ಜಾರ್ಖಂಡ್: ಕೋಮು ಸೂಕ್ಷ್ಮ ವೀಡಿಯೊ ವೈರಲ್; ಐವರ ಬಂಧನ

Update: 2022-04-14 02:07 GMT

ರಾಂಚಿ : ಆನ್ಲೈನ್ ನಲ್ಲಿ ಕೋಮು ಸೂಕ್ಷ್ಮ ವೀಡಿಯೊ ಹಂಚಿಕೊಂಡ ಐವರನ್ನು ಪೊಲೀಸರು ಜಾರ್ಖಂಡ್ ನ ಕೊಡೆರ್ಮಾ ಜಿಲ್ಲೆಯಿಂದ ವಶಕ್ಕೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಈ ವೀಡಿಯೊದಲ್ಲಿ ಗುಂಪೊಂದು ಖಡ್ಗಗಳನ್ನು ಝಳಪಿಸುತ್ತಿರುವುದು, ಕೇಸರಿ ಪತಾಕೆ ಹಾರಿಸುತ್ತಿರುವುದು ಹಾಗೂ ಮುಸ್ಲಿಂ ಸಮುದಾಯ ವಿರುದ್ಧ ಧಾರ್ಮಿಕ ನಿಂದನೆಗಳನ್ನು ಕೂಗುತ್ತಿರುವುದು ಕಂಡು ಬಂದಿದೆ. 

ಆ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದ ಸಂದರ್ಭದಲ್ಲೂ ಮುಸ್ಲಿಮರನ್ನು ಹೀನಾಯವಾಗಿ ‘ಮಿಯಾ’ ಎಂದು ಕರೆಯಲಾಗಿದೆ. ಈ ವೀಡಿಯೊವನ್ನು ಕೊಡೆರ್ಮಾದಲ್ಲಿ ದಾಖಲಿಸಲಾಗಿದೆ ಎಂದು ಕೊಡೆರ್ಮಾದ ಉಪ ಆಯುಕ್ತ ಆದಿತ್ಯ ರಂಜನ್ ದೃಢಪಡಿಸಿದ್ದಾರೆ. 

‘ಆದರೆ, ವೀಡಿಯೊದಲ್ಲಿರುವ ವ್ಯಕ್ತಿಗಳನ್ನು ಗುರುತಿಸಲು ನಮಗೆ ಸಾಧ್ಯವಾಗಿಲ್ಲ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಹಂಚಿಕೊಂಡ ಐವರನ್ನು ಇದುವರೆಗೆ ಬಂಧಿಸಿದ್ದೇವೆ. ನಾವು ಅವರ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿ ಪ್ರಥಮ ಮಾಹಿತಿ ವರದಿ ದಾಖಲಿಸುವ ಪ್ರಕ್ರಿಯೆಯಲ್ಲಿ ಪೊಲೀಸರು ತೊಡಗಿದ್ದಾರೆ. ನಾವು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ರಂಜನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News