ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರಿಂದ 2.36 ಕೋ. ರೂ. ಉಳಿತಾಯ ಬಜೆಟ್ ಮಂಡನೆ

Update: 2022-03-25 18:06 GMT

ಚಿಕ್ಕಮಗಳೂರು, ಮಾ.25: ಇಲ್ಲಿನ ನಗರಸಭೆಯಲ್ಲಿ ಶುಕ್ರವಾರ ನಡೆದ 2022-23ನೇ ಸಾಲಿನ ಆಯವ್ಯಯ ಮಂಡನೆಯಲ್ಲಿ 2.36 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸುವ ಮೂಲಕ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಚೊಚ್ಚಲ ಬಜೆಟ್ ಮಂಡಿಸಿ ಗಮನಸೆಳೆದರು.

ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಬಜೆಟ್ ಮಂಡನಾ ಸಭೆಯಲ್ಲಿ 2022-23ನೇ ಸಾಲಿನ ಆಯವ್ಯಯ ಪತ್ರವನ್ನು ಮಂಡಿಸಿ ಮಾತನಾಡಿದ ಅವರು, ನಗರಸಭೆ ಪ್ರಾರಂಭಿಕ ಶುಲ್ಕ 20.89 ಕೋಟಿ ರೂ. ಆಗಿದ್ದು, ವಿವಿಧ ಮೂಲಗಳ ಆದಾಯ 92.48 ಕೋಟಿ ರೂ. ಒಳಗೊಂಡಂತೆ ಒಟ್ಟು 113.31 ಕೋಟಿ ರೂ. ಆದಾಯ ನಗರಸಭೆ ಹೊಂದಿದೆ. ಇದರಲ್ಲಿ 110.95 ಕೋಟಿ ರೂ ವೆಚ್ಚ ಸೇರಿ 2.36 ಕೋಟಿ ರೂ. ಉಳಿತಾಯದ ಬಜೆಟ್ ಇದಾಗಿದೆ ಎಂದರು.

ನಗರವನ್ನು ಪ್ಲಾಸ್ಟಿಕ್ ಮುಕ್ತ ಮತ್ತು ಸ್ವಚ್ಛ ನಗರ ನಿರ್ಮಾಣಕ್ಕೆ ಆಯವ್ಯಯದಲ್ಲಿ ಆದ್ಯತೆ ನೀಡಲಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಗರದ ಅಭಿವೃದ್ಧಿ ಕಾರ್ಯಗಳಿಗೆ ಆಯವ್ಯಯದಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ನಗರದಲ್ಲಿರುವ ಐತಿಹಾಸಿಕ ದೇವಾಲಯಗಳ ಆವರಣವನ್ನು ಹಸಿರೀಕರಣಗೊಳಿಸಿ ಸುಂದರಗೊಳಿಸಲು ಕ್ರಮಕೈಗೊಳ್ಳಲಾಗಿದೆ. ನಗರದಲ್ಲಿ ವಾರಕ್ಕೊಮ್ಮೆ 1 ವಾರ್ಡ್‍ನಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.

ನಗರಸಭೆಯನ್ನು ಜನಸ್ನೇಹಿ ಮಾಡುವ ನಿಟ್ಟಿನಲ್ಲಿ ಬಜೆಟ್‍ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. 2022-23ನೇ ಸಾಲಿನ ನಗರೋತ್ಥಾನ ಹಂತ 4ರ ಯೋಜನೆಯಡಿ 40 ಕೋಟಿ ಅನುದಾನದಲ್ಲಿ ನಗರವನ್ನು ಸಮಗ್ರ ಅಭಿವೃದ್ಧಿಪಡಿಸುವ ಕ್ರೀಯಾ ಯೋಜನೆಯನ್ನು ರೂಪಿಸಲಾಗಿದೆ. ಎಸ್‍ಎಫ್‍ಸಿ ವಿಶೇಷ ಅನುದಾನದಡಿಯಲ್ಲಿ ರಸ್ತೆ ಡಾಂಬರೀಕರಣಕ್ಕೆ 10ಕೋಟಿ ಮೀಸಲಿಡಲಾಗಿದೆ. ಎಂ.ಜಿ.ರಸ್ತೆಯಲ್ಲಿ ಹೈಟೆಕ್ ವಾಣಿಜ್ಯ ಸಂಕೀರ್ಣ ಮತ್ತು ಪಾರ್ಕಿಂಗ್ ಲಾಟ್ ನಿರ್ಮಿಸಲು 10ಕೋಟಿ ರೂ. ಡಿಪಿಆರ್ ತಯಾರಿಸಲಾಗಿದೆ. ಹೂವಿನ ಮಾರುಕಟ್ಟೆ ನಿರ್ಮಾಣ ಹಾಗೂ ಪತ್ರಿಕಾ ವಿತರಕರಿಗೆ ಕೆ.ಎಂ.ರಸ್ತೆಯಲ್ಲಿ ನಿವೇಶನ ಗುರುತಿಸಲಾಗಿದೆ ಎಂದರು.

