ಶಿವಸೇನೆ ಮುಖಂಡ ಸಂಜಯ್ ರಾವತ್, ಏಕನಾಥ್ ಖಡ್ಸೆ ಫೋನ್ ಕದ್ದಾಲಿಸಲಾಗಿತ್ತು: ತನಿಖೆಯಿಂದ ಬಹಿರಂಗ

Update: 2022-04-12 11:02 GMT
PTI

ಹೊಸದಿಲ್ಲಿ: ಶಿವಸೇನೆಯ ಸಂಸದ ಸಂಜಯ್ ರಾವತ್ ಮತ್ತು ಈ ಹಿಂದೆ ಬಿಜೆಪಿಯಲ್ಲಿದ್ದ ಹಾಗೂ ಪ್ರಸಕ್ತ ಎನ್‍ಸಿಪಿ ನಾಯಕ ಏಕನಾಥ್ ಖಡ್ಸೆ ಅವರ ಫೋನ್‍ಗಳನ್ನು  ಕ್ರಮವಾಗಿ 67 ಹಾಗೂ 60 ದಿನಗಳ ಕಾಲ ಕದ್ದಾಲಿಸಲಾಗಿತ್ತು ಹಾಗೂ ಅವುಗಳ ಮೇಲೆ ಅಕ್ರಮವಾಗಿ ನಿಗಾ ಇರಿಸಲಾಗಿತ್ತು ಎಂದು ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿದೆ.

ಈ ಇಬ್ಬರು ನಾಯಕರ ಫೋನ್‍ಗಳನ್ನು  ಮಹಾರಾಷ್ಟ್ರ ರಾಜ್ಯ ಗುಪ್ತಚರ ಇಲಾಖೆ(ಎಸ್‍ಐಡಿ) ಕದ್ದಾಲಿಸಿತ್ತೆನ್ನಲಾಗಿದ್ದು ಆ ಸಂದರ್ಭ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಈ ಸಂಸ್ಥೆಯ ಮುಖ್ಯಸ್ಥೆಯಾಗಿದ್ದರು. ನವೆಂಬರ್ 2019ರಲ್ಲಿ  ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಈ ಫೋನ್ ಕದ್ದಾಲಿಕೆ ನಡೆದಿತ್ತೆಂದು ಹೇಳಲಾಗಿದೆ.

ರಾವತ್ ಅವರ ಫೋನ್ ಎರಡು ಸಂದರ್ಭಗಳಲ್ಲಿ ಕದ್ದಾಲಿಸಲಾಗಿತ್ತು, ಒಮ್ಮೆ ಏಳು ದಿನಗಳ ಕಾಲ ಹಾಗೂ ಮತ್ತೊಮ್ಮೆ 60 ದಿನಗಳ ಕಾಲ ಕದ್ದಾಲಿಸಲಾಗಿತ್ತು ಹಾಗೂ ಖಡ್ಸೆ ಮತ್ತು ರಾವತ್ ಆವರ ಹೆಸರುಗಳು ಫೋನ್ ಕದ್ದಾಲಿಕೆಗಾಗಿ ಎಸ್‍ಐಡಿ ಮಾಡಿದ್ದ ಮನವಿಯಲ್ಲಿತ್ತು ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು  ಹೇಳಿದ್ದಾರೆಂದು ವರದಿಯಾಗಿದೆ.

ಖಡ್ಸೆ ಮತ್ತು ರಾವತ್ ಹೊರತಾಗಿ ಕಾಂಗ್ರೆಸ್ ನಾಯಕ ನಾನಾ ಪಟೋಲೆ, ಸ್ವತಂತ್ರ ಶಾಸಕ ಬಚ್ಚು ಕಡು, ಮಾಜಿ ಶಾಸಕ ಆಶಿಷ್ ದೇಶಮುಖ್ ಅವರ ಫೋನ್‍ಗಳನ್ನೂ ಕದ್ದಾಲಿಸಲಾಗಿತ್ತು ಎಂದು ವರದಿಯಾಗಿದೆ.

ಈ ಕದ್ದಾಲಿಕೆ ಸಂಬಂಧ ನಡೆಯುತ್ತಿರುವ ತನಿಖೆಯ ಭಾಗವಾಗಿ ರಾವತ್ ಮತ್ತು ಖಡ್ಸೆ ಕ್ರಮವಾಗಿ ಎಪ್ರಿಲ್ 9 ಹಾಗೂ 7ರಂದು ತಮ್ಮ ಹೇಳಿಕೆಗಳನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ.

ಫೋನ್ ಕದ್ದಾಲಿಕೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಈಗಿನ ಸರಕಾರ  ರಚಿಸಿದ್ದ ತ್ರಿಸದಸ್ಯ ಸಮಿತಿಯ  ತನಿಖೆಯಿಂದ ಈ ಮೇಲಿನ ವಿಚಾರ ಬಹಿರಂಗಗೊಂಡಿದೆ. ಈ ಸಮಿತಿಯ ನೇತೃತ್ವವನ್ನು  ಈಗ ಮುಂಬೈ ಪೊಲೀಸ್ ಆಯುಕ್ತರಾಗಿರುವ ಹಾಗೂ ಈ ಹಿಂದೆ ಹಂಗಾಮಿ ಡಿಜಿಪಿ ಆಗಿದ್ದ ಸಂಜಯ್ ಪಾಂಡೆ ವಹಿಸಿದ್ದರು.

ನಾನಾ ಪಟೋಲೆ ಅವರ ಫೋನ್ ಕದ್ದಾಲಿಕೆಯಲ್ಲಿ ಎಸ್‍ಐಡಿ ಯ ಆಗಿನ ಮುಖ್ಯಸ್ಥೆ ರಶ್ಮಿ ಶುಕ್ಲಾ ಶಾಮೀಲಾಗಿದ್ದಾರೆಂದು ತನಿಖೆ ಕಂಡುಕೊಂಡ ನಂತರ ಆಕೆಯ ವಿರುದ್ಧ ಫೆಬ್ರವರಿ 25ರಂದು ಪುಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ರಾವತ್ ಮತ್ತು ಖಡ್ಸೆ  ಅವರ ಫೋನ್‍ಗಳ ಕದ್ದಾಲಿಕೆಯಲ್ಲೂ ಆಕೆಯ ಪಾತ್ರವಿತ್ತೆಂದು ತಿಳಿದು ಬಂದ ನಂತರ ಸಮಿತಿಯ ಸದಸ್ಯರಲ್ಲೊಬ್ಬರಾದ ಐಪಿಎಸ್ ಅಧಿಕಾರಿ ರಾಜೀವ್ ಜೈನ್ ಆಕೆಯ ವಿರುದ್ಧ ದೂರು ದಾಖಲಿಸಿದ್ದರು.

ಶುಕ್ಲಾ ಅವರು ಈಗ ಕೇಂದ್ರೀಯ ಡೆಪ್ಯುಟೇಶನ್ ಮೇರೆಗೆ ಹೈದರಾಬಾದ್‍ನಲ್ಲಿ ಸಿಆರ್‍ಪಿಎಫ್ ಹೆಚ್ಚುವರಿ ಮಹಾನಿರ್ದೇಶಕಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News