ಬಿರ್ಭೂಮ್ ಹತ್ಯೆಯ ಹಿಂದೆ ಪಿತೂರಿ: ಮಮತಾ ಬ್ಯಾನರ್ಜಿ

Update: 2022-03-27 19:30 GMT

ಜಮ್ಮು: ಬಿರ್ಭೂಮ್ನಲ್ಲಿ ನಡೆದ ಮಹಿಳೆ ಹಾಗೂ ಮಕ್ಕಳು ಸೇರಿದಂತೆ 8 ಮಂದಿಯ ಹತ್ಯೆಯ ಹಿಂದೆ ಪಿತೂರಿ ಇತ್ತು ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವಿವಾರ ಹೇಳಿದ್ದಾರೆ.

ತನಿಖೆ ನಡೆಸುವ ಸಂದರ್ಭ ಬಿಜೆಪಿಯ ಆದೇಶವನ್ನು ಸಿಬಿಐ ಅನುಸರಿಸಿದರೆ ತೃಣಮೂಲ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

 ಉತ್ತರ ಬಂಗಾಳದ ಬಾಗ್ಡೋಗ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘‘ಇದರ ಹಿಂದೆ ಪಿತೂರಿ ಇದೆ ಎಂದು ನಾನು ಈಗಲೂ ಭಾವಿಸುತ್ತೇನೆ. ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವುದು ಉತ್ತಮ ನಿರ್ಧಾರ. ಆದರೆ, ಬಿಜೆಪಿಯ ಆದೇಶವನ್ನು ಮಾತ್ರ ಅನುಸರಿಸಿದರೆ, ನಾವು ಪ್ರತಿಭಟನೆಗೆ ಸಿದ್ಧರಾಗುತ್ತೇವೆ” ಎಂದು ಹೇಳಿದ್ದಾರೆ.

‘ಠಾಗೂರ್ ನೋಬೆಲ್ ಪ್ರಶಸ್ತಿ ಕಳವು, ನೆಟಾಯಿ ಘಟನೆ ಹಾಗೂ ತಾಪಸಿ ಮಲಿಕ್ ಪ್ರಕರಣದ ತನಿಖೆ ಸೇರಿದಂತೆ ಈ ಹಿಂದಿನ ಹಲವು ಪ್ರಕರಣಗಳಲ್ಲಿ ಸಿಬಿಐ ನ್ಯಾಯ ಒದಗಿಸಲು ವಿಫಲವಾಗಿರುವುದನ್ನು ನಾವು ಗಮನಿಸಿದ್ದೇವೆ. ಆದುದರಿಂದ ಸಿಬಿಐ ಬದಲಿಗೆ ವಿಶೇಷ ತನಿಖಾ ತಂಡ ಉತ್ತಮವಾಗಿ ತನಿಖೆ ನಡೆಸಬೇಕುʼ ಎಂದು ಅವರು ಹೇಳಿದರು.

 ‘‘ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನನ್ನು ಇನ್ನೊಂದು ಪಕ್ಷದ ಕಾರ್ಯಕರ್ತ ಹತ್ಯೆಗೈದಿದ್ದಾನೆ. ಆದರೆ, ಎಲ್ಲೆಲ್ಲೂ ಟಿಎಂಸಿಯನ್ನು ಮಾತ್ರ ಟೀಕಿಸಲಾಗುತ್ತಿದೆ. ನಾನು ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ಅಲ್ಲದೆ, ಈ ಹತ್ಯೆಗೆ ಮೂಲ ಕಾರಣ ಏನು ಎಂಬುದು ತಿಳಿದಿದೆ. ಉತ್ತರಪ್ರದೇಶ ದಿಲ್ಲಿ, ಕರ್ನಾಟಕ, ತ್ರಿಪುರಾ ಹಾಗೂ ಅಸ್ಸಾಂನಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ.

ಹಲವು ಪ್ರಕರಣಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಘಟನಾ ಸ್ಥಳಕ್ಕೆ ಹೋಗಲು ಅನುಮತಿ ನೀಡಿರಲಿಲ್ಲ. ಆದರೆ, ಬಿರ್ಭೂಮ್ ಗೆ ಯಾವುದೇ ರಾಜಕೀಯ ಪಕ್ಷ ಭೇಟಿ ನೀಡುವುದಕ್ಕೆ ನಾವು ನಿರ್ಬಂಧಿಸಿಲ್ಲ” ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News