ಚುನಾವಣೆಗಳು ಪ್ರಜಾತಂತ್ರವನ್ನು ಸೋಲಿಸುತ್ತಿವೆಯೇ?

Update: 2022-03-17 05:53 GMT

ಭಾಗ 2

ಸ್ವತಂತ್ರ ಮಾಧ್ಯಮ ಸಂಸ್ಥೆಗಳು ಮಾಡಿರುವ ಅಧ್ಯಯನದ ಪ್ರಕಾರ ಈ ಚುನಾವಣೆಯಲ್ಲಿ ಬಿಜೆಪಿ ನಾಯಕರು ಏನಿಲ್ಲವೆಂದರೂ ನೂರಕ್ಕೂ ಹೆಚ್ಚು ಸಾರಿ ಮುಸ್ಲಿಮ್ ವಿರೋಧಿ ದ್ವೇಷವನ್ನು ಉಗುಳಿದ್ದಾರೆ.

ಈ ಎಲ್ಲಾ ಕಾರಣದಿಂದಾಗಿ ಬಹುಸಂಖ್ಯಾತ ಹಿಂದೂ ಬಡವರಲ್ಲಿ ಯೋಗಿ-ಮೋದಿ ಆಡಳಿತದ ಬಗ್ಗೆ ಅಸಮಾಧಾನವಿದ್ದರೂ, ಅವರ ರ್ಯಾಲಿಗಳಿಗೆ ಹೋಗುವ ಮನಸ್ಸಾಗದಿದ್ದರೂ, ಬಿಜೆಪಿ ವಿರುದ್ಧ ಮತ ಚಲಾಯಿಸುವಷು್ಟ ಮಟ್ಟಿನ ಆಕ್ರೋಶವಾಗಿ ಬದಲಾಗಿಲ್ಲ.

(https://thewire.in/communalism/100-instances-of-hate-speech-religious-polarisation-hindutva-supremacy-in-adityanaths-poll-speeches)

 ಇದರ ಜೊತೆಗೆ ಮೋದಿ-ಯೋಗಿ ಸರಕಾರಗಳು ಕೋವಿಡ್ ಬಿಕ್ಕಟ್ಟನ್ನು ಅತ್ಯಂತ ಸಂವೇದನಾ ಶೂನ್ಯರಾಗಿ ನಿರ್ವಹಿಸಿದ್ದರಿಂದ ಗಂಗಾ ನದಿಯಲ್ಲಿ ಹೆಣಗಳು ತೇಲಿದರೂ, ವಲಸೆ ಕಾರ್ಮಿಕರು ನಿತ್ರಾಣರಾಗಿ ಹಳ್ಳಿಗಳಿಗೆ ಹಿಂದಿರುಗಿದರೂ ಸುಪ್ರೀಂ ಕೋರ್ಟ್ ಹಾಗೂ ಜನರ ಹೋರಾಟಗಳ ಪರಿಣಾಮವಾಗಿ ಬಡವರಿಗೆ ಅಕ್ಕಿ ಹಾಗೂ ಉಚಿತ ವ್ಯಾಕ್ಸಿನ್ ಕೊಡಲಾಯಿತು. ಆದರೆ ಇದನ್ನು ಮೋದಿ ಯಂತ್ರಾಂಗವು ಮೋದಿ ನೇತೃತ್ವದ ಬಿಜೆಪಿ ಜನರಿಗೆ ಮಾಡುತ್ತಿರುವ ಉಪಕಾರ ಎಂಬಂತೆ ಬಿತ್ತರಿಸಿತು. ಈ ಯೋಜನೆಗಳ ಫಲಾನುಭವಿಗಳನ್ನೇ ಚುನಾವಣೆ ಸಮಯದಲ್ಲಿ ಬಿಜೆಪಿ ಲಾಭಾರ್ಥಿಗಳು ಎಂದು ಗುರುತಿಸಿತು. ಅದರಲ್ಲಿ ಎಲ್ಲಾ ಹಿಂದುಳಿದ ಜಾತಿಗಳು ಮತ್ತು ದಲಿತರು ಇದ್ದಿದ್ದರಿಂದ ಅದರಲ್ಲೂ ಮಹಿಳೆಯರು ಪ್ರಧಾನವಾಗಿ ಕುಟುಂಬ ನಡೆಸಲು ಅನುಕೂಲವಾಗಿದ್ದರಿಂದ ಅವರಲ್ಲಿ ಮೋದಿ-ಯೋಗಿಯ ಬಗ್ಗೆ ಋಣಿ ಮನೋಭಾವವನ್ನು ಸೃಷ್ಟಿಸುವಲ್ಲಿ ಬಿಜೆಪಿಯ ಮಾಧ್ಯಮ ಪಡೆ ಯಶಸ್ವಿಯಾಯಿತು. ಈ ಬಾರಿ ಎಲ್ಲಾ ಜಾತಿಯ ಮಹಿಳೆಯರು ಈ ಋಣಿ ಭಾವದಿಂದ ಬಿಜೆಪಿಗೆ ಹೆಚ್ಚಿನ ವೋಟುಗಳನ್ನು ಹಾಕಿದ್ದಾರೆ ಎಂಬುದು ಎಲ್ಲಾ ಚುನಾವಣೋತ್ತರ ಅಧ್ಯಯನಗಳ ಸಾರಾಂಶ. ಇದರ ಜೊತೆಗೆ ಈ ಬಿಕ್ಕಟ್ಟಿನ ಸಮಯದಲ್ಲಿ ಎಸ್‌ಪಿಯನ್ನು ಒಳಗೊಂಡಂತೆ ಯಾವುದೇ ವಿರೋಧ ಪಕ್ಷಗಳು ಜನರ ಜೊತೆ ನಿಂತಿರಲಿಲ್ಲ. ಈ ಅಸಮಾಧಾನ ಕೂಡಾ ಬಿಜೆಪಿಗೆ ವೋಟು ಹಾಕಲು ಕಾರಣವಾಗಿದೆ.

