ರಾಜ್ಯದಲ್ಲಿ 63 ಲಕ್ಷ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ ಮಾಡಲಾಗಿದೆ: ಡಿ.ಕೆ. ಶಿವಕುಮಾರ್

Update: 2022-04-06 07:59 GMT

ಹಾಸನ : ರಾಜ್ಯದಲ್ಲಿ ಇದುವರೆಗೆ 63 ಲಕ್ಷ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಮಾಡಲಾಗಿದೆ. ಪ್ರತಿ ಬೂತ್ ನಲ್ಲಿ ನೋಂದಾಣಿದಾರರ ನೇಮಕ ಮಾಡಿ, ಮತದಾರರ ಪಟ್ಟಿ ತೆಗೆದುಕೊಂಡು ಮನೆಮನೆಗೂ ಹೋಗಿ ನೋಂದಣಿ ಮಾಡಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಅವರು ಹಾಸನದಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಈ ಬಗ್ಗೆ ಮಾಹಿತಿ ನೀಡಿದರು.

ಹಾಸನದಲ್ಲಿ 2,35,000 ಸದಸ್ಯತ್ವ ನೋಂದಣಿ ಆಗಿದೆ. ನಿನ್ನೆ ಅರಸೀಕೆರೆ, ಭದ್ರಾವತಿಗೆ ಭೇಟಿ ಕೊಟ್ಟು, ಅಲ್ಲಿ ತಿಳುವಳಿಕೆ ನೀಡಿ ಬಂದಿದ್ದೇನೆ. ಇನ್ನು 9 ದಿನ ಕಾಲಾವಕಾಶ ಇದ್ದು, ಎಲ್ಲರೂ ಉತ್ಸಾಹದಿಂದ ಸದಸ್ಯತ್ವ ನೋಂದಣಿ ಮಾಡಿ, ಸುಮಾರು 70 ಲಕ್ಷ ಗಡಿ ಮುಟ್ಟುವ ವಿಶ್ವಾಸವಿದೆ. ಇಡೀ ರಾಜ್ಯದಲ್ಲಿ ಜನ ಬಿಜೆಪಿ ಹಾಗೂ ದಳದಲ್ಲಿ ಗುರುತಿಸಿಕೊಂಡವರು ಕಾಂಗ್ರೆಸ್ ಸದಸ್ಯರಾಗುತ್ತಿದ್ದು, ನಮಗೆ ಆತ್ಮ ವಿಶ್ವಾಸ ಹೆಚ್ಚಿಸಿದೆ ಎಂದರು.

ಪಂಚರಾಜ್ಯ ಚುನಾವಣೆಯಲ್ಲಿ ನಾವು ಪಂಜಾಬ್ ರಾಜ್ಯವನ್ನು ನಮ್ಮ ತಪ್ಪಿನಿಂದ ಸೋತಿದ್ದೇವೆ. ಬಿಜೆಪಿಯವರು ಇಲ್ಲಿಯೂ ಗೆಲ್ಲುವುದಾಗಿ ಬೀಗುತ್ತಿದ್ದಾರೆ. ಆದರೆ ಜನ ಕಾಂಗ್ರೆಸ್ ಜತೆ ಗುರುತಿಸಿಕೊಳ್ಳುತ್ತಿದ್ದಾರೆ. ಚುನಾವಣೆ ಫಲಿತಾಂಶ ನಂತರವೂ 30 ಲಕ್ಷ ಸದಸ್ಯರು ನೋಂದಣಿ ಆಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ತರಲು ಅವರೆಲ್ಲ ಸದಸ್ಯರಾಗುತ್ತಿರುವುದು ಸ್ಪಷ್ಟವಾಗಿದೆ. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ನಾವು ಹೇಳಬೇಕಾಗಿಲ್ಲ. ವಿಶ್ವನಾಥ್, ಕೆಂಪಣ್ಣ ಅವರೆಲ್ಲರೂ ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್, ರಸಗೊಬ್ಬರದ ಬೆಲೆ ಎಲ್ಲವೂ ಏರಿಕೆ ಆಗಿದ್ದು, ಬಿಜೆಪಿ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಜನ ಅರ್ಥ ಮಾಡಿಕೊಂಡಿದ್ದು, ಚುನಾವಣೆ ಬರಲಿ, ಅವಕಾಶ ಸಿಗಲಿ ಎಂದು ಕಾಯುತ್ತಿದ್ದಾರೆ.

ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು. ಆದರೆ ರಾಗಿ, ಜೋಳ, ತೊಗರಿ ಸೇರಿದಂತೆ ಬೆಳೆಗಳಿಗೆ ಬೆಂಬಲ ಬೆಲೆ ನೀಡಿಲ್ಲ. ಬದಲಿಗೆ ಸರ್ಕಾರ ಖರೀದಿಗೆ ಮಿತಿ ಏರಿದೆ.  ನಮ್ಮ ರಾಜ್ಯದವರೇ ಕೃಷಿ ಸಚಿವರಾಗಿದ್ದರೂ, ಅನ್ಯಾಯ ಮುಂದುವರಿದಿದೆ. ರೈತರು ನೆಮ್ಮದಿಯಾಗಿಲ್ಲ, ಕೈಗಾರಿಕೆಗಳಿಗೆ ಬಂಡವಾಳ ಬರುತ್ತಿಲ್ಲ. ವ್ಯಾಪಾರಸ್ಥರಿಗೂ ತೊಂದರೆ ಆಗಿದೆ. ಪ್ರತಿ ಜಿಲ್ಲೆಯಲ್ಲಿ ಕೋಮುವಾದ ಹರಡುತ್ತಿದ್ದಾರೆ.

ಎಲ್ಲ ಕಡೆ 144 ಸೆಕ್ಷನ್ ಹಾಕಿದರೆ ಯಾರು ವ್ಯಾಪಾರ ಮಾಡುತ್ತಾರೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ನಮ್ಮ ಮಾನವ ಸಂಪನ್ಮೂಲ ಬೇರೆ ದೇಶಗಳಿಗೆ ವಲಸೆ ಹೋಗುತ್ತಿದೆ. ರಾಜ್ಯವನ್ನು ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದಾರೆ. ರಾಜ್ಯ ಕಷ್ಟದ ಪರಿಸ್ಥಿತಿಯಲ್ಲಿದ್ದು, ರಾಜ್ಯದ ಘನತೆಯನ್ನು ನಾವು ಉಳಿಸಿಕೊಳ್ಳಬೇಕು. ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಆರೋಗ್ಯ ಸೇವೆ, ಕೃಷಿ, ಬಂಡವಾಳ ಹೂಡಿಕೆ, ಉದ್ಯೋಗಕ್ಕೆ ನಮ್ಮ ರಾಜ್ಯ ಮುಂಚೂಣಿಯಲ್ಲಿತ್ತು. ಎಲ್ಲ ವರ್ಗದ ಜನರನ್ನು ಗೌರವಿಸಿ, ಕೋಮು ಗಲಭೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಬೆಂಗಳೂರು, ಮಲೆನಾಡು, ಕರಾವಳಿ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಹಾಗೂ ಬಯಲು ಸೀಮೆ ಕರ್ನಾಟಕಕ್ಕೆ ಪ್ರತ್ಯೇಕ ಕಾರ್ಯಕ್ರಮ ರೂಪಿಸುತ್ತೇವೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನಾವು ಕೊಟ್ಟ ಭರವಸೆಯನ್ನು ಶೇ.90 ರಷ್ಟು ಈಡೇರಿಸಿದ್ದೇವೆ.

