ನಾಡಿನ ಅಭಿವೃದ್ಧಿಯನ್ನು ಕೊರೆಯುತ್ತಿರುವ ಶೇ.40 ಕಮಿಷನ್ ಹುಳಗಳು!

Update: 2022-04-14 03:50 GMT

ರಾಜಕೀಯದಲ್ಲಿ ನೈತಿಕತೆ ಎನ್ನುವುದು ಎಂದೋ ಆತ್ಮಹತ್ಯೆ ಮಾಡಿಕೊಂಡಿದೆ. ಇಲ್ಲವಾದರೆ, ಒಬ್ಬ ಗುತ್ತಿಗೆದಾರ 'ಹಣ ಬಿಡುಗಡೆ ಮಾಡಲು ಸಚಿವರು ಶೇ. 40 ಕಮಿಷನ್ ಕೇಳುತ್ತಿದ್ದಾರೆ' ಎಂದು ಆರೋಪಿಸಿದಾಗಲೇ ಸಚಿವ ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಆರೋಪದ ಸತ್ಯಾಸತ್ಯತೆಯನ್ನು ತನಿಖೆಗೆ ಒಳಪಡಿಸಬೇಕಾಗಿತ್ತು. ಆದರೆ ತನಿಖೆ ನಡೆಯುವುದಿರಲಿ, ಆರೋಪಿಸಿದವನ ಮೇಲೆಯೇ ಕೇಸು ದಾಖಲಾಯಿತು. ಅಲ್ಲಿಗೆ ತನ್ನ ಹಣ ಇನ್ನು ಬಿಡುಗಡೆಯಾಗುವುದಿಲ್ಲ ಎನ್ನುವುದು ಗುತ್ತಿಗೆದಾರ ಸಂತೋಷ್ ಪಾಟೀಲ್‌ಗೆ ಮನವರಿಕೆಯಾಗಿರಬೇಕು. ಒಂದೆಡೆ ಸಾಲಸೋಲ. ಇನ್ನೊಂದೆಡೆ ರಾಜಕೀಯ ಬೆದರಿಕೆ. ಇವೆಲ್ಲದರಿಂದ ನೊಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

'ನನ್ನ ಸಾವಿಗೆ ಈಶ್ವರಪ್ಪ ಕಾರಣ' ಎಂದು ಮಾಧ್ಯಮಗಳಿಗೆ ಸಂದೇಶಗಳನ್ನೂ ರವಾನಿಸಿದ್ದಾನೆ. ಈ ಹಿಂದೆ ಎಸ್‌ಐ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಇದೇ ಈಶ್ವರಪ್ಪ ಅವರು ಅಂದಿನ ಸಚಿವ ಜಾರ್ಜ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ''ತನಿಖೆ ನಡೆದು ಅವರು ನಿರಪರಾಧಿ ಎಂದು ಸಾಬೀತಾದರೆ ಮತ್ತೆ ಸಚಿವ ಸ್ಥಾನಕ್ಕೇರಲಿ'' ಎಂದು ಸಲಹೆ ನೀಡಿದ್ದರು. ಅಂದಿನ ಸಲಹೆಯನ್ನು ಇದೀಗ ಈಶ್ವರಪ್ಪ ಅವರೇ ಪಾಲಿಸಬೇಕಾಗಿ ಬಂದಿದೆ. ವಿಪರ್ಯಾಸವೆಂದರೆ ಸಂತ್ರಸ್ತ ಸಂತೋಷ್ ಅವರು ಈಶ್ವರಪ್ಪ ಅವರ ಹೆಸರನ್ನು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡ ಬಳಿಕವೂ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗುತ್ತಿಲ್ಲ. ಸತ್ತಿರುವುದು ಒಬ್ಬ ಹಿಂದೂ ಮಾತ್ರವಲ್ಲ, ಬಿಜೆಪಿ ಕಾರ್ಯಕರ್ತ ಎನ್ನುವ ನೆಲೆಯಲ್ಲಿಯಾದರೂ ಈಶ್ವರಪ್ಪ ರಾಜೀನಾಮೆ ನೀಡಿ ತನಿಖೆಗೆ ದಾರಿಯನ್ನು ಸುಗಮ ಮಾಡಿಕೊಡಬೇಕಾಗಿತ್ತು. ಆದರೆ ಇದೀಗ ಈಶ್ವರಪ್ಪ ಅವರೇ ತನಿಖೆಗೆ ತಡೆಯಾಗಿ ನಿಂತಿದ್ದಾರೆ.

