‘ಬಂಗಾರದ ಮನುಷ್ಯ’ ಚಿತ್ರದ ಸುವರ್ಣ ಸಂಭ್ರಮ

Update: 2022-04-04 19:30 GMT

ಸೋದರ ವಾತ್ಸಲ್ಯ, ತ್ಯಾಗ, ಅಸೂಯೆ, ದ್ವೇಷದ ಇಲ್ಲವೇ ‘ತಾಯಿ ಸೆಂಟಿಮೆಂಟ್’ನ ವಸ್ತುವನ್ನು ಆಧರಿಸಿದ ಚಿತ್ರಗಳ ನಡುವೆ ಸೋದರಿಯ ‘ಸೆಂಟಿಮೆಂಟ್’ ವಸ್ತುವನ್ನು ಮೊದಲಬಾರಿಗೆ ವಿಭಿನ್ನವಾಗಿ ನಿರೂಪಿಸಿದ್ದು ‘ಬಂಗಾರದ ಮನುಷ್ಯ’ ಚಿತ್ರದ ಪ್ರಮುಖ ಅಂಶಗಳಲ್ಲೊಂದು. ಈ ಸೋದರ ವಾತ್ಸಲ್ಯದ ನೂರಾರು ಚಿತ್ರಗಳು ಎಲ್ಲ ಭಾಷೆಗಳಲ್ಲಿ ದಾಳಿಯಿಟ್ಟು ಹಣ ದೋಚಿದ ಇತಿಹಾಸವಿದೆ. ‘ಸೋದರಿ’ ಚಿತ್ರದಿಂದ ಹಿಡಿದು, ‘ಅಣ್ಣ ತಂಗಿ’, ‘ವಾತ್ಸಲ್ಯ’, ‘ರೌಡಿರಂಗಣ್ಣ’, ‘ಭೂಪತಿರಂಗ’ ಚಿತ್ರದವರೆಗೆ ಸ್ವತಃ ರಾಜ್ ಅವರೇ ಅಂಥ ವಸ್ತುವಿನ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಅವೆಲ್ಲವೂ ನತದೃಷ್ಟ ತಂಗಿಯನ್ನು ಪೊರೆಯುವ ಅಣ್ಣಂದಿರ ಚಿತ್ರಗಳು. ಆದರೆ ಇದು ಗಂಡನನ್ನು ಕಳೆದುಕೊಂಡ ಅಕ್ಕನ ಸಂಸಾರಕ್ಕೆ ತನ್ನ ಭವಿಷ್ಯವನ್ನು ಮರೆತು ಹೆಗಲು ಕೊಡುವ ಉದಾತ್ತ ತಮ್ಮನ ಪ್ರೀತಿ ಮತ್ತು ತ್ಯಾಗವನ್ನು ಮೊದಲಬಾರಿಗೆ ತೆರೆಗೆತಂದ ಚಿತ್ರ.



ಐವತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿ(31.3.1972) ಕನ್ನಡ ಚಲನಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ‘ಬಂಗಾರದ ಮನುಷ್ಯ’ ಚಿತ್ರಕ್ಕೆ ಈಗ ಬಂಗಾರದ ಸಂಭ್ರಮ. ಈ ಚಿತ್ರದ ಯಶಸ್ಸು, ಅದು ತಯಾರಾದ ಹಿನ್ನೆಲೆ ಮತ್ತು ಬಿಡುಗಡೆಯ ನಂತರ ಮೂಡಿಸಿದ ಸಂಚಲನಗಳೆಲ್ಲವೂ ಈಗ ಕನ್ನಡ ಚಲನಚಿತ್ರ ಇತಿಹಾಸದ ಭಾಗ. ಬಂಗಾರದ ಮನುಷ್ಯ ಬಿಡುಗಡೆಯಾದ ಸಮಯದಲ್ಲಿ ಅದರ ಅಭೂತಪೂರ್ವ ಯಶಸ್ಸನ್ನು ಕಲ್ಪಿಸಿಕೊಂಡವರಿರಲಿಲ್ಲ. ಹಾಗೆಯೇ ಈ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗುವ ಒಂದು ವಾರದ ಮೊದಲು(24.3.1972) ಹಾಲಿವುಡ್‌ನಲ್ಲಿ ಬಿಡುಗಡೆಯಾದ ಚಿತ್ರವೊಂದು ಜಗದಚ್ಚರಿಯ ಚಿತ್ರವಾಗಿ ಹೊಸ ಮಾರ್ಗವೊಂದನ್ನು ತೆರೆಯಬಹುದೆಂಬ ಕಲ್ಪನೆ ಸಹ ಯಾರಿಗೂ ಇರಲಿಲ್ಲ. ನಾನು ಉಲ್ಲೇಖಿಸುತ್ತಿರುವುದು ಫ್ರಾನ್ಸಿಸ್ ಫೋರ್ಡ್ ಕೊಪ್ಪೋಲಾನ ‘ದ ಗಾಡ್ ಫಾದರ್’ ಚಿತ್ರವನ್ನು. ಆವರೆಗೆ ಸೋತ ಅನೇಕ ಚಿತ್ರಗಳನ್ನು ನಿರ್ದೆಶಿಸಿದ ಕೊಪ್ಪೋಲಾನನ್ನು ಒಬ್ಬ ಜೋಕರ್; ನಟ ಮರ್ಲನ್ ಬ್ರಾಂಡೋವಿನ ಕಾಲ ಮುಗಿದಿದೆಯೆಂದು ಹಾಲಿವುಡ್ ಭಾವಿಸಿತ್ತು. ಚಿತ್ರವು ಬಿಡುಗಡೆಯಾದಾಗ ಮಾಮೂಲಿ ಭೂಗತ ಜಗತ್ತಿನ ಪಾತಕಿಗಳ ಭಾವಾತಿರೇಕ ಮತ್ತು ಹಿಂಸಾಕಾಂಡದ ಚಿತ್ರವೆಂದು ವಿಮರ್ಶಕರು ಷರಾ ಬರೆದಿದ್ದರು. ಅವರ ನಿರೀಕ್ಷೆಯನ್ನೆಲ್ಲ ತಲೆಕೆಳಗುಮಾಡಿದ ಆ ಚಿತ್ರವು ಮುಂದೆ ನಿರೂಪಣೆಯ ಒಂದು ಮಾದರಿ ಪಠ್ಯವೆಂದು ಮನ್ನಣೆ ಪಡೆಯಿತು. ಬಾಕ್ಸ್ ಆಫೀಸನ್ನು ಚಿಂದಿ ಉಡಾಯಿಸಿತು. ಕಲ್ಟ್ ಕ್ಲಾಸಿಕ್ ಎನಿಸಿತು.

