ಸುಳ್ಳು ವಿಚಾರ ಹರಡುವ 'ದಿ ಕಾಶ್ಮೀರ್‌ ಫೈಲ್ಸ್ʼ ಪ್ರದರ್ಶನಕ್ಕೆ ಅನುಮತಿ ನೀಡಬಾರದಿತ್ತು: ಶರದ್‌ ಪವಾರ್

Update: 2022-04-01 11:47 GMT

ಮುಂಬೈ: 'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರದ ಮೂಲಕ ಬಿಜೆಪಿ ಸುಳ್ಳು ವಿಚಾರವನ್ನು ಹರಡುತ್ತಿದೆ ಎಂದು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದಾರೆ. ಇಂತಹ ಚಲನಚಿತ್ರವನ್ನು ಪ್ರದರ್ಶನಕ್ಕೆ ಅನುಮತಿಸಬಾರದಾಗಿತ್ತು ಎಂದು ಎನ್‍ಸಿಪಿ ಯ ದಿಲ್ಲಿ ಅಲ್ಪಸಂಖ್ಯಾತ ಘಟಕದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ಹೇಳಿದ್ದಾರೆ.

"ಆದರೆ ಈ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿಗಳನ್ನು ಒದಗಿಸಲಾಗಿದೆ ಹಾಗೂ  ಈ ದೇಶದಲ್ಲಿ ಏಕತೆ ಇರುವಂತೆ ನೋಡಿಕೊಳ್ಳಬೇಕಾದವರು ಜನರಿಗೆ ಈ ಚಲನಚಿತ್ರ ವೀಕ್ಷಿಸುವಂತೆ ಹೇಳುವ ಮೂಲಕ ಜನರಲ್ಲಿ ಆಕ್ರೋಶ ಮೂಡುವಂತೆ ಮಾಡುತ್ತಿದ್ದಾರೆ" ಎಂದರು.

ಮುಸ್ಲಿಮರನ್ನು ಕೂಡ ಕಾಶ್ಮೀರ ಬಿಟ್ಟು ತೆರಳುವಂತೆ ಮಾಡಲಾಗಿದೆ ಹಾಗೂ ಪಾಕ್ ಮೂಲದ ಉಗ್ರ ಗುಂಪುಗಳು ಕಾಶ್ಮೀರಿ ಹಿಂದುಗಳು ಮತ್ತು ಮುಸ್ಲಿಮರ ಮೇಳಿನ ದಾಳಿಗಳಿಗೆ ಕಾರಣ ಎಂದು ಅವರು ಹೇಳಿದರು.

ಕಾಶ್ಮೀರಿ ಪಂಡಿತರ ಪಲಾಯನಕ್ಕೆ ಜವಾಹರಲಾಲ್ ನೆಹರೂ ಅವರನ್ನು ಬಿಜೆಪಿ ದೂರುವುದನ್ನು ಖಂಡಿಸಿದ ಪವಾರ್,  ಕೇಸರಿ ಪಕ್ಷದ ಬೆಂಬಲವಿದ್ದ ವಿಪಿ ಸಿಂಗ್ ಆಗ ಪ್ರಧಾನಿಯಾಗಿದ್ದರು ಎಂದರು.

"ಆಗ ಮುಫ್ತಿ ಮೊಹಮ್ಮದ್ ಸಯೀದ್ ಅವರು  ಜಮ್ಮು ಕಾಶ್ಮೀರದ ಗೃಹ ಸಚಿವರಾಗಿದ್ದರು ಮತ್ತು ಮುಂದೆ ಬಿಜೆಪಿ ಅಭ್ಯರ್ಥಿಯಾಗಿ ದಿಲ್ಲಿಯಿಂದ ಲೋಕಸಭಾ ಚುನಾವಣೆ ಸ್ಪರ್ಧಿಸಿದ್ದ ಜಗಮೋಹನ್ ಅವರು  ರಾಜ್ಯಪಾಲರಾಗಿದ್ದರು"  ಎಂದು ಪವಾರ್ ಹೇಳಿದರು.

ನರೇಂದ್ರ ಮೋದಿ ಸರಕಾರಕ್ಕೆ ಕಾಶ್ಮೀರಿ ಪಂಡಿತರ ಬಗ್ಗೆ ಕಾಳಜಿಯಿದ್ದರೆ ಅವರ ಪುನರ್ವಸತಿಗೆ  ಶ್ರಮಿಸಬೇಕೇ ಹೊರತು ಅಲ್ಪಸಂಖ್ಯಾತರ ವಿರುದ್ಧ ಜನರನ್ನು ಪ್ರಚೋದಿಸುವ ಕೆಲಸ ಮಾಡಬಾರದು ಎಂದು ಪವಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News