ಹಾಲು ಉತ್ಪಾದಕರಿಗೆ ಕ್ರೆಡಿಟ್ ಕಾರ್ಡ್ ವಿತರಣೆ: ಕೇಂದ್ರ ಗೃಹ ಸಚಿವ ಅಮಿತ್ ಶಾ

Update: 2022-04-01 16:12 GMT

ಬೆಂಗಳೂರು: ರಾಜ್ಯದಲ್ಲಿ ನೂತನವಾಗಿ ಆರಂಭವಾಗಿರುವ ‘ನಂದಿನಿ ಕ್ಷೀರ ಸಮೃದ್ದಿ ಸಹಕಾರ ಬ್ಯಾಂಕ್' ಮೂಲಕ ಎಲ್ಲ ಹಾಲು ಉತ್ಪಾದಕರಿಗೆ ‘ಕ್ರೆಡಿಟ್ ಕಾರ್ಡ್ ವಿತರಣೆ' ಮಾಡಲು ಕೇಂದ್ರ ಸರಕಾರ ಉದ್ದೇಶಿಸಿದ್ದು, ಇದರ ಪ್ರಾಯೋಗಿಕ ಯೋಜನೆ ಕರ್ನಾಟಕ ರಾಜ್ಯದಿಂದಲೇ ಆರಂಭವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದ್ದಾರೆ.

ಶುಕ್ರವಾರ ಇಲ್ಲಿನ ಅರಮನೆ ಮೈದಾನದಲ್ಲಿ ಸಹಕಾರ ಸಮ್ಮೇಳನದಲ್ಲಿ ಮೊದಲಿಗೆ ಗೋ ಪೂಜೆ ನೆರವೇರಿಸಿ, ಕೆಎಂಎಫ್ ಮಳಿಗೆ, ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕಿನ ಲಾಂಛನ ಬಿಡುಗಡೆ ಹಾಗೂ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೈನುಗಾರರಿಗೆ ಕ್ರೆಡಿಟ್ ಕಾರ್ಡ್ ವಿವರಣೆ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರ ಅಗತ್ಯ ಸಹಕಾರ-ಸಹಾಯ ನೀಡುತ್ತದೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಸಹಕಾರಿ ಸಂಘದ ಪ್ರಮುಖ ರೂವಾರಿ ಸಿದ್ದನಗೌಡ ರಾಮನಗೌಡ ಪಾಟೀಲರಿಗೆ ನಮಸ್ಕರಿಸುತ್ತೇನೆ. ಸಹಕಾರಿ ಆಂದೋಲನದಲ್ಲಿ ರಾಜ್ಯ ‘ಎ' ಗ್ರೇಡ್‍ನಲ್ಲಿದೆ. ಸಹಕಾರಿ ಕ್ಷೇತ್ರದಲ್ಲಿರುವ ಭ್ರಷ್ಟಾಚಾರಕ್ಕೆ ಕೊನೆ ಹಾಡಬೇಕಿದೆ. ಆ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಪಾರದರ್ಶಕತೆ ತರಬೇಕಾಗಿದೆ. ಸಹಕಾರಿ ಕ್ಷೇತ್ರ ಅತ್ಯಂತ ಸದೃಢವಾಗಿದೆ ಎಂದು ಅಮಿತ್ ಶಾ ತಿಳಿಸಿದರು.

ಅಮೂಲ್ ಸಂಸ್ಥೆ, ಲಿಜ್ಜಡ್ ಪಾಪಡ್, ಇಫ್ಕೋ, ಕ್ರಿಪ್ಕೋಗಳು ಸಹಕಾರಿ ಆಂದೋಲನದ ಫಲಶೃತಿ. ರಾಜ್ಯದಲ್ಲಿ ‘ನಂದಿನಿ' ಮುಂಚೂಣಿಯಲ್ಲಿದೆ. ಸಹಕಾರ ಕ್ಷೇತ್ರದಲ್ಲಿ ಅಭಿವೃದ್ದಿಗೆ ಇನ್ನೂ ಸಾಕಷ್ಟು ಅವಕಾಶಗಳಿವೆ. ಜತೆಗೆ ಸವಾಲುಗಳೂ ಇವೆ. ಆ ಸವಾಲುಗಳನ್ನು ಮೆಟ್ಟಿ ನಿಲ್ಲದಿದ್ದರೆ ಸಹಕಾರ ಆಂದೋಲನಕ್ಕೆ ಕಷ್ಟವಿದೆ. ಹೀಗಾಗಿ ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವದ ವೇಳೆಯಲ್ಲಿ ನಾವು ಒಂದು ಸಂಕಲ್ಪ ಮಾಡಬೇಕು ಎಂದು ಅಮಿತ್ ಶಾ ಇದೇ ವೇಳೆ ಕರೆ ನೀಡಿದರು.