ವಿರೋಧ ಪಕ್ಷಗಳ ರಾಜಕೀಯ ವೈಫಲ್ಯ

ಬಿಜೆಪಿ ಮತ್ತೊಂದು ರಾಜಕೀಯ ಪಕ್ಷವಲ್ಲ. ಆರೆಸ್ಸೆಸ್ ಮತ್ತೊಂದು ಸಂಘಟನೆ ಮಾತ್ರವಲ್ಲ. ಅವಕ್ಕೆ ಹಿಂದುತ್ವದ ಹೆಸರಲ್ಲಿ ಭಾರತದಲ್ಲಿ ಕಾರ್ಪೊರೇಟ್-ಬ್ರಾಹ್ಮಣ್ಯದ ಸಾಮಾಜಿಕ-ರಾಜಕೀಯ ಆಧಿಪತ್ಯವಿರುವ ಭಾರತೀಯ ಫ್ಯಾಶಿಸಂ ಅನ್ನು ಜಾರಿಗೆ ತರುವ ದೂರಕಾಲೀನ ಯೋಜನೆ ಇದೆ. ಅದಕ್ಕೆ ಅವರಿಗೆ ಚುನಾವಣೆಗಳೂ ಒಂದು ಸಾಧನ ಅಷ್ಟೆ.

ಹೀಗಾಗಿ ಭಾರತೀಯ ಫ್ಯಾಶಿಸಂನ ವಿರೋಧಕ್ಕೆ ಸಾಮಾಜಿಕ ನ್ಯಾಯ-ಸಮಾನತೆಗಳ ಆಶಯಗಳಲ್ಲಿ ಆಳವಾದ ತಾತ್ವಿಕ ನಿಷ್ಠೆ, ಅದನ್ನು ಜಾರಿ ಮಾಡುವ ಮತ್ತು ವಿರೋಧಿಗಳಿಂದ ರಕ್ಷಿಸಿಕೊಳ್ಳುವ ರಾಜಕೀಯ- ಸಂಘಟನಾತ್ಮಕ ಸಿದ್ಧತೆ ಇರಬೇಕಾಗುತ್ತದೆ. ಕಾಂಗ್ರೆಸನ್ನೂ ಒಳಗೊಂಡಂತೆ ಎಸ್‌ಪಿಗಾಗಲೀ, ಬಿಎಸ್‌ಪಿಗಾಗಲೀ ಅಥವಾ ಇತರ ಯಾವುದೇ ಸಂಸದೀಯ ವಿರೋಧ ಪಕ್ಷಗಳಿಗಾಗಲೀ ಅಂತಹ ತಾತ್ವಿಕ ಬದ್ಧತೆಗಳೂ ಇಲ್ಲ. ಆಶಯಗಳೂ ಇಲ್ಲ. ಬಿಜೆಪಿಯೇತರ ಪಕ್ಷಗಳಿಂದ ಬಿಜೆಪಿಗೆ ನಡೆಯುವ ಸಲೀಸಾದ ಪಕ್ಷಾಂತರಗಳೇ ಅದಕ್ಕೆ ಸಾಕ್ಷಿ. ಮೇಲಾಗಿ ಈ ‘ವಿರೋಧ ಪಕ್ಷ’ಗಳಿಗೆ ಬಿಜೆಪಿಯ ಹಿಂದುತ್ವ ರಾಜಕಾರಣ ಹಾಗೂ ಕಾರ್ಪೊರೇಟ್ ಆರ್ಥಿಕತೆಗಳನ್ನು ಜಾರಿ ಮಾಡುತ್ತಿರುವ ವೇಗ ಮತ್ತು ಪ್ರಮಾಣಗಳ ಬಗ್ಗೆ ವಿರೋಧ ಇದೆಯಾದರೂ ತಾತ್ವಿಕ ಹಾಗೂ ರಾಜಕೀಯ ವಿರೋಧವಿಲ್ಲ. ಹೀಗಾಗಿ ಹಿಂದುತ್ವ ರಾಜಕಾರಣಕ್ಕೆ ಪರ್ಯಾಯವಾಗಿ ಯಾವುದೇ ಪರ್ಯಾಯ ರಾಜಕೀಯವನ್ನು ಅವರು ಸಮಾಜದ ಮುಂದಿಡಲಾಗುತ್ತಿಲ್ಲ.

ಇತ್ತೀಚಿನ ಚುನಾವಣೆಗಳಲ್ಲೂ ಆರೆಸ್ಸೆಸ್-ಬಿಜೆಪಿ ಮುಂದಿಟ್ಟಿದ್ದ ಕಾರ್ಪೊರೇಟ್-ಹಿಂದುತ್ವ ಅಜೆಂಡಾಗಳ ಚೌಕಟ್ಟಿನೊಳಗೇ ಉಳಿದೆಲ್ಲಾ ವಿರೋಧ ಪಕ್ಷಗಳು ತಮ್ಮ ರಾಜಕೀಯವನ್ನು ಮುಂದಿಟ್ಟವೇ ವಿನಾ ಅದನ್ನು ಮುರಿಯಲು ಮುಂದಾಗಲಿಲ್ಲ. ಕಾಂಗ್ರೆಸ್, ಆಪ್, ಬಿಎಸ್‌ಪಿ, ಎಸ್‌ಪಿ-ಎಲ್ಲಾ ಪಕ್ಷಗಳು ತಾವು ಅಧಿಕಾರಕ್ಕೆ ಬಂದರೆ ಬಿಜೆಪಿಗಿಂತ ವೇಗವಾಗಿ ರಾಮಮಂದಿರ ಕಟ್ಟುತ್ತೇವೆ ಎಂಬ ಭರವಸೆ ನೀಡುವ ಮೂಲಕವೇ ತಮ್ಮ ಪ್ರಚಾರ ಪ್ರಾರಂಭಿಸಿದ್ದು ಇದಕ್ಕೆ ಒಂದು ಉದಾಹರಣೆ.

