3 ತಿಂಗಳಲ್ಲಿ ಚುನಾವಣೆ ಸಾಧ್ಯವಿಲ್ಲ: ಪಾಕ್ ಚುನಾವಣಾ ಆಯೋಗದ ಹೇಳಿಕೆ

Update: 2022-04-05 17:34 GMT

ಇಸ್ಲಮಾಬಾದ್, ಎ.5: ಸಂವಿಧಾನಾತ್ಮಕ, ಕಾನೂನು ಮತ್ತು ವ್ಯವಸ್ಥೆಗೆ ಸಂಬಂಧಿಸಿದ ಸವಾಲುಗಳ ಹಿನ್ನೆಲೆಯಲ್ಲಿ ದೇಶದಲ್ಲಿ 3 ತಿಂಗಳೊಳಗೆ ಸಾರ್ವತ್ರಿಕ ಚುನಾವಣೆ ನಡೆಸಲು ಸಾಧ್ಯವಾಗದು ಎಂದು ಪಾಕಿಸ್ತಾನದ ಚುನಾವಣಾ ಆಯೋಗ ಮಂಗಳವಾರ ಹೇಳಿದೆ. 3 ತಿಂಗಳೊಳಗೆ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ರವಿವಾರ ಶಿಫಾರಸು ಮಾಡುವ ಮೂಲಕ ಪ್ರಧಾನಿ ಇಮ್ರಾನ್ ಖಾನ್ ತನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದ ವಿರೋಧ ಪಕ್ಷಗಳನ್ನು ದಿಗ್ಭ್ರಮೆಗೊಳಿಸಿದ್ದರು.

ಚುನಾವಣಾ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಲಾಗಿದ್ದು ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಆದ್ದರಿಂದ ಜಿಲ್ಲಾವಾರು, ಕ್ಷೇತ್ರವಾರು ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವುದು ಪ್ರಮುಖ ಸವಾಲಾಗಿದೆ. ಸಾರ್ವತ್ರಿಕ ಚುನಾವಣೆಯ ಸಿದ್ಧತೆಗೆ ಕನಿಷ್ಟ 6 ತಿಂಗಳ ಸಮಯದ ಅಗತ್ಯವಿದೆ ಎಂದು ಚುನಾವಣಾ ಆಯೋಗದ ಉನ್ನತ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಪಾಕಿಸ್ತಾನದ ಡಾನ್ ದಿನಪತ್ರಿಕೆ ವರದಿ ಮಾಡಿದೆ. ನೂತನ ಕ್ಷೇತ್ರಗಳ ಗಡಿ ನಿರ್ಣಯ ಪ್ರಕ್ರಿಯೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆಕ್ಷೇಪಣೆ ಸಲ್ಲಿಕೆಗೇ ಒಂದು ತಿಂಗಳ ಅವಕಾಶ ನೀಡಲಾಗುತ್ತದೆ. ಚುನಾವಣೆಯ ಸಾಮಾಗ್ರಿಗಳ ಪೂರೈಕೆ, ಮತಪತ್ರಗಳ ವ್ಯವಸ್ಥೆ, ಮತದಾನ ಕೇಂದ್ರದ ಸಿಬಂದಿಗಳ ನೇಮಕ ಮತ್ತು ತರಬೇತಿಯೂ ಸವಾಲಿನ ಕಾರ್ಯವಾಗಿದೆ.

