ಪಾಕ್: ಅವಿಶ್ವಾಸ ನಿರ್ಣಯ ತಿರಸ್ಕಾರ ಪ್ರಶ್ನಿಸಿದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್‌

Update: 2022-04-04 16:02 GMT
ಇಮ್ರಾನ್ ಖಾನ್ (ಫೋಟೊ : PTI)

ಇಸ್ಲಮಾಬಾದ್, ಎ.4: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಉಪಸ್ಪೀಕರ್ ವಜಾಗೊಳಿಸಿರುವುದನ್ನು ಮತ್ತು ಸಂಸತ್ ವಿಸರ್ಜನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಅಲ್ಲಿನ ಸುಪ್ರೀಂಕೋರ್ಟ್ ಮಂಗಳವಾರಕ್ಕೆ ಮುಂದೂಡಿದೆ.

 ಉಪಸ್ಪೀಕರ್ ನಡೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಮುಖ್ಯ ನ್ಯಾಯಾಧೀಶ ಉಮರ್ ಅಟ ಬಂದಿಯಾಲ್ ನೇತೃತ್ವದ ಪಂಚ ಸದಸ್ಯರ ವಿಸ್ತತ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿದ್ದು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ನ ಅಧ್ಯಕ್ಷ ಅಲ್ವಿ ಹಾಗೂ ಎಲ್ಲಾ ರಾಜಕೀಯ ಪಕ್ಷಗಳನ್ನೂ ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ. ಸೋಮವಾರದ ಕಲಾಪದ ಸಂದರ್ಭ, ಪ್ರಕರಣವನ್ನು ಸುಪ್ರೀಂಕೋರ್ಟ್‌ನ ಪೂರ್ಣಪೀಠಕ್ಕೆ ವಹಿಸಬೇಕು ಎಂಬ ವಿಪಕ್ಷಗಳ ವಾದವನ್ನು ಮುಖ್ಯ ನ್ಯಾಯಾಧೀಶರು ತಿರಸ್ಕರಿಸಿದರು. ಬಳಿಕ ವಿಚಾರಣೆಯನ್ನು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.


ಸಮಂಜಸ ಆದೇಶ: ಪಾಕ್ ಸಿಜೆ ಭರವಸೆ 

ದೇಶದಲ್ಲಿ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಕಾನೂನುಬದ್ಧತೆಗೆ ಸಂಬಂಧಿಸಿ ಸಮಂಜಸ ಆದೇಶ ನೀಡಲಾಗುವುದು ಎಂದು ಪಾಕಿಸ್ತಾನದ ಮುಖ್ಯ ನ್ಯಾಯಾಧೀಶ ಉಮರ್ ಅಟಾ ಬಂದಿಯಲ್ ಸೋಮವಾರ ಹೇಳಿದ್ದಾರೆ.

ಪ್ರಧಾನಿಯ ಸಲಹೆಯಂತೆ ಅಧ್ಯಕ್ಷರು ರಾಷ್ಟ್ರೀಯ ಸಂಸತ್ತನ್ನು ವಿಸರ್ಜಿಸಿರುವುದನ್ನು ಪ್ರಶ್ನಿಸಿ ವಿಪಕ್ಷಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸಿಜೆ ಬಂದಿಯಲ್ ನೇತೃತ್ವದ 5 ಸದಸ್ಯರ ಸುಪ್ರೀಂಕೋರ್ಟ್‌ನ ವಿಸ್ತತ ಪೀಠ ಸೋಮವಾರ ಕೈಗೆತ್ತಿಕೊಂಡಿದೆ. ಈ ಸಂದರ್ಭ ಪಿಪಿಪಿ ಹಾಗೂ ಇತರ ವಿಪಕ್ಷಗಳ ಪ್ರತಿನಿಧಿ ಫಾರೂಖ್, ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ಪೂರ್ಣ ಪೀಠಕ್ಕೆ ವಹಿಸುವಂತೆ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆ, ಪೂರ್ಣ ಪೀಠ ರಚಿಸಿ ವಿಚಾರಣೆ ಮುಂದುವರಿಸಿದರೆ ಇತರ ಪ್ರಕರಣಗಳ ವಿಚಾರಣೆಗೆ ತೊಂದರೆಯಾಗುತ್ತದೆ. 5 ಸದಸ್ಯರ ನ್ಯಾಯಪೀಠ , ಸೂಕ್ತ ವಿಚಾರಣೆ ನಡೆಸಿ ದೇಶದಲ್ಲಿನ ರಾಜಕೀಯ ಪರಿಸ್ಥಿತಿಯ ಕಾನೂನುಬದ್ಧತೆಗೆ ಸಂಬಂಧಿಸಿ ಸಮಂಜಸ ಆದೇಶ ನೀಡಲಿದೆ ಎಂದರು.


