ಭಾರತದ ಜತೆ ಉತ್ತಮ ಬಾಂಧವ್ಯ, ಕಾಶ್ಮೀರ ಸಮಸ್ಯೆಗೆ ನ್ಯಾಯಸಮ್ಮತ ನಿರ್ಣಯ: ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಶರೀಫ್

Update: 2022-04-12 01:53 GMT
(ಶೆಹಬಾಝ್ ಶರೀಫ್ - Twitter Image)

ಇಸ್ಲಾಮಾಬಾದ್ : ಕಾಶ್ಮೀರ ಸಮಸ್ಯೆ ಕುರಿತಂತೆ ನ್ಯಾಯಸಮ್ಮತ ನಿರ್ಣಯ, ಭಾರತದ ಜತೆ ಉತ್ತಮ ಬಾಂಧವ್ಯ ಹಾಗೂ ಹದಗೆಟ್ಟಿರುವ ದೇಶದ ಆರ್ಥಿಕತೆಯನ್ನು ಸುಧಾರಿಸುವುದು ತಮ್ಮ ಆದ್ಯತೆ ಎಂದು ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಝ್ ಶರೀಫ್ ಘೋಷಿಸಿದ್ದಾರೆ.

ದೇಶದ 23ನೇ ಪ್ರಧಾನಿಯಾಗಿ ಅವಿರೋಧ ಆಯ್ಕೆಯಾದ ಬಳಿಕ ರಾಷ್ಟ್ರೀಯ ಅಸೆಂಬ್ಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಇದಕ್ಕೂ ಮುನ್ನ ಇಮ್ರಾನ್ ಖಾನ್ ಪಿಟಿಐ ಪಕ್ಷವು ಮಾಜಿ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಘೋಷಿಸಿದ್ದರೂ, ಕೊನೆ ಕ್ಷಣದಲ್ಲಿ ತಮ್ಮ ಪಕ್ಷ ಚುನಾವಣೆಯನ್ನು ಬಹಿಷ್ಕರಿಸಿ, ಸಾಮೂಹಿಕ ರಾಜೀನಾಮೆ ನೀಡುವುದಾಗಿ ಘೋಷಿಸಿ ಪಕ್ಷದ ಎಲ್ಲ ಸದಸ್ಯರು ಹೊರನಡೆದರು. ಇದರಿಂದ ಪ್ರಧಾನಿ ಹುದ್ದೆಗೆ ಅವಿರೋಧ ಆಯ್ಕೆ ನಡೆಯಿತು.

ಕಾಶ್ಮೀರ ಸಮಸ್ಯೆಯ ಬಗ್ಗೆ ಮನವೊಲಿಸುವ ಜತೆಗೆ ಭಾರತದ ಜತೆಗಿನ ಸಂಬಂಧ ಸುಧಾರಿಸುವುದೂ ಸೇರಿದಂತೆ ಹಿಂದಿನ ಇಮ್ರಾನ್ ಸರ್ಕಾರದ ವಿದೇಶಾಂಗ ನೀತಿಯ ತಪ್ಪುಗಳನ್ನು ಸರಿಪಡಿಸುವ ಅಗತ್ಯವಿದೆ ಎಂದು ನೂತನ ಪ್ರಧಾನಿ ಪ್ರತಿಪಾದಿಸಿದರು.

"ಎಲ್ಲ ವೇದಿಕೆಗಳಲ್ಲಿ ಕಾಶ್ಮೀರಿಗಳ ಸಮಸ್ಯೆಯನ್ನು ಎತ್ತುತ್ತೇವೆ. ಅವರಿಗೆ ರಾಜತಾಂತ್ರಿಕ ಮತ್ತು ನೈತಿಕ ಬೆಂಬಲ ನೀಡುತ್ತೇವೆ" ಎಂದು ಶೆಹಬಾಝ್ ನುಡಿದರು. "ಗಡಿಯ ಎರಡೂ ಭಾಗಗಳಲ್ಲಿ ಬಡತನ, ನಿರುದ್ಯೋಗ ಮತ್ತು ರೋಗರುಜಿನಗಳು ಇವೆ ಎನ್ನುವುದನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

"ನಮ್ಮ ಮುಂದಿನ ಪೀಳಿಗೆ ನರಳಬೇಕು ಎಂದು ನಾವೇಕೆ ಬಯಸಬೇಕು? ವಿಶ್ವಸಂಸ್ಥೆಯ ನಿರ್ಣಯಗಳ ಆಧಾರದಲ್ಲಿ ಮತ್ತು ಕಾಶ್ಮೀರಿಗಳ ನಿರೀಕ್ಷೆಯಂತೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸೋಣ. ಈ ಮೂಲಕ ಗಡಿಯ ಎರಡೂ ಬದಿಯಲ್ಲಿ ಬಡತನವನ್ನು ನಿರ್ಮೂಲನೆ ಮಾಡಲು ಸಾಧ್ಯ" ಎಂದು ಪ್ರತಿಪಾದಿಸಿದರು.

ಚೀನಾ ಜತೆಗಿನ ಬಾಂಧವ್ಯವನ್ನು ಮುಂದುವರಿಸುವ ಮಹತ್ವವನ್ನು ಒತ್ತಿ ಹೇಳಿದ ಅವರು, ಹಿಂದಿನ ಸರ್ಕಾರ ಇಸ್ಲಾಮಾಬಾದ್ ಮತ್ತು ಬೀಜಿಂಗ್ ನಡುವಿನ ಸಂಬಂಧವನ್ನು ದುರ್ಬಲಗೊಳಿಸಲು ಪ್ರಯತ್ನಿಸಿತ್ತು ಎಂದು ದೂರಿದರು. ಸೌದಿ ಅರೇಬಿಯಾ, ಟರ್ಕಿ, ಯೂರೋಪಿಯನ್ ಒಕ್ಕೂಟದ ದೇಶಗಳು, ಯುಎಇ, ಬ್ರಿಟನ್ ಮತ್ತು ಇರಾನ್ ನಡುವಿನ ಸಂಬಂಧ ಇತರ ಗಮನ ಹರಿಸಬೇಕಾದ ಕ್ಷೇತ್ರಗಳು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News