‘ಬಂಗಾರದ ಮನುಷ್ಯ’ ಚಿತ್ರದ್ದೂ ಅಂಥದೇ ಕತೆ. ಅದು ಸಾಮಾನ್ಯ ಯಶಸ್ಸಿನ, ರಾಜ್ ನಾಯಕರಾಗಿದ್ದ ಚಿತ್ರಗಳನ್ನು ನಿರ್ದೆಶಿಸಿದ್ದ ನಿರ್ದೇಶಕ ಸಿದ್ದಲಿಂಗಯ್ಯನವರ ಆರನೇ ಚಿತ್ರ. ಆವರೆಗೂ ಅವರು ನಿರ್ದೇಶಿಸಿದ ಐದು ಚಿತ್ರಗಳ ಪೈಕಿ ನಾಲ್ಕರಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸಿದ್ದ ಜೋಡಿ(ರಾಜ್-ಭಾರತಿ) ಇಲ್ಲಿಯೂ ಮುಂದುವರಿದಿತ್ತು. ಅವರು ಆಧರಿಸಿದ್ದ ಟಿ.ಕೆ.ರಾಮರಾವ್ ಅವರ ಕಾದಂಬರಿ ಸಹ ಸಾಧಾರಣದ್ದೇ. ಪ್ರೇಕ್ಷಕರು ನಿಧಾನವಾಗಿ ಮೂರು-ಮೂರೂವರೆ ನಿಮಿಷಗಳ ಗೀತೆಗೆ ಒಗ್ಗಿಕೊಳ್ಳುತ್ತಿದ್ದ ಕಾಲದಲ್ಲಿ ಜಿ.ಕೆ.ವೆಂಕಟೇಶ್ ಅವರ ಸಂಯೋಜನೆಯ ಐದೂ ಹಾಡುಗಳು ಆ ಕಾಲಕ್ಕೆ ಅಸಾಧಾರಣ ಎನಿಸುವಂತೆ ಐದೂವರೆ ನಿಮಿಷ ಮೀರಿ ದೀರ್ಘವಾಗಿದ್ದವು. ಭಕ್ತವತ್ಸಲಂ ಅವರ ಕರಾರುವಾಕ್ಕಾದ ಸಂಕಲನದ ನಂತರವೂ ಚಿತ್ರ 19 ರೀಲುಗಳಷ್ಟು ಉದ್ದವಾಗಿತ್ತು(ಮೂರು ಗಂಟೆಗೆ ಐದು ನಿಮಿಷ ಕಮ್ಮಿ).ಚಿತ್ರದ ಕೊನೆಯ ಗೀತೆಯಾದ ಸುಗ್ಗಿಹಾಡು ಬರುವವರೆಗೂ ಸಾವಕಾಶವಾಗಿ ಕತೆಯನ್ನು ಕಟ್ಟುತ್ತಾ ಸಾಗುವ ನಿರೂಪಣೆಯು, ಹಾಡು ಮುಗಿದ ಕೂಡಲೇ ಹಠಾತ್ತನೆ ಅಂತ್ಯದೆಡೆಗೆ ಊಹೆಗೂ ನಿಲುಕದ ವೇಗದಲ್ಲಿ ಮುಂದುವರಿಯುತ್ತದೆ. ನಾಯಕನ ವಿವಾಹೇತರ ಸಂಬಂಧ ಆರೋಪ, ಹಿಸ್ಸೆಗೆ ಬಲವಂತ, ನಾಯಕಿಯ ಸಾವು, ನಾಯಕನ ಪರಿತ್ಯಾಗ, ಹುಡುಕಾಟದ ದೃಶ್ಯಗಳು ಚಕಚಕನೆ ಸಾಗುತ್ತವೆ.

ಪ್ರೇಕ್ಷಕರು ತೆರೆಯ ಮೇಲಿನ ನಾಟಕೀಯ ಬೆಳವಣಿಗೆಗಳಿಗೆ ಹೊಂದಿಕೊಳ್ಳುವ ಮೊದಲೇ ಚಿತ್ರ ಮುಗಿದುಹೋಗುತ್ತದೆ. ಮದುವೆಯಾದ ನಂತರ ಸತ್ತು ಹೋಗುವ ನಾಯಕಿ, ಕೊನೆಯಲ್ಲಿ ದೇಶಾಂತರ ಹೋಗುವ ನಾಯಕ. ಒಂದು ಬಗೆಯ ಸ್ಟೀರಿಯೋಟೈಪ್ ಕ್ಲೈಮ್ಯಾಕ್ಸಿಗೆ ಹೊಂದಿಕೊಂಡಿದ್ದ ಪ್ರೇಕ್ಷಕನ ನಿರೀಕ್ಷೆಯನ್ನೇ ಬುಡಮೇಲುಮಾಡುವ ಅಂತ್ಯವು ಚಿತ್ರದ ಯಶಸ್ಸಿಗೆ ಅಡ್ಡ ಬರಬಹುದೆಂದು ಪಂಡಿತರ ಲೆಕ್ಕಾಚಾರವಾಗಿತ್ತು. ಚಿತ್ರ ವೀಕ್ಷಿಸಿದ ನಿರ್ದೇಶಕ ಪುಟ್ಟಣ್ಣ ಅವರಂಥವರೂ ಇದರ ಯಶಸ್ಸಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು(ಆನಂತರ ಅದರ ಯಶಸ್ಸು ‘ದೈವದತ್ತ’ ಎಂದು ಕರೆದರು). ಚಿತ್ರದ ದೀರ್ಘ ಅವಧಿ, ಉದ್ದವಾದ ಹಾಡುಗಳು, ಆರಂಭದ ನಿಧಾನಗತಿ, ಅನಿರೀಕ್ಷಿತ ಅಂತ್ಯ-ಇವೆಲ್ಲವೂ ಚಿತ್ರದ ಯಶಸ್ಸಿಗೆ ಪೂರಕವಾಗುವ ಅಂಶಗಳಂತೆ ಕಾಣುತ್ತಿರಲಿಲ್ಲ. ಆದರೆ ಹಾಲಿವುಡ್‌ನ ‘ದ ಗಾಡ್ ಫಾದರ್’ ಚಿತ್ರದ ರೀತಿಯಲ್ಲಿಯೇ ‘ಬಂಗಾರದ ಮನುಷ್ಯ’ ಎಲ್ಲರ ನಿರೀಕ್ಷೆಯನ್ನು ಮೀರಿ ಇತಿಹಾಸ ಸೃಷ್ಟಿಸಿತು. ಪ್ರೇಕ್ಷಕರ ಸಾಧಾರಣ ಪ್ರತಿಕ್ರಿಯೆಯೊಡನೆ ಆರಂಭವಾದ ಚಿತ್ರ ಪ್ರದರ್ಶನವು ನಂತರ ಮೂಡಿಸಿದ ಸಂಚಲನ ತರ್ಕವನ್ನು ಮೀರಿದ್ದು.

