ಗೃಹ ಸಚಿವರೇ ಮನೆ ಒಡೆದರೆ?

Update: 2022-04-08 05:32 GMT

 ಸೋಮವಾರ ರಾತ್ರಿ ಬೆಂಗಳೂರಿನ ಜೆ.ಜೆ. ನಗರದಲ್ಲಿ ಎರಡು ಬೈಕ್‌ಗಳು ಪರಸ್ಪರ ಢಿಕ್ಕಿಯಾಗಿ, ಇಬ್ಬರು ಸವಾರರ ನಡುವೆ ವಾಗ್ವಾದ, ಜಗಳಕ್ಕೆ ತಿರುಗಿತು. ಇದರಲ್ಲಿ ಶಾಹಿದ್ ಎನ್ನುವ ಬೈಕ್ ಸವಾರ ಇನ್ನೊಂದು ಬೈಕ್‌ನ್ನು ಚಲಾಯಿಸುತ್ತಿದ್ದ ಚಂದ್ರಶೇಖರ್ ಎಂಬವನ ತೊಡೆಗೆ ಇರಿದಿದ್ದಾನೆ. ಒಂದು ಸಣ್ಣ ವಿವಾದ ಈ ರೀತಿಯ ತಿರುವು ಪಡೆದುಕೊಂಡಿರುವುದು ಮತ್ತು ಅದಕ್ಕಾಗಿ ಚಾಕುವಿನಿಂದ ಇರಿಯುವುದು ನಿಜಕ್ಕೂ ಅಮಾನವೀಯ. ದುರದೃಷ್ಟವಶಾತ್ ತೊಡೆಗಾದ ಇರಿತದಿಂದ ವಿಪರೀತ ರಕ್ತಸ್ರಾವವಾಗಿ ಚಂದ್ರಶೇಖರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕೊಲೆ ಆರೋಪದಲ್ಲಿ ಇದೀಗ ಶಾಹಿದ್ ಎಂಬಾತ ಬಂಧಿತನಾಗಿದ್ದಾನೆ. ಆತನಿಗೆ ಕಠಿಣ ಶಿಕ್ಷೆಯನ್ನು ನೀಡುವುದು ನಮ್ಮ ನ್ಯಾಯ ವ್ಯವಸ್ಥೆಯ ಕರ್ತವ್ಯವಾಗಿದೆ. ಇದೇ ಸಂದರ್ಭದಲ್ಲಿ ಮೃತ ಚಂದ್ರಶೇಖರ್ ಕುಟುಂಬಕ್ಕೆ ಪರಿಹಾರವನ್ನು ನೀಡುವ ಕೆಲಸವೂ ನಡೆಯಬೇಕಾಗಿದೆ. ಇಂತಹ ಘಟನೆಗಳು ದೇಶಾದ್ಯಂತ ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ಸೋಮವಾರ ನಡೆದ ಘಟನೆ ಮಾತ್ರ ಬೇರೆಯೇ ತಿರುವು ಪಡೆಯಿತು.