ಪಾಕ್ ನ ಮಾಜಿ ಸಿಜೆ ಗುಲ್ಝಾರ್ ಅಹ್ಮದ್ ಹಂಗಾಮಿ ಪ್ರಧಾನಿ: ಇಮ್ರಾನ್‌ ಖಾನ್ ನಾಮನಿರ್ದೇಶನ‌

ಪಾಕಿಸ್ತಾನದ ಮಾಜಿ ಮುಖ್ಯನ್ಯಾಯಾಧೀಶ(ಸಿಜೆ) ಗುಲ್ಝಾರ್ ಅಹ್ಮದ್ರನ್ನು ಹಂಗಾಮಿ ಪ್ರಧಾನಿ ಎಂದು ನಿರ್ಗಮಿತ ಪ್ರಧಾನಿ ಇಮ್ರಾನ್ ಖಾನ್ ಸೋಮವಾರ ನಾಮನಿರ್ದೇಶನಗೊಳಿಸಿದ್ದಾರೆ.

ಹಂಗಾಮಿ ಪ್ರಧಾನಿ ನೇಮಕಗೊಳ್ಳುವವರೆಗೆ ಇಮ್ರಾನ್ ಖಾನ್ ಅವರೇ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಪಾಕ್ ಅಧ್ಯಕ್ಷ ಆರಿಫ್ ಆಲ್ವಿ ಸೋಮವಾರ ಘೋಷಿಸಿದ್ದರು. ಜತೆಗೆ, ಹಂಗಾಮಿ ಪ್ರಧಾನಿಯ ಹೆಸರನ್ನು ಪ್ರಸ್ತಾವಿಸುವಂತೆ ಇಮ್ರಾನ್ ಖಾನ್ ಹಾಗೂ ರಾಷ್ಟ್ರೀಯ ಅಸೆಂಬ್ಲಿಯ ವಿಪಕ್ಷ ನಾಯಕರಾಗಿದ್ದ ಶಹಬಾಝ್ ಶರೀಫ್‌ಗೆ ಪತ್ರ ಬರೆದು ಸೂಚಿಸಿದ್ದರು. ಅಲ್ಲದೆ ಸಂವಿಧಾನದ ಪ್ರಕಾರ ರಾಷ್ಟ್ರೀಯ ಅಸೆಂಬ್ಲಿ ಮತ್ತು ಸಚಿವ ಸಂಪುಟವನ್ನು ವಿಸರ್ಜಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಹಂಗಾಮಿ ಪ್ರಧಾನಿಯ ನೇಮಕದ ಬಗ್ಗೆ ಆಕ್ಷೇಪವಿದ್ದರೆ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜನೆಯ 3 ದಿನದೊಳಗೆ 2 ಹೆಸರನ್ನು ಸಮಿತಿಗೆ(ಸ್ಪೀಕರ್ ನೇಮಿಸುವ ಸಮಿತಿ. ಸಮಿತಿ ಸದಸ್ಯರನ್ನು ಪ್ರಧಾನಿ ಮತ್ತು ವಿಪಕ್ಷದ ನಾಯಕ ನಾಮನಿರ್ದೇಶನ ಮಾಡಬೇಕು) ಸಲ್ಲಿಸಬೇಕು ಎಂದು ಅಧ್ಯಕ್ಷರು ಸೂಚಿಸಿದ್ದರು.
  