ಎಪ್ಪತ್ತರ ದಶಕದ ಆರಂಭದಲ್ಲಿ ಪ್ರೇಕ್ಷಕ ಮಾಮೂಲಿ ಸಂಸಾರದ ಕತೆಗಳಿಗಿಂತ ವಿಭಿನ್ನವಾದ ವಸ್ತುವಿನೆಡೆಗೆ ಆಕರ್ಷಿತನಾಗಿದ್ದ. ‘ಬೆಳ್ಳಿಮೋಡ’ದಿಂದ ಆರಂಭವಾದ ಪುಟ್ಟಣ್ಣ ಅವರ ಪ್ರಯೋಗಗಳು ‘ಗೆಜ್ಜೆಪೂಜೆ’ ಮತ್ತು ‘ಶರಪಂಜರ’ ಚಿತ್ರಗಳನ್ನು ಹಾಯ್ದು ಮುಂದುವರಿದಿತ್ತು. ‘ಸಂಸ್ಕಾರ’, ‘ವಂಶವೃಕ್ಷ’ದಂತಹ ಹೊಸ ಅಲೆಯ ಚಿತ್ರಗಳು ಸದ್ದು ಮಾಡಿದ್ದ ಕಾಲ. ‘ಶ್ರೀಕೃಷ್ಣದೇವರಾಯ’, ‘ಕಸ್ತೂರಿನಿವಾಸ’, ‘ಸಿಪಾಯಿ ರಾಮು’, ‘ನ್ಯಾಯವೇ ದೇವರು’ ಚಿತ್ರಗಳನ್ನು ಹೊರತುಪಡಿಸಿದರೆ ರಾಜ್ ಅವರ ಪಾತ್ರಗಳು ಏಕತಾನತೆಯಿಂದ ಬಳಲುತ್ತಿದ್ದ ಕಾಲ. ಇಂಥ ಸನ್ನಿವೇಶದಲ್ಲಿ 1972ರಲ್ಲಿ ಬಿಡುಗಡೆಯಾದ ಹತ್ತನೇ ಚಿತ್ರವಾಗಿ ‘ಬಂಗಾರದ ಮನುಷ್ಯ’ ತೆರೆಗೆ ಬಂದಾಗ ಮಾಮೂಲಿ ಸಂಸಾರದ ಕತೆಯ ಚಿತ್ರದ ಭವಿಷ್ಯದ ಬಗ್ಗೆ ಪಂಡಿತರು ಹಾಕಿದ ಲೆಕ್ಕಾಚಾರ ತರ್ಕಬದ್ಧವಾಗಿತ್ತು. ಅಂದಿನ ಸಾಮಾಜಿಕ ಪರಿಸ್ಥಿತಿ, ವಿಭಿನ್ನ ಸಾಂಸಾರಿಕ ಕಥೆ ಮತ್ತು ಸೋದರ ವಾತ್ಸಲ್ಯ, ಗಂಡು ಹೆಣ್ಣು ನಡುವಿನ ಪ್ರೀತಿ, ತ್ಯಾಗದಂಥ ಅದೇ ವಸ್ತುವಿದ್ದರೂ ಅದನ್ನು ನಿರ್ವಹಿಸಿದ ರೀತಿ ಹಾಗೂ ಮನುಷ್ಯ ಸಹಜ ಭಾವನೆಗಳನ್ನು ತೆರೆಗೆ ತರಲು ಹಿಡಿದ ವಿಭಿನ್ನ ಜಾಡು ಈ ಚಿತ್ರದ ಯಶಸ್ಸಿಗೆ ಪೂರಕವಾಯಿತೆನ್ನಬಹುದೇನೋ! ಅಥವಾ ನಿರ್ದೇಶಕ ಸಿದ್ದಲಿಂಗಯ್ಯ ಅವರು ಸಂದರ್ಶನವೊಂದರಲ್ಲಿ ‘‘ಇದರ ಯಶಸ್ಸು ಇಂಥದ್ದರಿಂದಲೇ ಎಂದು ಹೇಳಲಿಕ್ಕಾಗದು. ಪ್ರಾಯಶಃ ಚಿತ್ರದ ರಾಜೀವ ಮತ್ತು ರಾಚೂಟಪ್ಪನವರ ಪಾತ್ರಗಳು ಬಹುತೇಕ ಮಂದಿಗೆ ಹಿಡಿಸಿದಂತಿವೆ. ಇದರ ಜೊತೆಗೆ ‘ಇದು ನಮ್ಮದು’ ಎನಿಸುವಂಥ ಸ್ಥಳೀಯ ವಾತಾವರಣ ಇರಬಹುದು! ಓದಿದವರು ರಾಜೀವನ ಹಾಗಿರಬೇಕು, ಹಣವಂತರೆಲ್ಲ ರಾಚೂಟಪ್ಪನಂತಿರಬೇಕು ಎಂದು ಹಳ್ಳಿಗಳಲ್ಲಿ ಮಾತನಾಡುವುದು ನನ್ನ ಕಿವಿಗೆ ಬಿದ್ದಿರುವುದರಿಂದ ಹೀಗೆ ಹೇಳುತ್ತಿದ್ದೇನೆ’’ ಎಂದು ಹೇಳಿದ ಮಾತುಗಳಲ್ಲಿ ಸತ್ಯವಿರಬಹುದು..

