ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯಿಂದ ಇಂದಿನಿಂದ 2 ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರ ಆರಂಭ

Update: 2022-03-28 04:54 GMT

ಹೊಸದಿಲ್ಲಿ: ಕೇಂದ್ರ ಸರಕಾರದ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯಿಂದ 48 ಗಂಟೆಗಳ ಭಾರತ್ ಬಂದ್ ಅಥವಾ ರಾಷ್ಟ್ರವ್ಯಾಪಿ ಮುಷ್ಕರವು ಸೋಮವಾರ ಹಲವಾರು ರಾಜ್ಯಗಳಲ್ಲಿ ಆರಂಭವಾಯಿತು. ಕೆಲವು ಪ್ರದೇಶಗಳಲ್ಲಿ ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರಿತು.

ಕಾರ್ಮಿಕರು, ರೈತರು ಹಾಗೂ  ಜನರ ಮೇಲೆ ಪರಿಣಾಮ ಬೀರುವ ಸರಕಾರದ ನೀತಿಗಳನ್ನು ಪ್ರತಿಭಟಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯಿಂದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಟ್ರೇಡ್ ಯೂನಿಯನ್‌ಗಳು ಗಣನೀಯವಾದ ಹಿಡಿತವನ್ನು ಹೊಂದಿರುವ ಎಡರಂಗ ಆಡಳಿತದ ಕೇರಳದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಕೆಲವು ಖಾಸಗಿ ವಾಹನಗಳು ಮಾತ್ರ ಸಂಚರಿಸುತ್ತಿರುವುದು ಕಂಡುಬಂತು. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ನಡೆಸುತ್ತಿದ್ದ ಬಸ್‌ಗಳು ರಸ್ತೆಗಿಳಿದಿವೆ.

ಪಶ್ಚಿಮ ಬಂಗಾಳದಲ್ಲಿ ಕಾರ್ಮಿಕ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರೂ, ರಾಜ್ಯ ಸರಕಾರ ಎಲ್ಲಾ ಕಚೇರಿಗಳನ್ನು ತೆರೆದಿರಲು ಸೂಚಿಸಿದೆ ಹಾಗೂ  ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಿದೆ. ಕೋಲ್ಕತ್ತಾದ ಜಾದವ್‌ಪುರ ರೈಲು ನಿಲ್ದಾಣದಲ್ಲಿ ಎಡರಂಗದ ಸದಸ್ಯರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ರೈಲು ಹಳಿಗಳಿಗೆ ತಡೆಯೊಡ್ಡಿದರು.

 ದೇಶಾದ್ಯಂತ 20 ಕೋಟಿಗೂ ಹೆಚ್ಚು ಸಂಘಟಿತ-ಅಸಂಘಟಿತ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆಯಲ್ಲಿದ್ದಾರೆ ಎಂದು ಆಲ್ ಇಂಡಿಯನ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮರ್ಜೀತ್ ಕೌರ್ ಪಿಟಿಐಗೆ ತಿಳಿಸಿದರು

ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಸರಕಾರದ ಯೋಜನೆ ಹಾಗೂ  ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ 2021 ಅನ್ನು ವಿರೋಧಿಸಿ ಬ್ಯಾಂಕ್ ಒಕ್ಕೂಟಗಳು ಮುಷ್ಕರದಲ್ಲಿ ಭಾಗವಹಿಸುತ್ತಿವೆ.

ಬ್ಯಾಂಕ್‌ಗಳಲ್ಲದೆ, ಉಕ್ಕು, ತೈಲ, ಟೆಲಿಕಾಂ, ಕಲ್ಲಿದ್ದಲು, ಅಂಚೆ, ಆದಾಯ ತೆರಿಗೆ, ತಾಮ್ರ ಹಾಗೂ  ವಿಮೆಯಂತಹ ವಿವಿಧ ಕ್ಷೇತ್ರಗಳ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ರೈಲ್ವೇ ಹಾಗೂ  ರಕ್ಷಣಾ ವಲಯದ ಒಕ್ಕೂಟಗಳು ನೂರಾರು ಸ್ಥಳಗಳಲ್ಲಿ ಮುಷ್ಕರಕ್ಕೆ ಬೆಂಬಲ ನೀಡುವ ನಿರೀಕ್ಷೆಯಿದೆ. ರಸ್ತೆ, ಸಾರಿಗೆ ಹಾಗೂ  ವಿದ್ಯುತ್ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News