ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯಮ ಸ್ಥಾಪಿಸಲು ಸಬ್ಸಿಡಿ: ಸಚಿವ ಮುರುಗೇಶ್ ನಿರಾಣಿ

Update: 2022-04-08 13:08 GMT
ಸಚಿವ ಮುರುಗೇಶ್ ನಿರಾಣಿ (File Photo)

ಬೆಳಗಾವಿ, ಎ. 8: ‘ಆರ್ಥಿಕವಾಗಿ ಹಿಂದುಳಿದ ವರ್ಗದವರು ಉದ್ಯಮ ಸ್ಥಾಪಿಸಲು ಅನುವಾಗುವಂತೆ ಕೆಐಎಡಿಬಿಯಿಂದ ಕೈಗಾರಿಕಾ ನಿವೇಶನಕ್ಕೆ ಶೇ.75ರಷ್ಟು ರಿಯಾಯಿತಿ ನೀಡಲಾಗುವುದು' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್. ನಿರಾಣಿ  ತಿಳಿಸಿದ್ದಾರೆ. 
ಶುಕ್ರವಾರ ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಡಾ. ಎಪಿಜೆ ಅಬ್ದುಲ್ ಕಲಾಂ ಆಡಿಟೋರಿಯಂನಲ್ಲಿ ‘ಉದ್ಯಮಿಯಾಗು

ಉದ್ಯೋಗ ನೀಡು' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಎಸ್ಸಿ-ಎಸ್ಟಿ ಉದ್ದಿಮೆಶೀಲರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ(ಕೆಐಎಡಿಬಿ)ಯಿಂದ ಕೈಗಾರಿಕೆ ನಿವೇಶನಕ್ಕೆ ಶೇ.75ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅದೇ ರೀತಿ ಆರ್ಥಿಕವಾಗಿ ಹಿಂದುಳಿದವರಿಗೂ ಶೇ.75ರಷ್ಟು ರಿಯಾಯಿತಿ ನೀಡಲಾಗುವುದು' ಎಂದು ಹೇಳಿದರು.

‘ಬೆಳಗಾವಿ ಅಲ್ಲದೆ, ಧಾರವಾಡ, ಉತ್ತರಕನ್ನಡ, ವಿಜಯಪುರ, ಬಾಗಲಕೋಟೆ, ಹಾವೇರಿ ಹಾಗೂ ಗದಗದ ಸುಮಾರು 11 ಸಾವಿರ ವಿದ್ಯಾರ್ಥಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿರುವುದು ಬಹಳ ಸಂತಸದ ವಿಚಾರ. ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿರುವವರ ಪೈಕಿ ಉದ್ಯಮ ಸ್ಥಾಪಿಸುವ ಆಸಕ್ತಿ ತೋರುವವರಿಗೆ ಅವರ ಆಯ್ಕೆಯ ಕ್ಷೇತ್ರದಲ್ಲಿ ವಾರದಿಂದ ಒಂದು ತಿಂಗಳವರೆಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಆರಂಭದಿಂದ ಕೊನೆಯವರೆಗೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುವುದು' ಎಂದು ಅವರು ಭರವಸೆ ನೀಡಿದರು.  

‘ಬೇರೆಯವರ ಕೈ ಕೆಳಗೆ ನೀವು ದುಡಿಯಬೇಕಿಲ್ಲ. ಛಲ ಬಿಡದೆ ಸಾಧಿಸಿದರೆ ನೀವೇ ಉದ್ಯಮ ಸ್ಥಾಪಿಸಿ ಇತರರಿಗೆ ಕೆಲಸ ಕೊಡಬಹುದು. ಈ ಕಾರ್ಯಕ್ರಮದಲ್ಲಿ ಉದ್ಯಮಿಗಳಾಗುವುದು ಹೇಗೆ? ಎಲ್ಲಿ ಮತ್ತು ಹೇಗೆ ಸಾಲಸೌಲಭ್ಯ ದೊರೆಯುತ್ತದೆ? ಯಾವ ಯಾವ ಕ್ಷೇತ್ರಗಳಲ್ಲಿ ಹೂಡಿಕೆಗೆ ಅವಕಾಶ ಇದೆ ಎಂಬುದನ್ನು ತಜ್ಞರು ವಿವರಿಸಿದ್ದಾರೆ. ಉದ್ದಿಮೆ ಸ್ಥಾಪಿಸಲು ಹಣ ಮುಖ್ಯವಲ್ಲ. ಸಾಧಿಸುವ ಛಲ, ಗುರಿ ಇರಬೇಕು. ಅದಕ್ಕೆ ಪೂರಕವಾಗಿ ನಮ್ಮ ಇಲಾಖೆಯಿಂದ ಎಲ್ಲ ಅಗತ್ಯ ಮಾರ್ಗದರ್ಶನ ನೀಡಲು ಸಿದ್ಧ. ಮುಂದಿನ ದಿನಗಳಲ್ಲಿ, ಮೈಸೂರು, ಕರಾವಳಿ ಹಾಗೂ ಬೆಂಗಳೂರಿನ ಕಂದಾಯ ವಿಭಾಗ 2ರಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ' ಎಂದು ಅವರು ಹೇಳಿದರು.

