‘ಬೋಧಿವೃಕ್ಷ' ಪ್ರಶಸ್ತಿಗೆ ಡಾ.ರಾಳ್ಳಪಲ್ಲಿ ಶಿವ ಪ್ರವೀಣ್‍ಕುಮಾರ್ ಆಯ್ಕೆ

Update: 2022-04-10 15:12 GMT

ಬೆಂಗಳೂರು, ಎ.10: ‘ಸ್ಪೂರ್ತಿಧಾಮ’ ವತಿಯಿಂದ ನೀಡುವ 2022ನೆ ಸಾಲಿನ ಪ್ರತಿಷ್ಟಿತ ‘ಬೋಧಿವೃಕ್ಷ’ ಪ್ರಶಸ್ತಿಗೆ ತೆಲಂಗಾಣ/ಆಂಧ್ರಪ್ರದೇಶದ ಐಪಿಎಸ್ ಅಧಿಕಾರಿಯಾಗಿದ್ದ ಡಾ.ರಾಳಪಲ್ಲಿ ಶಿವ ಪ್ರವೀಣ್‍ಕುಮಾರ್ ಹಾಗೂ ‘ಬೋಧಿವರ್ಧನ’ ಪ್ರಶಸ್ತಿಗೆ ಗುರುಪ್ರಸಾದ್ ಕೆರಗೋಡು, ಡಿ.ನಾಗಲಕ್ಷ್ಮಿ, ಪದ್ಮಾಲಯ ನಾಗರಾಜ್, ಡಾ.ಮಹೇಂದ್ರ ಕುಮಾರ್ ಬಿ.ಪಿ. ಹಾಗೂ ಮೇರಿ ಲೋಬೋ ಅವರು ಆಯ್ಕೆಯಾಗಿದ್ದಾರೆ.

ಎ.14ರ ಸಂಜೆ 6ಗಂಟೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಸ್ಫೂತಿಧಾಮದಲ್ಲಿ ನಡೆಯಲಿರುವ ‘ಅಂಬೇಡ್ಕರ್ ಹಬ್ಬ' ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್‍ನ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಸಂಸ್ಕೃತಿ ಚಿಂತಕ ಡಾ.ಜಿ.ರಾಮಕೃಷ್ಣ, ಸ್ಪೂರ್ತಿಧಾಮ ಅಧ್ಯಕ್ಷ ಎಸ್.ಮರಿಸ್ವಾಮಿ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಪ್ರತಿವರ್ಷ ‘ಬೋಧಿವೃಕ್ಷ’ ಹೆಸರಿನ ಒಂದು ರಾಷ್ಟ್ರ ಪ್ರಶಸ್ತಿಯನ್ನು ನೀಡುತ್ತಿದ್ದು, ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿರುತ್ತದೆ. ‘ಬೋಧಿವರ್ಧನ’ ಹೆಸರಿನ ಐದು ರಾಜ್ಯ ಪ್ರಶಸ್ತಿಗಳನ್ನು ನೀಡುತ್ತಿದ್ದು, ಪ್ರಶಸ್ತಿ ಫಲಕ ಮತ್ತು ತಲಾ ಇಪ್ಪತ್ತೈದು ಸಾವಿರ ರೂಪಾಯಿ ನಗದು ಹೊಂದಿದೆ ಎಂದು ತಿಳಿಸಲಾಗಿದೆ.