ಆದ್ದರಿಂದ ಇಂದು ಅರೆಸ್ಸೆಸ್-ಬಿಜೆಪಿ ಹುಟ್ಟುಹಾಕಿರುವ ಹಿಂದುತ್ವ ರಾಜಕಾರಣದ ಯಾಜಮಾನ್ಯಕ್ಕೆ ಸಂಸದೀಯ ವಿರೋಧವೇ ಇಲ್ಲವೆಂಬುದನು್ನ ಮೊದಲು ಅರ್ಥಮಾಡಿಕೊಳ್ಳಬೇಕಿದೆ.

ಕೆಲವು ಹುಸಿ ಸಮಾಧಾನಗಳ ಬಗ್ಗೆ:

ಈ ದೈತ್ಯ ಸವಾಲು ಹುಟ್ಟುಹಾಕುವ ಅಸಹಾಯಕತೆಯಿಂದಾಗಿಯೋ ಅಥವಾ ತೀವ್ರ ಹತಾಶೆಗೆ ಗುರಿಯಾಗಬಾರದು ಎಂಬ ಸದಾಶಯಗಳಿಂದಾಗಿಯೋ ಕೆಲವು ರಾಜಕೀಯ ವಿಶ್ಲೇಷಕರು ಇದರೊಳಗೆಯೂ ಇರುವ ಕೆಲವು ಸಕಾರಾತ್ಮಕ ವಿಷಯಗಳ ಕಡೆ ಬೆಳಕು ಚೆಲ್ಲುತ್ತಾರೆ. ಆದರೆ ಅದನ್ನು ಉತ್ಪ್ರೇಕ್ಷಿಸಿ ನೋಡುವಾಗ ಆಗಬೇಕಾದ ಎದುರಿಗಿರುವ ಸವಾಲಿನ ಗಂಭೀರತೆ ಮಾಯವಾಗುವ ಸಾಧ್ಯತೆ ಇದೆ.

ಹುಸಿ ಸಮಾಧಾನ-1:

ಉ.ಪ್ರದೇಶದ ಅರ್ಧದಷ್ಟು ಜನ ವೋಟು ಹಾಕದೆ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ:

ಉತ್ತರ ಪ್ರದೇಶದಲ್ಲಿ ಈ ಬಾರಿ ಶೇ. 60 ಮತದಾನವಾಗಿದೆ. ಅಂದರೆ 9 ಕೋಟಿ ಜನ ಮತದಾನ ಮಾಡಿದ್ದಾರೆ. ಇನ್ನುಳಿದ ಶೇ.40 ಜನ ವೋಟು ಹಾಕಿಲ್ಲ. ಇದು ಈ ಚುನಾವಣೆಯಲ್ಲಿ ಮಾತ್ರವಲ್ಲ ಎಲ್ಲಾ ಚುನಾವಣೆಗಳಲ್ಲೂ ಇರುವ ಸಂಗತಿಯೇ. ಈ ಬಾರಿ ಕಳೆದ ಚುನಾವಣೆಗಿಂತ ಶೇ. 1.2ರಷ್ಟು ಕಡಿಮೆಯಾಗಿದೆಯಷ್ಟೆ. ಹಾಗೆ ನೋಡಿದರೆ ಚುನಾವಣೆಯಿಂದ ಚುನಾವಣೆಗಳಿಗೆ ಜನರು ಮತದಾನ ಮಾಡುವುದು ಹೆಚ್ಚಾಗುತ್ತಿದೆ ಮತ್ತು 1984ರಿಂದ ರಾಷ್ಟ್ರೀಯ ಮಟ್ಟದಲ್ಲಿ ಮತ್ತು 2012ರಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿ ಚುನಾವಣೆಗಳಿಂದ ಚುನಾವಣೆಗಳಿಗೆ ತಮ್ಮ ಮತದಾನದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದು ಟ್ರೆಂಡ್. ಅಲ್ಲದೆ ವೋಟು ಮಾಡದವರೆಲ್ಲರನ್ನೂ ಬಿಜೆಪಿ ವಿರೋಧಿಗಳು ಎಂದು ಕರೆಯಬಲ್ಲ ಯಾವ ಸೂಚನೆಗಳೂ ಉದಾಹರಣೆಗಳೂ ಲಭ್ಯವಿಲ್ಲ. ಮೇಲಾಗಿ ಪೂರ್ವಾಂಚಲ ಪ್ರದೇಶದಿಂದ ಬಹುಪಾಲು ಗಂಡಸರು ಹೊರರಾಜ್ಯಗಳಿಗೆ ವಲಸೆ ಕಾರ್ಮಿಕರಾಗಿ ಹೋಗುತ್ತಾರೆ. ಆದ್ದರಿಂದ ಸಾಮಾನ್ಯವಾಗಿ ಆ ಪ್ರದೇಶದಲ್ಲಿ ಗಂಡಸರ ಮತದಾನದ ಪ್ರಮಾಣಕ್ಕಿಂತ ಹೆಂಗಸರ ಮತದಾನದ ಪ್ರಮಾಣ ಹೆಚ್ಚಾಗಿರುತ್ತದೆ ಮತ್ತು ಚುನಾವಣೋತ್ತರ ಸಮೀಕ್ಷೆಗಳು ತಿಳಿಸುವಂತೆ ಅದರಲ್ಲಿ ಬಿಜೆಪಿಯ ಪಾಲು ಉಳಿದ ಪಕ್ಷಗಳಿಗಿಂತ ಹೆಚ್ಚಿದೆ. ಆದ್ದರಿಂದ ವೋಟು ಮಾಡದ ಮತದಾರರನ್ನು ಬಿಜೆಪಿ ವಿರೋಧಿಗಳೆಂದು ಪರಿಗಣಿಸುವುದು ಹುಸಿ ಸಮಾಧಾನವನ್ನಷ್ಟೇ ನೀಡಬಲ್ಲದು.