''ನನಗೆ ಸಂತೋಷ್ ಪಾಟೀಲ್ ಎಂದರೆ ಯಾರು ಎಂದೇ ಗೊತ್ತಿಲ್ಲ, ಅವರನ್ನು ನೋಡಿಯೇ ಇಲ್ಲ'' ಎನ್ನುತ್ತಿದ್ದಾರೆ ಸಚಿವ ಈಶ್ವರಪ್ಪ. ಇದು ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕೆ ನೀಡುತ್ತಿರುವ ಅತಿರೇಕದ ಹೇಳಿಕೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಸಂತೋಷ್ ಪಾಟೀಲ್‌ರ ಆಪ್ತರು ಮತ್ತು ಸ್ಥಳೀಯ ಪಂಚಾಯತ್ ಮುಖಂಡರು ಈಶ್ವರಪ್ಪನವರಿಗೆ ಸಂತೋಷ್ ಪಾಟೀಲ್ ಗೊತ್ತು ಎನ್ನುವುದನ್ನು ಹೇಳಿದ್ದಾರೆ. ಅಷ್ಟೇ ಅಲ್ಲ, ಈಶ್ವರಪ್ಪ ಅವರೊಂದಿಗೆ ತೆಗೆಸಿಕೊಂಡ ಪೋಟೊಗಳೂ ಸತ್ಯ ಏನು ಎನ್ನುವುದನ್ನು ಹೇಳುತ್ತಿವೆ. ಸುಮಾರು ನಾಲ್ಕು ಕೋಟಿ ರೂಪಾಯಿಯ ಕಾಮಗಾರಿ ನಡೆಸುವುದಕ್ಕೆ ಸಚಿವರ ಭರವಸೆಯಿಲ್ಲದೆ ಯಾವ ಗುತ್ತಿಗೆದಾರನೂ ಇಳಿಯುವುದಿಲ್ಲ. ಇಷ್ಟಕ್ಕೂ ಉಳಿದೆಲ್ಲ ಸಚಿವರನ್ನು ಬಿಟ್ಟು ಈಶ್ವರಪ್ಪರ ಹೆಸರನ್ನೇ ಸಂತೋಷ್ ಯಾಕೆ ಉಲ್ಲೇಖಿಸಿದ್ದಾರೆ? ಇದೀಗ ಹಲವು ಗುತ್ತಿಗೆದಾರರು ಈಶ್ವರಪ್ಪರ ಮೇಲೆ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ.

''ಮನೆಗೆ ಬಂದ ಗುತ್ತಿಗೆದಾರರ ಜೊತೆಗೆ ಈಶ್ವರಪ್ಪ ಅತ್ಯಂತ ನಿಕೃಷ್ಟವಾಗಿ ನಡೆದುಕೊಳ್ಳುತ್ತಿದ್ದರು'' ಎಂದು ರಾಜ್ಯ ಗುತ್ತಿಗೆದಾರರ ಸಂಘಟನಾ ಕಾರ್ಯದರ್ಶಿ ಜಗನ್ನಾಥ್ ಅವರು ಆರೋಪಿಸಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರೂ ಸಂತೋಷ್ ಪಾಟೀಲ್ ಜೊತೆಗೆ ನಿಂತಿದ್ದಾರೆ. ಸಂತೋಷ್ ಪಾಟೀಲ್ ಈಗಾಗಲೇ ಹಲವು ಬಾರಿ ಈಶ್ವರಪ್ಪ ಅವರನ್ನು ಭೇಟಿ ಮಾಡಿರುವುದು, ಅವರಿಗೆ ಮನವಿ ನೀಡಿರುವುದನ್ನು ಪ್ರಸ್ತಾಪಿಸಿದ್ದಾರೆ. ಹೀಗಿರುವಾಗ 'ಸಂತೋಷ್ ಪಾಟೀಲ್ ಯಾರೆನ್ನುವುದೇ ನನಗೆ ಗೊತ್ತಿಲ್ಲ' ಎನ್ನುವ ಹೇಳಿಕೆ ಈಶ್ವರಪ್ಪ ಅವರ ಮೇಲಿನ ಅನುಮಾನವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಕನಿಷ್ಠ ರಸ್ತೆ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗದೆ ಇರುವುದಕ್ಕಿರುವ ಸಕಾರಣಗಳನ್ನು ಹೇಳಿದ್ದರೂ ಸಾಕಿತ್ತು. ಆದರೆ ಸಂತೋಷ್ ಮಾಡಿರುವ ಕಾಮಗಾರಿಗಳ ಕುರಿತಂತೆ ಅರಿವೇ ಇಲ್ಲದಂತೆ ವರ್ತಿಸುತ್ತಿರುವುದು, ಈಶ್ವರಪ್ಪ ಅವರು ಶೇ.40 ಕಮಿಷನ್‌ನಲ್ಲಿ ಶಾಮೀಲಾಗಿದ್ದಾರೆಯೋ ಎನ್ನುವ ಅನುಮಾನ ಹುಟ್ಟಿಸುತ್ತದೆ.