ಬೋಧಿವೃಕ್ಷ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ.ರಾಳಪಲ್ಲಿ ಶಿವ ಪ್ರವೀಣ್‍ಕುಮಾರ್ ತಳ ಸಮುದಾಯಗಳಿಗೆ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಮೂಲಕ, ಪರಿಪೂರ್ಣ ಸ್ವರೂಪದ ಗುಣಾತ್ಮಕ ಶಿಕ್ಷಣ ನೀಡುತ್ತಾ, ಸಾಮಾಜಿಕ ಬೃಹತ್ ಜಿಗಿತವನ್ನು ನೀಡಿದ್ದು, 2ಲಕ್ಷಕ್ಕೂ ಹೆಚ್ಚು ಕೂಲಿ ಕಾರ್ಮಿಕರ, ಹೇಳ ಹೆಸರಿಲ್ಲದ ಕಸುಬಿನವರ ಮಕ್ಕಳ ಬದುಕನಲ್ಲಿ ಆಮೂಲಾಗ್ರವಾದ ಪರಿವರ್ತನೆಯನ್ನು ಉಂಟುಮಾಡಿದ್ದಾರೆ. ಅವರ ಪ್ರಯತ್ನದಿಂದಾಗಿ, 5 ವರ್ಷಗಳಲ್ಲಿ 325 ಜನ ವೈದ್ಯಕೀಯ ಕಾಲೇಜುಗಳಲ್ಲಿ, 220 ಐಐಟಿ/ ಎನ್‍ಐಟಿಗಳಲ್ಲಿ ಮತ್ತು ಸಾವಿರಾರು ವಿದ್ಯಾರ್ಥಿಗಳು ದೇಶದ ಪ್ರತಿಷ್ಟಿತ ವಿವಿಗಳಲ್ಲಿ ಅಧ್ಯಯನ ಮಾಡಿ, ಉತ್ತಮ ಶ್ರೇಣಿಗಳನ್ನು ಪಡೆದುಕೊಂಡಿದ್ದಾರೆ. ಜ್ಞಾನವನ್ನು ಹಂಚುವ ಸಂಸ್ಕೃತಿಯನ್ನು ಸಮಾಜದೊಳಗೆ ಒಡಮೂಡಿಸಲು, ವಿದ್ಯಾರ್ಥಿ ನೇತೃತ್ವದ ನೂರಾರು ಗ್ರಾಮೀಣ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿ, ಆ ಮೂಲಕ ಸಾಮಾಜಿಕ ಅಭಿವೃದ್ಧಿಯ ಹೊಸ ಭಾಷ್ಯವನ್ನು ಬರೆದಿದ್ದಾರೆ ಎಂದು ತಿಳಿಸಲಾಗಿದೆ.

ಬೋಧಿವರ್ಧನ ಪ್ರಶಸ್ತಿಗೆ ಆಯ್ಕೆಯಾಗಿರುವ ಗುರುಪ್ರಸಾದ್ ಕೆರಗೋಡು ಅವರು, ವಿದ್ಯಾರ್ಥಿ ದಿಶೆಯಲ್ಲೇ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡ ದಸಂಸ ಆರಂಭದ ದಿನಗಳಿಂದಲೂ ದಲಿತ ಚಳವಳಿಯಲ್ಲಿ ನಿರಂತರ ತೊಡಗಿಸಿಕೊಂಡು ಬರುತ್ತಿದ್ದಾರೆ. ಆರಂಭದ ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಚಳವಳಿಯನ್ನು ಮುನ್ನಡೆಸಿದ ಅವರು ತಮ್ಮ ಸಂಘಟನಾ ಚಾತುರ್ಯದಿಂದಾಗಿ ರಾಜ್ಯ ಮಟ್ಟದ ನಾಯಕರಾಗಿ ಬೆಳೆದರು. ದಸಂಸ ನಡೆಸಿದ ವಸತಿ ಶಾಲಾ ಹೋರಾಟ, ಭೂ ಹೀನರಿಗೆ ಭೂಮಿ ಕೊಡಿಸುವ ಹೋರಾಟ, ಚಂದ್ರಗುತ್ತಿ ಬೆತ್ತಲೆ ಸೇವೆ ವಿರುದ್ಧದ ಹೋರಾಟ, ಸಾರಾಯಿ ನಿಷೇಧ ಹೋರಾಟ, ವಿದ್ಯಾರ್ಥಿ ನಿಲಯಗಳ ಸುಧಾರಣಾ ಹೋರಾಟ ಇವರು ಮುನ್ನಡಿಸಿದ ಹಲವು ಹೋರಾಟಗಳಲ್ಲಿ ಪ್ರಮುಖವಾದುವು. ಸರಕಾರಿ ಗುತ್ತಿಗೆ ಹಾಗೂ ಸರಬರಾಜಿನಲ್ಲಿ ದಲಿತರು ಹಿಂದುಳಿದವರಿಗೆ ಮೀಸಲು ನಿಗದಿ ಹೋರಾಟದಲ್ಲೂ ಗುರುಪ್ರಸಾದ್ ಮುಂಚೂಣಿಯಲ್ಲಿದ್ದವರು. 