‘ಉರ್ದು ಮಾತನಾಡಲಿಲ್ಲ ಎಂದು ಚಂದ್ರಶೇಖರನನ್ನು ಚೂರಿಯಿಂದ ಚುಚ್ಚಿ ಕೊಲ್ಲಲಾಗಿದೆ’ ಎನ್ನುವ ವದಂತಿಗಳನ್ನು ವ್ಯಾಪಕವಾಗಿ ಹರಡಲಾಯಿತು. ವಿಪರ್ಯಾಸವೆಂದರೆ ಈ ವದಂತಿಯನ್ನು ಮೊತ್ತ ಮೊದಲು ಹರಡಿದ್ದೇ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೊತ್ತ ಸಚಿವರೇ ‘ಒಂದು ಖಾಸಗಿ ಪ್ರಕರಣ’ವನ್ನು ಕೋಮುಗಲಭೆಯಾಗಿ ಪರಿವರ್ತಿಸುವ ಪ್ರಯತ್ನವನ್ನು ಮಾಡಿದರು. ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಆರಗ ಜ್ಞಾನೇಂದ್ರ ಅವರು ‘‘ನನಗೆ ಬಂದ ಮಾಹಿತಿ ಪ್ರಕಾರ ದಲಿತ ಯುವಕನೊಬ್ಬ ಉರ್ದು ಮಾತನಾಡಲಿಲ್ಲ ಎಂದು ಚೂರಿಯಿಂದ ಬರ್ಬರವಾಗಿ ಚುಚ್ಚಿ ಕೊಲೆ ಮಾಡಲಾಗಿದೆ’’ ಎಂದು ಹೇಳಿಕೆ ನೀಡಿದರು. ಮಾನ್ಯ ಗೃಹ ಸಚಿವರಿಗೆ ಈ ಮಾಹಿತಿ ಎಲ್ಲಿಂದ ದೊರಕಿತು ಎನ್ನುವುದರ ಬಗ್ಗೆ ಅವರಿಂದ ಯಾವ ಸ್ಪಷ್ಟನೆಯೂ ಇರಲಿಲ್ಲ. ಒಬ್ಬ ಗೃಹ ಸಚಿವರೇ ಇಂತಹದೊಂದು ವದಂತಿಯನ್ನು ಮಾಧ್ಯಮಗಳ ಮೂಲಕ ಹರಡಿದರೆ ಅದರ ಪರಿಣಾಮ ಏನಾಗಬಹುದು? ಎನ್ನುವ ಪ್ರಾಥಮಿಕ ಜ್ಞಾನ ಜ್ಞಾನೇಂದ್ರ ಅವರಿಗೆ ಇರಬೇಕಾಗಿತ್ತು. ಇವರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ, ಟಿವಿ ವಾಹಿನಿಗಳಲ್ಲಿ ಈ ವದಂತಿ ದೊಡ್ಡ ಪ್ರಮಾಣದಲ್ಲಿ ಹರಡಿತು. ಅಷ್ಟರಲ್ಲಿ ಪೊಲೀಸ್ ಇಲಾಖೆ ‘ಘಟನೆ ನಡೆದಿರುವುದು ಬೈಕ್‌ಗಳು ಪರಸ್ಪರ ಢಿಕ್ಕಿಯಾದ ಕಾರಣದಿಂದಾದ ಜಗಳದಿಂದ’ ಎಂದು ಸ್ಪಷ್ಟೀಕರಣ ನೀಡಿತು. ಬಳಿಕ ತಮ್ಮ ಮಾತನ್ನು ಬದಲಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ‘‘ಕೊಲೆ ನಡೆದಿರುವುದು ವೈಯಕ್ತಿಕ ಜಗಳದ ಕಾರಣಕ್ಕಾಗಿ’’ ಎಂದು ತಿದ್ದಿ, ತನ್ನಿಂದ ತಪ್ಪಾಗಿದೆ ಎನ್ನುವುದನ್ನು ಒಪ್ಪಿಕೊಂಡರು.

ಬೆಂಗಳೂರು ನಗರ ಇತ್ತೀಚಿನ ದಿನಗಳಲ್ಲಿ ಅಪರಾಧ ನಗರವಾಗಿ ಗುರುತಿಸಲ್ಪಡುತ್ತಿದೆ. ಇಂತಹ ಇರಿತಗಳು ಪ್ರತಿದಿನ ಒಂದಲ್ಲ ಒಂದು ಕಡೆ ನಡೆಯುತ್ತಲೇ ಇರುತ್ತವೆ. ಆದರೆ ಗೃಹಸಚಿವರು ಈ ಘಟನೆಯ ಬಗ್ಗೆ ವಿಶೇಷ ಆಸಕ್ತಿಯನ್ನು ವಹಿಸಿ ಆತುರಾತುರದಿಂದ ಹೇಳಿಕೆಯನ್ನು ನೀಡಲು ಕಾರಣವೇನು? ಅದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಕೊಲೆಮಾಡಿದಾತ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವನು ಮತ್ತು ಆತ ಆತನದೇ ಸಮುದಾಯದ ಯುವಕನನ್ನು ಕೊಲೆ ಮಾಡಿದ್ದಿದ್ದರೆ ಗೃಹ ಸಚಿವರು ಈ ಹೇಳಿಕೆಯನ್ನು ನೀಡುತ್ತಿರಲಿಲ್ಲ ಅಥವಾ ಕೊಲೆಯಾದವನು ತನ್ನದೇ ಸಮುದಾಯದ ವ್ಯಕ್ತಿಯಿಂದ ಕೊಲೆಯಾಗಿದ್ದರೂ ಅವರು ಈ ಹೇಳಿಕೆ ನೀಡುತ್ತಿರಲಿಲ್ಲ. ಬೇರೆ ಬೇರೆ ಸಮುದಾಯಕ್ಕೆ ಸೇರಿದ ಯುವಕರಾಗಿರುವುದರಿಂದ ಅವರು ತಕ್ಷಣ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು ಬಿಟ್ಟರು.