ಸಂತೋಷ್ ಪಾಟೀಲ್ ಸಾವಿನಿಂದ ಒಂದು ಕುಟುಂಬ ಅನಾಥವಾಗಿದೆ. ಯಾವನೇ ಹಿಂದೂ ಕಾರ್ಯಕರ್ತ ಸಾವಿಗೀಡಾದರೂ ಅದರ ಬಗ್ಗೆ ಆವೇಶದಿಂದ ಮಾತನಾಡುವ ಈಶ್ವರಪ್ಪ ಅವರ ಹಿಂದೂ ಪ್ರೇಮಕ್ಕೆ ಒದಗಿದ ಅಗ್ನಿ ಪರೀಕ್ಷೆಯಿದು. ರಾಜೀನಾಮೆ ನೀಡುವ ಮೂಲಕ ಕನಿಷ್ಠ ನ್ಯಾಯವನ್ನು ಸಂತ್ರಸ್ತ ಕುಟುಂಬಕ್ಕೆ ನೀಡಬಹುದು. ಇಲ್ಲದೇ ಇದ್ದರೆ ಪ್ರಕರಣ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಶಿವಮೊಗ್ಗದಲ್ಲಿ ಕೊಲೆಗೀಡಾದ ಸಂಘಪರಿವಾರದ ಕಾರ್ಯಕರ್ತ ಹರ್ಷನ ಸಾವಿನ ಹಿಂದೆ ಈಶ್ವರಪ್ಪ ಅವರ ಪುತ್ರನ ಕೈವಾಡವಿದೆ ಎಂದು ಕೆಲವರು ಆರೋಪಿಸಲು ಆರಂಭಿಸಿದ್ದಾರೆ. ತನ್ನ ಪುತ್ರನ ರಾಜಕೀಯ ಪ್ರವೇಶಕ್ಕಾಗಿ ಈಶ್ವರಪ್ಪ ವೇದಿಕೆ ನಿರ್ಮಿಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಹರ್ಷನ ಹತ್ಯೆಯನ್ನು ಮುಂದಿಟ್ಟು ಇಡೀ ಶಿವಮೊಗ್ಗಕ್ಕೆ ಬೆಂಕಿ ಹಚ್ಚಲು ತಂದೆ-ಮಗ ಮುಂದಾದರು. ಇದೀಗ ಸಂತೋಷ್ ಪಾಟೀಲ್ ಸಾವಿನಲ್ಲಿ ಈಶ್ವರಪ್ಪ ಅವರ ಹೆಸರು ನೇರವಾಗಿ ಕೇಳಿ ಬಂದಿರುವುದರಿಂದ ಅವರ ರಾಜೀನಾಮೆ ಇಲ್ಲದೆ ತನಿಖೆ ಮುಂದುವರಿಸುವುದು ಕಷ್ಟ. ಈಗಾಗಲೇ ಈಶ್ವರಪ್ಪ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಒಬ್ಬ ಗುತ್ತಿಗೆದಾರನ ಆತ್ಮಹತ್ಯೆಗೆ ಪರೋಕ್ಷ ಕಾರಣರಾಗಿರುವ ಸಚಿವರನ್ನಿಟ್ಟುಕೊಂಡು ಸರಕಾರವನ್ನು ಮುನ್ನಡೆಸುವುದು ಮುಖ್ಯಮಂತ್ರಿ ಬೊಮ್ಮಾಯಿಯವರಿಗೂ ಮುಜುಗರದ ವಿಷಯವಾಗಿದೆ. ಆದುದರಿಂದ, ಬೊಮ್ಮಾಯಿಯವರು ಈಶ್ವರಪ್ಪ ಅವರಿಗೆ ರಾಜೀನಾಮೆ ನೀಡಲು ತಕ್ಷಣ ಆದೇಶ ನೀಡಬೇಕಾಗಿದೆ. ಪಕ್ಷದ ವರ್ಚಸ್ಸು ಉಳಿಯಬೇಕಾದರೆ ಈ ರಾಜೀನಾಮೆ ಅನಿವಾರ್ಯ ಕೂಡ.