ದೇಶದ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವದ ವೇಳೆಗೆ ನಾವು ಪ್ರತಿಯೊಂದು ಕುಟುಂಬಕ್ಕೂ ಸಹಕಾರ ಆಂದೋಲನವನ್ನು ಮುಟ್ಟಿಸುವ ಮೂಲಕ ಬಡತನವನ್ನು ಹೊಡೆದೋಡಿಸಬೇಕಾಗಿದೆ. ಸಹಕಾರಿ ಬ್ಯಾಂಕುಗಳಲ್ಲಿ ಆಧುನಿಕ ತಾಂತ್ರಿಕತೆ ಬಳಕೆ ಮಾಡುವ ಮೂಲಕ ಗ್ರಾಮೀಣ ಪ್ರದೇಶದ ಜನರ ಆರ್ಥಿಕತೆ ವೃದ್ಧಿಗೆ ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸಬೇಕು ಎಂದು ಅಮಿತ್ ಶಾ ಸಲಹೆ ನೀಡಿದರು.

ಆರ್ಥಿಕತೆಯ ಆಧಾರಸ್ತಂಭ: ‘ರೈತರು ಮತ್ತು ಸಹಕಾರ ಕ್ಷೇತ್ರಗಳು ಗ್ರಾಮೀಣ ಆರ್ಥಿಕತೆಯ ಆಧಾರಸ್ತಂಭಗಳು. ಗ್ರಾಮೀಣ ಆರ್ಥಿಕತೆ ಹೆಚ್ಚಬೇಕು. ಜೊತೆಗೆ ಪಾರದರ್ಶಕತೆ, ಪ್ರಾಮಾಣಿಕತೆಯೂ ಬರಬೇಕು. ಆರ್ಥಿಕ, ಸಾಮಾಜಿಕ ಮಾತ್ರವಲ್ಲದೆ, ರಾಜಕೀಯ ಶಕ್ತಿಯೂ ಬರುತ್ತದೆ' ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕ್ಷೀರ ಸಮೃದ್ಧಿ ಬ್ಯಾಂಕ್: ‘ಕ್ಷೀರ ಕ್ರಾಂತಿಯ ಎರಡನೆ ಹೆಜ್ಜೆ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಆಗಿದೆ. ರಾಜ್ಯ ಸರಕಾರ 100 ಕೋಟಿ ರೂ. ಗಳನ್ನು ನೀಡಲಿದ್ದು, ಪ್ರತಿ ತಾಲೂಕುಗಳಲ್ಲಿಯೂ ಕ್ಷೀರ ಸಮೃದ್ಧಿ ಬ್ಯಾಂಕ್‍ಗಳು ಕಾರ್ಯ ನಿರ್ವಹಿಸಲಿವೆ' ಸಹಕಾರಿಗಳಿಂದ ‘ಯಶಸ್ವಿನಿ ಯೋಜನೆ' ಮರುಜಾರಿಗೆ ಒತ್ತಾಯವಿತ್ತು. 300 ಕೋಟಿ ರೂ.ಬಜೆಟ್‍ನಲ್ಲಿ ಮೀಸಲಿಟ್ಟಿದ್ದು, ಇದು ಗ್ರಾಮೀಣ ಜನರ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿದೆ' ಎಂದು ಅವರು ಹೇಳಿದರು.

‘ಯಾವುದೇ ಸರಕಾರ ಇಲ್ಲದ ಸಂದರ್ಭದಲ್ಲಿ ಸಹಕಾರ ಕ್ಷೇತ್ರ ಚಟುವಟಿಕೆಯಿಂದ ಕೆಲಸ ನಿರ್ವಹಿಸಿದೆ. ಇದರಿಂದ ಏನೆಲ್ಲ ಸಾಧಿಸಬಹುದು ಎಂಬುದನ್ನು ಕರ್ನಾಟಕ ಹಾಲು ಉತ್ಪಾದಕ ಮಹಾ ಮಂಡಳಿ (ಕೆಎಂಎಫ್) ಮಾಡಿ ತೋರಿಸಿದೆ. 33 ಲಕ್ಷ ರೈತರಿಗೆ ಬಡ್ಡಿರಹಿತ ಸಾಲ ಕೊಡುವ ಶಕ್ತಿ ಸಹಕಾರ ರಂಗಕ್ಕೆ ಬಂದಿದೆ' ಎಂದು ಅವರು ತಿಳಿಸಿದರು.