ಹುಸಿ ಸಮಾಧಾನ 2:

ಬಿಜೆಪಿಗೆ ಸಿಕ್ಕಿರುವುದು ಕೇವಲ ಶೇ.45ರಷ್ಟು ಮತಗಳು. ಅಂದರೆ ಅರ್ಧಕ್ಕಿಂತ ಹೆಚ್ಚು ಮತದಾರರು ಬಿಜೆಪಿ ವಿರುದ್ಧವಿದ್ದಾರೆ:

ಮೇಲ್ನೋಟಕ್ಕೆ ನಿಜದ ಭ್ರಮೆ ಬಿತ್ತುವ ಈ ಅಂಕಿ-ಅಂಶಗಳು ಬಿಜೆಪಿಯ ಏರುಗತಿಯ ಚಿತ್ರಣವನ್ನು ಕೊಡುವುದಿಲ್ಲ. ವಾಸ್ತವದಲ್ಲಿ ಬಿಜೆಪಿ ನಿಧಾನಕ್ಕೆ ಚುನಾವಣೆಯಿಂದ ಚುನಾವಣೆಗಳಿಗೆ ತನ್ನ ವೋಟು ಶೇರನ್ನು ಾಸ್ತಿ ಮಾಡಿಕೊಳ್ಳುತ್ತಾ ಹೋಗುತ್ತಿದೆ.

ಈ ಚುನಾವಣೆಯಲ್ಲ್ಲೂ ಬಿಜೆಪಿ ಗೆದ್ದಿರುವ 80 ಕ್ಷೇತ್ರಗಳಲ್ಲಿ ಶೇ. 50ಕ್ಕೂ ಹೆಚ್ಚು ಮತಗಳನ್ನು ಪಡೆದಿದೆ.

ಮೊದಲಿಗೆ ಅದರ ರಾಷ್ಟ್ರಮಟ್ಟದ ಸ್ವರೂಪವನ್ನು ನೋಡೋಣ: 1984ರಲ್ಲಿ ಅದು ಬಿಜೆಪಿ ಎಂಬ ಅವತಾರದಲ್ಲಿ ತನ್ನ ಪ್ರಥಮ ಚುನಾವಣೆಯನ್ನು ಎದುರಿಸಿದಾಗ ಅದಕ್ಕೆ ದಕ್ಕಿದ್ದು ಶೇ.7.5ರಷ್ಟು ವೋಟುಗಳು ಮತ್ತು ಕೇವಲ ಎರಡು ಸೀಟುಗಳು. ಆದರೆ ಆ ನಂತರ ನಡೆದ 9 ಚುನಾವಣೆಗಳಲ್ಲಿ 2009ರ ಚುನಾವಣೆಯೊಂದನ್ನು ಹೊರತುಪಡಿಸಿದರೆ ಅದರ ಮತಗಳಿಕೆಯ ಪ್ರಮಾಣ ಒಂದೇ ಸಮನೆ ಏರುತ್ತಾ 2014ರಲ್ಲಿ ಶೇ.31ಕ್ಕೂ ಮತ್ತು 2019ರಲ್ಲಿ ಶೇ.36ಕ್ಕೂ ತಲುಪಿದೆ.

ಉತ್ತರ ಪ್ರದೇಶದಲ್ಲೇ ನೋಡುವುದಾದರೆ 2012ರಿಂದಲೂ ಅದು ತನ್ನ ವೋಟು ಶೇರುಗಳನ್ನು ಹೆಚ್ಚಿಸಿಕೊಳ್ಳುತಲೇ ಬಂದಿದೆ ಮತ್ತು ಈ ಬಾರಿ ಸರಕಾರಿ ವಿರೋಧಿ ಭಾವನೆಗಳು ಇದ್ದಾಗಲೂ ಮೊದಲಿಗಿಂತ ಶೇ. 2ರಷ್ಟು ಹೆಚ್ಚಿನ ವೋಟುಗಳನ್ನು ಪಡೆದುಕೊಂಡಿದೆ.

 ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿಯ ಬೆಳವಣಿಗೆಯಲ್ಲಿ ಎದ್ದುಕಾಣುವುದು ಅದು ತನ್ನ ಹಳೆಯ ಮತದಾರರ ಬೆಂಬಲವನ್ನು ಗಟ್ಟಿಗೊಳಿಸಿಕೊಳ್ಳುತ್ತಲೇ ಹೊಸ ಮತದಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತಿದೆ. ಇದು ಬಿಜೆಪಿ ಹೀನಾಯವಾಗಿ ಸೋತಿತೆಂದು ನಾವು ನಂಬುವ ಪ. ಬಂಗಾಳಕ್ಕೂ ಸತ್ಯ. ಏಕೆಂದರೆ ಅಲ್ಲಿ ಗೆದ್ದ ದೀದಿಗೆ ಶೇ. 42ರಷ್ಟು ಮತಗಳು ದಕ್ಕಿದ್ದರೆ ಸೋತ ಬಿಜೆಪಿ ಹಿಂದಿನ ವಿಧಾನಸಭಾ ಚುನಾವಣೆಗಿಂತಲೂ ಶೇ. 28ರಷ್ಟು ಅಧಿಕ ಮತಗಳನ್ನು ಪಡೆದುಕೊಂಡು ಶೇ. 38ರಷ್ಟು ಮತಗಳನ್ನು ದಾಖಲಿಸಿದೆ. ಈ ಚುನಾವಣೆಗಳಲ್ಲಿ ಪಂಜಾಬಿನಲ್ಲೂ ಬಿಜೆಪಿ ಹಿಂದಿನ ಚುನಾವಣೆಗಿಂತ ಒಂದೂವರೆ ಲಕ್ಷದಷ್ಟು ಹೆಚ್ಚಿನ ಮತಗಳನ್ನು ಪಡೆದುಕೊಂಡಿದೆ.

