ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಲು ಅವಕಾಶ ಕೊಡುವುದಿಲ್ಲ: ಅರುಣ್ ಸಿಂಗ್

Update: 2022-04-12 16:43 GMT
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರು

ಬೆಳಗಾವಿ, ಎ. 12: 'ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಮಾದರಿಯಲ್ಲಿ ಕರ್ನಾಟಕದಲ್ಲೂ ಮುಂದಿನ ವರ್ಷ ಬಿಜೆಪಿ ಸರಕಾರವು ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರಕ್ಕೆ ಏರಲಿದೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಪಕ್ಷ ಸಂಘಟನೆ ಬಲಪಡಿಸುವ ದೃಷ್ಟಿಯಿಂದ ಮೂರು ತಂಡಗಳಲ್ಲಿ ಪ್ರವಾಸ ಮಾಡಲಾಗುತ್ತಿದೆ. ಈ ಬಾರಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಕರ್ನಾಟಕದಲ್ಲಿ ನಾವು ಪಡೆಯಲಿದ್ದೇವೆ. ಪ್ರಧಾನಿ ಮೋದಿ ಅವರ ಆವಾಸ್ ಯೋಜನೆ, ಜನ್‍ಧನ್ ಯೋಜನೆ, ಆಯುಷ್ಮಾನ್ ಭಾರತ್, ಕಿಸಾನ್ ಸಮ್ಮಾನ್ ನಿಧಿ ಸೇರಿ ಮತ್ತಿತರ ಯೋಜನೆಗಳಿಂದ ಜನರು ಮೋದಿ ಮತ್ತು ಬಿಜೆಪಿ ಜೊತೆಗಿದ್ದಾರೆ ಎಂದು ಹೇಳಿದರು.

`ಕಾಂಗ್ರೆಸ್ ಎಲ್ಲ ಕಡೆಗಳಲ್ಲಿ ಸೋಲುತ್ತಾ ಸಾಗಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಆ ಪಕ್ಷದಲ್ಲಿ ನಾಯಕತ್ವ ಗೊಂದಲಮಯವಾಗಿದೆ. ವಿಫಲ ನಾಯಕರನ್ನು ಅದು ಹೊಂದಿದೆ. ಇಲ್ಲಿಯೂ ಕಾಂಗ್ರೆಸ್ ಒಡೆದ ಮನೆಯಾಗಿದೆ. ಛತ್ತೀಸ್‍ಗಡ ಮತ್ತು ರಾಜಸ್ಥಾನದಲ್ಲೂ ಕಾಂಗ್ರೆಸ್ ಸೋಲಲಿದೆ ಎಂದು ಅವರು ಭವಿಷ್ಯ ನುಡಿದರು.

`ಕರ್ನಾಟಕವನ್ನು ಎಟಿಎಂ ಎಂದು ನೋಡುತ್ತಿರುವ ಕಾಂಗ್ರೆಸ್ ಇಲ್ಲೂ ಸೋಲುಣ್ಣಲಿದೆ. ಹಿರಿಯ ನಾಯಕ ಯಡಿಯೂರಪ್ಪ, ಸರಳ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಸೇರಿ ಹಲವು ನಾಯಕರು ನಮ್ಮಲ್ಲಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ನಾಯಕರಹಿತವಾಗಿದೆ. ಬೆಳಗಾವಿಯಲ್ಲೂ ರೈಲ್ವೆ, ರಸ್ತೆ ಸೇರಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಬಿಜೆಪಿ ನೇತೃತ್ವದ ಡಬಲ್ ಎಂಜಿನ್ ಸರಕಾರವನ್ನು ಜನತೆ ಬಯಸುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News