುತ್ತಿದ್ದ ಬ್ರಾಹ್ಮಣ-ಠಾಕೂರ್-ವೈಶ್ಯ ಮೇಲ್ಜಾತಿಗಳು ಬಿಜೆಪಿ ಗಟ್ಟಿಯಾಗುತ್ತಿದ್ದಂತೆ ದೃಢವಾಗಿ ಬಿಜೆಪಿಗೆ ಮರಳಿದವು. ಇವೆಲ್ಲದರ ಪರಿಣಾಮವಾಗಿ 2014ರ ಚುನಾವಣೆಯ ವೇಳೆಗಾಗಲೇ ಬಿಜೆಪಿ ಬಲವಾದ ಮೇಲ್ಜಾತಿ+ಯಾದವೇತರ, ಒಬಿಸಿ+ಜಾತವೇತರ ದಲಿತರ ಜಾತಿ ಸಮೀಕರಣವನ್ನು ಕಟ್ಟಲು ಪ್ರಾರಂಭಿಸಿತ್ತು. ಅದು 2017ರ ಚುನಾವಣೆಯಲ್ಲೂ ಅದಕ್ಕೆ ದೊಡ್ಡಮಟ್ಟದ ಮತಗಳು ಮತ್ತು ಸೀಟುಗಳನ್ನು ಕೊಟ್ಟಿತ್ತು. ಈ ಚುನಾವಣೆಯಲ್ಲೂ ಆ ಸಮೀಕರಣ ಯಾವುದೇ ರೀತಿಯಲ್ಲಿ ಭಗ್ನವಾದಂತಿಲ್ಲ. ಚುನಾವಣೋತ್ತರ ಸಮೀಕ್ಷೆಗಳು ಸ್ಪಷ್ಟಪಡಿಸುವಂತೆ ಶೇ.90ರಷ್ಟು ಮೇಲ್ಜಾತಿಯ ವೋಟುಗಳು ಹಾಗೂ 2017ಕ್ಕಿಂತಲೂ ಹೆಚ್ಚಿನ ಯಾದವೇತರ ಹಿಂದುಳಿದವರ ಹಾಗೂ ಜಾತವೇತರ ದಲಿತರ ವೋಟುಗಳು ಬಿಜೆಪಿಗೆ ಬಿದ್ದಿವೆ. ಈ ಬಾರಿ ಮಾಯಾವತಿಯವರ ಬಿಎಸ್‌ಪಿ ಪಕ್ಷ ಚುನಾವಣೆಯ ತಯಾರಿಯಲ್ಲಿ ತೋರಿದ ಯೋಜಿತ ನಿರ್ಲಕ್ಷದಿಂದಾಗಿಯೂ ಜಾತವರ ವೋಟುಗಳೂ ಬಿಜೆಪಿಗೆ ಸಂದಿರಬಹುದೇ ಎಂಬ ಅಭಿಪ್ರಾಯ ದಟ್ಟವಾಗಿದೆ. ಈ ಬಾರಿ ಎಸ್‌ಪಿ ಪಕ್ಷ ತನ್ನ ಯಾದವ-ಮುಸ್ಲಿಮ್ ಇಮೇಜಿನಿಂದ ಹೊರಬಂದು ಜಾಟ್ ರೈತರಲ್ಲಿ ಬಲವಾದ ನೆಲೆ ಹೊಂದಿರುವ ಆರ್‌ಎಲ್‌ಡಿ ಹಾಗೂ ರಾಜ್ಭರ್, ನಿಶಾದ್ ಇನ್ನಿತರ ಸಣ್ಣಪುಟ್ಟ ಹಿಂದುಳಿದ ಜಾತಿಗಳೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಇದರಿಂದಾಗಿ ಎಸ್‌ಪಿಯ ವೋಟು ಶೇರು ಶೇ.25 ರಿಂದ 32ಕ್ಕೆ ಏರಿದೆ ಹಾಗೂ ಸೀಟುಗಳು ಕೂಡಾ 111ಕ್ಕೆ ಏರಿದೆ. ಆದರೆ ಈ ವೋಟುಗಳು ಪ್ರಧಾನವಾಗಿ ಬಿಜೆಪಿಯ ಸಾಮಾಜಿಕ ನೆಲೆಯಿಂದ ಬಂದ ವೋಟುಗಳಲ್ಲ. ಅವು ಕಾಂಗ್ರೆಸ್ ಮತ್ತು ಬಿಎಸ್‌ಪಿಯಿಂದ ಪಡೆದ ವೋಟುಗಳಾಗಿವೆ.