ಬಿಜೆಪಿ ಹಿಂದೂ ವೋಟ್ ಬ್ಯಾಂಕ್ ಸೃಷ್ಟಿಸಿಕೊಂಡಿದೆ

ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ಒಂದು ಹಿಂದೂ ವೋಟ್ ಬ್ಯಾಂಕನ್ನು ಸೃಷ್ಟಿಸಿಕೊಂಡಿದೆ ಮತ್ತು ಅದು ಬಿಜೆಪಿ ಚುನವಣೆಯಲ್ಲಿ ಗೆದ್ದರೂ ಸೋತರೂ ಹೆಚ್ಚುತ್ತಾ ಹೋಗುತ್ತಿದೆ. ಬಿಜೆಪಿ ಚುನಾವಣೆಯಲ್ಲಿ ಸೋತ ಪ. ಬಂಗಾಳದಲ್ಲೂ ಅದು ಹಿಂದೂ ವೋಟುಗಳಲ್ಲಿ ಅರ್ಧಕ್ಕೂ ಹೆಚ್ಚು ವೋಟುಗಳನ್ನು ಪಡೆದುಕೊಂಡಿದೆ. ಉ. ಪ್ರದೇಶದಲ್ಲಂತೂ ಒಟ್ಟಾರೆ ವೋಟು ಶೇರು ಶೇ.42 ಆಗಿದ್ದರೂ ಯಾದವೇತರ ಹಿಂದೂಗಳ ವೋಟುಗಳನ್ನು ಮಾತ್ರ ಪರಿಗಣಿಸಿದರೆ ಅದರ ವೋಟು ಶೇರು ಹಿಂದೂಗಳಲ್ಲಿ ಶೇ. 70ಕ್ಕಿಂತ ಹೆಚ್ಚು. ಬಿಜೆಪಿಯ ಹೆಸರೇ ಇಲ್ಲದ ಕೇರಳದಲ್ಲೂ 2019ರಲ್ಲಿ ಹಿಂದೂಗಳ ವೋಟುಗಳಲ್ಲಿ ಶೇ.35ರಷ್ಟು ವೋಟುಗಳನ್ನು ಬಿಜೆಪಿ ಪಡೆದಿತ್ತು ಎಂದು ಸ್ವತಂತ್ರ ಅಧ್ಯಯನಗಳು ಹೇಳುತ್ತವೆ.

ಜನಸಂಖ್ಯೆಯಲ್ಲಿ ಶೇ. 85ರಷ್ಟಿರುವ ಹಿಂದೂಗಳಲ್ಲಿ ಶೇ. 50ಕ್ಕಿಂತಲೂ ಹೆಚ್ಚು ವೋಟುಗಳನ್ನು ಪಡೆದುಕೊಂಡರೂ ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಬಿಜೆಪಿಯ ಗೆಲುವು ಸುಲಭವಾಗುತ್ತದೆ. ಆದ್ದರಿಂದಲೇ ಬಿಜೆಪಿ ಉ. ಪ್ರದೇಶದಲ್ಲಾಗಲೀ, ಲೋಕಸಭಾ ಚುನಾವಣೆಯಲ್ಲಾಗಲೀ ಅಥವಾ ಇತರ ರಾಜ್ಯಗಳಲ್ಲಾಗಲೀ ಮುಸ್ಲಿಮರಿಗೆ ಒಂದು ಸೀಟನ್ನೂ ಕೊಡುವುದಿಲ್ಲವೆಂದು ರಾಜಾರೋಷವಾಗಿ ಹೇಳುತ್ತದೆ ಮತ್ತು ಹಿಂದೂ ವೋಟ್ ಬ್ಯಾಂಕ್ ಸೃಷ್ಟಿಸಿಕೊಳ್ಳುವ ಮೂಲಕ ಹಿಂದುತ್ವ ರಾಷ್ಟ್ರದ ಯೋಜನೆಗಳ ಜಾರಿಯನ್ನು ಸುಗಮಗೊಳಿಸಿಕೊಳ್ಳುತ್ತಿದೆ. ಬಿಜೆಪಿ ಚುನಾವಣೆಯಿಂದ ಚುನಾವಣೆಗೆ ಹೆಚ್ಚಿನ ಜಯವನ್ನು ಪಡೆಯುತ್ತಿರುವ ಏರುಗತಿಯನ್ನು ಇಂದಿನ ಅದರ ಮತದಾನದ ಸ್ಥಿತಿಯು ಮರೆಸಬಾರದು. ಹುಸಿ ಸಮಾಧಾನ 3:

ಎಸ್‌ಪಿ-ಬಿಎಸ್‌ಪಿ-ಕಾಂಗ್ರೆಸ್ ಒಟ್ಟಿಗೆ ಸ್ಪರ್ಧಿಸಿದ್ದರೆ ಬಿಜೆಪಿ ಸೋಲುತ್ತಿತ್ತು:

ಇದು ಮತ್ತೊಂದು ಹುಸಿ ಆಶಾವಾದ. ಏಕೆಂದರೆ ಮೊದಲನೆಯದಾಗಿ ಈ ರೀತಿ ಬಿಜೆಪಿಯ ವಿರುದ್ಧವಾಗಿ ಇತರ ಎಲ್ಲಾ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದ್ದರೆ ಬಿಜೆಪಿಯ ಪರವಾಗಿ ಮತ್ತಷ್ಟು ಹಿಂದೂ ವೋಟುಗಳು ಅದರಲ್ಲೂ ಯಾದವ ಆಡಳಿತಕ್ಕೆ ಹೆದರುವ ದಲಿತ ಮತಗಳು, ಮುಸ್ಲಿಮ್ ಹಾಗೂ ದಲಿತ ಮತಗಳ ವಿರುದ್ಧ ಮೇಲ್ಜಾತಿ ಮತಗಳು ಬಿಜೆಪಿ ಪರವಾಗಿ ಧ್ರುವೀಕರಣಗೊಳ್ಳುತ್ತಿದ್ದವು ಹಾಗೂ ಎಸ್‌ಪಿ-ಬಿಎಸ್‌ಪಿ-ಕಾಂಗ್ರೆಸ್ ಮತಗಳು ಪರಸ್ಪರರ ಅಭ್ಯರ್ಥಿಗೆ ಚಲಾವಣೆಯಾಗದೆ ಬಿಜೆಪಿ ಗೆಲುವುದು ಸುಲಭವಾಗುತ್ತಿತ್ತು.