ಸಾಧಾರಣವಾಗಿ ಇಂತಹ ಸಂದರ್ಭದಲ್ಲಿ ಗೃಹ ಸಚಿವರು ಮಾತನಾಡಬೇಕಾಗುತ್ತದೆ. ‘ಇದರ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವವರ ವಿರುದ್ಧ ಬಿಗಿ ಕ್ರಮ ತೆಗೆದುಕೊಳ್ಳುತ್ತೇವೆ’’ ಎಂದಿದ್ದರೂ ಅವರನ್ನು ನಾವು ಅಭಿನಂದಿಸಬಹುದಾಗಿತ್ತು. ಆದರೆ ಇಲ್ಲಿ ‘ಇದನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿ’ ಎಂದು ಸ್ವತಃ ಸಚಿವರೇ ಕರೆ ಕೊಟ್ಟಂತಿದೆ. ಬಳಿಕ ಸ್ಪಷ್ಟೀಕರಣವನ್ನು ನೀಡಿದ್ದಾರಾದರೂ, ತಮ್ಮನ್ನು ದಾರಿ ತಪ್ಪಿಸಿದ ಪೊಲೀಸ್ ಅಧಿಕಾರಿಯ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ? ಅಥವಾ ವಾಟ್ಸ್‌ಆ್ಯಪ್‌ನ ವದಂತಿಯ ಆಧಾರದಲ್ಲಿ ಗೃಹ ಸಚಿವರು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದರೆ? ಇದೇ ಸಂದರ್ಭದಲ್ಲಿ ವಾಸ್ತವವನ್ನು ಜನರಿಗೆ ತಿಳಿಸಿ, ನಗರದಲ್ಲಿ ಯಾವುದೇ ಅಶಾಂತಿ ಹರಡದಂತೆ ನೋಡಿಕೊಂಡ ಪೊಲೀಸ್ ಇಲಾಖೆಯನ್ನು ನಾವು ಅಭಿನಂದಿಸಬೇಕಾಗಿದೆ.