ಪ್ರಧಾನಿ ಮತ್ತು ವಿಪಕ್ಷ ಮುಖಂಡರ ಜತೆ ಸಮಾಲೋಚಿಸಿದ ಬಳಿಕ ಹಂಗಾಮಿ ಪ್ರಧಾನಿಯನ್ನು ನೇಮಿಸುವ ಅಧಿಕಾರ ಅಧ್ಯಕ್ಷರಿಗೆ ಇದೆ ಎಂದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ ಎಂದು ಅಧ್ಯಕ್ಷರ ಕಚೇರಿ ಹೇಳಿದೆ. ಆದರೆ ಈ ಪ್ರಕ್ರಿಯೆ ಅಕ್ರಮವಾಗಿರುವುದರಿಂದ ತಾನು ಇದರಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಶಹಬಾಝ್ ಶರೀಫ್ ಹೇಳಿದ್ದಾರೆ. ಅಧ್ಯಕ್ಷರು ಮತ್ತು ಪ್ರಧಾನಿ ಕಾನೂನು ಉಲ್ಲಂಘಿಸಿದ್ದು ಅವರು ವಿಪಕ್ಷಗಳನ್ನು ಸಂಪರ್ಕಿಸಲು ಹೇಗೆ ಸಾಧ್ಯ ? ಎಂದವರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿರ್ಗಮಿತ ಸಂಪುಟದ ಸಚಿವ ಫವಾದ್ ಚೌಧರಿ ‘ ಪಾಕಿಸ್ತಾನ ಚುನಾವಣೆಗೆ ಸನ್ನದ್ಧವಾಗುತ್ತಿದೆ. ನಾವು ಹಂಗಾಮಿ ಪ್ರಧಾನಿ ಹುದ್ದೆಗೆ 2 ಹೆಸರನ್ನು ಅಧ್ಯಕ್ಷರಿಗೆ ರವಾನಿಸಿದ್ದೇವೆ. ಶರೀಫ್ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿದ್ದರೆ ನಾವು ಕಳುಹಿಸಿದ 2 ಹೆಸರಲ್ಲಿ ಒಂದು ಅಂತಿಮಗೊಳ್ಳಲಿದೆ’ ಎಂದು ಹೇಳಿದ್ದಾರೆ.

ಪ್ರತಿಪಕ್ಷಗಳಿಂದ ಸಮಾನಾಂತರ ಅಧಿವೇಶನ: ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯ ‘ಅಂಗೀಕೃತ’

ನಾಟಕೀಯ ವಿದ್ಯಮಾನವೊಂದರಲ್ಲಿ, ಸೋಮವಾರ ಪಾಕಿಸ್ತಾನದ ಪ್ರತಿಪಕ್ಷಗಳು ಸಂಸತ್ತಿನ ಸಮಾನಾಂತರ ಅಧಿವೇಶನ ನಡೆಸಿ ಪ್ರಧಾನಿ ಇಮ್ರಾನ್ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡಿದೆ ಎಂದು ಘೋಷಿಸಿವೆ.
  