ಚಿತ್ರದ ಆರಂಭದಿಂದಲೇ ನಿರ್ದೇಶಕರು ನಿರೂಪಣೆಯ ಹೊಸತೊಂದು ಜಾಡು ಹಿಡಿದಿರುವುದು ಸ್ಪಷ್ಟವಾಗುತ್ತದೆ. ಹಿನ್ನೆಲೆಯ ಸಂಗೀತವೇ ಇಲ್ಲದೆ ರೈಲಿನ ಚಲನೆಯ ವಿವಿಧ ಆಯಾಮಗಳನ್ನು ಸೆರೆ ಹಿಡಿದು ಶೀರ್ಷಿಕೆಗಳನ್ನು ತೋರಿಸುತ್ತಾ ಹೋಗುವ ನಿರ್ದೇಶಕರು ಒಂದು ಬಗೆಯ ಕುತೂಹಲವನ್ನು ಸೃಷ್ಟಿಸುತ್ತಾರೆ. ರೈಲಿನ ಒಡಲಿನ ಬೆಂಕಿಗೆ ಸುರಿಯುವ ಕಲ್ಲಿದ್ದಲು, ಭುಸುಗುಡುವ ಆವಿ, ಕಿರ್ರೆನ್ನುವ ಗಾಲಿಗಳು, ಕಿವಿ ತೂತಾಗುವಂತೆ ಕೇಳಿಸುವ ಸೀಟಿ, ನಂತರ ಹಸಿರ ಗದ್ದೆಬಯಲುಗಳಲ್ಲಿ ಮೆಲುದನಿಯಲ್ಲಿ ಮಾತನಾಡುವಂತೆ ಸಾಗುವ ರೈಲು; ನಿಲ್ದಾಣದಲ್ಲಿ ನಿಂತಾಗ ನಾಯಕನ ಪ್ರವೇಶ. ಆನಂತರ ಮಲೆನಾಡ ಕಣಿವೆ, ಹೊಲಗಳಲ್ಲಿ ಆರಂಭವಾಗುವ ‘ನಗು ನಗುತಾ ನಲಿ’ ಎಂಬ ಮನುಷ್ಯ ಬದುಕಿನ ಹಾಡು. ನಿಸರ್ಗದ ಭವ್ಯ ಪರಿಸರದಲ್ಲಿ ಮಿಂದೇಳುವ ನಾಯಕ ನಂತರ ಮನುಷ್ಯನ ಬಾಲ್ಯ, ಶಿಕ್ಷಣ, ಮದುವೆ, ಮುಪ್ಪಿನ ವಿವಿಧ ಹಂತಗಳನ್ನು ತಟ್ಟುತ್ತಾ ಕೊನೆಯಲ್ಲಿ ಭಾವನ ಸಾವಿಗೆ ಎದುರಾಗುತ್ತಾನೆ! ಸಂಭ್ರಮದಿಂದ ಸಂಕಟಕ್ಕೆ ದಾಟುವ ದೃಶ್ಯಗಳು ಕ್ಷಣಕಾಲ ಪ್ರೇಕ್ಷಕನಿಗೆ ಶಾಕ್ ನೀಡುತ್ತವೆ. ಚಿತ್ರವು ನಂತರ ಹಿಡಿಯುವುದು ನಿಧಾನಗತಿಯ ನಿರೂಪಣೆಯನ್ನು.

ಭಾವನ ಸಾವಿನಿಂದ ಅನಾಥವಾದ ಸಂಸಾರದ ಹೊಣೆ ಹೊತ್ತ ವಿದ್ಯಾವಂತ ರಾಜೀವ ನೆಲೆಯಾಗುವುದು ಹಳ್ಳಿಯಲ್ಲಿ. ತರ್ಕಕ್ಕೂ ಸಿಗದ ರೀತಿಯಲ್ಲಿ ಆರ್ಥಿಕ ಬೆಳವಣಿಗೆ ಕಾಣುವ ರಾಜೀವ ಕೊನೆಗೂ ಉದ್ಧರಿಸಿದವರಿಂದಲೇ ದೂರವಾಗುವ ದುರಂತವನ್ನು ತಂದುಕೊಳ್ಳುತ್ತಾನೆ. ಮೇಲುನೋಟಕ್ಕೆ ಇದೊಂದು ಹೊಣೆಗಾರಿಕೆ, ಪ್ರೀತಿ, ತ್ಯಾಗ, ಪರಿತ್ಯಾಗ, ಉಪಕಾರ-ಅಪಕಾರದ ಒಂದು ಸಾಮಾನ್ಯ ಕತೆ. ಈ ವಸ್ತುವನ್ನು ಇಟ್ಟುಕೊಂಡು ಭಾರತದಲ್ಲಿ ತಯಾರಾದ ಸಾಂಸಾರಿಕ-ಸಾಮಾಜಿಕ ಚಿತ್ರಗಳಿಗೆ ಲೆಕ್ಕವಿಲ್ಲ. ಆದರೂ ‘ಬಂಗಾರದ ಮನುಷ್ಯ’ ಇತಿಹಾಸ ಬರೆದುದಕ್ಕೆ ತರ್ಕಕ್ಕೆ ಸಿಗುವ ಕಾರಣಗಳೂ ಇವೆ.

ಚಿತ್ರದ ವಿಭಿನ್ನ ಆರಂಭದಂತೆಯೇ ಚಿತ್ರದುದ್ದಕ್ಕೂ ಕನ್ನಡ ಚಿತ್ರರಂಗ ಆವರೆಗೂ ಕಾಣದ ಅದ್ದೂರಿತನ ಚಿತ್ರವನ್ನು ಆವರಿಸಿಕೊಂಡು ಪ್ರೇಕ್ಷಕನಿಗೆ ಹೊಸ ಅನುಭವವನ್ನು ನೀಡಿತ್ತು. ಸುದೀರ್ಘಕಾಲ ನಡೆದ ಹೊರಾಂಗಣ ಚಿತ್ರೀಕರಣಕ್ಕಾಗಿಯೇ ಹೊಸ ಕ್ರೇನೊಂದನ್ನು ವಿತರಕ ಕೆ.ಸಿ.ಎನ್. ಗೌಡ ಅವರು ಖರೀದಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಸಹಜವಾಗಿಯೇ ಆ ಕಾಲದ ಹೈ ಬಜೆಟ್‌ನ ಚಿತ್ರ. ವಿದ್ಯಾವಂತರನ್ನು ಕಾಡುತ್ತಿದ್ದ ನಿರುದ್ಯೋಗದ ಕಾಲದಲ್ಲಿ ರಾಜೀವ ಮರಳಿ ಹಳ್ಳಿಗೆ ಬಂದು ವ್ಯವಸಾಯದಲ್ಲಿ ನಿರತನಾಗುವುದು, ಸಹಕಾರ ಕೃಷಿಗೆ ಪ್ರೋತ್ಸಾಹ ನೀಡುವುದು, ಆಗ ಪ್ರಚಾರದಲ್ಲಿದ್ದ ಸರಕಾರದ ಕಾರ್ಯಕ್ರಮದಂತೆ ಕೃಷಿಗೆ ಆಧುನಿಕ ಪದ್ಧತಿಗಳನ್ನು ಅಳವಡಿಸಿ ಯಶಸ್ವಿಯಾಗುವ ಮತ್ತು ಹಳ್ಳಿಯಲ್ಲಿ ಕೃಷಿಕ್ರಾಂತಿ ಮಾಡುವ ತರುಣನ ಕಥನವು ಸಮಕಾಲೀನ ಸಮಾಜದ ಜೊತೆ ಸಂವಾದವನ್ನು ಏರ್ಪಡಿಸಿದಂತಿತ್ತು. ಪತನಗೊಂಡ ಹಳ್ಳಿಯನ್ನು ಸರಿದಾರಿಗೆ ತರಲು ಊರಿಗೆ ಮರಳುವ ನಾಯಕನಿರುವ ‘ಮಾರ್ಗದರ್ಶಿ’, ‘ಭಾರತದ ರತ್ನ’ ಮುಂತಾದ ಚಿತ್ರಗಳ ಕತೆಯೂ ಇದೇ ರೀತಿ ಇತ್ತು. ಅವು ಸಮಾಜವು ಉದ್ಧಾರದ ಹೊರಳುದಾರಿ ಹಿಡಿಯುವುದರಲ್ಲಿ ಅಂತ್ಯವಾಗುತ್ತವೆ. ಆದರೆ ಬಂಗಾರದ ಮನುಷ್ಯ ಭಿನ್ನವಾಗುವುದು ವೈಯಕ್ತಿಕ ನೆಲೆಯ ಉದ್ಧಾರ ಸಾಧಿತವಾದ ನಂತರವೇ ಸಮಾಜದ ಉಸಾಬರಿ ಎಂಬ ತಾತ್ವಿಕ ನಿಲುವಿನಲ್ಲಿ.ಕುಟುಂಬ ಮತ್ತು ಹಳ್ಳಿ ಎರಡರ ಯಶಸ್ಸನ್ನು ಇದು ದಾಖಲಿಸುತ್ತದೆ. ನಾಯಕನ ಯಶಸ್ಸಿನ ಗುರಿ ಮತ್ತು ಅದನ್ನು ಸಾಧಿಸುವ ವಿಧಾನಗಳೆರಡೂ ನೆಹರೂ ಯುಗದ ಗ್ರಾಮೀಣ ಪುನರ್ನಿರ್ಮಾಣದ ತಾತ್ವಿಕತೆಗೊಂದು ನಿದರ್ಶನದಂತೆ ಕಂಡರೂ ನಾಯಕ ತನ್ನ ಸಾಧನೆಗೆ ಆಧುನಿಕ ಪರಿಕರಗಳನ್ನು(ಬೋರ್ವೆಲ್ ಯಂತ್ರ, ಟ್ರ್ಯಾಕ್ಟರ್, ಡೈನಾಮೈಟ್, ಇತ್ಯಾದಿ) ಬಳಸುವ ರೀತಿಯೂ ಪ್ರೇಕ್ಷಕರಿಗೆ ಮೆಚ್ಚುಗೆಯಾಯಿತು(ಚಿತ್ರದ ಹಾಡೊಂದರಲ್ಲಿ ರಾಷ್ಟ್ರೀಯ ನಾಯಕರ ಜೊತೆಗೆ ವಿಶ್ವೇಶ್ವರಯ್ಯನವರಿರುವ ದೃಶ್ಯಗಳೂ ಬರುತ್ತವೆ).

ಇಲ್ಲಿ ಮಾಮೂಲಿಯಲ್ಲದ ಪ್ರೇಮಕಥೆಯೂ ಇದೆ.ಅಕ್ಕನ ಮನೆಯ ಪಕ್ಕದ ಮನೆಯ ಲಕ್ಷ್ಮಿ, ರಾಜೀವನ ಜೊತೆ ಮದುವೆಗೆ ನಿಶ್ಚಯವಾಗಿರುವ ಹೆಣ್ಣು.ಸಂಸಾರದ ನೊಗ ಹೊತ್ತ ರಾಜೀವನ ಜವಾಬ್ದಾರಿ ಅರಿತ ಅವಳಿಗೆ ಪ್ರಣಯ ಮುಖ್ಯವಾಗದು. ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ತನ್ನ ಭಾವನೆಗಳನ್ನು ಹೊರಹಾಕುವ ಆಕೆ ಅಷ್ಟೇ ಸಂಯಮಿ. ರಾಜ್ ಮತ್ತು ಭಾರತಿ ಅವರು ಆವರೆಗೂ ನಿರ್ವಹಿಸಿದಂತಹ ಉತ್ಕಟ ಪ್ರೀತಿಯ ಕ್ಷಣಗಳೂ ಈ ಚಿತ್ರದಲ್ಲಿಲ್ಲ. ಚಿತ್ರದಲ್ಲಿರುವ ಏಕೈಕ ಪ್ರಣಯಗೀತೆ ‘ಆಹಾ ಮೈಸೂರ ಮಲ್ಲಿಗೆ..’ ಸಹ ನವಿರಾದ ಪ್ರಣಯಭಾವವನ್ನು ಆರಾಧಿಸುವ ಶೃಂಗಾರ ಜೋಡಿಯನ್ನಾಗಿಯೇ ಬಿಂಬಿಸಿದೆ. ತನಗಿಂತಲೂ ಚಿಕ್ಕವರಾದ ಅಕ್ಕನ ಮಕ್ಕಳಿಗೆ ಅದ್ದೂರಿಯಾಗಿ ಮದುವೆ ಮಾಡಿದ ರಾಜೀವ ಸರಳಮದುವೆಯಾಗಿ ಹೊಸ ಬದುಕಿಗೆ ಅಡಿಯಿಡುತ್ತಿರುವಾಗಲೇ ಲಕ್ಷ್ಮಿಯ ಸಾವು ಸಂಭವಿಸುತ್ತದೆ. ಛಿದ್ರಗೊಂಡ ರಾಜೀವನ ಬದುಕಿಗೆ ಪ್ರೇಕ್ಷಕನೂ ಕಣ್ಣೀರಾಗುವಂಥ ಗಾಢ ದುರಂತ ಅಪ್ಪಳಿಸುತ್ತದೆ. ‘‘ನೂರಾರು ಜನುಮ ನೀ ತಾಳಿ ಬಂದರೂ ಬಿಡದಂತೆ ನಿನ್ನ ಸತಿಯಾಗೇ ಬರುವೆ’’ ಎಂದು ಹಂಬಲಿಸಿದ್ದ ಲಕ್ಷ್ಮಿಯ ಸಾವು ಚಿತ್ರ ಪಡೆದುಕೊಳ್ಳುವ ಅನಿರೀಕ್ಷಿತ ತಿರುವುಗಳಲ್ಲಿ ಒಂದು. ಲಕ್ಷ್ಮಿಯ ಸಾವಿನ ನೋವು ಚಿತ್ರ ಮುಂದುವರಿದಂತೆ ಹೆಪ್ಪುಗಟ್ಟತ್ತಾ ಹೋಗುವುದನ್ನು ಕಾಣಬಹುದು.ಮೊದಲ ಸಾವಿನಿಂದ ಸಂಸಾರವನ್ನು ಮರಳಿಕಟ್ಟುವ ಪ್ರಯತ್ನ ಸಾಗಿದರೆ ಎರಡನೇ ಸಾವಿನಿಂದ ಕೌಟುಂಬಿಕ ವಿಘಟನೆ ಆರಂಭವಾಗುತ್ತದೆ. ಆಯಕಟ್ಟಿನ ಸ್ಥಳದಲ್ಲಿ ಎರಡು ಸಾವುಗಳನ್ನಿಟ್ಟು ಹೆಣೆದಿರುವ ಚಿತ್ರಕತೆ ಅಭ್ಯಾಸಯೋಗ್ಯ ಪಠ್ಯ. ನಿರ್ದೇಶಕ ಸಿದ್ದಲಿಂಗಯ್ಯನವರ ಕುಶಲತೆ ಇಲ್ಲಿ ಎದ್ದುಕಾಣುತ್ತದೆ.