ಅಲ್ಪಸಂಖ್ಯಾತ ವ್ಯಾಪಾರಿಗಳನ್ನು ನಿರ್ಬಂಧಿಸುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಅದು ಬಿಜೆಪಿ ಅಜೆಂಡಾ. ರೈತರನ್ನು ಬದುಕಿರುವಾಗಲೇ ಸಮಾಧಿ ಮಾಡಲು ಮುಂದಾಗಿದ್ದಾರೆ. ಮೊನ್ನೆ ಹಲಾಲ್ ಕಟ್ ವಿಚಾರವಾಗಿ ದಾಳಿ ಮಾಡಿದರು. ರಾಜ್ಯದಲ್ಲಿ ಕುರಿ, ಕೋಳಿ ಸಾಕುವವರು ರೈತರು. ಇವುಗಳನ್ನು ನಿಗದಿತ ಸಮಯದಲ್ಲಿ ಕಟಾವು ಮಾಡದಿದ್ದರೆ ರೈತರಿಗೆ ಅವುಗಳ ಮೇವಿನ ಹೊರೆ ಬೀಳಲಿದೆ. ಇನ್ನು ಮಾವಿನ ವಿಚಾರ. ಕೋವಿಡ್ ಸಮಯದಲ್ಲಿ ಅಲ್ಪಸಂಖ್ಯಾತರೇ ರೈತರಿಂದ ಖರೀದಿ ಮಾಡಿದ್ದರು. ಈಗ ಅವರ ವ್ಯಾಪಾರ ನಿಷೇಧ ಮಾಡಿದರೆ ನಷ್ಟ ಆಗುವುದು ರೈತರಿಗೆ. ಆಗ ಮಾವಿನ ಬೆಲೆಯೂ ಏರಿಕೆಯಾಗುತ್ತದೆ. ಕೋವಿಡ್ ಸಮಯದಲ್ಲಿ ನಷ್ಟ ಅನುಭವಿಸಿದ ರೈತರಿಗೆ ಸಹಾಯ ಮಾಡಲಿಲ್ಲ. ಆನ್ಲೈನ್ ಅರ್ಜಿಗೆ ಕರೆ ಕೊಟ್ಟರು. ಯಾರೂ ಕೂಡ ಅರ್ಜಿ ಹಾಕಲು ಸಾಧ್ಯವಾಗದೆ ಪರಿಹಾರ ಪಡೆಯಲಿಲ್ಲ. ಈ ಮೂಲಕ ರೈತರನ್ನು ಬದುಕಿರುವಾಗಲೇ ಸಾಯಿಸುತ್ತಿದ್ದಾರೆ. ಬಿಜೆಪಿಯವರು ಮತ ಧ್ರುವೀಕರಣ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಜನರನ್ನು ತಪ್ಪುದಾರಿಗೆ ಎಳೆಯುತ್ತಿರುವವರನ್ನು ಶಿಕ್ಷಿಸುತ್ತಿಲ್ಲ. ಇದರಿಂದ ಚುನಾವಣೆ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ಭಾವಿಸಿದ್ದಾರೆ. ಮಾವಿನ ವಿವಾದದಿಂದ ರೈತರಿಗೆ ನಷ್ಟವಾಗಲಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ' ಎಂದು ಡಿಕೆ ಶಿವಕುಮಾರ್‌ ಹೇಳಿದರು.

ಸಿದ್ದರಾಮಯ್ಯ ಅವರ ಕಾಲದಲ್ಲಿ ಶಾದಿಭಾಗ್ಯ ತಂದು ಒಂದು ಸಮುದಾಯ ಓಲೈಸಿ ಸಮಾಜ ಒಡೆದರು ಎಂಬ ಸಿ. ಟಿ ರವಿ ಅವರ ಆರೋಪಕ್ಕೆ, 'ಅವರಿಗೆ ಉತ್ತರ ಕೊಡುವಷ್ಟು ದೊಡ್ಡವನಲ್ಲ. ಅವರು ಮೇಧಾವಿಗಳು. ನಾವು ನಮ್ಮ ಕಾರ್ಯಕ್ರಮ ರೂಪಿಸಿದ್ದೇವೆ. ಅವರು ಜನರಿಗೆ ಉಪಯೋಗವಾಗುವ ಕಾರ್ಯಕ್ರಮ ಮಾಡಲಿ. ಅದನ್ನು ಜನರಿಗೆ ತಲುಪಿಸಿ ನಂತರ ಮಾತನಾಡಲಿ' ಎಂದು ಉತ್ತರಿಸಿದರು.

