ಮುಸ್ಲಿಂ ಉದ್ಯೋಗಿಗಳಿಗೆ ರಮಝಾನ್ ವೇಳೆ ಕಚೇರಿಯಿಂದ ಬೇಗನೇ ಮರಳಲು ಅವಕಾಶ ನೀಡಿದ್ದ ಆದೇಶ ಒಂದೇ ದಿನದಲ್ಲಿ ವಾಪಸ್

Update: 2022-04-06 12:54 GMT
ಸಾಂದರ್ಭಿಕ ಚಿತ್ರ

 ಹೊಸದಿಲ್ಲಿ: ಪವಿತ್ರ ರಮಝಾನ್ ತಿಂಗಳ ವೇಳೆ ಉಪವಾಸ ಆಚರಿಸುವ ಎಲ್ಲಾ ಮುಸ್ಲಿಂ ಉದ್ಯೋಗಿಗಳಿಗೆ ತಮ್ಮ ಕಚೇರಿಗಳಿಂದ ಬೇಗನೇ ಮರಳಲು ಈ ಹಿಂದೆ ಅವಕಾಶ ನೀಡಿ ಹೊರಡಿಸಲಾಗಿದ್ದ ತನ್ನ ಆದೇಶವನ್ನು ನವದೆಹಲಿ ಮುನಿಸಿಪಲ್ ಕಾರ್ಪೊರೇಷನ್ (ಎನ್‍ಡಿಎಂಸಿ) ಬುಧವಾರ ವಾಪಸ್ ಪಡೆದುಕೊಂಡಿದೆ.

ಮಂಗಳವಾರ ಹೊರಡಿಸಲಾಗಿದ್ದ ಆದೇಶಕ್ಕೆ ಎನ್‍ಡಿಎಂಸಿ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ಆಕ್ಷೇಪಿಸಿ ಅದು ಜಾತ್ಯತೀತವಲ್ಲ ಎಂದು ತಿಳಿಸಿದ ನಂತರ ಇಂದು ಆದೇಶ ವಾಪಸ್ ಪಡೆಯಲಾಗಿದೆ. ಮಂಗಳವಾರದ ಆದೇಶ ಎಪ್ರಿಲ್ 3ರಿಂದ ಮೇ 3ರ ತನಕ ಅನ್ವಯವಾಗಬೇಕಿತ್ತು. ಆದರೆ ಇಂದು ಹೊರಡಿಸಿದ ಆದೇಶದಲ್ಲಿ "ಸಂಬಂಧಿತ ಪ್ರಾಧಿಕಾರ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಾಪಸ್ ಪಡೆಯಲು ನಿರ್ಧರಿಸಿದೆ" ಎಂದು ತಿಳಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸತೀಶ್ ಉಪಾಧ್ಯಾಯ, ತಮಗೆ ಆದೇಶದ ಬಗ್ಗೆ ಮೊದಲು ತಿಳಿದಿರಲಿಲ್ಲ, ಆದರೆ ತಿಳಿದು ಬರುತ್ತಿದ್ದಂತೆಯೇ ಅದು ಜಾತ್ಯತೀತವಾಗಿಲ್ಲ ಎಂದು ಹೇಳಿ ವಿರೋಧಿಸಿದ್ದಾಗಿ ತಿಳಿಸಿದ್ದರಲ್ಲದೆ ಮುಸ್ಲಿಂ ಉದ್ಯೋಗಿಗಳಿಗೆ ಸಂಜೆ 4.30ಕ್ಕೆ ಕಚೇರಿಯಿಂದ ಮರಳಲು ನೀಡಿದ್ದ ಅವಕಾಶ ವಾಪಸ್ ಪಡೆಯಲಾಗಿದೆ ಎಂದರು.

ರಮಝಾನ್ ತಿಂಗಳ ವೇಳೆ ಮುಸ್ಲಿಂ ಉದ್ಯೋಗಿಗಳಿಗೆ ದಿನದಲ್ಲಿ ಎರಡು ಗಂಟೆ ವಿರಾಮ ನೀಡುವ ಕುರಿತು  ತಾನು ಹೊರಡಿಸಿದ್ದ ಆದೇಶವನ್ನು ದಿಲ್ಲಿ ಜಲ ಮಂಡಳಿ ಬಿಜೆಪಿಯ ವಿರೋಧದ ಹಿನ್ನೆಲೆಯಲ್ಲಿ ಕೆಲವೇ  ಗಂಟೆಗಳಲ್ಲಿ ಮಂಗಳವಾರ ವಾಪಸ್ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News