ಸೋದರ ವಾತ್ಸಲ್ಯ, ತ್ಯಾಗ, ಅಸೂಯೆ, ದ್ವೇಷದ ಇಲ್ಲವೇ ‘ತಾಯಿ ಸೆಂಟಿಮೆಂಟ್’ನ ವಸ್ತುವನ್ನು ಆಧರಿಸಿದ ಚಿತ್ರಗಳ ನಡುವೆ ಸೋದರಿಯ ‘ಸೆಂಟಿಮೆಂಟ್’ ವಸ್ತುವನ್ನು ಮೊದಲಬಾರಿಗೆ ವಿಭಿನ್ನವಾಗಿ ನಿರೂಪಿಸಿದ್ದು ಈ ಚಿತ್ರದ ಪ್ರಮುಖ ಅಂಶಗಳಲ್ಲೊಂದು. ಈ ಸೋದರ ವಾತ್ಸಲ್ಯದ ನೂರಾರು ಚಿತ್ರಗಳು ಎಲ್ಲ ಭಾಷೆಗಳಲ್ಲಿ ದಾಳಿಯಿಟ್ಟು ಹಣ ದೋಚಿದ ಇತಿಹಾಸವಿದೆ. ‘ಸೋದರಿ’ ಚಿತ್ರದಿಂದ ಹಿಡಿದು, ‘ಅಣ್ಣ ತಂಗಿ’, ‘ವಾತ್ಸಲ್ಯ’, ‘ರೌಡಿರಂಗಣ್ಣ’, ‘ಭೂಪತಿರಂಗ’ ಚಿತ್ರದವರೆಗೆ ಸ್ವತಃ ರಾಜ್ ಅವರೇ ಅಂಥ ವಸ್ತುವಿನ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಅವೆಲ್ಲವೂ ನತದೃಷ್ಟ ತಂಗಿಯನ್ನು ಪೊರೆಯುವ ಅಣ್ಣಂದಿರ ಚಿತ್ರಗಳು. ಆದರೆ ಇದು ಗಂಡನನ್ನು ಕಳೆದುಕೊಂಡ ಅಕ್ಕನ ಸಂಸಾರಕ್ಕೆ ತನ್ನ ಭವಿಷ್ಯವನ್ನು ಮರೆತು ಹೆಗಲು ಕೊಡುವ ಉದಾತ್ತ ತಮ್ಮನ ಪ್ರೀತಿ ಮತ್ತು ತ್ಯಾಗವನ್ನು ಮೊದಲಬಾರಿಗೆ ತೆರೆಗೆತಂದ ಚಿತ್ರ.