ವೈಜ್ಞಾನಿಕ ಕಸ ವಿಲೇವಾರಿಗೆ ವಾಹನಗಳ ಖರೀದಿಗೆ ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದ್ದು, ಜೀರೋ ಗಾರ್ಬೇಜ್ ಸಿಟಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಹಸಿಕಸದಿಂದ ಬಯೋ ಗ್ಯಾಸ್ ಮತ್ತು ಬಯೋ ಇಂಧನ ಉತ್ಪತಿಗೆ ಮುಂದಾಗಿದ್ದು ನಗರಸಭೆ ಹೆಚ್ಚಿನ ಆದಾಯದ ನೀರಿಕ್ಷೆಯನ್ನು ಹೊಂದಿದೆ ಎಂದ ಅವರು, ಉದ್ಯಾನವನಗಳ ಅಭಿವೃದ್ಧಿ, ರಸ್ತೆ ಇಕ್ಕೆಲಗಳಲ್ಲಿ ಗಿಡನೆಡುವ ಕಾರ್ಯಕ್ರಮ ಮತ್ತು ರಸ್ತೆ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಹೂವು ಕುಂಡಗಳನ್ನು ಅಳವಡಿಸುವ ಯೋಜನೆ ಯನ್ನು ರೂಪಸಿಲಾಗಿದೆ ಎಂದ ಅವರು, ನಗರದ ಎಂ.ಜಿ.ರಸ್ತೆ, ಅಂಬೇಡ್ಕರ್ ರಸ್ತೆ, ಕೆಎಂ ರಸ್ತೆ, ಬೈಪಾಸ್ ರಸ್ತೆ ಕೋಟೆ ತಾವರೆಕೆರೆ ಸುತ್ತಮುತ್ತ ಶಾಲಾ ಮಕ್ಕಳಿಗೆ ಮತ್ತು ಸೈಕಲ್ ಸವಾರರಿಗೆ ಸೈಕಲ್ ಟ್ರಾಕ್, ಫುಟಪಾತ್, ರಸ್ತೆ ಬದಿಗಳಲ್ಲಿ ಅಲಂಕೃತ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು ಎಂದರು.

ಕೆ.ಎಂ.ರಸ್ತೆಯಿಂದ ಗುರುನಾಥ ರಸ್ತೆ, ಶೆಟ್ಟರ ಬೀದಿಯಲ್ಲಿ ವಾಹನ ನಿಲುಗಡೆ ಮುಕ್ತ ಸಂಚಾರ ಮಾಡಲು ನಿರ್ಧರಿಸಲಾಗಿದೆ. 35ವಾರ್ಡ್‍ಗಳಲ್ಲಿ ರಸ್ತೆಗಳಿಗೆ ನಾಮಫಲಕ. 10 ಕಡೆಗಳಲ್ಲಿ ಶುದ್ಧಗಂಗಾ ಕುಡಿಯುವ ನೀರಿನ ಘಟಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದ ಅವರು, ಹೈಟೆಕ್ ಉದ್ಯಾನವನಗಳನ್ನು ನಿರ್ಮಿಸಿ ಅವುಗಳ ನಿರ್ವಹಣೆ ಖಾಸಗಿ ಅಥವಾ ಸಂಘ ಸಂಸ್ಥೆಗಳಿಗೆ ನೀಡುವ ಚಿಂತನೆ ಮಾಡಲಾಗಿದೆ. ಬೇಲೂರು ರಸ್ತೆ ಮತ್ತು ವಿಜಯಪುರ ಆದಿಭೂತಪ್ಪನ ದೇವಸ್ಥಾನ ಸಮೀಪ 1.50 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಫುಡ್ ಕೋರ್ಟ್ ನಿರ್ಮಿಸಲಾಗುವುದು ಎಂದರು.

