ಮಡಿಕೇರಿ: ಹುಲಿಯುಗುರು, ಹಲ್ಲು, ಮೂಳೆ ಮಾರಾಟ ಯತ್ನ: 7 ಆರೋಪಿಗಳ ಬಂಧನ

Update: 2022-04-04 04:47 GMT

ಮಡಿಕೇರಿ ಏ.3 : ಹುಲಿಯುಗುರು ಮತ್ತು ಹಲ್ಲುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಉತ್ನಿಸುತ್ತಿದ್ದ ಜಾಲವನ್ನು ಹೆಬ್ಬಾಲೆ ಮರೂರು ಗ್ರಾಮದಲ್ಲಿ ಬಯಲಿಗೆಳೆದಿರುವ ಸಿಐಡಿ ಪೊಲೀಸ್ ಅರಣ್ಯ ಘಟಕ, ಏಳು ಆರೋಪಿಗಳನ್ನು ಬಂಧಿಸಿದೆ. 

ಗಣೇಶ, ಯೋಗೇಶ, ರಮೇಶ, ದೊರೇಶ, ನಟೇಶ, ನವೀನ್ ಹಾಗೂ ಶೇಖರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಹುಲಿಯ ಒಟ್ಟು 17 ಉಗುರುಗಳು, 1 ಕೋರೆ ಹಲ್ಲು, 6 ಹಲ್ಲಿನ ಚೂರುಗಳು, ಚರ್ಮದ ಒಂದು ಚಿಕ್ಕ ಭಾಗ, ಒಂದು ತಲೆ ಬುರುಡೆ ಅದರೊಂದಿಗೆ 2 ಹಲ್ಲುಗಳು, ತಲೆ ಬುರುಡೆಯ ಕೆಳ ದವಡೆಯ ಮೂಳೆ, 2 ಹಲ್ಲುಗಳು, ಬೆನ್ನು ಮೂಳೆ, ಎರಡು ಪಕ್ಕೆಲಬು, 4 ಕಾಲಿನ ಮೂಳೆಗಳು,  ವಿವಿಧ ಅಳತೆಯ 55 ಮೂಳೆಗಳು ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.

ಕುಶಾಲನಗರ ತಾಲ್ಲೂಕಿಗೆ ಒಳಪಟ್ಟ ಹೆಬ್ಬಾಲೆ ಗ್ರಾಮದಲ್ಲಿ ವರ್ಷದ ಹಿಂದೆ ಗಣೇಶ ಮತ್ತು ಯೋಗೇಶ್ ಎಂಬವರ ಜಮೀನಿನಲ್ಲಿ ಕಾಡು ಹಂದಿಯ ಉಪಟಳಕ್ಕೆ ಹಾಕಿದ್ದ ವಿದ್ಯುತ್ ತಂತಿಬೇಲಿಯ ಶಾಕ್‍ನಿಂದ ಹುಲಿಯೊಂದು ಮೃತಪಟ್ಟಿತ್ತು. ಮೃತಪಟ್ಟ ಹುಲಿಯನ್ನು ಗಣೇಶ, ಯೋಗೇಶ, ರಮೇಶರವರು ಹೊಲದಲ್ಲಿ ಗುಂಡಿ ತೆಗೆದು ಮುಚ್ಚಿ ಹಾಕಿದ್ದರು. ನಂತರ ಆರೋಪಿಗಳಾದ ರಮೇಶ, ದೊರೇಶ, ನಟೇಶ ಅವರು ಅದೇ ದಿನ ರಾತ್ರಿ, ಮುಚ್ಚಿದ್ದ ಮಣ್ಣು ತೆಗೆದು ಹುಲಿಯ ಮೃತ ದೇಹದಿಂದ ಕಾಲಿನ ಉಗುರುಗಳು, ಹಲ್ಲುಗಳು ಮತ್ತು ಚರ್ಮದ ಚಿಕ್ಕ ಚೂರನ್ನು ತೆಗೆದಿದ್ದರು. 

4 ಉಗುರು ಮತ್ತು ಹಲ್ಲಿನ ಚೂರುಗಳನ್ನು ನವೀನ್ ಹಾಗೂ ಶೇಖರ್ ಇದೇ ಏ.2 ರಂದು ಮಾರಾಟ ಮಾಡಲು ಯತ್ನಿಸಿದಾಗ  ಸಿಐಡಿ ಪೊಲೀಸ್ ಅರಣ್ಯ ಘಟಕದ ತಂಡ ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಬಂಧಿತರನ್ನು ವಿಚಾರಣೆಗೆ ಒಳಪಡಿಸಿದ ಸಿಐಡಿ ಪೊಲೀಸ್ ಅರಣ್ಯ ಘಟಕ  ತಂಡ, ಕೃತ್ಯ ನಡೆದ ಸ್ಥಳದಲ್ಲಿ ಹೂತು ಹಾಕಿದ್ದ ಹುಲಿಯ ದೇಹದ ಭಾಗಗಳನ್ನು ವಶ ಪಡಿಸಿಕೊಂಡಿತು.  ಆರೋಪಿ ರಮೇಶ ಹಾಗೂ ಸುರೇಶನ ಮನೆಯಿಂದ ಹುಲಿಯ ಉಗುರು ಮತ್ತು ಹಲ್ಲುಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿ.ಐ.ಡಿ. ಪೊಲೀಸ್ ಅರಣ್ಯ ಘಟಕದ  ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ  ಕೆ.ವಿ.ಶರತ್‍ಚಂದ್ರ ಅವರ ನಿರ್ದೇಶನದ ಮೇರೆಗೆ, ಮಡಿಕೇರಿ ಸಿ.ಐ.ಡಿ. ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಚಂದ್ರಕಾಂತ್‍ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿ.ಎಸ್.ಐ.  ಸಿ.ಯು. ಸವಿ, ಹೆಡ್ ಕಾನ್ಸ್‍ಟೇಬಲ್‍ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್ ಎ.ಜಿ., ಮೋಹನ, ದೇವಯ್ಯ, ಯೋಗೇಶ್ ಮತ್ತು ಕಾನ್ಸ್‍ಟೇಬಲ್‍ಗಳಾದ ಸ್ವಾಮಿ ಮಂಜುನಾಥ, ನಂದ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News