ಈ ಚಿತ್ರದ ನಂತರ ಹಳ್ಳಿಯ ಅದೆಷ್ಟೋ ಅಕ್ಕಂದಿರು ತಮ್ಮಂದಿರಲ್ಲಿ ರಾಜೀವನನ್ನು ಹುಡುಕಿರುವುದು ಸುಳ್ಳಲ್ಲ! ಈ ವಿಭಿನ್ನ ‘ಅಕ್ಕ-ತಮ್ಮನ ಸೆಂಟಿಮೆಂಟ್’ ಸಹ ಚಿತ್ರದ ಯಶಸ್ಸಿನ ಭಾಗವಾಗಿರಬಹುದು ಚಿತ್ರದ ಮತ್ತೊಂದು ವಿಶಿಷ್ಟತೆಯೆಂದರೆ ಅದರ ಸಾಹಿತ್ಯ. ಹುಣಸೂರು ಕೃಷ್ಣಮೂರ್ತಿಯವರ ಪ್ರತಿಭೆಯ ವಿರಾಟ್ ದರ್ಶನಕ್ಕೆ ಈ ಚಿತ್ರ ದೊಡ್ಡ ಭಿತ್ತಿಯೊದಗಿಸಿತ್ತು. ಸಾಮಾಜಿಕ ದರ್ಶನದ ಜೊತೆಯಲ್ಲಿಯೇ ಮನುಷ್ಯನ ಪ್ರೀತಿ, ಔದಾರ್ಯ, ಅಸೂಯೆ, ಪಾಪ-ಹಿಂಸೆಗಳನ್ನು ಹೊರಗೆಳೆಯಬಲ್ಲ ಕೃಷ್ಣಮೂರ್ತಿಯವರು ಸರಳವಾದ ಆದರೆ ಸಹಜವಾದ, ಮನಮುಟ್ಟುವ ಸಂಭಾಷಣೆ ರಚಿಸಿದ್ದರು. ಜೊತೆಗೆ ಹಳ್ಳಿಯ ಸಮಸ್ತವನ್ನು ಪ್ರತಿನಿಧಿಸುವ ಚಿತ್ರದ ವೈವಿಧ್ಯಪಾತ್ರಗಳ ಸಂಭಾಷಣೆಯಲ್ಲಿಯೂ ಘನತೆಯಿತ್ತು. ಇಲ್ಲಿ ಬಳಕೆಯಾಗಿರುವ ಐದು ಹಾಡುಗಳೂ ಆ ಕಾಲದ ನಾಲ್ವರು ಅತ್ಯುನ್ನತ ಸಾಹಿತಿಗಳ ಮುತ್ತುಗಳು. ನಾಯಕನ ಸ್ವಭಾವವನ್ನು, ಜೀವನದರ್ಶನವನ್ನು ತೋರುವ ‘ನಗುನಗುತಾ ನಲೀ...’ ಮತ್ತು ನಾಯಕಿಯ ಹಂಬಲಗಳನ್ನು ಮೊಗೆದುಕೊಡುವಂತಿರುವ ‘ಬಾಳ ಬಂಗಾರ ನೀನು...’ -ಹುಣಸೂರರ ದೈತ್ಯಪ್ರತಿಭೆಯಿಂದ ಮೂಡಿದ ಹಾಡುಗಳು.

ದುಡಿಮೆಯ ಮಹತ್ವವನ್ನು, ಮನುಷ್ಯ ಪ್ರಯತ್ನವನ್ನು ಆರಾಧಿಸುವ, ‘ಆಗದು ಎಂದು, ಕೈಲಾಗದು...’-ಆರ್.ಎನ್. ಜಯಗೋಪಾಲ್ ಅವರು ಬರೆದಿರುವ ಹಾಡುಗಳಲ್ಲೇ ಸ್ವಲ್ಪ ವಾಚ್ಯವೆನಿಸಿದರೂ ಸಿನೆಮಾ ಕಥೆಯ ನಿರೂಪಣೆಗೆ ಪೂರಕವಾದ ಸ್ಫೂರ್ತಿಗೀತೆ. ತಮ್ಮ ಮಾಮೂಲಿ ಇಮೇಜುಗಳನ್ನು ಅಮಾನತ್ತಿನಲ್ಲಿಟ್ಟು ಪ್ರಣಯ ಮತ್ತು ಶೃಂಗಾರವನ್ನು ದಿವ್ಯ ಅನುಭವವಾಗಿಸಿದ ಚಿ.ಉದಯಶಂಕರ ಅವರ ‘ಆಹಾ ಮೈಸೂರು ಮಲ್ಲಿಗೆ...’ -ಪರಿಮಳ ಚೆಲ್ಲುವ ಹಾಡು. ವಿಜಯನಾರಸಿಂಹ ಅವರ ‘ಹನಿಹನಿಗೂಡಿದರೆ ಹಳ್ಳ...’ ಗ್ರಾಮೀಣ ವಿವೇಕವನ್ನು ಮುನ್ನೆಲೆಗೆ ತಂದ ಅಮೋಘ ರಚನೆ. ಎಲ್ಲವೂ ಸಿನೆಮಾನಿಷ್ಠವಾದ ಅಂದರೆ ಚಿತ್ರದ ನಿರೂಪಣೆಯ ಗತಿಗೆ ತಡೆಯೊಡ್ಡದ, ಅಸಾಧಾರಣ ಜನಪ್ರಿಯತೆ ಗಳಿಸಿದ ಹಾಡುಗಳು. ಪ್ರಯೋಗಶೀಲ ಸಂಗೀತಗಾರ ಜಿ.ಕೆ. ವೆಂಕಟೇಶ್ ಜೊತೆ ಎಲ್.ವೈದ್ಯನಾಥನ್ ಮತ್ತು ಡಿ. ರಾಜ(ಮುಂದೆ ಇಳಯರಾಜ) ತಂಡವು ದೀರ್ಘವಾದ ಹಾಡುಗಳನ್ನು ಸಂಯೋಜಿಸಿಯೂ ಗೆಲುವು ಸಾಧಿಸಿತು.