ಡಿ.ನಾಗಲಕ್ಷ್ಮಿ: ಆಶಾ ಸಂಘಟನೆಯ ಚಟವಟಿಕೆಗಳಲ್ಲಿ ರಾಜ್ಯಾದ್ಯಂತ ಅಹರ್ನಿಶಿ ದುಡಿಯುತ್ತಿರುವ ನಾಗಲಕ್ಷ್ಮಿಯವರು 28 ವರ್ಷಗಳಿಂದ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಸಂಚಾಲಕರಾಗಿ ಮಹಿಳೆಯರ ಹಾಗೂ ನಾಗರಿಕರ ಜ್ವಲಂತ ಸಮಸ್ಯೆಗಳ ವಿರುದ್ಧ ಹಲವಾರು ಯಶಸ್ವಿ ಹೋರಾಟ ನಡೆಸಿದ್ದಾರೆ. ಬಹುತೇಕ ಆಶಾ ಕಾರ್ಯಕರ್ತೆಯರು ತಳ ಸಮುದಾಯಗಳು, ಹಿಂದುಳಿದ ಜಾತಿ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿದ್ದು ಅವರ ಸಮಸ್ಯೆ, ದುಃಖಕ್ಕೆ ಸ್ಪಂದಿಸುವುದರಲ್ಲೇ ಬದುಕಿನ ಸಾರ್ಥಕ್ಯ ಕಂಡುಕೊಳ್ಳುತ್ತಿದ್ದಾರೆ.

ಪದ್ಮಾಲಯ ನಾಗರಾಜ್: ಕೋಲಾರ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕರಾಗಿರುವ ಪದ್ಮಾಲಯ ನಾಗರಾಜ್ ನಮ್ಮ ನಡುವಿನ ಅಪರೂಪದ ಸಾಂಸ್ಕøತಿಕ ಚಿಂತಕರು ಮತ್ತು ಸಂಶೋಧನಾಕಾರರು. ಬುದ್ಧ ಧರ್ಮದ ಪ್ರತೀತ್ಯಾ ಸಮುತ್ಪಾದ, ಆರ್ಯ ಅಷ್ಟಾಂಗ ಮಾರ್ಗ, ಇತ್ಯಾದಿ ಮೂಲಭೂತ ತತ್ವಗಳನ್ನು ಆಧುನಿಕ ಜನ ಮಾನಸಕ್ಕೆ ತಲುಪುವಂತೆ ಅವರು ಹೇಳುವ ಪರಿ ಅತ್ಯಂತ ಪರಿಣಾಮಕಾರಿಯಾದುದು. ಅಂಬೇಡ್ಕರ್ ವಿಚಾರಗಳನ್ನು ಯುವಜನರಲ್ಲಿ ಮೂಡಿಸುವ ನಿರಂತರ ಪ್ರಯತ್ನದಲ್ಲಿ ತೊಡಗಿದ್ದಾರೆ. ಬರಹಗಾರರಾಗಿ, ಚಿಂತಕರಾಗಿ, ಸುತ್ತಮುತ್ತಲ ಜನರಿಗೆ ಉತ್ತಮ ಸಲಹೆಗಾರರಾಗಿ ಬದುಕಿನ ಸಿಕ್ಕುಗಳನ್ನು ಬಿಡಿಸಿಕೊಂಡು ಬದುಕಲು ಮಾರ್ಗದರ್ಶನ ನೀಡುತ್ತಿದ್ದಾರೆ. 