ನಗರದ ನಗರಸಭೆ ಅಧೀನದಲ್ಲಿರುವ ನಿವೇಶನಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಹರಾಜು ಪ್ರಕ್ರಿಯೆ ನಡೆಸಲಾಗುವುದು. ಹಾಗೂ ಕತ್ರಿಮಾರಮ್ಮ ದೇವಸ್ಥಾನ ಬಳಿಯ ನಗರಸಭೆ ಮಳಿಗೆಗಳು ಶಿಥಿಲಗೊಂಡಿದ್ದು 1.20 ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುವುದು. ನಗರದ ಪ್ರಮುಖ ರಸ್ತೆಗಳಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ. ನಗರದ ಗೋವುಗಳ ರಕ್ಷಣೆ ದೃಷ್ಟಿಯಿಂದ ಗೋಶಾಲೆಗಳಿಗೆ ಮೇವು ನೀಡಲು 12 ಲಕ್ಷ ರೂ. ಮೀಸಲಿಡಲಾ ಗಿದೆ. ಗವಿಕಟ್ಟೆ, ಹಿರೇಮಗಳೂರು ಕಲ್ಯಾಣ ಅಭಿವೃದ್ಧಿಗೆ 20 ಲಕ್ಷ, ಹಳೇ ಉಪ್ಪಳ್ಳಿ ದೊಡ್ಡಕುರುಬರಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು.

ಹೌಸಿಂಗ್ ಬೋರ್ಡ್ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ 78.5ಲಕ್ಷ ರೂ. ಚರಂಡಿ ನಿರ್ವಹಣೆಗೆ 1.50 ಕೋಟಿ ರೂ. ನಗರದ ಪ್ರಮುಖ ಕಡೆಗಳಲ್ಲಿ ನಾಲ್ಕು ಅಂಗನವಾಡಿ ಕೇಂದ್ರ ಮತ್ತು ವರ್ಷಕ್ಕೊಂದರಂತೆ ಸರ್ಕಾರಿ ಶಾಲೆಗೆ ಮೂಲಭೂತ ಸೌಲಭ್ಯ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗಗಳ ಅಭಿವೃದ್ಧಿಗೆ 105 ಲಕ್ಷ ರೂ.ಇತರೆ ಬಡ ಜನರ ಅಭಿವೃದ್ಧಿಗೆ 35ಲಕ್ಷ ರೂ. ವಿಶೇಷಚೇತನ ಅಭಿವೃದ್ಧಿಗೆ 15 ಲಕ್ಷ ರೂ. ಮೀಸಲಿ ಡಲಾಗಿದೆ. ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಧನ ನೀಡಲಾಗುವುದು. ಕಲಾ ಕ್ಷೇತ್ರ, ಸಾಹಿತ್ಯ, ಕ್ರೀಡಾಕ್ಷೇಗಳನ್ನು ಉತ್ತೇಜಿಸಲಾಗುವುದು ಎಂದರು.