ಕಾನೂನಿನ ಪ್ರಕಾರ, ವಾಟರ್ಮಾರ್ಕ್ ಇರುವ ಮತಪತ್ರಗಳನ್ನೇ ಬಳಸಬೇಕು ಮತ್ತು ಅವು ದೇಶದಲ್ಲಿ ಲಭ್ಯವಿರದ ಕಾರಣ ಆಮದು ಮಾಡಿಕೊಳ್ಳಬೇಕು. ಬಿಡ್ ಆಹ್ವಾನ, ಕೊಟೇಷನ್ಗಳ ಆರ್ಥಿಕ ಮತ್ತು ತಾಂತ್ರಿಕ ಅಂಶಗಳ ಪರಿಶೀಲನೆಗೂ ಸಮಯ ಹಿಡಿಯುತ್ತದೆ. ಸುಮಾರು 1 ಲಕ್ಷ ಮತದಾನ ಕೇಂದ್ರಗಳಿಗೆ 2 ಮಿಲಿಯನ್ ಸ್ಟ್ಯಾಂಪ್ ಪ್ಯಾಡ್ಗಳ ಅಗತ್ಯವಿದೆ. ಇನ್ನು ಕಾನೂನಿನ ಅಂಶದ ಪ್ರಕಾರ, ಚುನಾವಣೆಗೆ 4 ತಿಂಗಳ ಮೊದಲು ಆಯೋಗ ಚುನಾವಣೆಯ ಯೋಜನೆಯನ್ನು ಘೋಷಿಸಲು ಸಿದ್ಧವಾಗಿರಬೇಕು ಎಂದು ಚುನಾವಣಾ ಕಾಯ್ದೆಯ ಸೆಕ್ಷನ್ 14ರಲ್ಲಿ ಸೂಚಿಸಲಾಗಿದೆ. ಇವಿಎಂ(ವಿದ್ಯುನ್ಮಾನ ಮತಯಂತ್ರ) ಬಳಕೆಗೆ ಕೋರಿಕೆ ಮತ್ತು ಸಾಗರೋತ್ತರ ಪಾಕಿಸ್ತಾನೀಯರಿಗೆ ಮತದಾನದ ಹಕ್ಕು ನೀಡುವ ಕಾನೂನಿನ ಬಗ್ಗೆಯೂ ಗಮನಹರಿಸುವ ಅಗತ್ಯವಿದೆ ಎಂದವರು ಹೇಳಿದ್ದಾರೆ.

ಸಂಸತ್ತು ವಿಸರ್ಜನೆ ಪ್ರಶ್ನಿಸಿದ ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಸುಪ್ರೀಂ

ಸಂಸತ್ತನ್ನು ವಿಸರ್ಜಿಸಿ ಅವಧಿಪೂರ್ಣ ಚುನಾವಣೆ ನಡೆಸುವ ಅಧಿಕಾರ ಪ್ರಧಾನಿ ಇಮ್ರಾನ್ ಖಾನ್ ಗೆ ಇದೆಯೇ ಎಂದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್ ಮತ್ತೆ ಮುಂದೂಡಿದೆ. ಇಮ್ರಾನ್ಖಾನ್ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮತದಾನ ನಡೆಯುವ ಮೊದಲೇ ಕಳೆದ ರವಿವಾರ ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯ ಉಪಸ್ಪೀಕರ್ ಸಂಸತ್ತನ್ನು ವಿಸರ್ಜಿಸುವ ಘೋಷಣೆ ಮಾಡಿದ್ದರು. ಆದರೆ ಬಹುಮತ ಕಳೆದುಕೊಂಡಿರುವ ಇಮ್ರಾನ್ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ರದ್ದುಗೊಳಿಸಲು ಉಪಸ್ಪೀಕರ್ಗೆ ಅಧಿಕಾರವಿಲ್ಲ ಎಂದು ವಾದಿಸಿರುವ ಪ್ರತಿಪಕ್ಷಗಳು ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ. ಇದೀಗ ಇಮ್ರಾನ್ ಖಾನ್-ಪ್ರತಿಪಕ್ಷಗಳ ನಡುವಿನ ಈ ರಾಜಕೀಯ ಸೆಣಸಾಟವು ದೇಶದಲ್ಲಿ ಮತ್ತೊಂದು ಸಾಂವಿಧಾನಿಕ ಬಿಕ್ಕಟ್ಟಿನ ಪರಿಸ್ಥಿತಿಗೆ ಕಾರಣವಾಗಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News