ಡಾ.ಮಹೇಂದ್ರ ಕುಮಾರ್: ಮೂವತ್ತು ವರ್ಷಗಳಿಂದ ಆದಿವಾಸಿಗಳ ಹಕ್ಕುಗಳಿಗೆ ಹೋರಾಡುತ್ತ ಜನಪರ ಚಳುವಳಿಗಳನ್ನು ಸಂಘಟಿಸುತ್ತಿರುವ ಮಹೇಂದ್ರಕುಮಾರ್ ಮೂಲತಃ ಸಸ್ಯಶಾಸ್ತ್ರಜ್ಞ. ಇವರ ನಿರಂತರ ಹೋರಾಟದ ಭಾಗವಾಗಿ ಉತ್ತರ ಕನ್ನಡದ ಸಿದ್ದಿ ಸಮುದಾಯವನ್ನು ಒಕ್ಕೂಟ ಸರಕಾರ 2003ರಲ್ಲಿ ಎಸ್ಟಿ ಪಟ್ಟಿಗೆ ಸೇರಿಸಿತು. ಅಣಿಶಿ ರಾಷ್ಟ್ರೀಯ ಉದ್ಯಾನ ಘೋಷಣೆಯಾದ ಮೇಲೆ ಅಲ್ಲಿ ವಾಸಿಸುತ್ತಿದ್ದ ಕುಣಬಿ ಮತ್ತು ಸಿದ್ದಿ ಸಮುದಾಯಗಳನ್ನು ಸ್ಥಳಾಂತರ ಮಾಡಲು ಸರಕಾರಗಳು ಮುಂದಾದ ಸಂದರ್ಭದಲ್ಲಿ ಆದಿವಾಸಿಗಳನ್ನು ಸಂಘಟಿಸಿ ಹೋರಾಟಗಳನ್ನು ರೂಪಿಸಿದರು. ಜೋಯಿಡಾ ಭಾಗದ ಕುಣಬಿ ಮತ್ತು ಸಿದ್ದಿಗಳನ್ನು ಅಲ್ಲಿಂದ ಸ್ಥಳಾಂತರಿಸುವುದನ್ನು ತಡೆದಿದ್ದಲ್ಲದೆ, ಅರಣ್ಯವಾಸಿಗಳಿಗೆ ಅವರ ಪಾರಂಪರಿಕ ಹಕ್ಕುಗಳು ಲಭ್ಯವಾಗಬೇಕು ಎಂದು ಪ್ರತಿಪಾದಿಸಿ ಅವು ಆದಿವಾಸಿಗಳಿಗೆ ದಕ್ಕುವಂತೆ ಮಾಡಿದ್ದಾರೆ.

ಮೇರಿ ಲೋಬೋ: ವೃತ್ತಿಯಿಂದ ದಾದಿಯಾಗಿ ವಿವಿಧ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸಿರುವ ಮೇರಿ ಲೋಬೋ ಅವರು ಸುಮಾರು 10-12 ವರ್ಷಗಳಿಂದ ಮೈಸೂರು ನಗರ ಹಾಗೂ ಸುತ್ತ ಮುತ್ತ ಸಂಪೂರ್ಣವಾಗಿ ಹಾಸಿಗೆ ಹಿಡಿದಿರುವ ರೋಗಿಗಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಮನೆಗಳಿಗೆ ತೆರಳಿ ರೋಗಿಗಳಿಗೆ ಆರೈಕೆ ನೀಡುವುದರೊಂದಿಗೆ ಅವರಿಗೆ ಆರೈಕೆ ನೀಡುವ ಮನೆಯ ಸದಸ್ಯರಿಗೆ ರೋಗಿಗೆ ಆರೈಕೆ ನೀಡುವ ವಿಧಾನದ ಬಗ್ಗೆ ತರಬೇತಿ ನೀಡುತ್ತಿದ್ದಾರೆ ಎಂದು ಸ್ಪೂರ್ತಿಧಾಮ ಧರ್ಮದರ್ಶಿ ಇಂದೂಧರ ಹೊನ್ನಾಪುರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News