ಎಲ್ಲ ಪಕ್ಷಗಳು ಒಂದೊಂದು ಸಮುದಾಯ ಓಲೈಸುತ್ತಿವೆಯೇ ಎಂಬ ಪ್ರಶ್ನೆಗೆ, 'ನಾನು ಯಾವಾಗಲೂ ಒಂದು ಮಾತು ಹೇಳುತ್ತಿರುತ್ತೇನೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗ ಅಧಿಕಾರಕ್ಕೆ ಬಂದಂತೆ. ನಾವು ಪುಟಾಣಿ ಮಕ್ಕಳಿಗೆ ಬಿಸಿಯೂಟ ಯೋಜನೆ ತಂದೆವು. ಹೈನುಗಾರಿಕೆ ರೈತರಿಗೆ ಹಾಲಿನ ಪ್ರೋತ್ಸಾಹ ಧನ ಕೊಟ್ಟೆವು, ಪರಿಶಿಷ್ಟರ ಜನಸಂಖ್ಯೆ ಆಧಾರದ ಮೇಲೆ ಅನುದಾನ ಕೊಟ್ಟೆವು. ಯುಪಿಎ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು ಕಾಯ್ದೆ ತಂದಿತ್ತು. ಆದರೆ ಬಿಜೆಪಿ ಅವರು ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ, ಆರ್ಟಿಕಲ್ 370 ಯಂತಹ ಕಾನೂನು ತರುತ್ತಿದ್ದಾರೆಯೇ ಹೊರತು, ಜನರ ಆದಾಯ ಹೆಚ್ಚಿಸಲು, ರೈತರ ಬೆಂಬಲ ಬೆಲೆಗೆ, ಇಂಧನ ಬೆಲೆ ನಿಯಂತ್ರಣ ಮಾಡಲು, ಯುವಕರಿಗೆ ಉದ್ಯೋಗ ನೀಡಲು ಯಾವುದಾರರೂ ಕಾರ್ಯಕ್ರಮ ಮಾಡಿದ್ದಾರೆಯೇ?' ಎಂದು ಪ್ರಶ್ನಿಸಿದರು.

2002ರಲ್ಲಿ ದೇವಾಲಯ ಆವರಣದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಕಾಯ್ದೆ ತಂದಿರುವ ಬಗ್ಗೆ ಪ್ರಶ್ನೆ ಕೇಳಿದಾಗ, 'ದೇವಾಲಯದ ಆವರಣದಲ್ಲಿ ಅನಗತ್ಯ ಸಂಘರ್ಷ ಉದ್ಭವಿಸಬಾರದು ಎಂದು ತರಲಾಗಿತ್ತು. ಆದರೆ ಅದರ ನೆಪದಲ್ಲಿ ಈಗ ಜಾತ್ರೆ, ಸಂತೆಯಲ್ಲಿ ವ್ಯಾಪಾರ ನಿಷೇಧ ಮಾಡುವುದು, ಅವರ ಹೊಟ್ಟೆ ಮೇಲೆ ಸರ್ಕಾರ ಹೊಡೆಯುತ್ತಿದೆ' ಎಂದು ಟೀಕಿಸಿದರು.