ಇದಕ್ಕೆ ಇತ್ತೀಚಿನ ಚುನಾವಣೆಗಳೆ ಕೆಲವು ಉದಾಹರಣೆಗಳು:

ಕರ್ನಾಟಕದಲ್ಲಿ 2014ರಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಬಿಡಿಬಿಡಿಯಾಗಿ ತ್ರಿಕೋನ ಸ್ಪರ್ಧೆ ಮಾಡಿದ್ದವು. ಆಗ ಕಾಂಗ್ರೆಸ್‌ಗೆ ಶೇ.42 ಮತಗಳು ಹಾಗೂ 9 ಸೀಟುಗಳು ಮತ್ತು ಜೆಡಿಎಸ್‌ಗೆ ಶೇ.9.5 ಮತಗಳು ಮತ್ತು 2 ಸೀಟುಗಳು ಬಂದಿದ್ದವು. ಬಿಜೆಪಿ ಶೇ.44ರಷ್ಟು ಮತಗಳು ಮತ್ತು 17 ಸೀಟುಗಳನ್ನು ಗಳಿಸಿತ್ತು.

2019ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ 20 ಕಡೆ ಮತ್ತು ಜೆಡಿಎಸ್ 8 ಕಡೆ ಸ್ಪರ್ಧಿಸಿದ್ದವು. 2014ರ ಕಾಂಗ್ರೆಸ್ ಮತ್ತು ಜೆಡಿಎಸ್ ವೋಟುಗಳನ್ನು ಕೂಡಿದರೆ ಬಿಜೆಪಿಗಿಂತ ಜಾಸ್ತಿ ಆಗುವುದರಿಂದ ಈ ಬಾರಿ ಮೈತ್ರಿಗೆ 20ಕ್ಕಿಂತ ಹೆಚ್ಚು ಸೀಟುಗಳು ದಕ್ಕುವುದೆಂದು ನಿರೀಕ್ಷಿಸಲಾಗಿತ್ತು. ಆದರೆ ಆದದ್ದೇ ಬೇರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಸ್ಪರ್ಧಿಸಿದ್ದರೂ ಆ ಕೂಟಕ್ಕೆ ದಕ್ಕಿದ್ದು ಕೇವಲ ಶೇ.41ರಷ್ಟು ವೋಟುಗಳು ಮಾತ್ರ. ಅದರ ಬದಲಿಗೆ ಬಿಜೆಪಿಗೆ ಶೇ.51.4ರಷ್ಟು ಮತಗಳು ದಕ್ಕಿತು. ಹೀಗಾಗಿಯೇ 25 ಸೀಟುಗಳನ್ನು ಅದು ಗೆದ್ದಿದೆ. ಅಷ್ಟು ಮಾತ್ರವಲ್ಲ. ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ 15 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ 2014ರ ಚುನಾವಣೆಯಲ್ಲಿ ಪಡೆದುಕೊಂಡಿದ್ದಕ್ಕಿಂತ ಕಡಿಮೆ ಮತಗಳು ದಕ್ಕಿವೆ. ತುಮಕೂರು ಮತ್ತು ವಿಜಯಪುರ ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿ ಇದ್ದ ಕಡೆ ಜೆಡಿಎಸ್ ವೋಟುಗಳು ಬಿಜೆಪಿಗೂ, ಜೆಡಿಎಸ್ ಅಭ್ಯರ್ಥಿ ನಿಂತಿದ್ದ ಕಡೆ ಕಾಂಗ್ರೆಸ್ ವೋಟುಗಳು ಬಿಜೆಪಿಗೂ ವರ್ಗಾವಣೆ ಆಗಿ ಬಿಜೆಪಿಯ ಗೆಲುವಿನ ಅಂತರ ಲಕ್ಷಗಳಿಗೇರಿರುವುದು ಅಧ್ಯಯನದಿಂದ ಕಂಡುಬರುತ್ತದೆ.