ಹೀಗಾಗಿ ಸಾರಾಂಶದಲ್ಲಿ ಎಸ್‌ಪಿಯ ವೋಟು ಹೆಗ್ಗಳಿಕೆಯೂ ಬಿಜೆಪಿಯ ಪ್ರಾಬಲ್ಯವನ್ನು ಮುರಿಯಲಾಗಿಲ್ಲ ಮತ್ತು ಬಿಜೆಪಿ ತನ್ನೆಲ್ಲಾ ಆಡಳಿತಾತ್ಮಕ ವೈಫಲ್ಯಗಳ ನಡುವೆಯೂ ಸಮಾಜದ ಎಲ್ಲಾ ಸಮುದಾಯಗಳಲ್ಲಿ ತಾನೂ ಕಟ್ಟಿಕೊಂಡಿದ್ದ ನೆಲೆಯನ್ನು ಗಟ್ಟಿಗೊಳಿಸಿಕೊಂಡಿದೆ ಹಾಗೂ ವಿಸ್ತರಿಸಿದೆ. ಆದ್ದರಿಂದಲೇ 2017ರಲ್ಲಿ ಶೇ. 40ರಷ್ಟಿದ್ದ ಅದರ ವೋಟು ಶೇರು ಶೇ. 42ಕ್ಕೇ ಏರಿದೆ.

(https://scroll.in/article/1019364/35-charts-decoding-the-2022-uttar-pradesh-verdict-bipolarisation-and-bjp-consolidation)

ಅರ್ಥಾತ್ ಯೋಗಿ ಆಡಳಿತದ ಬಗ್ಗೆ ಜನರಲ್ಲಿ ಇದ್ದ ಸಹಜ ಅಸಮಾಧಾನವೂ ಬಿಜೆಪಿ ವಿರೋಧಿ ಆಕ್ರೋಶವಾಗಿ ಪರಿಣಮಿಸಲಿಲ್ಲ.. ಇದು ಹೇಗೆ ಸಾಧ್ಯವಾಯಿತು?

3. ಅತ್ಯಂತ ಬಡ ಹಾಗೂ ಹಿಂದುಳಿದ ಪ್ರದೇಶಗಳಲೂ್ಲ ಬಿಜೆಪಿ ವೋಟುಗಳು ಕಡಿಮೆಯಾಗಿಲ್ಲ.

ಈ ಬೆಳವಣಿಗೆ ಹಿಂದುತ್ವ ರಾಜಕಾರಣದ ಅಸಲಿ ಸವಾಲನ್ನು ದೇಶದ ಮುಂದಿಟ್ಟಿದೆ. ಈ ದೇಶದಲ್ಲಿ ಅತ್ಯಂತ ಹಿಂದುಳಿದ ಹಾಗೂ ಅತ್ಯಂತ ಬಡತನದಲ್ಲಿ ಇರುವ ಪ್ರದೇಶಗಳು ಉತ್ತರ ಪ್ರದೇಶದಲ್ಲಿವೆ. ರೋಹಿಲ್‌ಖಂಡ್, ಬುಂದೇಲ್ ಖಂಡ್, ಪೂರ್ವಾಂಚಲ ಪ್ರದೇಶಗಳೋ ಕೋವಿಡ್, ಆರ್ಥಿಕ ಬಿಕ್ಕಟ್ಟುಗಳಲ್ಲಿ ಅತ್ಯಂತ ನರಳಿದ ಪ್ರದೇಶಗಳು. ಅವು ಬಿಎಸ್‌ಪಿ ಮತ್ತು ಎಸ್‌ಪಿಗಳು ಉ.ಪ್ರದೇಶದ ಇತರೆಡೆಗಿಂತ ಸಾಪೇಕ್ಷವಾಗಿ ಹೆಚ್ಚು ಬಲ ಹೊಂದಿರುವ ಪ್ರದೇಶಗಳು. ಆದರೆ ಈ ಬಾರಿಯೂ ಅಲ್ಲಿ ಬಿಜೆಪಿಯ ‘ಸಾಧನೆ’ ಮೊದಲಿಗಿಂತಲೂ ಉತ್ತಮಗೊಂಡಿದೆ! ಬಿಎಸ್‌ಪಿಯ ವೋಟುಗಳು ಸಮಾನವಾಗಿ ಬಿಜೆಪಿ ಮತ್ತು ಎಸ್‌ಪಿಯು ಹಂಚಿಕೊಂಡಂತಿದೆ.