ಬಜೆಟ್ ಮೇಲಿನ ಚರ್ಚೆ ಸಂದರ್ಭ ಆಡಳಿತ ಪಕ್ಷದ ರಾಜ್‍ಶೇಖರ್, ವಿರೋಧ ಪಕ್ಷದ ಸದಸ್ಯರಾದ ಲಕ್ಷ್ಮಣ್, ಎ.ಸಿ.ಕುಮಾರ್, ರಾಮನಹಳ್ಳಿ ಲಕ್ಷ್ಮಣ್ ಮತ್ತಿತರರು ಬೀದಿ ನಾಯಿ ಹಾವಳಿ, ಪ್ಲಾಸ್ಟಿಕ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ, ಎಸ್ಪಿ ಕಚೇರಿ ಎದುರು ನೆನೆಗುದಿಗೆ ಬಿದ್ದ ಸರ್ಕಲ್‍ನಲ್ಲಿ ನಿರ್ಮಾಣ ಕಾಮಗಾರಿ, ಮುಜರಾಯಿ ದೇವಾಲಯಗಳ ಆವರಣದಲ್ಲಿ ನಗರಸಭೆ ಅನುದಾನದಲ್ಲಿ ಕಾಮಗಾರಿ, ಪೌರಕಾರ್ಮಿಕರ ಕೊರತೆ, ಮುನ್ಸಿಪಾಲ್ ಆಸ್ಪತ್ರೆ ಅಭಿವೃದ್ಧಿ ನಿರ್ಲಕ್ಷ್ಯ, ಸ್ವಚ್ಛತಾ ಕಾರ್ಯದಲ್ಲಿ ಬಿಜೆಪಿ ಸದಸ್ಯರ ವಾರ್ಡ್‍ಗಳಿಗೆ ಮಾತ್ರ ಆಧ್ಯತೆ ನೀಡುತ್ತಿರುವುದರ ಬಗ್ಗೆ ಗಮನಸೆಳೆದು ಪರಿಹಾರಕ್ಕೆ ಆಗ್ರಹಿಸಿದರು.

ಬಜೆಟ್ ಮಂಡನೆ ಬಳಿಕ ಬಜೆಟ್ ಮೇಲಿನ ಚರ್ಚೆ ನಡೆಸಲಾಯಿತು. ಈ ಸಂದರ್ಭ ದಲ್ಲಿ ನಗರಸಭೆ ಉಪಾಧ್ಯಕ್ಷೆ ಉಮಾದೇವಿ ಕೃಷ್ಣಪ್ಪ, ಪೌರಾಯುಕ್ತ ಬಿ.ಸಿ. ಬಸವರಾಜ್ ವಿವಿಧ ವಾರ್ಡ್‍ಗಳ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

ಡಿಜಿಟಲೀಕರಣಕ್ಕೆ ಒತ್ತು: 'ನಗರಸಭೆಯಲ್ಲಿ ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ನಗರಸಭೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಈಡೇರಿಸಲು ಜನಹಿತ ಅಪ್ಲಿಕೇಶನ್, ವಾಟ್ಸಾಪ್, ಈಮೇಲ್ ಮು ಖಾಂತರ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 2022-23ನೇ ಸಾಲಿನಿಂದ ನಗರಸಭೆಯ ಎಲ್ಲ ತರಹದ ಪಾವತಿಯನ್ನು ಭಾರತ್ ಬಿಲ್ ಪೇಮೆಂಟ್ ಮೂಲಕ ನಿರ್ವಹಿಸಲು ಯೋಜನೆ ರೂಪಿಸಲಾಗಿದೆ. ಸಿಬ್ಬಂದಿಗಳಿಗೆ ಈ ಹಾಜರಾತಿ, ಕಚೇರಿಗೆ ಉತ್ಕೃಷ್ಟ  ಮಟ್ಟದ ಓಎಫ್‍ಸಿ ಇಂಟರ್‍ನಟ್ ಸೌಲಭ್ಯ ಮಾಡಲಾಗಿದ್ದು 7 ದಿನಗಳ ಒಳಗೆ ಇ_ಖಾತೆ, 35 ದಿನದೊಳಗೆ ಖಾತೆ ಬದಲಾವಣೆ, 35 ದಿನದಲ್ಲಿ ಕಟ್ಟಡ ಪರ ವಾನಗಿ, 7 ದಿನದಲ್ಲಿ ವ್ಯಾಪಾರ ಉದ್ದಿಮೆ ಪರವಾನಿಗೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಹೇಳಿದರು.