ಉತ್ತರ ಪ್ರದೇಶದಲ್ಲೂ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಘಟ್‌ಬಂಧನ್ ಕೂಟವು ಅತ್ಯಂತ ದೃಢವಾದ ಮೈತ್ರಿಕೂಟವೆಂದು ಭಾವಿಸಲಾಗಿತ್ತು. 2014ರಲ್ಲಿ ಉ.ಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿಗಳು ಒಟ್ಟಾರೆಯಾಗಿ ಪಡೆದದ್ದು ಶೇ.42ರಷ್ಟು ಮತಗಳು. ಆದರೆ 2019ರಲ್ಲಿ ಒಟ್ಟಾಗಿ ಚುನಾವಣೆಯನ್ನು ಎದುರಿಸಿದರೂ ಘಟಬಂಧನ್ ಪಡೆದ ಒಟ್ಟಾರೆ ಮತ ಪ್ರಮಾಣ ಶೇ.37 ಮಾತ್ರ. ಅಂದರೆ 2014ಕ್ಕಿಂತ ಶೇ.5ರಷ್ಟು ಕಡಿಮೆ. ಅದಕ್ಕೆ ಪ್ರತಿಯಾಗಿ ಬಿಜೆಪಿಯು 2014ರಲ್ಲಿ ಶೇ.45ರಷ್ಟು ಮತಪ್ರಮಾಣವನ್ನು ಪಡೆದಿದ್ದರೆ 2019ರಲ್ಲಿ ಅದರ ವೋಟುಗಳಿಕೆಯ ಪ್ರಮಾಣ ಶೇ.5ರಷ್ಟು ಹೆಚ್ಚಾಗಿ ಶೇ.50 ಅನ್ನು ತಲುಪಿದೆ. ಕರ್ನಾಟಕ ಮತ್ತು ಉತ್ತರಪ್ರದೇಶಗಳೆರಡರಲ್ಲಿ ಮಾತ್ರವಲ್ಲ ದೇಶಾದ್ಯಂತ ಮತದಾನವು 2019ರಲ್ಲಿ ಬಿಜೆಪಿ ಪರವಾಗಿ ರಿವರ್ಸ್ ಧ್ರುವೀಕರಣವಾದಂತೆ ಕಂಡುಬರುತ್ತಿದೆ. ಭಾರತದ ವಿರೋಧ ಪಕ್ಷಗಳು ಬಿಡಿಬಿಡಿಯಾಗಿಯೂ ಮತ್ತು ಒಟ್ಟಾಗಿಯೂ ಜನರಲ್ಲಿ ಭರವಸೆ ಹುಟ್ಟಿಸುವುದರಲ್ಲಿ ವಿಫಲವಾಗಿರುವುದನ್ನು ಇದು ಸೂಚಿಸುತ್ತದೆ ಹಾಗೂ ಈ ವಿರೋಧ ಪಕ್ಷಗಳಿಗೆ ಬಿಜೆಪಿಯ ಜೊತೆ ಬಿರಾದರಿಯೇ ಇದ್ದು ಬಿಜೆಪಿ ಪ್ರತಿನಿಧಿಸುವ ಫ್ಯಾಶಿಸ್ಟ್ ಅಪಾಯದ ಬಗ್ಗೆ ಯಾವುದೇ ರಾಜಕೀಯ ಆತಂಕವಿಲ್ಲವೆಂಬುದು ಸ್ಪಷ್ಟವಾಗುತ್ತದೆ.

ಇದರ ಅರ್ಥ ಈ ಚುನಾವಣೆಯಲ್ಲಿ ಜನರು ಆಶಾವಾದ ಇಟ್ಟುಕೊಳ್ಳಬಹುದಾದದ್ದು ಏನೂ ನಡೆದೇ ಇಲ್ಲವೆಂದಲ್ಲ.

- ರೈತ ಹೋರಾಟಗಳ ಪ್ರಭಾವದಿಂದಾಗಿ ಪಶ್ಚಿಮ ಉತ್ತರ ಪ್ರದೇಶದ ಕೋಮುವಾದ ಸಂತ್ರಸ್ತ ಪ್ರದೇಶಗಳಲ್ಲಿ ಹಿಂದೂ ಜಾಟ್ ರೈತರು - ಮುಸ್ಲಿಮ್ ರೈತರ ನಡುವೆ ಸ್ವಲ್ಪಮಟ್ಟಿಗಾದರೂ ಐಕ್ಯತೆ ಮೂಡಿದೆ. ಅದರಿಂದಾಗಿ ಬಿಜೆಪಿಯ ಪ್ರಖರ ಹಿಂದುತ್ವವಾದಿಗಳಾದ ಸಂಗೀತ್ ಸೋಮ್, ಸುರೇಶ್ ರಾನ, ರಾಘವೇಂದ್ರ ಸಿಂಗ್, ಆನಂದ್ ಸ್ವರೂಪ್ ಶುಕ್ಲಾ, ಕೇಶವ್ ಪ್ರಸಾದ್ ಮೌರ್ಯ ಮುಂತಾದವರು ಸೋತಿದ್ದಾರೆ.

- ರೈತ ಹೋರಾಟದ ಸ್ಫೂರ್ತಿಯ ಕಾರಣದಿಂದಾಗಿಯೂ ನಿದ್ದೆ ಮಾಡುತ್ತಿದ್ದ ಎಸ್‌ಪಿ ಪಕ್ಷ ಎದ್ದು ಕೂತು ಇದ್ದಿದ್ದರಲ್ಲಿ ಒಂದಷ್ಟು ಹೋರಾಟವನ್ನು ನೀಡಿತು.

- ಪಂಜಾಬಿನಲ್ಲಿ ರೈತ ಹೋರಾಟ ತುಂಬಿದ ಜಾಗೃತಿ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸಿತು. ಆಮ್ ಆದ್ಮಿ ಪಕ್ಷದ ಜಯದ ಹಿಂದೆ ಇರುವುದು ಪ್ರಧಾನವಾಗಿ ಆಡಳಿತ ವಿರೋಧಿ ಜಾಗೃತಿಯೇ ಆಗಿದೆ. ಇವೆಲ್ಲವೂ ಒಂದು ಭಾರತೀಯ ಫ್ಯಾಶಿಸಂಗೆ ನಿಜ ವಿರೋಧವಿರುವುದು ಬೀದಿಯಲ್ಲೇ ವಿನಾ ಸಂಸತ್ತಿನಲ್ಲಿ ಅಲ್ಲವೆಂದು ಮತ್ತೊಮ್ಮೆ ರುಜುವಾತು ಪಡಿಸಿದೆ.

