ಇಂಧನ ಬೆಲೆ ಏರಿಕೆ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ಕೆಲಕಾಲ ಲೋಕಸಭೆ ಮುಂದೂಡಿಕೆ

Update: 2022-03-23 15:45 GMT

ಹೊಸದಿಲ್ಲಿ,ಮಾ.23: ಲೋಕಸಭೆಯಲ್ಲಿ ಬುಧವಾರ ಪ್ರಶ್ನೆವೇಳೆಯಲ್ಲಿ ಇಂಧನ ಬೆಲೆ ಏರಿಕೆ ಕುರಿತು ಪ್ರತಿಪಕ್ಷ ನಾಯಕರು ಗದ್ದಲವನ್ನು ಸೃಷ್ಟಿಸಿದ್ದರಿಂದ ಸದನವನ್ನು ಕೆಲಕಾಲ ಮುಂದೂಡುವಂತಾಗಿತ್ತು. ಬೆಳಿಗ್ಗೆ ಕಲಾಪಗಳು ಆರಂಭಗೊಳ್ಳುತ್ತಿದ್ದಂತೆ ಸದನದ ಬಾವಿಗಿಳಿದ ಕಾಂಗ್ರೆಸ್,ಡಿಎಂಕೆ,ಟಿಎಂಸಿ ಮತ್ತು ಎಡಪಕ್ಷಗಳ ಸಂಸದರು ಇಂಧನ ಬೆಲೆ ಏರಿಕೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.

137 ದಿನಗಳ ಬಳಿಕ ಮಂಗಳವಾರ ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿ ಲೀ.ಗೆ ತಲಾ 80 ಪೈಸೆ ಮತ್ತು ಅಡುಗೆ ಅನಿಲ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 50 ರೂ.ಹೆಚ್ಚಿಸಲಾಗಿತ್ತು. ಅಡುಗೆ ಅನಿಲ ಬೆಲೆಯನ್ನು ಅ.6ರಂದು ಕೊನೆಯ ಬಾರಿ ಪರಿಷ್ಕರಿಸಲಾಗಿತ್ತು. ಬುಧವಾರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿ ಲೀ.ಗೆ ತಲಾ 80 ಪೈಸೆ ಹೆಚ್ಚಿಸಲಾಗಿದೆ.

ಪ್ರಸಕ್ತ ದಿಲ್ಲಿಯಲ್ಲಿ ಪ್ರತಿ ಲೀ.ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅನುಕ್ರಮವಾಗಿ 97.01 ರೂ. ಮತ್ತು 88.27 ರೂ.ಆಗಿವೆ. ಮುಂಬೈನಲ್ಲಿ ಇಂಧನ ಬೆಲೆಗಳು ಅತ್ಯಂತ ದುಬಾರಿಯಾಗಿದ್ದು, ಪ್ರತಿ ಲೀ.ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅನುಕ್ರಮವಾ ಗಿ 111.67 ರೂ. ಮತ್ತು 95.85 ರೂ.ಆಗಿವೆ.

ಬುಧವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಸದಸ್ಯರು ‘ಗ್ಯಾಸ್ ಸಿಲಿಂಡರ್‌ಗೆ 1,000 ರೂ.’ ಮತ್ತು ‘ಗ್ಯಾಸ್ ಸಿಲಿಂಡರ್ ಮತ್ತು ಡೀಸೆಲ್-ಪೆಟ್ರೋಲ್ ಬೆಲೆ ಏರಿಕೆಯೊಂದಿಗೆ ಲೂಟಿಯನ್ನು ನಿಲ್ಲಿಸಿ ’ ಎಂದು ಬರೆಯಲಾಗಿದ್ದ ಬ್ಯಾನರ್‌ಗಳನ್ನು ಪ್ರದರ್ಶಿಸಿದರು. ಟಿಆರ್‌ಎಸ್,ಬಿಎಸ್‌ಪಿ ಮತ್ತು ಎಸ್‌ಪಿ ಸದಸ್ಯರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಾದರೂ ತಮ್ಮ ಆಸನಗಳಲ್ಲಿಯೇ ಇದ್ದರು.
 