ಚರ್ಚ್, ಮಸೀದಿ, ಪ್ರಾರ್ಥನಾ ಮಂದಿರಗಳಲ್ಲಿ ಮೈಕ್ ಬಳಕೆ ನಿಷೇಧ; ವಾಗ್ವಾದ

'ನಗರಸಭೆ ಆಯವ್ಯಯದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ಮಸೀದಿ, ಚರ್ಚ್, ಪ್ರಾರ್ಥನಾ ಮಂದಿರಗಳಲ್ಲಿ ಮೈಕ್ ಅಳವಡಿಕೆ ನಿಷೇಧಿಸುವುದಾಗಿ ಉಲ್ಲೇಖಿ ಸಿದ್ದು, ಬಜೆಟ್ ಮೇಲಿನ ಚರ್ಚೆವೇಳೆ ನಗರಸಭೆ ಸದಸ್ಯ ಲಕ್ಷ್ಮಣ್ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಕೇವಲ ಮಸೀದಿ ಚರ್ಚ್‍ಗಳಿಗೆ ಮಾತ್ರ ಏಕೆ ಈ ನಿಯಮ ದೇವಸ್ಥಾನಗಳಲ್ಲೂ ಮೈಕ್ ಬಳಕೆ ಮಾಡಲಾಗುತ್ತದೆ. ಈ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಒತ್ತಾಯಿಸಿದರು. ಈ ವೇಳೆ ಆಡಳಿತ ಪಕ್ಷ, ವಿರೋಧ ಪಕ್ಷಗಳ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಮಧ್ಯಪ್ರವೇಶಿಸಿದ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಂದಿರ ಎಂದರೇ ದೇವಸ್ಥಾನ ಈ ನಿಯಮ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಬಜೆಟ್ ಮಂಡನೆಗೂ ಮುನ್ನ ಗೋಪೂಜೆ: ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅಧ್ಯಕ್ಷರಾದ ಬಳಿಕ ಇದು ಅವರು ಮಂಡಿಸಿದ ಮೊದಲ ಬಜೆಟ್ ಆಗಿದ್ದು, ಬಜೆಟ್ ಮಂಡನೆಗೂ ಮುನ್ನ ನಗರಸಭೆ ಮುಂಭಾಗದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಗೋಪೂಜೆ ಸಲ್ಲಿಸಿದರು. ತಮ್ಮ ಪಕ್ಷದ ಸದಸ್ಯರ ಜೊತೆಗೆ ಸಭಾಂಗಣಕ್ಕೆ ಬಂದು ಬಜೆಟ್ ಮಂಡನೆಗೂ ಮೊದಲು ದತ್ತಾತ್ರೇಯ ಸ್ವಾಮಿಯನ್ನು ನೆನೆದರು. ನಂತರ 31 ಅಂಶಗಳನ್ನು ಒಳಗೊಂಡ ಬಜೆಟ್ ಮಂಡಿಸಿದರು.

ಅಭಿವೃದ್ಧಿ ಪೂರಕ ಬಜೆಟ್ ಆಗಿದೆ. ಪ್ರತೀ ಬಜೆಟ್‍ನಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡಬೇ ಕೆಂಬ ಅಂಶ ಬರುತ್ತಿದೆ. ಆದರೆ ಅದು ಸಕಾರಗೊಳ್ಳುತ್ತಿಲ್ಲ, ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ಮುಸ್ಸಿಪಾಲ್ ಆಸ್ಪತ್ರೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು.'

-ಟಿ.ರಾಜಶೇಖರ್, ಸದಸ್ಯ.

ನಗರಸಭೆ ಬಜೆಟ್‍ನಲ್ಲಿ ಗೋವುಗಳ ಸಂರಕ್ಷಣೆಗೆ ಆದ್ಯತೆ ನೀಡಿರುವುದು ಉತ್ತಮ ಬೆಳವಣಿಗೆ. ನಗರದ ಅಭಿವೃದ್ಧಿ ದೃಷ್ಟಿಯಿಂದ ಇದು ಅತ್ಯುತ್ತಮ ಬಜೆಟ್ ಎಂದು ಕೊಂಡಾಡಿದರು.

-ಕವಿತಾಶೇಖರ್, ಸದಸ್ಯೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News