ರಾಜ್ಯದ ಹಲವೆಡೆ ಬಿಸಿಲಿನ ತಾಪಮಾನ ಹೆಚ್ಚಳ

Update: 2022-03-18 18:27 GMT
ಫೈಲ್ ಚಿತ್ರ

ಬೆಂಗಳೂರು, ಮಾ.18: ರಾಜ್ಯದ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ಗರಿಷ್ಠ ಹಾಗೂ ಕನಿಷ್ಠ ತಾಪಮಾನ ದಾಖಲಾಗಿದೆ. ರಾಯಚೂರು ಮತ್ತು ಕಲಬುರಗಿಯಲ್ಲಿ ತಲಾ 40, ವಿಜಯಪುರದಲ್ಲಿ 38, ಬೆಂಗಳೂರಲ್ಲಿ 34.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. 

ಕಲಬುರಗಿಯಲ್ಲಿ 3, ರಾಯಚೂರು, ಉತ್ತರ ಕನ್ನಡ, ಬಾಗಲಕೋಟೆ, ಬೆಂಗಳೂರು ಮತ್ತು ಬೀದರ್ ತಲಾ 2 ಹಾಗೂ ವಿಜಯಪುರದಲ್ಲಿ 1 ಡಿ.ಸೆ. ಉಷ್ಣಾಂಶ ಹೆಚ್ಚಳವಾಗಿದೆ. ಜತೆಗೆ, ಈ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿಯೂ ಸರಾಸರಿ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ. 

ಕಲಬುರಗಿ, ಬೀದರ್, ವಿಜಯಪುರ ಮತ್ತು ರಾಯಚೂರು ಸೇರಿ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಝಳ ಹೆಚ್ಚಿದ್ದು, ಎಪ್ರಿಲ್ ಮತ್ತು ಮೇನಲ್ಲಿ ಸರಾಸರಿ 45-46 ಡಿಗ್ರಿವರೆಗೆ ಉಷ್ಣಾಂಶ ದಾಖಲಾಗಲಿದೆ. ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಸರಾಸರಿ 36-37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ. 3 ತಿಂಗಳು ಇರುತ್ತಿದ್ದ ಬೇಸಿಗೆ ಕಾಲ ಈ ವರ್ಷ 4 ತಿಂಗಳು ಇರಲಿದೆ. ಕಳೆದ ನವೆಂಬರ್‍ನಲ್ಲಿ ಹೆಚ್ಚು ಮಳೆಯಾದ ಹಿನ್ನೆಲೆಯಲ್ಲಿ ಚಳಿಗಾಲ ಅವಧಿ ಇಳಿಮುಖವಾಗಿತ್ತು. 

ಆರೋಗ್ಯದ ಬಗ್ಗೆ ಇರಲಿ ಎಚ್ಚರ: ಬಿಸಿಲಿನಲ್ಲಿ ಹೆಚ್ಚು ಓಡಾಡುವುದರಿಂದ ಮಾನವನ ದೇಹದಲ್ಲಿ ನೀರಿನ ಅಸಮತೋಲನ ಉಂಟಾಗುತ್ತದೆ. ಇದರಿಂದ, ತಲೆ ಸುತ್ತುವುದು, ರಕ್ತದೊತ್ತಡ ಕಡಿಮೆಯಾಗುವುದು ಸೇರಿ ಹಲವು ಸಮಸ್ಯೆಗಳು ಉದ್ಭವಿಸಲಿವೆ.

ಅದರಲ್ಲೂ ವೃದ್ಧರು, ಮಹಿಳೆ ಹಾಗೂ ಮಕ್ಕಳಲ್ಲಿ ಹೆಚ್ಚಾಗಿ ಅನಾರೋಗ್ಯ ಸಮಸ್ಯೆಗಳು ಕಾಣಿಸುತ್ತವೆ. ಹೀಗಾಗಿ, ಬಿಸಿಲನಲ್ಲಿ ಓಡಾಟವನ್ನು ನಿಯಂತ್ರಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News