‘ಕೃಷಿಯಿಂದ ಸಹಕಾರ ರಂಗವನ್ನ ಬೇರ್ಪಡಿಸಿದ್ದು ಪ್ರಧಾನಿ ಮೋದಿ ಹೊಸ ಚಿಂತನೆ. 5,775 ಪ್ಯಾಕ್ಸ್‍ಗಳನ್ನು 1 ವರ್ಷದಲ್ಲಿ ಮಾಡಲಿದ್ದೇವೆ. ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯದ ಸಾಧನೆ ಅನನ್ಯ. ಸರಕಾರ ಸಹಕಾರಿ ಕ್ಷೇತ್ರ ಮತ್ತು ಹೈನುಗಾರಿಕೆಯಲ್ಲಿ ತೊಡಗಿರುವ ಗ್ರಾಮೀಣ ಜನತೆಗೆ ನೆರವು ನೀಡಲು ಬದ್ಧವಾಗಿದೆ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ರೈತರಿಗೆ ಬಡ್ಡಿರಹಿತ ಸಾಲ: ‘ಸಹಕಾರಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಈ ವರ್ಷ ರಾಜ್ಯದ 33 ಸಾವಿರ ರೈತರಿಗೆ ಬಡ್ಡಿ ರಹಿತ ಸಾಲ ನೀಡಿದ್ದು, ಹಾಲು ಉತ್ಪಾದಕರ ನಂದಿನಿ ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್ ನೆರವಾಗಲಿದೆ. ಹಾಲು ಉತ್ಪಾದನೆಯ ಜೊತೆಗೆ ರೈತರಿಗೆ ವಿಶೇಷ ಕೊಡುಗೆಯನ್ನು ನೀಡಲಿದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಸಹಕಾರಿ ರಂಗ ಸರಕಾರವನ್ನು ಆಳುತ್ತಿವೆ. ನಮ್ಮಲ್ಲಿ ರಾಜಕೀಯ ಸಹಕಾರ ಕ್ಷೇತ್ರವನ್ನು ನಿಯಂತ್ರಿಸುತ್ತಿದೆ. ಸಹಕಾರಿಗಳು ಸ್ವಾವಲಂಬಿಗಳಾಗಿ ಬ್ಯಾಂಕ್‍ಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಸಚಿವರಾದ ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಆರಗ ಜ್ಞಾನೇಂದ್ರ, ಆನಂದ ಸಿಂಗ್, ಬಿ.ಸಿ.ಪಾಟೀಲ್, ಶಿವರಾಮ ಹೆಬ್ಬಾರ್, ಕೆ.ಗೋಪಾಲಯ್ಯ, ಬಿ.ಎ.ಬಸವರಾಜ, ಮುರುಗೇಶ್ ನಿರಾಣಿ, ಪ್ರಭು ಚೌಹಾಣ್, ಶಶಿಕಲಾ ಜೊಲ್ಲೆ, ಸಹಕಾರ ಮಹಾ ಮಂಡಳದ ಅಧ್ಯಕ್ಷ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಸಹಕಾರಿ ಧುರೀಣರು ಪಾಲ್ಗೊಂಡಿದ್ದರು.

'ನಷ್ಟಕ್ಕೆ ಸಿಲುಕಿದ ಬ್ಯಾಂಕ್‍ಗಳ ಆರ್ಥಿಕ ಪುನಶ್ಚೇತನ'
ಆರ್ಥಿಕ ನಷ್ಟಕ್ಕೆ ಸಿಲುಕಿರುವ ಕೃಷಿ ಸಹಕಾರಿ ಪತ್ತಿನ ಬ್ಯಾಂಕುಗಳ ಆರ್ಥಿಕ ಪುನಶ್ಚೇತನಕ್ಕೆ ಶೀಘ್ರದಲ್ಲೆ ಕೇಂದ್ರ ಸರಕಾರ ಪ್ರತ್ಯೇಕ ನಿಯಮವನ್ನು ರೂಪಿಸಲಿದ್ದು, ಇದಕ್ಕೆ ರಾಜ್ಯ ಸರಕಾರಗಳು ಅಗತ್ಯ ಬೆಂಬಲ-ಸಹಕಾರ ನೀಡಬೇಕು.
-ಅಮಿತ್ ಶಾ, ಕೇಂದ್ರ ಗೃಹ ಸಚಿವ

ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಗಣಕೀಕರಣ ಕಾರ್ಯವನ್ನು ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಕರ್ನಾಟಕದಲ್ಲಿ 5,775 ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣವನ್ನು ಒಂದೇ ವರ್ಷದಲ್ಲಿ ಮಾಡುವಂತಹ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಕೇಂದ್ರ ಸರಕಾರದಿಂದ ಶೇ. 60 ರಷ್ಟು ಹಾಗೂ ರಾಜ್ಯ ಸರಕಾರ ಮತ್ತು ಸಹಕಾರಿ ಸಂಸ್ಥೆಗಳು ಶೇ. 40ರಷ್ಟು ಹೂಡಿಕೆ ಮಾಡಿ ಮೂರು ವರ್ಷಗಳಲ್ಲಿ ಮಾಡುವುದನ್ನು ಒಂದೇ ವರ್ಷದಲ್ಲಿ ಸಾಧಿಸಲಾಗುವುದು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News