ದೇಶಾದ್ಯಂತ ಹರಡುತ್ತಿರುವ ಬೆಲೆಯೇರಿಕೆಯ ಬೆಂಕಿ!

Update: 2022-04-06 04:49 GMT

ಹೊರಗೆ ಬೇಸಿಗೆಯ ಬಿಸಿಲು ಧಗಿಸುತ್ತಿರುವಂತೆಯೇ ಬೆಲೆಯೇರಿಕೆಯ ಬಿಸಿ ಅದನ್ನೂ ಮೀರಿ ಜನಸಾಮಾನ್ಯರನ್ನು ಸುಡುತ್ತಿದೆ. ಮತ್ತೆ ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಕಳೆದ ಎರಡು ವಾರಗಳಲ್ಲಿ ಪ್ರತೀ ಲೀಟರ್‌ಗೆ 8.40 ರೂಪಾಯಿ ಹೆಚ್ಚಳವಾಗಿದೆ. ಇದು ಹೀಗೆ ಮುಂದುವರಿದರೆ, ಶೀಘ್ರದಲ್ಲೇ ಪೆಟ್ರೋಲ್ ಬೆಲೆ 200 ರೂಪಾಯಿ ದಾಟಲಿದೆ. ಇದರ ಬೆನ್ನಿಗೆ ಗ್ಯಾಸ್ ಸಿಲಿಂಡರ್‌ಗಳನ್ನು ಮುಟ್ಟುವಂತೆಯೇ ಇಲ್ಲ. ಗ್ರಾಮೀಣ ಪ್ರದೇಶದ ಜನರು ಮತ್ತೆ ಹಳೆಯ ಒಲೆಗಳಿಗೆ ಮೊರೆ ಹೋಗುತ್ತಿದ್ದಾರೆ. ಆದರೆ ನಗರ ಪ್ರದೇಶದ ಜನರಿಗೆ ಆ ಅವಕಾಶವೂ ಇಲ್ಲವಾಗಿದೆ. ಇದು ಸಾಲದು ಎಂಬಂತೆ ಈಗ ರಾಜ್ಯದ ಜನತೆಗೆ ಕರೆಂಟ್ ಶಾಕ್ ನೀಡಲಾಗಿದೆ. ಸರಕಾರ ಪ್ರತಿ ಯೂನಿಟ್‌ಗೆ 35 ಪೈಸೆಯನ್ನು ಹೆಚ್ಚಿಸಿದೆ. ಒಟ್ಟಿನಲ್ಲಿ ಜನರ ಬದುಕನ್ನು ಹಗಲು ರಾತ್ರಿ ಕತ್ತಲಲ್ಲೇ ಇಡುವುದಕ್ಕೆ ಸರಕಾರ ಹೊರಟಿದೆ. ತೈಲ ಬೆಲೆಯೇರಿಕೆಯ ಪರಿಣಾಮಗಳು ನಿಧಾನಕ್ಕೆ ವಾಹನ ಮಾಲಕರಿಂದ, ವಾಹನಗಳೇ ಇಲ್ಲದ ಶ್ರೀಸಾಮಾನ್ಯನಿಗೆ ವರ್ಗಾವಣೆಯಾಗುತ್ತಿದೆ.