ಇಂದು ಯಾವುದೇ ಬ್ಯಾಂಕ್ ಕಚೇರಿಗಳಲ್ಲಿ, ರೈಲ್ವೆ ಸ್ಟೇಷನ್‌ಗಳಲ್ಲಿ ಕನ್ನಡ ಮಾತನಾಡಿದರೆ ಅವಮಾನವನ್ನು ಎದುರಿಸಬೇಕಾಗುತ್ತದೆ. ಹಿಂದಿ ಗೊತ್ತಿಲ್ಲದೇ ಇದ್ದರೆ ನಮ್ಮ ಕೆಲಸವೇ ನಡೆಯುವುದಿಲ್ಲ ಎನ್ನುವಂತಹ ಸ್ಥಿತಿಯಿದೆ. ಈ ಬಗ್ಗೆ ಕನ್ನಡ ಪರ ಹೋರಾಟಗಾರರು ಸರಕಾರದ ಗಮನ ಸೆಳೆಯುತ್ತಿದ್ದರೂ, ಸರಕಾರದ ನೇತೃತ್ವದಲ್ಲೇ ಕನ್ನಡದ ಮೇಲೆ ಹಿಂದಿ ಹೇರಿಕೆ ನಡೆಯುತ್ತಿದೆ. ಇಂತಹ ವಾತಾವರಣದಲ್ಲಿ ಗೃಹ ಸಚಿವರೇ ಏಕಾಏಕಿ ‘ಉರ್ದು-ಕನ್ನಡ’ವನ್ನು ಪರಸ್ಪರ ಎತ್ತಿಕಟ್ಟಲು ಯತ್ನಿಸಿರುವುದು ನಾಚಿಕೆಗೇಡು. ಇದರ ಜೊತೆಗೆ ಮೃತ ಪಟ್ಟ ಯುವಕನನ್ನು ಬಾಯಿ ತುಂಬಾ ‘ದಲಿತ ಯುವಕ’ ಎಂದು ಕರೆದಿದ್ದಾರೆ. ಬೇರೆ ಸಂದರ್ಭದಲ್ಲಿ ಈ ಶೋಷಿತ ಸಮುದಾಯವನ್ನು ದಲಿತರೆಂದು ಕರೆಯಲು ಹಿಂಜರಿಯುವ ಸಚಿವರು, ಈಗ ‘ಹಿಂದೂ’ ಎಂದು ಕರೆಯದೇ ದಲಿತ ಎಂದು ಕರೆಯಲು ಕಾರಣವೇನು? ಒಂದೆಡೆ ಭಾಷೆಯ ಹೆಸರಿನಲ್ಲಿ, ಇನ್ನೊಂದೆಡೆ ಜಾತಿಯ ಹೆಸರಿನಲ್ಲಿ ಮುಸ್ಲಿವರ ವಿರುದ್ಧ ದ್ವೇಷವನ್ನು ಹರಡುವ ಕೆಲಸವನ್ನು ಗೃಹ ಸಚಿವರೇ ಮಾಡಿದರೆ, ಈ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವವರು ಯಾರು?

ಇದೇ ಸಂದರ್ಭದಲ್ಲಿ ಸಿ.ಟಿ. ರವಿಯಂತಹ ಇತರ ಬಿಜೆಪಿ ಮುಖಂಡರು ಕೂಡ ಈ ಸುಳ್ಳನ್ನು ಮಾಧ್ಯಮಗಳ ಮುಂದೆ ಆಡಿದ್ದಾರೆ ಮಾತ್ರವಲ್ಲ, ಸಂತ್ರಸ್ತನ ತಾಯಿಯ ಬಾಯಿಯಲ್ಲೂ ಅದನ್ನೇ ಹೇಳುವಂತೆ ಒತ್ತಡ ಹಾಕಿದ್ದಾರೆ. ನಾಡಿನ ಶಾಂತಿ, ನೆಮ್ಮದಿಯನ್ನು ಆಳುವ ಪಕ್ಷವೇ ಕೆಡಿಸುವುದಕ್ಕೆ ತುದಿಗಾಲಿನಲ್ಲಿ ನಿಂತಿರುವಾಗ, ಈ ರಾಜ್ಯದಲ್ಲಿ ಅಭಿವೃದ್ಧಿಯ ಮಾತು ಕನಸೇ ಸರಿ. ಅಭಿವೃದ್ಧಿಯ ಬಗ್ಗೆ, ಹೂಡಿಕೆಗಳ ಬಗ್ಗೆ ಮಾತನಾಡುವ ಬೊಮ್ಮಾಯಿ ನೇತೃತ್ವದ ಸರಕಾರಕ್ಕೆ ನಿಜಕ್ಕೂ ಅದರಲ್ಲಿ ಆಸಕ್ತಿಯಿದೆ ಎಂದಾದರೆ ಇನ್ನಾದರೂ ನಾಡಿಗೆ ಬೆಂಕಿ ಹಚ್ಚುವ ಕೆಲಸ ನಡೆಸುತ್ತಿರುವ ದುಷ್ಕರ್ಮಿಗಳನ್ನು ಯಾವ ದಯೆ ದಾಕ್ಷಿಣ್ಯವಿಲ್ಲದೆ ಮಟ್ಟ ಹಾಕುವುದಕ್ಕೆ ಮುಂದಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News