ಕೈಗಾರಿಕಾ ಅದಾಲತ್: ‘ಉದ್ಯಮಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯು ಬೆಳಗಾವಿ ವಿಭಾಗದಲ್ಲಿ ಶುಕ್ರವಾರ ‘ಕೈಗಾರಿಕಾ ಅದಾಲತ್' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದಾಲತ್ ಮೂಲಕ ಸರಕಾರವೇ ಉದ್ಯಮಿಗಳ ಮನೆ ಬಾಗಿಲಿಗೆ ಹೋಗಿ ಉದ್ಯಮಿಗಳ ಸಮಸ್ಯೆ ಆಲಿಸಿ, ಸಮಸ್ಯೆ ಇತ್ಯರ್ಥ ಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದೆ' ಎಂದು ಅವರು ತಿಳಿಸಿದರು.  

‘ಜಿಲ್ಲೆಯಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಒಟ್ಟು 77 ಅರ್ಜಿಗಳು ಬಂದ್ದವು. ಈಗಾಗಲೇ ಕೆಲವರ ಸಮಸ್ಯೆಗೆ ಪರಿಹಾರ ಸೂಚಿಸಲಾಗಿದೆ. ಇನ್ನು ಕೆಲವು ಅರ್ಜಿಗಳ ಕುರಿತು ಕೈಗಾರಿಕಾ ಅದಾಲತ್‍ನಲ್ಲಿ ನೇರವಾಗಿ ಉದ್ಯಮಿಗಳ ಜತೆ ಚರ್ಚಿಸಿ, ಪರಿಹಾರ ಸೂಚಿಸಲಾಗಿದೆ. ವಿದ್ಯುತ್ ಸರಬರಾಜು ಕಂಪೆನಿ, ಪೌರಾಡಳಿತ ಇಲಾಖೆ, ನಗರಾಭಿವೃದ್ಧಿ ಇಲಾಖೆ, ನಗರ ಯೋಜನಾ ಇಲಾಖೆ, ಕಾರ್ಮಿಕ ಇಲಾಖೆ,  ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಮುಂತಾದ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ವಹಿಸಲಾಗುತ್ತದೆ' ಎಂದು ಅವರು ಭರವಸೆ ನೀಡಿದರು. 

‘ಯಶಸ್ಸು ಸಾಧಿಸಲು ಉದ್ಯಮಗಳ ಮನಸ್ಥಿತಿ ಹೇಗಿರಬೇಕು’ ವಿಷಯದ ಬಗ್ಗೆ ಕನೆಕ್ಟ್ ಧಾರವಾಡದ ನಿರ್ದೇಶಕ ಮಹೇಶ್ ಮಸಾಳಾ, ಆಹಾರ ಸಂಸ್ಕರಣೆ ಕುರಿತು ಮೈಸೂರಿನ ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ಹಿರಿಯ ವಿಜ್ಞಾನಿ ಡಾ.ಸಿಂಗ್, ಜವಳಿ ಮತ್ತು ಸಿದ್ಧ ಉಡುಪುಗಳ ವಲಯದ ಬಗ್ಗೆ ಡಿಕೆಟಿಇ ಟೆಕ್ಸ್‍ಟೈಲ್ ಅಂಡ್ ಇಂಜಿನಿಯರಿಂಗ್ ಇನ್‍ಸ್ಟಿಟ್ಯೂಟ್ ಪ್ರೊಫೆಸರ್ ಪ್ರೊ. ಸಿ.ಎ.ಪಾಟೀಲ್, ಉದ್ಯಮಶೀಲತೆ ಅಭಿವೃದ್ಧಿ ಕುರಿತು ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ಸಿಡಾಕ್ ನಿರ್ದೇಶಕ ವೀರಣ್ಣ ಎಸ್.ಎಚ್., ಯಶಸ್ವಿ ಉದ್ಯಮಿ ಬೆಳಗಾವಿಯ ರವಿ ಇಂಡಸ್ಟ್ರೀಸ್‍ನ ರೋಹನ್ ಜವುಳಿ ತಮ್ಮ ಯಶೋಗಾಥೆ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News