ಜೆಡಿಎಸ್ ಜಲಧಾರೆ ವಿಚಾರವಾಗಿ ಪ್ರಶ್ನೆ ಕೇಳಿದಾಗ 'ಬಹಳ ಸಂತೋಷ. ಒಳ್ಳೆಯದಾಗಲಿ. ಇದರಿಂದ ನಮ್ಮ ರಾಜ್ಯದ ರೈತರಿಗೆ ಅನುಕೂಲ ಆಗಬೇಕು. ಅವರ ಜಲಧಾರೆ ಎಲ್ಲಕಡೆ ಸಾಗಲಿ. ಅವರ ಕಾರ್ಯಕ್ರಮ ಯಶಸ್ವಿಯಾಗಲಿ. ನಮ್ಮ ತಕರಾರಿಲ್ಲ' ಎಂದರು.

ಚುನಾವಣೆ ನಂತರ ಮೈತ್ರಿ ಮಾಡಿಕೊಳ್ಳುವ ಆಲೋಚನೆ ಇದೆಯೇ ಎಂದು ಕೇಳಿದ ಪ್ರಶ್ನೆಗೆ, 'ನಾವು ನಮ್ಮ ಕಾಲ ಮೇಲೆ, ಸ್ವಂತ ಬಲದ ಸರ್ಕಾರ ರಚನೆ ಮಾಡುತ್ತೇವೆ. ಜನ ಕಾಂಗ್ರೆಸ್ ಸರ್ಕಾರ ಬರಬೇಕು ಎಂದು ಅಪೇಕ್ಷಿಸುತ್ತಿದ್ದಾರೆ' ಎಂದರು.

ಹಾಸನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವೆಲ್ಲ ನಾಯಕರು ಸೇರ್ಪಡೆಗೆ ಅರ್ಜಿ ಹಾಕಿದ್ದಾರೆ ಎಂಬ ಪ್ರಶ್ನೆಗೆ, 'ನಮಗೆ ದೊಡ್ಡ ನಾಯಕರುಗಳೇ ಬರಬೇಕು ಎಂಬ ನಿರೀಕ್ಷೆ ಇಲ್ಲ. 5-10 ಮತಗಳಿಂದ 2-3 ಸಾವಿರ ಮತಗಳನ್ನು ತರುವ ಕಾರ್ಯಕರ್ತರು ಪಕ್ಷ ಸೇರಿದರೆ ಸಾಕು. ನಮ್ಮ ಪಕ್ಷ ಸೇರಲು ಸುಮಾರು ಅರ್ಜಿಗಳು ಬಂದಿವೆ.  ಈ ವಿಚಾರದಲ್ಲಿ ನಾವು ಸ್ಥಳೀಯ ನಾಯಕರು, ಕಾರ್ಯಕರ್ತರ ಅಭಿಪ್ರಾಯ ಪಡೆಯುತ್ತೇವೆ. ಪಕ್ಷದ ಸ್ಥಳೀಯ ಕಾರ್ಯಕರ್ತರ ಜತೆ ಅವರು ಬೆರೆಯಬೇಕು. ಈ ಅರ್ಜಿ ಸ್ವೀಕರಿಸಲು ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಇದೆ. ಯಾರೆಲ್ಲ ಅರ್ಜಿ ಹಾಕಿದ್ದಾರೆ ಎಂಬುದು ಗೌಪ್ಯವಾದ ವಿಚಾರ.  ಅದನ್ನು ಬಹಿರಂಗಪಡಿಸುವುದಿಲ್ಲ' ಎಂದರು.