ನಿರ್ಣಯದ ಪರ 197 ಮತ ಚಲಾವಣೆಯಾಗಿದ್ದು ನಿರ್ಣಯ ಯಶಸ್ವಿಯಾಗಿದೆ ಎಂದು ಮತದಾನದ ಫಲಿತಾಂಶ ಪ್ರಕಟಿಸಿದ ಮಾಜಿ ಸ್ಪೀಕರ್ ಮತ್ತು ಪಿಎಂಎಲ್(ನವಾಝ್) ಪಕ್ಷದ ಮುಖಂಡ ಸರ್ದಾರ್ ಅಯಾಝ್ ಸಾದಿಕ್ ಘೋಷಿಸಿದ್ದಾರೆ. ಪ್ರತಿಪಕ್ಷಗಳು ನಡೆಸಿದ ಸಮಾನಾಂತರ ಅಧಿವೇಶನವನ್ನು ಸಚಿವಾಲಯ ಸಿಬಂದಿಯ ಬೆಂಬಲವಿಲ್ಲದೆ ಮತ್ತು ಮೈಕ್‌ನ ವ್ಯವಸ್ಥೆಯಿಲ್ಲದೆ ನಡೆಸಿದ್ದರೂ ಇದು ಕಾನೂನುಬದ್ಧ ಮತ್ತು ನ್ಯಾಯಸಮ್ಮತವಾಗಿದೆ ಎಂದು ವಿಪಕ್ಷಗಳು ಹೇಳಿವೆ.

ಪ್ರತಿಪಕ್ಷಗಳ ಸಮಾನಾಂತರ ಅಧಿವೇಶನದ ಸಂದರ್ಭ ಇಮ್ರಾನ್‌ ಖಾನ್  ಅವರ ಪಿಟಿಐ ಪಕ್ಷಕ್ಕೆ ಈ ಹಿಂದೆ ಬೆಂಬಲ ನೀಡಿದ್ದ ಪಕ್ಷಗಳ ಸದಸ್ಯರು, ಪಿಟಿಐನ ಭಿನ್ನಮತೀಯ ಸದಸ್ಯರು ಪಾಲ್ಗೊಂಡಿದ್ದರು. ವಿಪಕ್ಷ ಮುಖಂಡ, ಪಿಎಂಎಲ್-ಎನ್ ಅಧ್ಯಕ್ಷ ಶಹಬಾಝ್ ಶರೀಫ್ ಅವಿಶ್ವಾಸ ನಿರ್ಣಯ ಮಂಡಿಸಿದರು. ಪಿಎಂಎಲ್-ಕ್ಯು ಪಕ್ಷದ ಅಧ್ಯಕ್ಷ ಚೌಧರಿ ಶುಜಾತ್ ಹುಸೈನ್ ಪುತ್ರ ಚೌಧರಿ ಸಾಲಿಕ್ ಹುಸೈನ್ ಅವರೂ ನಿರ್ಣಯವನ್ನು ಬೆಂಬಲಿಸುವ ಮೂಲಕ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂಬ ವರದಿಗೆ ಪುಷ್ಟಿ ನೀಡಿದರು. ಸಚಿವಾಲಯದ ಸಿಬಂದಿಗಳ ಅನುಪಸ್ಥಿತಿಯಲ್ಲಿ, ಈ ಹಿಂದೆ ಉಪಸ್ಪೀಕರ್ ಆಗಿದ್ದ ಮುರ್ತಾಝ ಜಾವೆದ್ ಅಬ್ಬಾಸಿ ಮತದಾನದಲ್ಲಿ ಪಾಲ್ಗೊಂಡಿದ್ದ ಸದಸ್ಯರ ಹೆಸರನ್ನು ಅಲ್ಲಿದ್ದ ಪುಸ್ತಕದಲ್ಲಿ ನಮೂದಿಸಿದರು.

ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ರವಿವಾರ ಸಂಸತ್ತಿನಲ್ಲಿ ಉಪಸ್ಪೀಕರ್ ವಜಾಗೊಳಿಸಿದ ಕೆಲವೇ ಕ್ಷಣಗಳಲ್ಲಿ, ಪ್ರಧಾನಿ ಇಮ್ರಾನ್ ಅವರ ಸಲಹೆಯಂತೆ ಸಂಸತ್ತನ್ನು ವಿಸರ್ಜಿಸಿರುವುದಾಗಿ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಆಲ್ವಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News