ತಮ್ಮ ಸ್ಥಳಗಳಿಗೆ ಮರಳುವಂತೆ ಮತ್ತು ಶೂನ್ಯವೇಳೆಯಲ್ಲಿ ವಿಷಯವನ್ನು ಪ್ರಸ್ತಾವಿಸುವಂತೆ ಪ್ರತಿಭಟನಾನಿರತ ಸಂಸದರಿಗೆ ಸೂಚಿಸಿದ ಸ್ಪೀಕರ್ ಓಂ ಪ್ರಕಾಶ ಬಿರ್ಲಾ ಅವರು,ಈ ರೀತಿಯ ಸದನದ ಪೂರ್ವಯೋಜಿತ ತಡೆಯುವಿಕೆ ಒಳ್ಳೆಯದಲ್ಲ ಎಂದರು. ಬಳಿಕ ಸದನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದರು. ಈ ನಡುವೆ ಕಾಂಗ್ರೆಸ್ ಸಂಸದರೂ ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಸಂಸತ್ ಸಂಕೀರ್ಣದಲ್ಲಿ ಪ್ರತಿಭಟನೆಯನ್ನು ನಡೆಸಿದರು.

ಮಂಗಳವಾರವೂ ಇಂಧನಗಳ ಬೆಲೆ ಏರಿಕೆಗಾಗಿ ಪ್ರತಿಪಕ್ಷ ಸದಸ್ಯರು ಕೇಂದ್ರ ಸರಕಾರವನ್ನು ಟೀಕಿಸಿದ ಬಳಿಕ ಸಂಸತ್ ಕಲಾಪಗಳಿಗೆ ವ್ಯತ್ಯಯಗಳು ಉಂಟಾಗಿದ್ದವು.
ವಿಧಾನಸಭಾ ಚುನಾವಣೆಗಳು ಮುಗಿದ ಬಳಿಕ ಇಂಧನಗಳ ಬೆಲೆಗಳು ಏರಿಕೆಯಾಗಲಿವೆ ಎಂಬ ತಮ್ಮ ಭವಿಷ್ಯ ನಿಜವಾಗಿದೆ ಎಂದು ಹಲವಾರು ಪ್ರತಿಪಕ್ಷ ನಾಯಕರು ಹೇಳಿದ್ದರು.

ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ನ.4ರಿಂದ ತೈಲ ಬೆಲೆಗಳನ್ನು ಹೆಚ್ಚಿಸಿರಲಿಲ್ಲ. ಉ.ಪ್ರದೇಶ,ಪಂಜಾಬ್,ಉತ್ತರಾಖಂಡ,ಮಣಿಪುರ ಮತ್ತು ಗೋವಾ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಇಂಧನ ಬೆಲೆಗಳನ್ನು ಹೆಚ್ಚಿಸಿದರೆ ಪ್ರತಿಭಟನೆಗಳಿಗೆ ಕಾರಣವಾಗಬಹುದಿತ್ತು ಮತ್ತು ಚುನಾವಣೆಗಳಲ್ಲಿ ಗೆಲ್ಲುವ ಬಿಜೆಪಿಯ ಅವಕಾಶಗಳಿಗೆ ಕುತ್ತನ್ನು ತರಬಹುದಿತ್ತು ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಿಸಿದ್ದಾರೆ.

ಕಳೆದ ವರ್ಷದ ಮಾರ್ಚ್ ಮತ್ತು ಎಪ್ರಿಲ್‌ನಲ್ಲಿ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗಳ ಸಂದರ್ಭ 18 ದಿನಗಳ ಕಾಲ ತೈಲಬೆಲೆಗಳು ಸ್ಥಿರವಾಗಿದ್ದವು. ಆದರೆ ಮೇ 2ರಂದು ಫಲಿತಾಂಶಗಳು ಪ್ರಕಟಗೊಂಡ ಬಳಿಕ ಬೆಲೆಗಳು ಸ್ಥಿರವಾಗಿ ಏರಿಕೆಯಾಗಿದ್ದು,ದಾಖಲೆ ಮಟ್ಟವನ್ನು ತಲುಪಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News