ಲಾಕ್‌ಡೌನ್‌ನಿಂದ ಹಳಿತಪ್ಪಿದ ಬದುಕನ್ನು ಸರಿಪಡಿಸುವುದಕ್ಕೆ ಒದ್ದಾಡುತ್ತಿರುವ ಜನರು ಈ ಬೆಲೆಯೇರಿಕೆಯಿಂದ ಮತ್ತೆ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಈಗಾಗಲೇ ದಿನಸಿ ಮೊದಲಾದ ಅಗತ್ಯ ವಸ್ತುಗಳ ಸಾಗಾಟದ ವೆಚ್ಚ ಹೆಚ್ಚುತ್ತಿವೆ. ಇದರ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅಷ್ಟೇ ಅಲ್ಲ ಹೊಟೇಲ್‌ಗಳು ತಿನಿಸುಗಳ ಬೆಲೆಯನ್ನು ಶೇ.10ರಷ್ಟು ಏರಿಸುವ ಬೆದರಿಕೆಯನ್ನು ಒಡ್ಡಿದೆ. ಏರುತ್ತಿರುವ ಬೆಲೆಯಿಂದಾಗಿ ನಮಗಿದು ಅನಿವಾರ್ಯ ಎಂದು ಹೊಟೇಲ್ ಮಾಲಕರು ಹೇಳುತ್ತಿದ್ದಾರೆ. ನಗರಗಳಲ್ಲಿ ಅತ್ಯಗತ್ಯ ಕಾರಣಕ್ಕಾಗಿ ಬರುವ ಜನಸಾಮಾನ್ಯರಿಗೆ ಇದು ಮತ್ತೊಂದು ಆಘಾತ. ನೋಟು ನಿಷೇಧದಿಂದ ಕಪ್ಪು ಹಣವೆಲ್ಲ ಸರಕಾರದ ಬೊಕ್ಕಸಕ್ಕೆ ಹೋಗಿ, ಜನಸಾಮಾನ್ಯರ ಬದುಕು ಹಸನಾಗುತ್ತದೆ ಎಂದು ಭಾವಿಸಿದ್ದ ಭಾರತೀಯರನ್ನು ಸರಕಾರ ದೊಡ್ಡ ಮಟ್ಟದಲ್ಲಿ ವಂಚಿಸಿದೆ. ಸರಕಾರದ ನೋಟು ನಿಷೇಧ ಪ್ರಯೋಗಕ್ಕಾಗಿ ಜನಸಾಮಾನ್ಯರು ಮಾಡಿದ ಬಲಿದಾನ ಸಂಪೂರ್ಣ ವ್ಯರ್ಥವಾಗಿದೆ. ದೇಶದ ಆರ್ಥಿಕತೆಯನ್ನು ಸರಿಪಡಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ತನ್ನ ವೈಫಲ್ಯವನ್ನು ಮುಚ್ಚಿ ಹಾಕುವುದಕ್ಕಾಗಿ ಕೊರೋನ, ಲಾಕ್‌ಡೌನ್ ಕಡೆಗೆ ಕೈ ತೋರಿಸುತ್ತಿದೆ. ಆದರೆ ಭಾರತದ ಆರ್ಥಿಕತೆ ನೋಟು ನಿಷೇಧ ದಿನಗಳಿಂದಲೇ ಪಾತಾಳ ತಲುಪಿತ್ತು. ಅಂದಿನಿಂದ ಇಂದಿನವರೆಗೆ ಭಾರತ ಕೆಳಮುಖವಾಗಿಯೇ ಚಲಿಸುತ್ತಿದೆ. ಇದೀಗ ಪೆಟ್ರೋಲ್ ಬೆಲೆಯೇರಿಕೆ ಅನಿವಾರ್ಯ ಎಂದು ಸರಕಾರ ಸಮರ್ಥನೆ ಮಾಡುತ್ತಿದೆ.

ಯುಪಿಎ ಸರಕಾರದ ವಿರುದ್ಧ ಬಿಜೆಪಿ ಪ್ರಚಾರ ಮಾಡುತ್ತಿರುವಾಗ ‘ಪೆಟ್ರೋಲ್ ಬೆಲೆಯೇರಿಕೆ’ಯನ್ನೇ ಮುಖ್ಯ ವಿಷಯವಾಗಿಸಿತ್ತು. ಪೆಟ್ರೋಲ್ ಬೆಲೆಯೇರಿಕೆಯಿಂದ ಜನಸಾಮಾನ್ಯರ ಬದುಕು ಬೀದಿಗೆ ಬಿದ್ದಿದೆ ಎಂದು ಸಾರ್ವಜನಿಕವಾಗಿ ಅಳುತ್ತಾ, ಬಿಜೆಪಿ ಅಧಿಕಾರಕ್ಕೇರಿತು. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪರೋಕ್ಷವಾಗಿ ಸಹಕರಿಸಿದ ರಾಮ್‌ದೇವ್‌ರಂತಹ ಸ್ವಯಂಘೋಷಿತ ಸನ್ಯಾಸಿಗಳೂ ಪೆಟ್ರೋಲ್ ಬೆಲೆಯೇರಿಕೆಯ ವಿರುದ್ಧ ಬಹಿರಂಗ ಮಾತನಾಡಿದ್ದರು. ಕಡಿಮೆ ಬೆಲೆಯಲ್ಲಿ ಸಿಲಿಂಡರ್ ಮತ್ತು ಪೆಟ್ರೋಲ್ ಒದಗಿಸುವ ಸರಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ರಾಮ್‌ದೇವ್ ಬಹಿರಂಗವಾಗಿ ದೇಶದ ಜನರಿಗೆ ಕರೆ ನೀಡಿದ್ದರು. ವಿಪರ್ಯಾಸವೆಂದರೆ ದೇಶದ ಇತಿಹಾಸದಲ್ಲಿ ಈ ಪರಿಯ ವೇಗದಲ್ಲಿ ಪೆಟ್ರೋಲ್ ಬೆಲೆಯೇರಿಕೆ ಯಾವತ್ತೂ ನಡೆದದ್ದಿಲ್ಲ. ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರ ಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್ ಬೆಲೆಯೇರಿಕೆಯನ್ನು ನಿಯಂತ್ರಿಸಲು ಸರಕಾರ ವಿಫಲವಾಗಿರುವುದರಿಂದ ಭಾರತದಲ್ಲಿ ಬಡವರು, ಮಧ್ಯಮವರ್ಗದ ಜನರು ಶಾಶ್ವತ ‘ಲಾಕ್‌ಡೌನ್’ ಸ್ಥಿತಿಯಲ್ಲಿ ಬದುಕಬೇಕಾದಂತಹ ವಾತಾವರಣ ನಿರ್ಮಾಣವಾಗಿದೆ.

ಯುಪಿಎ ಅಧಿಕಾರದಲ್ಲಿದ್ದಾಗ ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತು ಅಂದಿನ ಸರಕಾರದ ವೈಫಲ್ಯಗಳನ್ನು ಪರಿಣಾಮಕಾರಿಯಾಗಿ ಜನರ ಮುಂದಿಟ್ಟಿತ್ತು. ಅಂದಿನ ಸರಕಾರದ ಭ್ರಷ್ಟಾಚಾರ ಮಾತ್ರವಲ್ಲ, ಪೆಟ್ರೋಲ್ ಬೆಲೆಯೇರಿಕೆಯನ್ನು ಭೂತಗನ್ನಡಿಯಿಟ್ಟು ಜನರಿಗೆ ತೋರಿಸಿತ್ತು. ಇಂದು ಸರಕಾರದ ವೈಫಲ್ಯಗಳು ಸಾಲು ಸಾಲಾಗಿ ಬಿದ್ದಿವೆ. ಆದರೆ ಅವುಗಳನ್ನು ಬಳಸಿಕೊಂಡು ಸರಕಾರವನ್ನು ಅಲುಗಾಡಿಸುವ ಶಕ್ತಿಯನ್ನು ವಿರೋಧ ಪಕ್ಷಗಳು ಕಳೆದುಕೊಂಡಿವೆ. ವಿರೋಧಪಕ್ಷಗಳು ಒಳಗೊಳಗೆ ಸರಕಾರದ ಜೊತೆಗೆ ಶಾಮೀಲಾಗಿವೆ ಅಥವಾ ಹೊಂದಾಣಿಕೆ ಮಾಡಿಕೊಂಡಿವೆ ಎನ್ನುವ ಶಂಕೆ ಜನರನ್ನು ಕಾಡುತ್ತಿದೆ. ವಿಪರ್ಯಾಸವೆಂದರೆ, ಬಿಜೆಪಿ ನಾಯಕರಾದ ನಿತಿನ್ ಗಡ್ಕರಿಯವರೇ, ‘‘ಕಾಂಗ್ರೆಸ್ ಇನ್ನೂ ಗಟ್ಟಿಯಾಗಬೇಕು. ವಿರೋಧಪಕ್ಷ ದುರ್ಬಲವಾಗಿರಬಾರದು’’ ಎಂದು ಸಲಹೆ ನೀಡುವಷ್ಟರ ಮಟ್ಟಿಗೆ ವಿರೋಧ ಪಕ್ಷಗಳು ನಿಷ್ಕ್ರಿಯವಾಗಿವೆ. ಬರೀ ಪತ್ರಿಕಾಗೋಷ್ಠಿಗಳಲ್ಲೇ ವಿರೋಧ ಪಕ್ಷಗಳ ನಾಯಕರು ತಮ್ಮ ಕರ್ತವ್ಯವನ್ನು ಮುಗಿಸುತ್ತಿದ್ದಾರೆ. ಬೆಲೆಯೇರಿಕೆಯ ಸಮಸ್ಯೆಯನ್ನು ಜನರ ಮುಂದಿಟ್ಟು ಒಂದು ಜನಾಂದೋಲನವನ್ನು ರೂಪಿಸುವಲ್ಲಿ ವಿಫಲರಾಗಿದ್ದಾರೆ. ಜನರಲ್ಲಿ ಬೆಲೆಯೇರಿಕೆಯ ಕುರಿತಂತೆ ವ್ಯಾಪಕ ಅಸಮಾಧಾನವಿದೆ. ಆ ಅಸಮಾಧಾನವನ್ನು ಬಳಸಿಕೊಳ್ಳುವ ಬಗೆಯನ್ನು ಅರಿಯದೆ ವಿರೋಧ ಪಕ್ಷದ ನಾಯಕರು ಬರೀ ಸದನಕ್ಕಷ್ಟೇ ಗದ್ದಲವನ್ನು ಸೀಮಿತಗೊಳಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಜನಸಾಮಾನ್ಯರೇ ಅನಿವಾರ್ಯವಾಗಿ ಒಂದಾಗಬೇಕಾದ ಸಂದರ್ಭ ಬಂದಿದೆ. ಸರಕಾರ ಹಲಾಲ್ ಕಟ್, ಜಟ್ಕಾ ಕಟ್ ಎಂದು ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದೆ. ಆದರೆ ಜನರು ಹಲಾಲ್-ಜಟ್ಕಾದ ಬಗ್ಗೆ ಜಗಳಾಡುವ ಮುಂಚೆ ಇಂದು ಕೋಳಿಮಾಂಸಕ್ಕೆ ಬೆಲೆ ಎಷ್ಟು ಏರಿಕೆಯಾಗಿದೆ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳಬೇಕು. ಯಾರ ಅಂಗಡಿಯಿಂದ ದಿನಸಿ ಕೊಳ್ಳಬೇಕು ಎಂದು ಕೆಲವು ದುಷ್ಕರ್ಮಿಗಳು ಆದೇಶಗಳನ್ನು ನೀಡುತ್ತಿರುವ ಸಂದರ್ಭದಲ್ಲಿ, ಏರುತ್ತಿರುವ ದಿನಸಿ ಬೆಲೆಯ ಬಗ್ಗೆ ಮಾತನಾಡಿ ಎಂದು ಅವರಿಗೆ ಮರುತ್ತರ ನೀಡುವುದನ್ನು ಆರಂಭಿಸಬೇಕು. ಜನಸಾಮಾನ್ಯರು ಬೆಲೆಯೇರಿಕೆಯ ಕುರಿತಂತೆ ವೌನವಾಗಿದ್ದಷ್ಟೂ, ಸರಕಾರದ ಆತ್ಮವಿಶ್ವಾಸ ಹೆಚ್ಚುತ್ತದೆ. ಇದು ಇನ್ನಷ್ಟು ಆರ್ಥಿಕ ಅರಾಜಕತೆಗೆ ಕಾರಣವಾಗಬಹುದು. ಇಂದು ಶ್ರೀಲಂಕಾ ಎದುರಿಸುತ್ತಿರುವ ಸ್ಥಿತಿ ಭವಿಷ್ಯದಲ್ಲಿ ಭಾರತಕ್ಕೆ ಬರಬಾರದು ಎಂದಾದರೆ, ನಾವು ಸರಕಾರವನ್ನು ಈಗಿಂದಲೇ ತರಾಟೆಗೆ ತೆಗೆದುಕೊಳ್ಳಬೇಕಾಗಿದೆ. ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿ ಏನೂ ಪ್ರಯೋಜನವಿಲ್ಲ. ಜನಸಾಮಾನ್ಯರು ಯಾವುದೇ ರಾಜಕೀಯ ಪಕ್ಷಗಳನ್ನು ನೆಚ್ಚಿಕೊಳ್ಳದೆ ವಿವಿಧ ನಾಗರಿಕ ಸಂಘಟನೆಗಳ ಮೂಲಕ ಬೆಲೆಯೇರಿಕೆಯ ವಿರುದ್ಧ ಪ್ರತಿಭಟನೆ ಶುರು ಹಚ್ಚಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News