ಫ್ಯಾಶಿಸಂಗೆ ಸಂಸದೀಯ ವಿರೋಧವಿಲ್ಲ- ಜನಚಳವಳಿ ಇಲ್ಲದೆ ಪ್ರಜಾತಂತ್ರ ಉಳಿಯುವುದಿಲ್ಲ

ಈ ಎಲ್ಲಾ ಸಂಗತಿಗಳು ಮನವರಿಕೆ ಮಾಡಿಕೊಡುವುದಿಷ್ಟೆ. ಆರೆಸ್ಸೆಸ್-ಬಿಜೆಪಿಗಳು ಚುನಾವಣಾ ಪ್ರಜಾತಂತ್ರವನ್ನು ಬಳಸಿಕೊಂಡೇ ಫ್ಯಾಶಿಸ್ಟ್ ಸರ್ವಾಧಿಕಾರವನ್ನು ಜಾರಿಗೆ ತರುತ್ತಿವೆ. ಸಂವಿಧಾನವನ್ನು ಬಳಸಿಕೊಂಡೇ ಸಂವಿಧಾನವನ್ನು ನಾಶಮಾಡುತ್ತಿದೆ. ಅಂಬೇಡ್ಕರ್ ಹೆಸರನ್ನು ಬಳಸಿಕೊಂಡೇ ಬ್ರಾಹ್ಮಣ್ಯದ ಆಧಿಪತ್ಯವನ್ನು ಸ್ಥಾಪಿಸುತ್ತಿದೆ. ಕಲ್ಯಾಣ ರಾಜ್ಯ ಎನ್ನುತ್ತಲೇ ಕಾರ್ಪೊರೇಟ್ ಸಾಮ್ರಾಜ್ಯವನ್ನು ಕಟ್ಟುತ್ತಿದೆ. ಇವೆಲ್ಲಕ್ಕೂ ಅದು ಬಲವಾದ-ಹಿಂದೂ ಆತಂಕದಲ್ಲಿದ್ದಾನೆ- ದೇಶ ಆತಂಕದಲ್ಲಿದೆ, ತಮ್ಮನ್ನು ಬಿಟ್ಟರೆ ಉಳಿದವರೆಲ್ಲರೂ ಶತ್ರುಗಳು ಎಂಬ ಸುಳ್ಳಿನ ಕಥನವನ್ನು ಯಶಸ್ವಿಯಾಗಿ ಹುಟ್ಟುಹಾಕಿದೆ. ದೇಶದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನೂ ಕೇಸರೀಕರಿಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅವುಗಳ ಮೇಲೆ ತಮ್ಮ ಸೈದ್ಧಾಂತಿಕ ಪ್ರಭಾವವನ್ನು ವಿಸ್ತರಿಸಿದ್ದಾರೆ.

ಸಂಸದೀಯ ವಿರೋಧಪಕ್ಷಗಳು ಈ ಫ್ಯಾಶಿಸ್ಟ್ ಯೋಜನೆಯ ವೇಗ ಮತ್ತು ಪ್ರಮಾಣದ ಬಗ್ಗೆ ತಕರಾರು ಮಾಡುತ್ತಿವೆಯೇ ವಿನಾ ಅದರ ಮೂಲಭೂತ ದಿಕ್ಕನ್ನು ಧಿಕ್ಕರಿಸುವ ಪರ್ಯಾಯಾ ಕೊಡುವ ಸಾಮರ್ಥ್ಯವಿಲ್ಲ. ಜನರಲ್ಲಿ ಬೇರುಗಳೇ ಇರದ ವಿರೋಧ ಪಕ್ಷಗಳು ಬಿಜೆಪಿ-ಆರೆಸ್ಸೆಸ್‌ನ ಸಂಘಟನಾ, ರಾಜಕೀಯ, ತಾತ್ವಿಕ ಬಲ, ಧನಬಲ-ತೋಳ್ಬಲಗಳಿಗೆ ಯಾವುದೇ ರೀತಿಯಲ್ಲೂ ಸರಿಸಾಟಿಯಾಗುತ್ತಿಲ್ಲ. ಹೀಗಾಗಿ ಪ್ರತಿ ಚುನಾವಣೆಗಳೂ ಫ್ಯಾಸಿಸ್ಟ್ ಸರ್ವಾಧಿಕಾರವನ್ನು ಹೆಚ್ಚಿನ ಜನಮನ್ನಣೆಯೊಂದಿಗೆ ನವೀಕರಿಸುವ ತಂತ್ರಗಳಾಗಿಬಿಟ್ಟಿವೆ. ಚುನಾವಣಾ ಪ್ರಜಾತಂತ್ರವು ಸಾಂವಿಧಾನಿಕ ಪ್ರಜಾತಂತ್ರವನ್ನು ನಾಶಮಾಡುತ್ತಿರುವ ಈ ಭಾರತೀಯ ಫ್ಯಾಸಿಸ್ಟ್ ಯೋಜನೆಗಳಿಗೆ ಜನರಲ್ಲಿ ಬೇರುಬಿಟ್ಟ ಜನತಂತ್ರಗಳ ಆಶಯಗಳನ್ನು ಬಲವಾಗಿ ನಂಬುವ ಜನರನ್ನು ಸೃಷ್ಟಿಸುವ ಚಳವಳಿಗಳಲ್ಲದೇ ಬೇರೆ ಪರ್ಯಾಯಗಳಿಲ್ಲ. ಮಿಕ್ಕಿದ್ದೆಲ್ಲಾ ಹುಸಿ ಸಮಾಧಾನಗಳಷ್ಟೆ.

ಮೇಲ್ನೋಟಕ್ಕೆ ಕಠಿಣವೆಂದು ಕಾಣುವ ಈ ಪರ್ಯಾಯಗಳ ಮೂಲಕವೇ ಇತಿಹಾಸದಲ್ಲಿ ಜಗತ್ತಿನ ಜನತೆ ದೈತ್ಯರನ್ನು ಮಣಿಸಿದ್ದರೆ. ಬರಲಿರುವ ದಿನಗಳು ಇನ್ನಷ್ಟು ಕತ್ತಲನ್ನು ತರಲಿವೆ. ಆದರೆ ವಿರೋಧದ ಅಸಹಾಯಕತೆಗಳು ಕತ್ತಲನ್ನೇ ಬೆಳಕಂತೆ ಭ್ರಮಿಸುವ ಆತ್ಮವಂಚನೆಗೆ ದೂಡದೆ ಇನ್ನಷ್ಟು ದಿಟ್ಟತನದಿಂದ ಜನರ ಜೊತೆಗೂಡಿ ಈ ಕತ್ತಲನನ್ನು ಶಾಶ್ವತವಾಗಿ ದೂರಮಾಡುವ ಬೆಳಕಿನ ಬೇಸಾಯದಲ್ಲಿ ತೊಡಗುವುದೊಂದೇ ಇರುವ ದಾರಿ.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News