ಬೆಲೆ ಏರಿಕೆ ವಿಚಾರವಾಗಿ ಸರ್ಕಾರಕ್ಕೆ ಏನು ಹೇಳುತ್ತೀರ ಎಂಬ ಪ್ರಶ್ನೆಗೆ, 'ನಿಮ್ಮ ಕೈಯಲ್ಲಿ ಈ ದೇಶ, ರಾಜ್ಯವನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆ ಹೆಚ್ಚಾಗಿದೆ. ನೀವು ಅಧಿಕಾರ ಬಿಟ್ಟು ವಿಶ್ರಾತಿ ತೆಗೆದುಕೊಳ್ಳಿ. ಇದು ಜನ ಆಯ್ಕೆ ಮಾಡಿದ ಸರ್ಕಾರವಲ್ಲ' ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ, 'ನಮ್ಮಲ್ಲಿ ಯಾವುದೇ ಬಣ ಇಲ್ಲ.  ನನ್ನ ಯಾವುದೇ ಬಣ ಇಲ್ಲ. ನನ್ನದು ಕಾಂಗ್ರೆಸ್ ಬಣ ಅಷ್ಟೇ. ನಾನು ಪಕ್ಷದ ಅಧ್ಯಕ್ಷನಾಗಿದ್ದೇನೆ. ಪಕ್ಷದ ಕಾರ್ಯಕರ್ತನಾಗಿದ್ದೇನೆ. ನೀವು ಬಣ ಮಾಡುತ್ತಿದ್ದೀರೋ ಅಥವಾ ಬಣ್ಣ ಹಚ್ಚುತ್ತಿದ್ದೀರೋ ಗೊತ್ತಿಲ್ಲ' ಎಂದರು.

ಅಭ್ಯರ್ಥಿ ಹೆಸರನ್ನು ಮುಂಚಿತವಾಗಿ ಘೋಷಿಸುವ ಬಗ್ಗೆ ಕೇಳಿದ ಪ್ರಶ್ನೆಗೆ, 'ನಾವು ನಮ್ಮ ನಾಯಕರ ಜತೆ ಚರ್ಚಿಸಿದ್ದು, ಈ ತಿಂಗಳಲ್ಲಿ ವಿಭಾಗವಾರು ಮಟ್ಟದಲ್ಲಿ ಎಲ್ಲ ಜಿಲ್ಲಾ ನಾಯಕರನ್ನು ಕರೆಸಿ ಸಭೆ ಮಾಡುತ್ತಿದ್ದೇನೆ. ಪ್ರತಿ ವಿಧಾನಸಭಾ ಕ್ಷೇತ್ರದ ಬಗ್ಗೆ ಚರ್ಚೆ ಮಾಡುತ್ತೇವೆ. ನಮ್ಮ ಬಳಿ ಇರುವ ವರದಿ ಬಗ್ಗೆಯೂ ಚರ್ಚಿಸುತ್ತೇವೆ. ಅಭ್ಯರ್ಥಿ ಆಯ್ಕೆ ವೇಳೆ ಗೆಲುವೇ ಮಾನದಂಡ  ಆಗಲಿದೆ' ಎಂದರು.

ಹಾಸನದಲ್ಲಿ ಚುನಾವಣೆ ಎದುರಿಸಲು ಯಾವ ರೀತಿ ತಯಾರಿ ಮಾಡಲಾಗಿದೆ ಎಂಬ ಪ್ರಶ್ನೆಗೆ, 'ಒಂದು ಕಾಲದಲ್ಲಿ ಸಂಸತ್ತಿನಲ್ಲಿ ವಾಜಪೇಯಿ ಹಾಗೂ ಆಡ್ವಾಣಿ ಅವರು ಮಾತ್ರ ಇದ್ದರು. ಇಂದು ಅವರು 300ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಯಾವಾಗ ಯಾರನ್ನು ಆರಿಸಬೇಕು ಎಂದು ಜನ ತೀರ್ಮಾನ ಮಾಡುತ್ತಾರೆ' ಎಂದರು.

ಅವಧಿಗೂ ಮುನ್ನ ಚುನಾವಣೆ ಬರುವುದೇ ಎಂಬ ಪ್ರಶ್ನೆಗೆ, 'ಈ ಪ್ರಶ್ನೆ ಬಿಜೆಪಿಯವರನ್ನು ಕೇಳಿದರೆ ಉತ್ತಮ. ನಾವಂತೂ ನಾಳೆ ಚುನಾವಣೆ ಮಾಡಿದರೂ ಎದುರಿಸಲು ಸಿದ್ಧ. ಅದಕ್ಕಾಗಿಯೇ ಹಗಲು ರಾತ್ರಿ ಸಂಚರಿಸುತ್ತಿದ್ದೇವೆ' ಎಂದರು.

ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು ಯಾವ ರೀತಿ ಪ್ರತಿಕ್ರಿಯೆ ಬರುತ್ತಿದೆ ಎಂಬ ಪ್ರಶ್ನೆಗೆ, 'ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಅರಕಲುಗೋಡು ಗಡಿಯಲ್ಲಿ ಹೆಜ್ಜೆ ಹಾಕಿದ್ದಾಗ ಜನ ತೋರಿದ ಪ್ರೀತಿಗೆ ನಿಮ್ಮ ಕ್ಯಾಮೆರಾ ಕಣ್ಣುಗಳೇ ಸಾಕ್ಷಿ' ಎಂದು ಉತ್ತರಿಸಿದರು.

ಮಸೀದಿಗಳಲ್ಲಿ ಮೈಕ್ ಶಬ್ಧ ಕುರಿತ ಸರ್ಕಾರದ ಸುತ್ತೋಲೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, 'ಸುಪ್ರೀಂಕೋರ್ಟ್ ಈಗ ಮಾಡಿರುವ ಕಾನೂನಿನಂತೆ ನಡೆದುಕೊಳ್ಳಲಿ. ಮೊನ್ನೆ ಯಾರೋ ತಲೆಕೆಟ್ಟವನು ಹಲಾಲ್ ಕಟ್ ಬೇಡ, ಪ್ರಾಣಿ ತಲೆಗೆ ಹೊಡೆದು, ಮೂರ್ಚೆಗೊಳಿಸಿ ವಧೆ ಮಾಡಬೇಕು ಎಂದ. ಪೊಲೀಸರು ಮಾಲಿನ್ಯ ನಿಯಂತ್ರಣ ಮಾಪನ ಮಾಡುವ ಯಾವ ಸಾಧನ ಇಟ್ಟುಕೊಂಡು ಪರಿಶೀಲನೆ ನಡೆಸುತ್ತಾರೆ ? ಅವೈಜ್ಞಾನಿಕ ಕಾನೂನುಗಳನ್ನೇ ಬಿಜೆಪಿ ಸರ್ಕಾರ ಮಾಡುತ್ತಿದೆ. ವಾಸ್ತವವಾಗಿ ಸಾಧ್ಯವಾಗುವ ಕಾನೂನು ಮಾಡುತ್ತಿಲ್ಲ' ಎಂದು ಉತ್ತರಿಸಿದರು.

ಚುನಾವಣೆಯಲ್ಲಿ ಯಾವ ವಿಚಾರ ಇಟ್ಟುಕೊಂಡು ಹೋಗುತ್ತೀರ ಎಂಬ ಪ್ರಶ್ನೆಗೆ, 'ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳಿಗೆ ಮುಕ್ತಿ ನೀಡಿ, ಜನರಿಗೆ ಶಕ್ತಿ ತುಂಬಿ ಅವರ ಬದುಕಿನ ವಿಚಾರವಾಗಿ ಚರ್ಚೆ ಮಾಡುತ್ತೇವೆ. ಪತ್ರಿಕೆಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಒಂದೊಂದು ಹುದ್ದೆಗೆ ಒಂದೊಂದು ದರ ನಿಗದಿ ಮಾಡಿರುವ ಬಗ್ಗೆ ವರದಿ ಬಂದಿವೆ. ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರದ ಎಂದರೆ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ. ಈ 40% ಸರ್ಕಾರ ವಿಚಾರವನ್ನು ಇಟ್ಟುಕೊಂಡು ಹೋರಾಟ ಮುಂದುವರಿಸುತ್ತೇವೆ. ಸದಸ್ಯತ್ವ ನೋಂದಣಿ ಕಾರ್ಯಕ್ರಮ ಮುಗಿದ ನಂತರ ನಮ್ಮ ಕಾರ್ಯಕ್ರಮ ತಿಳಿಸುತ್ತೇವೆ' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News