ಈ ನಾಡಿನ ಅಭಿವೃದ್ಧಿ ಕಾಮಗಾರಿಗಳೊಂದಿಗೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ನೇರ ಸಂಬಂಧವನ್ನು ಹೊಂದಿದೆ. ರಾಜ್ಯದಲ್ಲಿ 2.17 ಲಕ್ಷ ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿದೆ ಎನ್ನುವ ಆಘಾತಕಾರಿ ಸಂಗತಿ ಈ ಆತ್ಮಹತ್ಯೆಯ ಜೊತೆಗೇ ಬೆಳಕಿಗೆ ಬಂದಿದೆ. ಅಭಿಪ್ರಾಯ, ಸಹಮತ, ಅನುಮೋದನೆಗೆಂದು ಕಳುಹಿಸಿರುವ ಕಡತಗಳಲ್ಲಿ ಅತಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಪೈಕಿ ನಗರಾಭಿವೃದ್ಧಿ ಇಲಾಖೆ ಅಗ್ರಸ್ಥಾನದಲ್ಲಿದೆ. ಈಶ್ವರಪ್ಪ ಅವರ ಖಾತೆಯ ವ್ಯಾಪ್ತಿಯಲ್ಲೂ ಹಲವು ಪ್ರಮುಖ ಕಡತಗಳು ವಿಲೇವಾರಿಯಾಗಿಲ್ಲ ಎನ್ನುವ ಅಂಶ ಹೊರಬಿದ್ದಿದೆ. ರಾಜ್ಯ ಗುತ್ತಿಗೆದಾರರ ಅಧ್ಯಕ್ಷರ ಪ್ರಕಾರ ಸುಮಾರು 25,000 ಕೋಟಿ ರೂಪಾಯಿ ಬಿಲ್ ಪೆಂಡಿಂಗ್‌ನಲ್ಲಿದೆ. ಈ ಪೆಂಡಿಂಗ್‌ಗೆ ಬಹು ಮುಖ್ಯ ಕಾರಣ ಭ್ರಷ್ಟಾಚಾರ. ಹೀಗೆ ವಿಲೇವಾರಿಯಾಗದೆ ನೂರಾರು ಕಾಮಗಾರಿಗಳು ಅರ್ಧದಲ್ಲಿ ನಿಂತಿವೆ.

ನಾಡಿನ ಅಭಿವೃದ್ಧಿಯನ್ನು ಶೇ. 40 ಕಮಿಷನ್ ಹಂತ ಹಂತವಾಗಿ ಕೊರೆದು ತಿನ್ನುತ್ತಿದೆ. ಈ ಭ್ರಷ್ಟಾಚಾರ ಹುಳ ಕೊರೆದು ಉಳಿಸಿದ್ದನ್ನು ನಾಡು ಅಭಿವೃದ್ಧಿ ಎಂದು ಕರೆದು ಸಮಾಧಾನ ಪಡಬೇಕಾಗಿದೆ. ಈಶ್ವರಪ್ಪರ ರಾಜೀನಾಮೆ ಶೇ. 40 ಕಮಿಷನ್ ದಂಧೆಯ ತನಿಖೆಗೆ ಒಂದು ಮಹತ್ವದ ಮೈಲುಗಲ್ಲಾಗಬೇಕು. ಕೊರೆಯುತ್ತಿರುವ ಕಮಿಷನ್ ಹುಳಗಳನ್ನು ಗುರುತಿಸಿ ಅವುಗಳಿಗೆ ಔಷಧಿ ಹಾಕುವುದು ಇಂದಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ, ಸ್ವತಂತ್ರ ತನಿಖಾ ಸಂಸ್ಥೆಯ ಮೂಲಕವೇ ಪ್ರಕರಣ ತನಿಖೆಗೊಳಪಡಬೇಕು. ಕೇವಲ ಸಂತೋಷ್ ಪಾಟೀಲ್ ಆತ್ಮಹತ್ಯೆಗಷ್ಟೇ ತನಿಖೆ ಸೀಮಿತವಾಗಿ ಉಳಿಯದೆ ವಿವಿಧ ಇಲಾಖೆಗಳಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಗಳ ಹಿಂದಿರುವ ರಾಜಕಾರಣಿಗಳನ್ನು ಗುರುತಿಸುವ ಕೆಲಸವೂ ಅತ್ಯಗತ್ಯವಾಗಿ ನಡೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News