ನನ್ನ ಜೀವಕ್ಕೆ ಅಪಾಯ ಇದೆ : ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

Update: 2022-04-02 02:19 GMT
ಇಮ್ರಾನ್ ಖಾನ್ (ಫೋಟೊ : PTI)

ಇಸ್ಲಾಮಾಬಾದ್: "ನನ್ನ ಜೀವಕ್ಕೆ ಅಪಾಯವಿದೆ ಎಂಬ ಬಗ್ಗೆ ನಂಬಲರ್ಹ ಮಾಹಿತಿ ಇದೆ; ಆದರೆ ನನಗೆ ಈ ಬಗ್ಗೆ ಭಯ ಇಲ್ಲ. ಸ್ವತಂತ್ರ ಮತ್ತು ಪ್ರಜಾಸತ್ತಾತ್ಮಕ ಪಾಕಿಸ್ತಾನಕ್ಕಾಗಿ ಹೋರಾಟ ಮುಂದುವರಿಸುತ್ತೇನೆ" ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದಾರೆ.

ರವಿವಾರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ಸರ್ಕಾರ ವಿರುದ್ಧದ ಅವಿಶ್ವಾಸ ನಿರ್ಣಯ ಮೇಲಿನ ಮತದಾನ ನಡೆಯುವ ಮುನ್ನ  ARY ನ್ಯೂಸ್‍ಗೆ ನೀಡಿದ ವಿಶೇಷ ಸಂದರ್ಶನದಲ್ಲಿ "ಆಡಳಿತ ಯಂತ್ರ (ಪ್ರಬಲ ಸೇನೆ) ನನಗೆ ಮೂರು ಅವಕಾಶಗಳನ್ನು ನೀಡಿದೆ; ಅವಿಶ್ವಾಸ ಮತ, ಅವಧಿಗೆ ಮುನ್ನ ಚುನಾವಣೆ ಅಥವಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದು" ಎಂದು ಸ್ಪಷ್ಟಪಡಿಸಿದರು.

"ಅವಧಿಪೂರ್ವ ಚುನಾವಣೆ ಅತ್ಯುತ್ತಮ ಎಂದು ನಾನು ಹೇಳಿದ್ದೇನೆ. ನಾನು ರಾಜೀನಾಮೆ ನೀಡುವ ಬಗ್ಗೆ ಮತ್ತು ಅವಿಶ್ವಾಸ ನಿರ್ಣಯದ ಬಗ್ಗೆ ಯೋಚಿಸಿಲ್ಲ. ಕೊನೆಕ್ಷಣದ ವರೆಗೆ ನಾನು ಹೋರಾಡುತ್ತೇನೆ ಎಂಬ ನಂಬಿಕೆ ನನ್ನದು" ಎಂದರು. "ನನ್ನ ಜೀವಕ್ಕೆ ಅಪಾಯ ಇರುವುದು ಮಾತ್ರವಲ್ಲದೇ, ವಿದೇಶಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ವಿರೋಧ ಪಕ್ಷಗಳು ನನ್ನ ಚಾರಿತ್ರ್ಯ ಹರಣಕ್ಕೂ ಸಂಚು ರೂಪಿಸಿವೆ" ಎಂದು ಆಪಾದಿಸಿದರು.

"ನನ್ನ ಜೀವಕ್ಕೆ ಅಪಾಯ ಇದೆ ಎನ್ನುವುದನ್ನೂ ನಾನು ದೇಶಕ್ಕೆ ತಿಳಿಸಲು ಬಯಸುತ್ತೇನೆ. ಅವರು ನನ್ನ ಚಾರಿತ್ರ್ಯ ಹರಣಕ್ಕೂ ಯತ್ನಿಸುತ್ತಿದ್ದಾರೆ. ನನಗೆ ಮಾತ್ರವಲ್ಲ, ನನ್ನ ಪತ್ನಿಯ ಸ್ಥಿತಿಯೂ ಇದೇ ಆಗಿದೆ" ಎಂದು 69 ವರ್ಷದ ಇಮ್ರಾನ್‍ ಖಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News