ನಿಷೇಧಾಜ್ಞೆ ಉಲ್ಲಂಘಿಸಿ ಎಸೆಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಸಚಿವ ಶ್ರೀರಾಮುಲು ಭೇಟಿ

Update: 2022-03-31 02:35 GMT

ಬಳ್ಳಾರಿ: ನಿಷೇಧಾಜ್ಞೆ ಉಲ್ಲಂಘಿಸಿ ಸಾರಿಗೆ ಸಚಿವ ಶ್ರೀರಾಮುಲು ನಗರದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ  ಬುಧವಾರ ಭೇಟಿ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ ಎಂದು deccanherald.com ವರದಿ ಮಾಡಿದೆ.

ಶ್ರೀರಾಮುಲು ಭೇಟಿ ಪರೀಕ್ಷಾ ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆ ಎಂದು ಹಲವು ಮಂದಿ ಅಭಿಪ್ರಾಯಪಟ್ಟಿದ್ದು, ಇಂಥ ಭೇಟಿ ವಿದ್ಯಾರ್ಥಿಗಳಲ್ಲಿ ಒತ್ತಡ ಸೃಷ್ಟಿಸುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ಅಡ್ಡಿಪಡಿಸಿದಂತಾಗುತ್ತದೆ ಎಂದು ಪೋಷಕರು ಹೇಳಿದ್ದಾರೆ.

ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಾಪತಿ, ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಡಿಡಿಪಿಐ ಸಿ.ರಾಮಪ್ಪ ಮತ್ತು ಇತರ ಹಲವು ಅಧಿಕಾರಿಗಳ ಜತೆ ಸಚಿವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದರು.

ಪರೀಕ್ಷೆ ನಡೆಯುತ್ತಿರುವಾಗ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುವುದು ತಪ್ಪಾಗುತ್ತದೆ ಎಂಬ ಅಧಿಕಾರಿಗಳ ಸಲಹೆಯನ್ನು ನಿರ್ಲಕ್ಷಿಸಿ ಸಚಿವರು ಭೇಟಿ ನೀಡಿದ್ದಾಗಿ ರಾಮಪ್ಪ ಹೇಳಿದ್ದಾರೆ.

"ಪರೀಕ್ಷಾ ಕೇಂದ್ರಗಳ ಮೂಲಸೌಕರ್ಯಗಳನ್ನು ವೀಕ್ಷಿಸಲು ಬಯಸಿದ್ದು, ವಿದ್ಯಾರ್ಥಿಗಳಿಗೆ ಅಡ್ಡಿಪಡಿಸುವ ಉದ್ದೇಶದಿಂದ ಅಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾಗಿ" ಡಿಡಿಪಿಐ ವಿವರಿಸಿದರು.

ಪರೀಕ್ಷೆ ಬಹಿಷ್ಕಾರ: ಎಸೆಸೆಲ್ಸಿ ಇಂಗ್ಲಿಷ್ ಭಾಷಾ ಪರೀಕ್ಷೆಯ ವೇಳೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ್ದನ್ನು ವಿರೋಧಿಸಿ ವಿದ್ಯಾರ್ಥಿನಿಯೊಬ್ಬರು ಪರೀಕ್ಷೆ ಬಹಿಷ್ಕರಿಸಿದರು. ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕು ಆದರ್ಶ ಆಂಗ್ಲಮಾಧ್ಯಮ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಅಂಜುಮನ್ ಹೈಸ್ಕೂಲ್‍ನ ವಿದ್ಯಾರ್ಥಿನಿ ಅಲ್ಫಿಯಾ ನಾಝ್ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದಾಗ ಹಿಜಾಬ್ ಧರಿಸಿದ್ದು, ಬಿಇಓ ಎಚ್.ಎಂ.ಹರ್ನಾಳ್, ಹಿಜಾಬ್ ತೆಗೆಯುವಂತೆ ವಿದ್ಯಾರ್ಥಿನಿಯ ಮನವೊಲಿಕೆ ಪ್ರಯತ್ನ ಮಾಡಿದರು. ಆದರೆ ಪರೀಕ್ಷೆಗಿಂತ ನನಗೆ ಹಿಜಾಬ್ ಮುಖ್ಯ ಎಂದು ಹೇಳಿ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರದಿಂದ ಹೊರ ನಡೆದಳು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News