(https://theprint.in/opinion/bjp-has-the-most-diversified-representation-see-caste-composition-of-new-up-assembly/870693)

ಇದಕ್ಕೆ ಕಾರಣಗಳೇನು?

ಈ ಚುನಾವಣೆಯಲ್ಲಿ ಬಿಜೆಪಿ ಅನುಸರಿಸಿದ ಚುನಾವಣಾ ತಂತ್ರಗಳು ಭಾರತೀಯ ಫ್ಯಾಶಿಸಂ ಅಥವಾ ಚುನಾವಣಾಧಾರಿತ ಫ್ಯಾಶಿಸಂನ ಕಾರ್ಯಯೋಜನೆಗಳ ಮಾದರಿಯಂತಿವೆ. ಮೊದಲನೆಯದಾಗಿ ಮೋದಿ ಸರಕಾರ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಯೋಗಿ ಸರಕಾರ ಅಧಿಕಾರಕ್ಕೆ ಬಂದಮೇಲೆ ತಮ್ಮ ಪ್ರತಿಯೊಂದು ಭಾಷಣ, ಕಾರ್ಯಕ್ರಮ ಹಾಗೂ ಯೋಜನೆಗಳಲ್ಲೂ ಹಿಂದೂ ರಾಷ್ಟ್ರದ ಅರ್ಥಾತ್ ಮುಸ್ಲಿಮ್ ದ್ವೇಷ ಹಾಗೂ ದಲಿತ ಉಪೇಕ್ಷೆಯ ಅಂಶಗಳನ್ನು ಬೆಸೆದುಕೊಂಡೇ ಜಾರಿ ಮಾಡುತ್ತಿದೆ. ಹೀಗಾಗಿ ಉ.ಪ್ರದೇಶದ ಸವರ್ಣೀಯ ಸಮಾಜದಲ್ಲಿ ಮತ್ತು ದಲಿತರ ಒಂದು ವರ್ಗದಲ್ಲೂ ಪ್ರಬಲವಾದ ಮುಸ್ಲಿಮ್ ವಿರೋಧ ಸಹಜವೆಂಬಷ್ಟು ಮಟ್ಟಿಗೆ ಮನೆಮಾಡಿದೆ. ಹಾಗೂ ಬಿಜೆಪಿಯನ್ನು ಹೊರತುಪಡಿಸಿದರೆ ‘‘ಆತಂಕದಲ್ಲಿರುವ’’ ಹಿಂದೂಗಳನ್ನು ಬೇರೆ ಯಾವ ಪಕ್ಷಗಳೂ ಉಳಿಸಲಾರವು ಎಂಬ ಭಾವನೆಯನ್ನು ಮಾಧ್ಯಮಗಳು ಬಿತ್ತಿದರೆ, ಹಳ್ಳಿ ಮಟ್ಟದ ಆರೆಸ್ಸೆಸ್- ಹಿಂದುತ್ವವಾದಿ ಸಂಘಗಳ ಘಟಕಗಳು ಅದನ್ನು ಸಂಘಟಿತ ಅಭಿಪ್ರಾಯವನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗುತ್ತಿವೆ. ಚುನಾವಣೆಯಲ್ಲೂ ಮೋದಿ-ಯೋಗಿಯಿಂದ ಪ್ರಾರಂಭವಾಗಿ ಅತ್ಯಂತ ಹೆಚ್ಚಾಗಿ ಜಿಲ್ಲಾಮಟ್ಟದ ಬಿಜೆಪಿ ನಾಯಕರು ಯಾವುದೇ ಎಗ್ಗುಸಿಗ್ಗಿಲ್ಲದೆ, ಚುನಾವಣಾ ಆಯೋಗದ ಕ್ರಮಳ ಭೀತಿಯಿಲ್ಲದೆ ದ್ವೇಷ ಉಗುಳಿದ್ದಾರೆ

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News