ಸುಗ್ಗಿಹಾಡಿನ ತಮಟೆಯ ಸದ್ದಿನ ಲಯ ಗುಂಗುಹಿಡಿಸಿತ್ತು(ಈಗಲೂ). ಹಿನ್ನೆಲೆ ಸಂಗೀತವೂ ವಿಶೇಷವಾಗಿ ಕೊನೆಯ ದೃಶ್ಯಗಳಲ್ಲಿ ಪರಿಣಾಮಕಾರಿಯಾಗಿತ್ತು. ‘ಶರಪಂಜರ’ದ ವರ್ಣ ಛಾಯಾಗ್ರಹಣದಿಂದ ಖ್ಯಾತಿ ಪಡೆದ ಡಿ.ವಿ. ರಾಜಾರಾಂ ಅವರ ಕ್ಯಾಮರಾ ಪ್ರತಿಯೊಂದು ದೃಶ್ಯವನ್ನು ಭವ್ಯ ಎಂಬ ರೀತಿಯಲ್ಲಿ ಸಂಯೋಜಿಸಿದ್ದರು. ಸ್ಟುಡಿಯೊ ದೃಶ್ಯಗಳನ್ನು ಹೊರತುಪಡಿಸಿದರೆ ಹೊರಾಂಗಣದಲ್ಲಿ ಅವರ ಕ್ಯಾಮರಾ ಎಲ್ಲ ವಿವರಗಳನ್ನು ಸೆರೆಹಿಡಿದಿದೆ. ಪ್ರಾಯಶಃ ಕನ್ನಡದ ಇನ್ನೊಬ್ಬ ಛಾಯಾಗ್ರಾಹಕನಿಗೆ ಆ ಮಟ್ಟದ ಅವಕಾಶ ಒಂದೇ ಚಿತ್ರದಲ್ಲಿ ದೊರೆಯುವುದು ವಿರಳ. ಅವರ ಕ್ಯಾಮರಾ ಸ್ಟುಡಿಯೊದಿಂದ ಹಿಡಿದು ಕರಾವಳಿಯ ತೀರ, ಸಮುದ್ರ, ಪಶ್ಚಿಮ ಘಟ್ಟಗಳ ಕಣಿವೆಗಳಲ್ಲಿ, ಬೋಳುಗುಡ್ಡಗಳಲ್ಲಿ, ಕಾಫಿಯ ತೋಟಗಳಲ್ಲಿ, ಬಯಲು ಸೀಮೆಯ ಹೊಲದಲ್ಲಿ, ಗುಡ್ಡದಲ್ಲಿ, ಜಾತ್ರೆಯಲ್ಲಿ, ಸುಗ್ಗಿಯ ಕಣದಲ್ಲಿ, ದ್ರಾಕ್ಷಿ ತೋಟದಲ್ಲಿ, ಕೆಸರು ಗದ್ದೆಯಲ್ಲಿ ಹೀಗೆ ಇಡೀ ಕರ್ನಾಟಕದ ವಿಭಿನ್ನ ಪರಿಸರಗಳಲ್ಲಿ ಸಂಚರಿಸಿ ಕರ್ನಾಟಕ ದರ್ಶನದ ಜೊತೆಗೆ ಗ್ರಾಮೀಣ ಪರಿಸರವನ್ನು ದಟ್ಟವಾಗಿ ಕಟ್ಟಿದೆ. ಅನಾಥವಾದ ಮನೆಯನ್ನು ಮತ್ತೆ ಕಟ್ಟುವ ವಿದ್ಯಾವಂತ ರಾಜೀವನ ಬದುಕಿನ ವೃತ್ತಾಂತವು ಪ್ರೇಕ್ಷಕರನ್ನು ಸೆರೆಹಿಡಿದ ಪರಿ ಇಂದಿಗೂ ಒಂದು ವಿಸ್ಮಯ. ಒಂದು ಜನಪ್ರಿಯ ಚಿತ್ರಕ್ಕೆ ಅಗತ್ಯವಾದ ಎಲ್ಲ ಪರಿಕರಗಳನ್ನು ಸಮಪ್ರಮಾಣದಲ್ಲಿ ತುಂಬುವ ಸಿದ್ದಲಿಂಗಯ್ಯನವರ ಕೌಶಲ್ಯವು ಇಲ್ಲಿ ಪರಿಪಕ್ವವಾಗುವೆಡೆಗೆ ಹೊರಳಿತ್ತು. ಈ ಚಿತ್ರದಲ್ಲಿ ಕಟ್ಟಿದ ಹಳ್ಳಿಯ ಪರಿಸರವು ಮುಂದೆ ಒಂದು ಮಾದರಿಯನ್ನು ನಿರ್ಮಿಸಿತು. ಸಾಹುಕಾರ-ಗೇಣಿದಾರನಿಂದ ಹಿಡಿದು ಬದುಕಿಗೆ ಅಗತ್ಯವಾದ ಕುಲಕಸುಬುಗಳ ಹಳ್ಳಿಯ ವಿವಿಧ ಜಾತಿ ಧರ್ಮಗಳ ಪ್ರಾತಿನಿಧ್ಯದ ಜೊತೆಗೆ ಸಮರಸದ ಚಹರೆಗಳು ಇಲ್ಲಿವೆ.

ಹಳ್ಳಿಯ ಸಾಹುಕಾರನೆಂದರೆ ದರ್ಪದ ಪ್ರತಿನಿಧಿ ಎಂಬ ಸಿದ್ಧ ಮಾದರಿಯನ್ನು ಕೈಬಿಟ್ಟು ಪಾಳೇಗಾರಿಕೆಯ ಸದ್ಗುಣಗಳ(Feudal Virtues) ಮುಖವನ್ನು ಪರಿಚಯಿಸಿದರು. ಇಲ್ಲಿನ ಸಾಹುಕಾರ ಊರಮುಂದಿನ ಹಾಲುಹಳ್ಳದಂಥ ವ್ಯಕ್ತಿತ್ವದ ರಾಚೂಟಪ್ಪ. ಸಿದ್ದಲಿಂಗಯ್ಯನವರಿಗೆ ಮಾತ್ರ ಸಾಧ್ಯವಾಗುವ ಇಂತಹ ಪಾತ್ರ ಕೆತ್ತನೆ ಕನ್ನಡ ಚಿತ್ರದಲ್ಲಿ ಹೊಸದು. ಈ ಮುಖ್ಯ ಕತೆಗೆ ಸಮಾನಾಂತರವಾಗಿ ಹಲವಾರು ಎಳೆಗಳನ್ನು ನೇಯುತ್ತಾ ಹಳ್ಳಿಯ ಸ್ಥಿತ್ಯಂತರಗಳ ಚಿತ್ರಗಳನ್ನು ನಿರ್ದೇಶಕ ಬಿಡಿಸಿಡುತ್ತಾರೆ. ಜಮೀನು ಕಳೆದುಕೊಂಡ ಚನ್ನನ ಪರಿತಾಪ, ಸಹಕಾರದ ದುಡಿಮೆ, ಇವುಗಳ ಜೊತೆಗೆ ಗ್ರಾಮ ಪುನರ್ನಿರ್ಮಾಣದ ಎಳೆಗಳೂ ಸೇರಿಕೊಂಡು ಸಮಗ್ರ ಸಂಸ್ಕೃತಿಯೊಂದು ಮಾತನಾಡುತ್ತಿರುವ ಅನುಭವವಾಗುತ್ತದೆ. ರಾಜ್, ಬಾಲಣ್ಣ, ಭಾರತಿ, ಲೋಕನಾಥ್, ದ್ವಾರಕೀಶ್, ಆರತಿ, ಅದವಾನಿ ಲಕ್ಷ್ಮೀದೇವಿ, ವಜ್ರಮುನಿ ಅವರ ಪಾತ್ರೋಚಿತ ಅಭಿನಯಕ್ಕೂ ಈ ಚಿತ್ರದ ಯಶಸ್ಸಿನಲ್ಲಿ ಪಾಲಿದೆ. ಮಲೆನಾಡು ಮತ್ತು ಬಯಲ�

Writer - ಕೆ. ಪುಟ್ಟಸ್ವಾಮಿ

contributor

Editor - ಕೆ. ಪುಟ್ಟಸ್ವಾಮಿ

contributor

Similar News